ಹಣ್ಣೆಲೆ ಉದುರುವಾಗ

ಏನೇ ಹೇಳಿ, ಇಷ್ಟು ವರ್ಷ ಬದುಕಿರಬಾರದು ಕಣ್ರಿ, ವಯಸ್ಸಾಗೋಕು ಮುಂಚೆ ಸತ್ತುಬಿಡಬೆಕು’ ಎಂಬ ಯೋಚನೆ ಆ ಹಣ್ಣೆಲೆಗೆ ಬಂದು ಆಗಲೆ ಮೂರು-ನಾಲ್ಕು ದಿನಗಳಾಗಿತ್ತು. ಶರಾವತಿಯ ತಟದಲ್ಲಿರೋ ಒಂದು ಬನ್ನಿ ಮರ, ಆ ಮರದ ರಾಶಿ,ರಾಶಿ ಎಲೆಗಳ ಮದ್ಯೆ ಚಿಗುರಿದ ಆ ಎಲೆಗೆ ಏನೋ ಸಂಭ್ರಮ. ಅದರ ಬಾಲ್ಯದ ದಿನಗಳು ಇನ್ನೂ ಕಣ್ಣಿಗೆ ಕಟ್ಟುವಂತಿದ್ದರೂ ಹನಿಗಳು ತುಂಬಿ ಮಂಜಾದ ಕಣ್ಣಿನಲ್ಲಿ ಕೆಲ ನೆನಪುಗಳು ಅಸ್ಪಷ್ಟ. ಮರದ ಮೂಲೆಯಲ್ಲೆಲ್ಲೋ ಕುಳಿತರೂ ಶರಾವತಿಯ ಬಳುಕಿನ ನಡಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ದಿನ ತೆಪ್ಪ ದಾಟಿ ಹೋಗುವ ಶಾಲೆಯ ಹುಡುಗರು, ಗುದ್ದಲಿ ಹೊತ್ತು ಬರುವ ಕೆಲಸದವರು, ನೀರು ಕುಡಿಯಲು ಬರುವ ದನ-ಕರುಗಳು, ನೀರಿನಾಳಕ್ಕೆ ಬಲೆ ಬೀಸಿ ಮೀನು ಹಿಡಿಯುವ ಬೆಸ್ತರು, ಬಲೆಗೆ ಸಿಗುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುವ ಮೀನುಗಳು, ಗೂಡಿನಿಂದ ಹೊರ ಇಣುಕಿದ ಏಡಿಗಳು. ಎಲ್ಲವೂ ನೆನಪಿದೆ... ಬೇಸಿಗೆಯ ಸೊರಗಿದ ಶರಾವತಿಯ ಕಂಡು ಮರುಗಿದ ಮನಸ್ಸು, ಹೆದರಿಕೆ ಹುಟ್ಟಿಸಿದ ಮಳೆಗಾಲದ ಅವಳ ರಭಸ. ಇನ್ನೂ ನೆನಪಿದೆ... ಯೌವನದಲ್ಲಿನ ಆ ಹುರುಪು, ಇಡೀ ಮರಕ್ಕೆ ಬೇಕಾಗುವಷ್ಟು ಆಹಾರ ನಾನೊಬ್ಬನೇ ತಯಾರಿಸಬಲ್ಲೆನೆಂಬ ಉತ್ಸಾಹ, ಮರದ ಜೀವಂತಿಕೆಗೆ ನಾನೇ ಬೇಕೆಂಬ ಅಹಂಕಾರ, ಭೂಮಿಯ ಸಾರವನ್ನೆಲ್ಲ ಹೀರಿಸಿ ಮರ ಬೆಳಸಿಬಿಡುವೆನೆಂಬ ಹುಂಬತನ. ಆದರೆ ಈಗೆಲ್ಲಿ ಹೋಯಿತು ಆ ಶಕ್ತಿ, ಆ ಉತ್ಸಾಹ, ಆ ಬಂಡತನ..? ಇನ್ನೇನು ಉದುರುವ ’ಹಣ್ಣೆಲೆ’ ಎಂದ ಮಾತ್ರಕ್ಕೆ ಉತ್ಸಾಹವೇಕೆ ಕುಗ್ಗಬೇಕು..? ಕುಗ್ಗದೆ ಇನ್ನೇನು..! ಈ ಇಳಿ ವಯಸ್ಸಿನಲ್ಲಿ ಬಂದ ದಾರಿ ತಿರುಗಿ ನೋಡಿದರೆ ಜೀವನದ ಸಾರ್ಥಕತೆ ಕಾಣುತ್ತಿಲ್ಲ. ನಾನಿದ್ದರೂ, ಇರದಿದ್ದರೂ ಈ ಮರದಲ್ಲೇನು ಬದಲಾವಣೆಯಿಲ್ಲ. ಶಕ್ತಿ ಇರುವವರೆಗೂ ಆಹಾರ ತಯಾರಿಸಿದೆ, ಈಗ ಶಕ್ತಿಹೀನನಾಗಿ ಉದುರುವ ಭಯದಲ್ಲಿದ್ದೇನೆ. ಹುಟ್ಟಿನಿಂದ ಇಲ್ಲಿಯವರೆಗೂ ಈ ಮರಕ್ಕಾಗಿ ದುಡಿದೆ. ಆದರೆ ಈಗ..? ಉದುರುವ ಕಾಲದಲ್ಲಿ ನನಗಾಗಿ ಕಂಬನಿ ಮಿಡಿಯುವವರಿಲ್ಲ. ನಾನಿನ್ನೂ ಇದ್ದೀನ, ಉದುರಿಹೋಗಿದ್ದೀನ ಎಂಬುದೇ ಈ ಮರಕ್ಕೆ ಗೊತ್ತಿರಲಿಕ್ಕಿಲ್ಲ. ಒಂದೊಮ್ಮೆ ಗೊತ್ತಿದ್ದರೂ ನನಗಾಗಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಈ ಅಸಂಖ್ಯ ಜೊತೆಗಾರರ ಮಧ್ಯೆಯೂ ಒಂಟಿತನ ಕಾಡುತ್ತಿದೆ. ಇಲ್ಲಿ ಯಾರೂ ಯಾರಿಗೂ ಅಲ್ಲ, ಇಲ್ಲಿರುವವರೆಲ್ಲ ತನ್ನವರಲ್ಲವೆಂಬ ಅನಾಥ ಪ್ರಜ್ನೆ ಕಾಡುತ್ತಿದೆ.ಮಾಗಿಯ ಚಳಿಯಲ್ಲಿ ಮಾಗಿದ ಎಲೆಯಾಗಿ ಉದುರುವೆ. ತಣ್ಣನೆಯ ಗಾಳಿ ಬೀಸಿದಾಗ ಮೈಯೊಡ್ಡುವ ಮನಸ್ಸಿಲ್ಲ. ಮನಸ್ಸಿನಲ್ಲೆಲ್ಲ ಭಯ..! ಗಾಳಿಯೊಡನೆ ಉದುರಿಯೇನೆ..? ಬಹುಶಃ ಈಗ ನೋಡುತ್ತಿರುವ ಸೂರ್ಯಾಸ್ತವೆ ಕೊನೆಯದಿರಬಹುದು ನನ್ನ ಪಾಲಿಗೆ. ಬೆಳಗ್ಗೆ ಏಳುವ ಸೂರ್ಯನನ್ನು ನೋಡಿಯೇನೆಂಬ ನಂಬಿಕೆಯಿಲ್ಲ.
ರಾತ್ರಿಯಿಡೀ ಆ ಎಲೆಗೆ ನಿದ್ರೆಯಿಲ್ಲ. ಚಳಿಗೆ ಮುದುಡಿ ಕುಳಿತರೂ ಮೈ ಬೆವರುತ್ತಿದೆ. ಸಾವಿನ ಭಯ. ಬಹುಶಃ ಬರಿ ಸಾವಿನ ಭಯವಲ್ಲ. ಜೀವನದಲ್ಲಿ ಬೇರೆಯವರಿಗೋಸ್ಕರವೇ ನಿಸ್ಸ್ವಾರ್ಥವಾಗಿ ದುಡಿದರೂ ಗುರುತಿಸಲ್ಪಡಲಿಲ್ಲ ಎಂಬ ವ್ಯಥೆ, ತನ್ನವರೆಂದು ತೋರುವವರ್ಯಾರೂ ತನ್ನವರಲ್ಲವೆಂಬ ಅನಾಥ ಭಾವ, ಜೀವನದ ಇಳೆಯಲ್ಲಿ ಕಾಣದ ಬದುಕಿನ ಸಾರ್ಥಕತೆ, ತನ್ನ ಅಸ್ಥಿತ್ವದ ಅರಿವೇ ಇಲ್ಲದಂತೆ ಸಾಗುವ ಪ್ರಪಂಚ, ತಾನಿದ್ದರೂ, ಇರದಿದ್ದರೂ ಇಲ್ಲೆಲ್ಲವೂ ಇರುವಂತೆಯೆ ಇರುತ್ತದೆನ್ನುವ ಸತ್ಯ. ಇವೆಲ್ಲವೂ ಮೈ ಬೆವರಿಸುವ ಸಂಗತಿಗಳು.
ಬೆಳಗ್ಗೆ ಏಳುವಷ್ಟರಲ್ಲಿ ಎಲ್ಲವೂ ಇದ್ದಂತೆಯೇ ಇದೆ. ದಿನದಂತೆ ಹೋಗುವ ಶಾಲೆಯ ಅದೇ ಹುಡುಗರು, ಕೆಲಸಗಾರರು, ಈಜಾಡುವ ಮೀನು, ಇಣುಕುವ ಏಡಿ. ಎಲ್ಲವೂ ಎಂದಿನಂತೆ. ಪೂರ್ವದಲ್ಲಿ ಉದಯಿಸಿದ ಸೂರ್ಯ, ಹಕ್ಕಿಗಳ ಕಲರವ, ಸೂರ್ಯರಶ್ಮಿಗೆ ಬೆಂದು ಆವಿಯಾದ ಇಬ್ಬನಿ.  ಅರೆ.. ಈ ಇಬ್ಬನಿಯ ಆಯಸ್ಸು ಕೇವಲ ಎರಡು  ಗಂಟೆಗಳು. ಆ ಅಲ್ಪಾವಧಿಯಲ್ಲೆ ಸೂರ್ಯನ ಬಿಸಿಲನ್ನು ನುಂಗಿ ಮುತ್ತಿನಂತೆ ಹೊಳೆಯುತ್ತದೆ. ಅದೇ ವೇಗದಲ್ಲಿ ಮಾಯವಾಗುತ್ತದೆ. ಎರಡೇ ಗಂಟೆಯಲ್ಲಿ ಮಿಂಚಿ ಮತ್ತೆ ಮರೆಯಾಗಿ ಸಾರ್ಥಕತೆ ಕಾಣುತ್ತದೆ. ನಾನಿನ್ನು ಉತ್ಸಾಹಹೀನನಾಗುವ ಅಗತ್ಯವಿಲ್ಲ. ಮರದ ಈ ಆಕಾರಕ್ಕೆ ಇಷ್ಟು ದಿನ ನಾ ಕೊಟ್ಟ ಆಹಾರವೂ ಬೇಕಾಗಿದೆ, ಇದ್ದಷ್ಟು ದಿನ ಈ ಮರಕ್ಕೆ ಜೀವ ನೀಡಿದ್ದೇನೆ, ನನ್ನ ಹಸಿರಿನಿಂದ ಮರದ ಅಂದ ಹೆಚ್ಚಿಸಿದ್ದೇನೆ, ಬಳಲಿ ಬಂದವರಿಗೆ ನೆರಳಾಗಿದ್ದೇನೆ. ಇದೂ ಕೂಡ ಸಾರ್ಥಕತೆಯಲ್ಲವೆ..! ಇನ್ನು ಶರಾವತಿಯಲ್ಲಿ ಲೀನವಾದರೂ ಚಿಂತೆಯಿಲ್ಲ.
ಸಣ್ಣ ಗಾಳಿಯ ಹೊಡೆತ ಜೋರಾದಂತೆ ನಿಲ್ಲಲೂ ನಿತ್ರಾಣವಾಗಿದ್ದ ಎಲೆ ಶರಾವತಿಯ ಮಡಿಲಲ್ಲಿ ಲೀನವಾಯಿತು.

ಹಳೇ ಗಾಯ.. ಹೊಸ ಕೆರೆತ

ಯಾಕೊ ಭಯಂಕರ ಬೇಜಾರು. ಹೊಸ ಪ್ಯಾಂಟು ಹರಿದಾಗ, ಹಳೆ ಹುಡುಗಿ ನೆನಪಾದಾಗ ಇಂಥ ಬೇಜಾರು ಆಗೋದು ಸಹಜ. ಸದ್ಯಕ್ಕೆ ಹೊಸ ಪ್ಯಾಂಟ್ ತಗೋಂಡಿಲ್ಲ, ಹಳೇ ಹುಡುಗಿ ನೆನಪು ಕಾಡ್ತಾ ಇದೆ. ಗಾಯ ಹಳೇದೆ, ಕೆರೆತ ಹೊಸಾದು. ಸುತ್ತ-ಮುತ್ತ ಎಷ್ಟು ಜನ ಇದ್ರೂ ತೀರಾ ಒಂಟಿತನ ಕಾಡಿಬಿಡತ್ತೆ ಮನಸ್ಸಿನ ಪುಟವ ತಿರುವಿ ಹಾಕಿದಾಗ. ನೆನಪಿನ ಕಪಾಟಿನ ಕೀಲಿ ಕೈ ಸಿಗದಂತೆ ದೂರ ಎಸೆದರೂ ಮತ್ತೆ ಮತ್ತೆ ಸಿಗುತ್ತಿದೆ. ಏನು ಮಾಡೋಣ ಕೀಲಿಕೈನ..! ಅವಾಗಾವಾಗ ಅನ್ಸತ್ತೆ, ಮನುಷ್ಯಂಗೆ ಬುದ್ಧಿ ಕಡಿಮೆ ಅಂತ. ಈಗಿನ್ನೂ ಇಟ್ಟ ಕೀ ನ ಮರೀತಾನೆ, ಎಲ್ಲಿಟ್ಟೆ ಅಂತ. ಕೊಟ್ಟ ಕೈನ ನೆನಪಲ್ಲೇ ಇಟ್ಕೊಂಡು ಕೊರಗಿ, ಕೊಳೀತಾನೆ, ಸಾಯೋತಂಕ. ಈಗ ನಂಗೆ ಆಗಿದ್ದೂ ಅದೆ. ಮರೆಯಲೇಬೇಕಾದ ಸಂಗತಿಗಳು ಮರೆವ ಪ್ರಯತ್ನಕ್ಕೆ ಸವಾಲೆಸೆದು, ಮತ್ತೆ ಮತ್ತೆ ರಾಕ್ಷಸತ್ವ ಪಡೆದು ಬೆನ್ನಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಹಳೇ ಹುಡುಗಿಗೆ ಹೇಳಲೇಬೇಕಾದ ಹೊಸ ಮಾತುಗಳಿವೆ.
ನಾನು ನನ್ನನ್ನ ಇಷ್ಟಪಟ್ಟಷ್ಟು ನನ್ನ ಯಾರೂ ಇಷ್ಟಪಟ್ಟಿಲ್ಲ. ನಾನು ನನ್ನನ್ನ ಇಷ್ಟಪಟ್ಟಷ್ಟು ನಾನೂ ಯಾರನ್ನೂ ಇಷ್ಟಪಟ್ಟಿರಲಿಲ್ಲ. ನೀನು ಸಿಕ್ಕಿದೆ ಕಣೆ. ನೋಡಿದ ಕೂಡಲೆ ಎದೆಯಲ್ಲಿ ಯಾವುದೋ ಸ್ವಿಚ್ಚು ಅದುಮಿದಂಗಾಯ್ತು. ಕೊನೆಗೂ ಕರೆಂಟ್ ಬರ್ಲಿಲ್ಲ ಅನ್ನೋದು ಬೇರೆ ವಿಚಾರ. ಮೊದಲ ನೋಟಕ್ಕೇ ಪ್ರೀತಿ ಮೊಳಕೆ ಒಡೀತು. ಬರಿ ಮೊಳಕೆ ಒಡೆಯೋದೇನು, ಹೆಮ್ಮರವಾಗಿ ಹೂವನ್ನೇ ಬಿಡ್ತು. ಇನ್ನೂ ಅದೇ ಹೂವಿದೆ ಕಿವೀಲಿ. ನಮ್ಮ ಕ್ಲಾಸಲ್ಲೇ ’ಕ್ಲಾಸ್’ ಆಗಿದ್ದ ಹುಡುಗಿ ನೀನು, ನಿಂಗೆ ಮನಸ್ಸು ಕೊಟ್ಟೆ, ನೀನು ನಂಗೆ ಕೈ ಕೊಟ್ಟೆ. ಅದ್ಭುತ ಎಕ್ಸಚೇಂಜ್ ಆಫರ್..! ನಿನ್ನ ನೋಡಬೇಕು ಅಂತಾನೆ ಕಾಲೇಜಿಗೆ ಬರ್ತಾ ಇದ್ದೆ. ಹಂಗೆ ಬಂದಿದ್ರಿಂದ ನನ್ನ ಮನಸ್ಸು ಇನ್ನೂ ಗ್ಯಾರೇಜ್ ನಲ್ಲೇ ಇದೆ. ನೀನು ಕಾರಣ ಹೇಳಿ ಹೋಗಿದ್ರೆ ಬೇಜಾರು ಆಗ್ತಿರ್ಲಿಲ್ವೇನೊ. ಹೇಳದೆ ಹೋದ್ಯಲ್ಲ ಅದು ಬೇಜಾರು. ನಿಂಗೆ ಅಂತ ಹೇಳಿದ ಮಾತು ನೆನಪಿದ್ಯಾ..? ಸಾವಿರ ಸಲ ಹೇಳಿದ ಮಾತು..!
                   ಹೇಳಿಬಿಡು ಒಮ್ಮೆ ನೀ ನನಗಲ್ಲವೆಂದು
                   ಬದಲಿಸಿ ಬಿಡುವೆ ಆ ಬ್ರಹ್ಮನ ಹಣೆಬರಹವನ್ನು
ಅಂತ. ಬ್ರಹ್ಮ ಹಣೆಯಲ್ಲಿ ಬೇರೆ ಬರ್ದಿದ್ರೆ ಅಳಿಸಿ ನಿನ್ನ ಹೆಸರನ್ನೆ ಬರಿಬಹುದಿತ್ತೇನೋ..!
                   ನಿನ್ನೆದೆಯಲಿ ಬರೆಯದೆ ನನ್ಹೆಸರ
                   ಇಂಗಿಸಿ ಬಿಟ್ಟೆಯ ನನ್ನುಸಿರ...?
ಕ್ಲಾಸಲ್ಲಿ ನಿನ್ನ ಕದ್ದು, ಕದ್ದು ನೋಡೋದು, ಕೆಟ್ಟದಾಗಿ ಬರ್ದಿರೊ ನಿನ್ನ ನೋಟ್ಸ್, ರೆಕಾರ್ಡ್ ನ ಇಸ್ಕಳೋದು, ನಿನ್ನ ಹಾಸ್ಟೆಲ್ ಕಿಟಕೀನ ನಿನಗಾಗಿ ನೋಡೋದು, ಪುಸ್ತಕದ ಕೊನೆ ಪುಟದಲ್ಲಿ ನಿನ್ನದೇ ಹೆಸರು ಗೀಚೋದು, ಬೆಂಚಿನ ಮೇಲೆ ಕೆತ್ತೋದು ಮುಂತಾದ ಹಲವು ಪ್ರೀತಿಯ ಲಕ್ಷಣಗಳನ್ನ ತೋರಿಸಿದೆ, ಎಲ್ಲಾ ಹುಡುಗರಂತೆ. ನೀನು ಅದನ್ನೆಲ್ಲ ನಿರ್ಲಕ್ಷಿಸಿದೆ, ಎಲ್ಲ ಹುಡುಗಿಯರಂತೆ. ತೀರಾ ಪ್ರೀತಿ-ಗೀತಿ ಅಂತ ಮಾಡೋಕು ಮುಂಚೆ ನಿನ್ನ ಕೇಳಬೇಕಿತ್ತು ಕಣೆ
                   ಬಿಡಿಸಿ ಹೇಳಲಾರೆಯ ನನಗೂ-ನಿನಗೂ ನಂಟೇನು
                   ನೀನಿನ್ನು ನನಗೆ ಕನ್ನಡಿ ಒಳಗಿನ ಗಂಟೇನು

ಅವತ್ತು ಕೇಳ್ಳಿಲ್ಲ. ಇವತ್ತು ಅನುಭವಿಸ್ತ ಇದೀನಿ. ನೀ ಹೋದಾಗಿಂದ ’ದೇವದಾಸ’ ಮನೆದೇವರು ಅಗ್ಬಿಟ್ಟಿದಾನೆ. ಅಂದಿನಿಂದ ನಂಗೆ ನನ್ನನ್ನೂ ಇಷ್ಟಪಡೋಕೆ ಆಗ್ತಾ ಇಲ್ಲ. ಈಗ್ಲಾದ್ರು ಬರ್ತೀಯ, ಕಾದು ಕಾದು ಕೆಂಪಾಗಿದೀನಿ..?

ಅಮ್ಮ ಹೇಳುತ್ತಿದ್ದ ಕಥೆ

ಒಂದಲ್ಲಾ ಒಂದು ಊರಲ್ಲಿ ಒಬ್ಬ ಇದ್ನಂತೆ. ಅವನ ಮನೆಯ ಮುಂದೆ ಒಂದು ಹಲಸಿನ ಮರ ಇತ್ತಂತೆ. ಆಗಿನ ಕಾಲದಲ್ಲಿ ಹಲಸಿನ ಹಣ್ಣಿಗೆ ಮುಳ್ಳು ಇರಲಿಲ್ವಂತೆ. ಒಂದಿನ ಒದ್ದ ಭಿಕ್ಷುಕ ಬಂದು ಆ ಮನೆಯ ಯಜಮಾನನ ಹತ್ರ ಹಣ್ಣು ಕೇಳಿದನಂತೆ. ಅವ ಕೊಡ್ಲಿಲ್ವಂತೆ. ಭಿಕ್ಷುಕನಿಗೆ ಸಿಟ್ಟು ಬಂದು ಹಣ್ಣಿನ ತುಂಬಾ ಮುಳ್ಳು ಬರಲಿ ಅಂತ ಶಾಪ ಕೊಟ್ನಂತೆ. ಅವತ್ತಿಂದ ಹಲಸಿನ ಹಣ್ಣಿನ ಮೇಲೆ ಮುಳ್ಳು ಬಂತಂತೆ. ಶಿವ ಆ ಯಜಮಾನನನ್ನ ಪರೀಕ್ಷೆ ಮಾಡಬೇಕು ಅಂತ ಭಿಕ್ಷುಕನ ರೂಪದಲ್ಲಿ ಬಂದಿದ್ನಂತೆ. ಅಮ್ಮ ಹೇಳುತ್ತಿದ್ದ ಕಥೆ ಈಗಲೂ ಕಣ್ಣಿಗೆ ಕಟ್ಟೋ ಹಾಗಿದೆ. ಪ್ರತಿ ದಿನ ಅಮ್ಮ ಕಥೆ ಹೇಳಲೇ ಬೇಕು, ನಾನು ಕಥೆ ಕೇಳ್ತಾ ಮಲಗಲೇ ಬೇಕು. ಎಷ್ಟೋ ಸಲ ಅರ್ಧ ಕಥೆಗೆ ನಿದ್ದೆ ಬರ್ತಿದಿದ್ದೂ ಉಂಟು. ಮರುದಿನ ಬೆಳಗ್ಗೆ ಮತ್ತೆ ಆ ಕಥೆಯ ಮುಂದುವರಿದ ಭಾಗ ಹೇಳು ಅಂತ ಪೀಡಿಸ್ತಿದ್ದೆ. ಅಮ್ಮನ ಕಥೆಯಲ್ಲಿ ಮೊಲ ಮಾತಾಡ್ತಿತ್ತು, ಕಲ್ಲಿನ ಬಸವ ಎದ್ದು ನಿಲ್ತಾ ಇತ್ತು, ಸೂರ್ಯಂಗೇ ಕೋಪ ಬರ್ತಿತ್ತು, ಹೂವು ಹುಡುಗಿಯಾಗ್ತಿತ್ತು, ಹುಡುಗಿ ಹಾವಾಗ್ತಿದ್ಲು, ನರಿ ಮೋಸ ಮಾಡ್ತಿತ್ತು. ಎಂಥಾ ಅದ್ಬುತ ಕಲ್ಪನೆಗಳು. ಪ್ರಪಂಚದಲ್ಲಿರೋ ಎಲ್ಲಾ ನಿರ್ಜೀವ ವಸ್ತುಗಳಿಗೂ ಜೀವ ತುಂಬುವ ಶಕ್ತಿ ಅಮ್ಮನಿಗಿತ್ತು. ಹತ್ತನೇ ಕ್ಲಾಸ್ ಫೇಲಾದ ಅಮ್ಮ ಕಥೆಗಳಲ್ಲಿ ಒಂದು ಅದ್ಬುತ ಲೋಕವನ್ನೇ ತೋರಿಸ್ತಿದ್ಲು. ಅದೆಷ್ಟೋ ಪ್ರಶ್ನೆಗಳಿಗೆ ಅಮ್ಮನ ಕಥೆಗಳಲ್ಲಿ ಉತ್ತರ ಇರ್ತ ಇತ್ತು. ಅಮ್ಮ ತೀರಾ ಕಲಿತವಳಲ್ಲ, ಹಾಗೆಂದು ಅವಳೇನು ಅವಿದ್ಯಾವಂತಳಲ್ಲ. ಅವಳ ಕಥೆಗಳಲ್ಲಿ ವೈಚಾರಿಕತೆಯಿತ್ತು, ಅನುಭವವಿತ್ತು, ನೀತಿಯಿತ್ತು ಹಾಗೂ ಮುಖ್ಯವಾಗಿ , ಹೇಳೋ ಅವಳಲ್ಲಿ, ಕೇಳೋ ನನ್ನಲ್ಲಿ ಖುಷಿ ಇತ್ತು. ಅಮ್ಮನ ಕಥೆಗೆ ಎಂಥದ್ದೆಲ್ಲ ವಸ್ತುವಾಗ್ತಿತ್ತು. ಕಾಗೆಯ ಬಾಯಾರಿಕೆ, ನರಿಯ ಕುತಂತ್ರ, ಮಂತ್ರಿಯ ನಿಷ್ಠೆ, ಬಾನಂಗಳದ ಚಂದಮಾಮ, ಹೊಂಡದ  ಕಪ್ಪೆ ಎಲ್ಲವೂ ವಸ್ತುಗಳೇ. ಪಾತಾಳದಿಂದ ನಾಗಕನ್ಯೆಯರನ್ನು  ಕರೆತರ್ತಿದ್ಲು, ಗಂಧರ್ವಲೋಕದಿಂದ ಗಂಧರ್ವರು ಹಾಡು ಹೇಳ್ತಾಯಿದ್ರು, ಸ್ವರ್ಗದಿಂದ ದೇವತೆಗಳು ಬರ್ತಿದ್ರು, ಅದ್ಯಾವುದೋ ಲೋಕದಿಂದ ರಾಕ್ಷಸರುಗಳನ್ನೇ ಎಳೆದು ತಂದು ಕಣ್ಣ ಮುಂದೆ ಇಡ್ತಾ ಇದ್ಲು. ಅಮ್ಮ ಪುಸ್ತಕ ಓದಿ ಕಥೆ ಕಲಿತವಳಲ್ಲ. ಕಥೆ ಹೇಳಲು ಅಮ್ಮನಿಗೆ ಟಿವಿಯನ್ನೂ ನೋಡಬೇಕಿಲ್ಲ. ಆಕೆಗೆ ಕಥೆ ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು, ಮಾತಾಡುವಷ್ಟೇ ಸರಾಗ. ಆಕೆಯ ಉಸಿರಲ್ಲಿ ಕಥೆಯಿತ್ತು, ಆ ಕಥೆಗಳಿಗೂ ಜೀವ ಇತ್ತು. ಆಕೆಗೆ ಕಥೆ ಹೇಳುವ ಕಲೆ ತಿಳಿದಿತ್ತು. ದೆವ್ವ, ಭೂತ, ಪಿಶಾಚಿಗಳ ಕಥೆ ಹೇಳಿ ಹೆದರಿಸ್ತಿದ್ಲು , ಮಾಯಾಲೋಕದ ಕಿನ್ನರರ ಕಥೆ ಹೇಳಿ ಮೋಡಿ ಮಾಡ್ತಿದ್ಲು, ದೇವರ ಕಥೆ ಹೇಳಿ ಭಕ್ತಿ ಹುಟ್ಟಿಸ್ತಿದ್ಲು, ಅದ್ಯಾವುದೋ ಕಥೆ ಹೇಳಿ ನಗುಸ್ತಿದ್ಲು, ಅಳುಸ್ತಿದ್ಲು. ನಮ್ಮನ್ನ ಕಥೆಯ ಒಂದು ಭಾಗವನ್ನಾಗಿಸಿಬಿಡ್ತಿದ್ಲು.  ನಮ್ಮ ನಿಮ್ಮೆಲ್ಲರ ಇಮ್ಯಾಜಿನೇಶನ್ ಪವರ್ ಇದ್ಯಲಾ ಅದರ ಮೂಲ ಬಹುಶಃ ನಾವು ಹಿಂದೆಂದೋ ಕೇಳಿದ ಕಥೆ.   ಇದು ನನ್ನೊಬ್ಬ ಅಮ್ಮನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ತಾಯಿಯೂ ಕಥೆಗಳ ಗುಚ್ಛ. ಅವರಲ್ಲಿ ಹೇಳಿದಷ್ಟೂ ಕಥೆಯಿದೆ. ಅವರೊಂದು ಕಥೆಗಳ ಖಜಾನೆ. ಅವರಲ್ಲೊಬ್ಬ ಅದ್ಬುತ ಕಥೆಗಾರ ಕುಳಿತುಬಿಟ್ಟಿದ್ದಾನೆ. ಆದರೆ... ಈಗ ನಾವು..? ನಮಗೆ ಸಿನಿಮಾದ ಕಥೆಬಿಟ್ಟು ಬೇರೆ ಕಥೆ ಗೊತ್ತಿಲ್ಲ. ಕಥೆಗಳ ಸೃಜನಶೀಲತೆ ನಮ್ಮಲ್ಲಿಲ್ಲ. ಲವ್ ಸ್ಟೋರಿ , ಆಕ್ಷನ್ ಫಿಲಂ ಗಳ ಆಚೆಗೆ ಬೇರೆಯದೇ ಆದ, ಒಂದಷ್ಟು ನೀತಿಯಿರುವ, ನಮ್ಮಲ್ಲೊಂದು ವೈಚಾರಿಕತೆ ಮೂಡಿಸುವ ಕಥೆಗಳ ಕಲ್ಪನೆಯೂ ನಮಗೀಗ ಬರಲಿಕ್ಕಿಲ್ಲ. ಕಥೆ ಹೇಳೋ ಕಲೆ ನಮ್ಮಲ್ಲಿಲ್ಲ. ಹೇಳೋ ಕಥೆ ಕೇಳುವ ವ್ಯವಧಾನವೂ ಬಹುಶಃ ಈಗ ನಮಗೆ ಹಾಗು ಈಗಿನ ಚಿಕ್ಕ ಮಕ್ಕಳಿಗೆ ಇರಲಿಕ್ಕಿಲ್ಲ. ಟಿವಿ ಸೀರಿಯಲ್ ಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಗೇಮ್ ಗಳಲ್ಲಿ, ಸಿನಿಮಾ ಹಾಡುಗಳಲ್ಲಿ ಕಥೆ ಕಾಣೆಯಾಗಿದೆ. ಅಮ್ಮನ ಕಥೆಗಳಲ್ಲಿ ಅನ್ಯಾಯ ಇರ್ತಾ ಇರ್ಲಿಲ್ಲ, ರಕ್ತ ಇರ್ತಿರಲಿಲ್ಲ, ಮುಖವಾಡ  ಇರ್ತಿರಲಿಲ್ಲ ಅಥವಾ ಅವೆಲ್ಲ ಇದ್ರೂ ಕೊನೆಗೊಂದು ಹ್ಯಾಪಿ ಎಂಡಿಂಗ್ ಇತ್ತು, ನೈತಿಕತೆ ಮರೆತ ಎಲ್ಲರಿಗೂ ಶಿಕ್ಷೆ ಆಗ್ತಾ ಇತ್ತು. ನಮ್ಮ ತಲೆಯೊಳಗೆ  ಅಂತಹ ನೈತಿಕತೆ ಮೆರೆಯುವ  ಒಂದೇ ಒಂದು ಸ್ವಂತ ಕಥೆ ಬರಲೂ ಸಾಧ್ಯವಿಲ್ಲ ಹಾಗು ಹಿಂದೆಂದೋ ಕೇಳಿದ ಕಥೆಯನ್ನ ಅಮ್ಮ ಹೇಳಿದಷ್ಟೇ ರಸವತ್ತಾಗಿ ಹೇಳುವ ಕಲೆಯೂ ನಮಗೆ ಗೊತ್ತಿಲ್ಲ. ಕಥೆಯ ಕೊಂಡಿ ಕಳಚುತ್ತಾ ಇದೆ. ಸಿಕ್ಕಾಪಟ್ಟೆ ಬಿಜಿಯಾಗಿರುವ ಅಪ್ಪ ಹಾಗು ಟಿವಿ ಸೀರಿಯಲ್ಲುಗಳಲ್ಲೇ ಮುಳುಗಿ ಹೋಗಿರುವ ಅಮ್ಮ... ಇವರಿಬ್ಬರ ನಡುವೆ ಕಾಣೆಯಾಗುತ್ತಿರುವ ಕಥೆ.ಹೀಗೆಯೇ ಆದಲ್ಲಿ ಮುಂದೊಂದು ದಿನ ವಿಶ್ವವಿದ್ಯಾನಿಲಯಗಳು ಕಥೆ ಹೇಳುವುದು  ಕಲಿಸುವ ಕೋರ್ಸು ಪ್ರಾರಭಿಸಬೇಕಾದೀತು. ನಾವೇ ನಮ್ಮ ಯಾಂತ್ರಿಕ ಜೀವನ ಶೈಲಿಯಲ್ಲಿ ಕೊಂದ ಕಥೆಗಾರ ಮತ್ತೆ ಹುಟ್ಟಿ ಬರಲಿ, ಇಂದಿನ ಮಕ್ಕಳು ಹೋಂ ವರ್ಕ್ , ಟ್ಯೂಶನ್ ಗಳ ಒತ್ತಡದಿಂದ ಹೊರಬಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ರಿಸಲಿ.

ನಾನ್ಯಾರೆಂದರೆ ನಾನ್ಯಾರು..?

ನಿದ್ದೆ ಮಂಪರಿನಲ್ಲಿದ್ದ ನನಗೆ "ನಾನ್ಯಾರು... ನಾನ್ಯಾಕೆ ಇಲ್ಲಿ ಇದೀನಿ.... ಭೂಮಿಯ ಮೇಲೇ ನನ್ನ ಅಸ್ತಿತ್ವ ಏನು...? ಎಂಬಂಥ ಪ್ರಶ್ನೆಗಳು ಕಾಡುತ್ತಿತ್ತು. ತೀರಾ ಆಧ್ಯಾತ್ಮದವರೆಗೂ ಕರೆದೊಯ್ಯಬಲ್ಲಂಥ ಇಂಥ ಪ್ರಶ್ನೆಗಳು ಸಧ್ಯಕ್ಕೆ ನನ್ನನ್ನು ನಿದ್ದೆಯಿಂದ ಎಬ್ಬಿಸಿತ್ತು. ಮಧ್ಯಾಹ್ನ ಉಟ ಮಾಡಿ ಸಂಜೆಯವರೆಗೂ ಮಲಗಿಕೊಳ್ಳುವಂಥ ಖಯಾಲಿ ಇಂದು ನಿನ್ನೆಯದಲ್ಲ. ಆದರೆ, ಹೀಗೆ ನನ್ನ ಜೀವನದ ಉದ್ದೇಶಗಳ ಬಗೆಗಿನ ಪ್ರಶ್ನೆ ತೀರಾ ಇತ್ತೀಚಿನದು. ನಾನೆಂಬ ನಾನು ಕೇವಲ ಅಪ್ಪ-ಅಮ್ಮನ ಮಗ.. ಅಜ್ಜ-ಅಜ್ಜಿಯ ಮೊಮ್ಮಗ.. ಅಣ್ಣನ ತಮ್ಮ... ತಂಗಿಯ ಅಣ್ಣ... ಹೀಗೆ, ಇವಷ್ಟೇ ಉತ್ತರಗಳು ನನ್ನ ಬಳಿ, ನಾನ್ಯಾರೆಂದರೆ. ಯಾರಾದ್ರು ನನ್ನನ್ನು 'ನೀನ್ಯಾರು..?' ಎಂದು ಕೇಳಿದ್ರೆ, ಇಂಥ ಊರಿನವನಾದ ನಾನು ಇಂಥವರ ಮೊಮ್ಮಗನಾಗಿದ್ದೇನೆ, ಇಂಥವರ ಮಗನಾದ ನನ್ನ ಹೆಸರು ಇಂಥದ್ದು... ಇಷ್ಟು ಮಾತ್ರ ನನ್ನ ಬಗ್ಗೆ ನನಗೆ ತಿಳಿದಿದ್ದ ವಿವರಗಳು. ನಿಜ ಅಂದ್ರೆ, 'ನಾನ್ಯಾರು' ಎಂಬ ಯಾರದೋ ಪ್ರಶ್ನೆಗೆ  ಇಷ್ಟು ವಿವರಗಳು ಸಾಕು. ಆದ್ರೆ ನನ್ನಲ್ಲೇ ಈ ಪ್ರಶ್ನೆಗಳು ಹುಟ್ಟಿದ್ರೆ...? ಹುಟ್ಟಿತ್ತು...! ನಾನು ಇಂಥ ಊರಿನವನು... ಇಂಥವರ ಮಗ ಎಂಬಷ್ಟೇ ಉತ್ತರಗಳು ತೃಪ್ತಿ ನೀಡಲಿಲ್ಲ. ಊರು, ಅಜ್ಜ, ಅಜ್ಜಿ, ಅಪ್ಪ, ಅಮ್ಮ ಹೀಗೆ ಯಾರಾದರೊಬ್ಬರ/ ಯಾಹುದಾದರೊಂದರ ರೆಫೆರೆನ್ಸೆ ಬೇಕು, ನಾನ್ಯಾರು ಎಂಬ ಪ್ರಶ್ನೆಯ ಉತ್ತರಕ್ಕೆ. ಯಾರೊಬ್ಬರ ರೆಫೆರೆನ್ಸೆ ಕೂಡ ಇಲ್ಲದೆ 'ನಾನ್ಯಾರು' ಅಂತ ಹೇಳಲಿಕ್ಕೆ ಸಾಧ್ಯವ... ಜೀವನಕ್ಕೊಂದು ಉದ್ದೇಶ ಇದ್ಯಾ...? ಇದು ಇವತ್ತು ನಿದ್ದೆ ಮಂಪರಿನಲ್ಲಿದ್ದಾಗಿನ ಪ್ರಶ್ನೆಯಾಗಿತ್ತು. ಎದ್ದು ಸೀದಾ ಬಚ್ಚಲ ಮನೆಗೆ ಹೋಗಿ ಮುಖ ತೊಳೆಯತೊಡಗಿಗೆ. ನನ್ನದೇ ಪ್ರಶ್ನೆಯ ಉತ್ತರಕ್ಕಾಗಿ ಯಾರನ್ನು ಕೇಳೋದು.. ಬಚ್ಚಲ ಮನೆಯ ಹಂಡೆ, ನೀರು, ಚೊಂಬು, ಬಕೆಟ್ ಗಳಿಗೆ ಗೊತ್ತಿರಲಿಕ್ಕಿಲ್ಲ. ಬಚ್ಚಲ ಮನೆಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರು ಬರ್ತಾರೆ. ಬಂದದ್ದು ಯಾರು ಎಂದು ಗುರುತಿಸುವ ಶಕ್ತಿ ಅವುಗಳಿಗಿಲ್ಲ. ಮುಖ ತೊಳೆದು ಸೀದಾ ಜಗಲಿಯತ್ತ ನಡೆದೆ, ಅಮ್ಮನನ್ನರಸಿ. ಮೋಡ ಮುಸುಕಿದ ಭಾನು ಮಳೆಯ ಸೂಚನೆ ಕೊಡುತ್ತಿತ್ತು. ಮಧ್ಯಾಹ್ನ ಊಟ ಮುಗಿಸಿ, ಒಂದೊಳ್ಳೆ ನಿದ್ದೆ ಮಾಡಿ ಎದ್ದು ಕಾಫಿ ಕುಡಿಯುಹುದು ಮಲೆನಾಡಿನ ವಾಡಿಕೆ. ಅಂತೆಯೇ ನಾನು ಎದ್ದಿದೀನಿ, ಕಾಫಿ ಕುಡಿಯಲು ತಯಾರು ಎಂಬ ಸಂದೇಶ  ಹೊತ್ತು ಜಗಲಿಗೆ ಬಂದಿದ್ದೆ. ಟಿವಿ ತನ್ನ ಪಾಡಿಗೆ ತಾನು ಉರಿಯುತ್ತಿತ್ತು... ಉರಿಯೋದೆ ತನ್ನ ಕೆಲಸವೆಂಬಂತೆ. ಮೆಘಾ ಸೀರಿಯಲ್ ಗಳ ಒಂದೊಂದು ಪಾತ್ರವಾಗಿಬಿಟ್ಟಿದ್ದ ಮನೆಯವರೆಲ್ಲ ಈ ದಿನ ತಮ್ಮ ಪಾತ್ರದಲ್ಲಿ ಮಗ್ನರಾಗಿರಲಿಲ್ಲ. ಪ್ರಪಂಚದ ಎಂಟನೆ ಅದ್ಭುತ ನೋಡಿದ ಭಾಗ್ಯ ನನ್ನದಾಗಿತ್ತು.... ಟಿವಿ ಅನಾಥವಾಗಿತ್ತು. ನನ್ನ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ನಾನೇ ನನಗೆ ಪ್ರಶ್ನೆಯಾಗಿದ್ದೆ. ಉತ್ತರ ಸಿಗಲಾರದ ಪ್ರಶ್ನೆಗಳೇ ಹೀಗೆ.. ಒಂದಷ್ಟು ದಿನ ಕೊರೆಯತ್ತೆ... ಕಾಡತ್ತೆ.. ಮರೆಯತ್ತೆ. ಮರೆಯೋಕೆ ಸ್ವಲ್ಪ ಸಮಯ ಬೇಕಾಗಿದ್ರಿಂದ ಈ ಪ್ರಶ್ನೆಗಳು ಕಾಡುತ್ತಿತ್ತು. ಕಾಫಿ ಬೀಳದ ಬಾಯಿ ಒಣಗುತ್ತಿತ್ತು. ಚಿಕ್ಕಮ್ಮನ ಧ್ವನಿ ಜಗಲಿಯ ಪಕ್ಕದಲ್ಲಿದ್ದ ರೂಮಿನಿಂದ ಬಂದಂತಾಯಿತು. ಹೆಂಗಸರ ಬೆಟಾಲಿಯನ್ ನ ಕಮಾನ್ಡೆರ್ ಚಿಕ್ಕಮ್ಮ. ಅವರ ಧ್ವನಿ ಬಂದತ್ತಲೇ ಹೊರಟೆ.. ಅಮ್ಮನೂ ಇರಬಹುದೆಂದು. ಕಪ್ಪಂಚಿನ ಬಿಳಿ ಸೀರೆಯನ್ನು ತಿರುಗಿಸಿ, ಮುರುಗಿಸಿ, ಮುತ್ತಿ ನೋಡಿ ಪರಿಶೀಲಿಸುತ್ತಿತ್ತು ಬೆಟಾಲಿಯನ್. ಮುಂದಿನ ತಿಂಗಳು ಇದ್ದ ಅಕ್ಕನ ಮದುವೆಗೆ ತಂದ ಸೀರೆ ಬೆಟಾಲಿಯನ್ ನ ಪರೀಕ್ಷೆಗೆ ಒಳಪಟ್ಟಿತ್ತು. ನನ್ನ ಬದುಕಿನ ಉದ್ದೇಶ ಏನು ಎಂಬುದು ಇನ್ನೂ ನನಗೆ ತಿಳಿಯದಾಗಿತ್ತು. ನನ್ನ ಅಸ್ತಿತ್ವ ಸೀರೆ ಇಂದ ಮುಚ್ಚಿತ್ತು. ನಾನು ಅಲ್ಲಿ ಇದ್ದದ್ದನ್ನ ಇನ್ನೂ ಯಾರೂ ಗಮನಿಸಿರಲಿಲ್ಲ. ಬಹುಷಃ ಆ ಸೀರೆ ಚಿಕ್ಕಮ್ಮನಿಗೆ ಇಷ್ಟ ವಾಗಲಿಲ್ಲ ಅನ್ಸತ್ತೆ. ನಾಳೆ ಸೀರೆ ಬದಲಿಸುವ ಕುರಿತು ಚರ್ಚೆ ನಡೆಯುತ್ತಿತ್ತು. ಅಂತ ಒಂದು ಸೀರಿಯಸ್ ವಿಚಾರ ಚರ್ಚೆಯಿಂದ ಅಮ್ಮನನ್ನು ಹೊರತಂದು ಕಾಫಿ ಮಾಡಿಸೋದು ಅಸಾಧ್ಯ ಅಂತ ನನಗೆ ಅನುಭವದಿಂದ ಗೊತ್ತಿದೆ. ಸರಿ.. ನನ್ನ ಪ್ರಶ್ನೆಗಳಿಗೆ ಉತ್ತರ ಬೆಂಬತ್ತಿ ಹಿತ್ತಲ ಕದೆಯತ್ತ ನಡೆದೇ. ಮೋಡ, ಮಿಂಚು, ಗುಡುಗು... ಮಳೆ ಬರುವ ಮುನ್ಸೂಚನೆ. ಒಂದೆರಡು ಹನಿ ಬಿದ್ದ ಮೇಲೇ ಅಕ್ಕ ಓದಿ ಬಂದ್ಲು, ಒಣ ಹಾಕಿದ್ದ ಬಟ್ಟೆ ತೆಗಿಯಲು. ಅಲ್ಲಿದ್ದ ಎಲ್ಲ ಬಟ್ಟೆಯನ್ನು ತೆಗೆದು, ಬಾ ಇಲ್ಲಿ ಎಂದು ನನ್ನನ್ನ ಕರೆದ್ಲು. ಎರಡೂ ಹೆಗಲಿಗೆ ಹಿಡಿಯೋ ಅಷ್ಟು ಬಟ್ಟೆಯನ್ನ ನನ್ನ ಹೆಗಲಿಗೆ ಹಾಕಿ, ಉಳಿದ ಒಂದು ಕರ್ಚೀಪ್ ಹಿಡಿದು. ಹೊರಟೆ ಬಿಟ್ಲು. ನನ್ನ ಪ್ರಶ್ನೆಗೆ ಉತ್ತರ ಅರ್ಧ ಸಿಕ್ಕಂತಾಗಿ ನಾನೂ ಅವಳ ಹಿಂದೆ ಹೊರಟೆ. ಬಹುಷಃ ಮಳೆ ಬಂದಾಗ ಒಣ ಹಾಕಿದ ಬಟ್ಟೆ ತೆಗೆಯೋದು ನನ್ನ ಜೀವನದ ಉದ್ದೇಶ ಗಳಲ್ಲೊಂದಾಗಿರ ಬಹುದ... ಅಥವಾ... ಅದೊಂದೇ ಉದ್ದೇಶವ ನನ್ನ ಬದುಕಿಗೆ...!          

ಕಾಲನ ಕರೆಗೆ ಓಗೊಟ್ಟಾಗ

            ಅದೆಂತಹ ದಾಹ... ಬದುಕಿದ್ದಾಗ ಇಂತದ್ದೊಂದು ದಾಹ ಕಂಡಿದ್ದೇ ಇಲ್ಲ. ಸತ್ತ ನಂತರ ಇಂತಹ ದಾಹ ಆಗತ್ತೆ ಅಂತ ಮೊದಲೇ ಗೊತ್ತಿರಲಿಲ್ಲ. ಮೊದಲ ಸಲ ಸತ್ತಿದ್ರಿಂದ ಈ ತರಹದ ಅದಮ್ಯ ದಾಹ ಮೊದಲ ಅನುಭವ. ಬೆಂಗಾಡಿನ ಬಯಲಲ್ಲಿ ನನ್ನ ಕರ್ಕೊಂಡು ಹೋಗ್ತಾ ಇದ್ದವನು ಬಹುಶಃ ಯಮ. ನಾನು ಈ ಮೊದಲು ಯಮನನ್ನ ನೋಡಿದ್ದಿಲ್ಲ ಈ ಮೊದಲೇ ಸತ್ತು ಅನುಭವವಿಲ್ಲ ನೋಡಿ. ಆತನನ್ನು ನೋಡಿದ ಪುಣ್ಯಾತ್ಮರ್ಯಾರೂ ನನಗೆ ಸಿಕ್ಕಿರಲಿಲ್ಲ. ಇದು ನನ್ನ-ಯಮನ ಮೊದಲ ಭೇಟಿ. ’ಯಮಕಿಂಕರ’ ಸಿನೆಮಾದಲ್ಲಿ ದೊಡ್ಡಣ್ಣನ್ನ ನೋಡದೆ ಇದ್ದಿದ್ರೆ, ಹಾಗೂ ಯಮರೂಪಿ ಯಮನನ್ನ ಹೊತ್ತೊಯ್ಯೋ ಕೋಣನ ಬಗ್ಗೆ ತಿಳಿದಿರದೆ ಹೋಗಿದ್ರೆ ಆತನ ವಿಸಿಟಿಂಗ್ ಕಾರ್ಡ್ ನೋಡಿಯೇ ಗುರುತು ಹಿಡಿಯಬೇಕಾಗಿತ್ತು. ಈತ ಯಮ ಇರಬಹುದು, ಹಂಗಂತ ಹಿಂಗೆ ಹೇಳದೇ ಕೇಳದೇ ನನ್ನ ಎತ್ಕೊಂಡು ಬರಬಹುದಾ ಅಂತ..? ಒಂದೇ ಒಂದು ನೋಟೀಸ್ ಕಳಸ್ದೆ ಈ ತರ ಎಳ್ಕಂಡು ಬರೋದು ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಪರಾಧ. ಇಂತಹ ಕನಿಷ್ಟ ಜ್ನಾನವೂ ಯಮನಿಗಿಲ್ಲ. ಏನು ಮಾಡಕ್ಕಾದೀತು..? ಮೊದಲೇ ತಿಳಿಸಿದ್ರೆ ಕೊನೆಪಕ್ಷ ಒಂದು ಬಾಟಲ್ ನೀರನ್ನಾದ್ರು ತಗೋತಿದ್ದೆ. ತಾಳೆ ಮರದ ಕೆಳಗೆ ಕುಳಿತು ಕುಡಿದಿದ್ರೆ ’ನೀರಾ’ ಕುಡಿದ ಅನುಭವ ಆದ್ರೂ ಆಗ್ತಿತ್ತೇನೊ..! ಜೀವನದಲ್ಲಿ ಅಂತ ದೊಡ್ಡ ಆಸೆಯೇನೂ ಇರ್ಲಿಲ್ಲ. ಆದ್ರೂ ನಾನು ಬದುಕಿರಬೇಕಾಗಿತ್ತು. ಇವತ್ತೊಂದು ಮದ್ದೂರು ವಡೆ ತಿನ್ನೊ ಬಯಕೆ ಇತ್ತು. ಅದೂ ಆಗ್ಲಿಲ್ಲ. ಬದುಕಿ ಏನೋ ಮಾಡಬೇಕು ಅಂತ ಇಲ್ದಿದ್ರು ಬದುಕಬೇಕು ಅಂತ ಇತ್ತು. ಮೂರೂ ಹೊತ್ತು ಊಟ, ಅರ್ಧ ದಿನ ನಿದ್ರೆ.. ಜೀವನ ಚೆನ್ನಾಗಿತ್ತು. ಬದುಕಬೇಕು ಅನ್ನೊ ಆಸೆ ಇತ್ತು. ಹೇಳದೇ ಕೇಳದೇ ಕರ್ಕೊಂಡು ಬಂದ್ಬಿಟ್ಟ. ಹತ್ರದೋರಿಗೆ ’ಹೋಗಿ ಬರ್ತೀನಿ, ಟಾಟಾ, ಮೇಲೆ ಸಿಗುವ’ ಅಂತ ಹೇಳಕ್ಕೂ ಅವಕಾಶ ಕೊಡದ ಹಾಗೆ. ಎಂಥೆಂತೋರೊ ಬದುಕಿದ್ದಾರೆ, ಭೂಮಿಗೆ ಭಾರವಾಗಿ. ಕೆಲವರ ದೇಹಕ್ಕಂತೂ ಜೀವವೇ ಭಾರ. ಅಂತ ’ಜೀವಭಾರ’ ಆದ ಸ್ನೇಹಿತ ನಂಗೂ ಇದ್ದ. ಜೀವನದಲ್ಲಿ ಆಸಕ್ತಿ ಇಂಗಿ ಇಲಿಪಾಶಾಣ ತಿಂದು ಸಾಯೋಕೆ ಹೊರಟಿದ್ದ. ಈಗಿನ ಕಾಲದಲ್ಲಿ ಇಲಿಪಾಶಾಣ ತಿಂದು ಇಲಿಗಳೇ ಸಾಯಲ್ಲ, ಅಂತದ್ರಲ್ಲಿ ಈತ ಸತ್ತಾನ್ಯೇ..? ಸತ್ರೂ ಸಾಯ್ತಿದ್ನೇನೊ, ಮಲಯಾಳಿ ನರ್ಸ್ ಕರುಳಿನವರೆಗೂ ಕೈ ಹಾಕಿ ವಾಂತಿ ಮಾಡಿಸದ ಪಕ್ಷದಲ್ಲಿ. ಆತನ ವಾಂತೀಲಿ ’ತಲೆಮಾಂಸ’ ಇತ್ತು ಅನ್ನೊ ಸುದ್ದಿ ಇದೆ. ಬ್ರಾಹ್ಮಣನ ಹೊಟ್ಟೇಲಿ ತಲೆಮಾಂಸ ಹೆಂಗೆ ಬಂತು ಅಂತ ಟಿವಿ-9 ಅವ್ರು ಹುಡುಕ್ತಾ ಇದಾರೆ. ಆದ್ದರಿಂದ ತಲೆಮಾಂಸದ ಪ್ರಸ್ತಾಪ ಈ ಸಂದರ್ಭದಲ್ಲಿ ಅಪ್ರಸ್ತುತ.
                               ಇಂಥಾ ಬಟಾ ಬಯಲಿನಲ್ಲಿ ಒಂದು ಹನಿ ನೀರೂ ಇಲ್ದೆ ಹೋಗೊ ಕಷ್ಟ ಸತ್ತೋರಿಗೇ ಗೊತ್ತು. ಮೇಲಿಂದ ತಲೆ ಸುಡೋ ಅಂತ ಬಿಸಿಲು, ಕೆಳಗಡೆ ಕಾಲು ಸುಡೊ ಕಾದ ಹಂಚಾಗಿದ್ದ ಮರಳು. ಸತ್ತ ಮೇಲೆ ಇದೇ ದಾರೀಲೆ ಬರ್ತಾರೆ ಅಂದ್ರೆ ಭೂಮೀಲಿ ಹೆಣ ಸುಡೊ ಅಗತ್ಯ ಇಲ್ಲ. ಇಲ್ಲೆ ರಾಜಸ್ಥಾನದ ಪಕ್ಕದಲ್ಲೆ ಇರಬೇಕು ಯಮಪುರಿ. ಅಶೋಕ್ ಖೇಣಿ ಮೇಲೆ ಬಂದಾಗ ’ಒಂದೊಳ್ಳೆ ’ನೈಸಾ’ದ ರಸ್ತೆ ಮಾಡಪ್ಪ, ಸಾಲುಮರಗಳ ಸಹಿತ’ ಅನ್ನಬೇಕು. "ಯಮರಾಜ, ಬಿಟ್ಟುಬಿಡಪ್ಪ ನನ್ನ, ಥ್ಯಾಂಕ್ಸ್ ಹೇಳ್ತೇನೆ" ಅಂದೆ. ಯಮನಿಂದ ಪ್ರತ್ಯುತ್ತರ ಇಲ್ಲ. ಯಮನಷ್ಟು ಗಡಸು ಮತ್ಯಾರಿಗೂ ಇಲ್ಲ ಕಣ್ರೀ. ಥ್ಯಾಂಕ್ಸ್ ಹೇಳ್ತೀನಿ ಅಂದ್ರು ಬಿಡಲ್ಲ ಅಂತಾನೆ.

                               ಈ ದಾಹ, ಮೋಹ ಎರಡನ್ನು ತಡ್ಕಳದು ಕಷ್ಟನಪ. ಅಯ್ಯೋ.. ಮೋಹದ ಹೆಸರು ಹೇಳ್ತಾಯಿದ್ದಾಗೆ ಮಳೆ ಬರ್ತಾ ಉಂಟು..! ಆಕಾಶದಲ್ಲಿ ಮೋಡ ಇಲ್ಲ, ಅಸಲಿಗೆ ಅಲ್ಲೊಂದು ಆಕಾಶವೇ ಇಲ್ಲ. ಮೋಡ ಇಲ್ದೆ ಮಳೆ ಬರೊ ಅಚ್ಚರಿ ಕಂಡಂಗಾಯ್ತು. ಎಂಥಾ ಮಳೆ ಅಂತೀರಿ..! ಎರಡೆ ಕ್ಷಣಕ್ಕೆ ಮುಖ, ತಲೆ ಎಲ್ಲ ಒದ್ದೆ ಆಗಿದೆ. ವರುಣ ಏನಾದ್ರೂ ಇತ್ತೀಚಿಗೆ ’ಮುಂಗಾರು ಮಳೆ’ ಸಿನೆಮಾ ನೋಡಿದ್ನಾ..? ಏನೋಪ... ಒಟ್ನಲ್ಲಿ ಮುಖ ಪೂರಾ ಒದ್ದೆಯಾಯ್ತು. ಅರೆ.. ಹಿಂದೇನೆ ಹೆಂಡತಿ ಧ್ವನೀನು ಕೇಳ್ತಾಯಿದೆ..! ಸತೀ ಸಾವಿತ್ರಿ ತರ ನನ್ನ ಗಾಯಿತ್ರೀನೂ ಬಂದ್ಲ ನನ್ನ ಬಿಡುಸ್ಕಂಡ್ ಹೋಗಕ್ಕೆ..? ತಿರುಗಿ ನೋಡಿ ಕೂಗಿದೆ "ಬಂದ್ಬಿಟ್ಯೇನೆ ಗಾಯಿತ್ರೀ ಕರ್ಕೊಂಡ್ ಹೋಗಕ್ಕೆ"? ತಿರುಗಿ ಉತ್ತರ ಬಂತು "ಮೊದಲು ಎದ್ದೇಳ್ರೀ.. ಕಾವೇರಿ ನೀರು ಬರ್ತಾಯಿದೆ ತುಂಬಿ ಕೊಡಿ". ಅಂತೂ ಎದ್ದು ಕೂತೆ, ಈ ಮೋಹಕ್ಕಿಂತ ಆ ದಾಹವೇ ಚೆನ್ನಾಗಿತ್ತು ಅಂದ್ಕೊಳ್ತ. ಏನಂದ್ರೂ ಚಿನ್ನ ನನ್ನ ಗಾಯಿತ್ರಿ.. ಬೆಳಗ್ಗೆ ಎದ್ದು ಮುಖ ತೊಳ್ಯೋ ಕೆಲ್ಸ ಉಳ್ಸಿದಾಳೆ.   

ಟ್ರಿನ್ ಟ್ರಿನ್ ...

ಅದೆಷ್ಟು ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ನೋ ಗೊತ್ತಿಲ್ಲ. ಮಹಾ ನಗರದಲ್ಲಿ ಒಂಟಿ ರೂಮು ಮಾಡಿ ಒಂಟಿಯಾಗಿದ್ದ ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ದ. ಘಳಿಗೆಗೊಮ್ಮೆ ಫೋನ್ ನೋಡಿ ಬಡಬಡಿಸ್ಥ ಇದ್ದ. ಯಾರೋ ಕೇಳ ಬೇಕಾದ್ದೊಂದು ಯಾರಿಗೂ ಕೇಳದೆ ಅಲೆ ಅಲೆಯಾಗಿ ಹೋಗಿ ಗಾಳಿಯಲ್ಲಿ ವಿಲೀನವಾಗುತ್ತಿತ್ತು.  ಅಂತರಾಳದ ಮಾತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ವು. ಸತ್ತ ಪ್ರತಿ ಮಾತು ಒಂಟಿ ರೂಮಿನಲ್ಲಿ ಪ್ರತಿಧ್ವನಿಸುತ್ತಿದ್ವು. ಕೇಳುವವರಿಲ್ಲದೆ ಕಮರಿ ಕಣ್ಮರೆಯಾಗುತ್ತಿದ್ವು. ಬಹುಶಃ ಅದೊಂದು ಫೋನ್ ಕಾಲ್ ಬಂದಿದ್ರೆ ಮಾತು ಹಾಗು ಮನಸ್ಸು ಎರಡಕ್ಕೂ ಉಸಿರಿರುತ್ತಿತ್ತೇನೋ. ಮಹಾನಗರದಲ್ಲಿ ಯಾರಿಗೂ ಸಮಯವಿರಲ್ಲಿಲ್ಲ ಮಾತಿನ ಹೆಣ ಹೊತ್ತು ಹಾಕಲು. ಕೊಳೆತು ನಾರುವ ಮನಸ್ಸಿಗೊಂದು ಸಾಬೂನು ಹಾಕಲು. ಬೆಳಗ್ಗೆ ಅದೆಷ್ಟೋ ಹೊತ್ತಿಗೆ ಮೊಬೈಲ್ ರಿಂಗಿನುಸುತ್ತಿತ್ತು. ಆತುರದಿಂದ ನೋಡಿದ್ರೆ ಹಾಳಾದ್ದು ಅಲಾರಂ. ಬಹುಶಃ ಅದೊಂದೇ ಅವನ ಮೊಬೈಲ್ ನಲ್ಲಿ ಬರುತ್ತಿದ್ದ ಶಬ್ದ. ಯಾರಿಗೂ ನೆನಪಾಗದೆ ಇರೋದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯ ಹಿಂದೆ ಉತ್ತರ ಸಿದ್ಧವಿರುತ್ತಿತ್ತು, ನೀನೆ ಇದ್ದೀಯಲ್ಲೋ, ಯಾರ ನೆನಪಿಗೂ ಬಾರದೆ. ಅದು ಸರಿಯೇ.. ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ತನ್ನದಲ್ಲ, ತನ್ನನ್ನು ನೆನಪಿಟ್ಟು ಕೊಳ್ಳಲು ತನ್ನವರ್ಯಾರೂ ಇಲ್ಲ. ಹಾಗಾದ್ರೆ ತಾನು ಕಾಯ್ತಾ ಇರೋ ಫೋನ್ ಕಾಲ್ ಯಾರಿದ್ದು..? ತಾನು ಕಾಯ್ತಾ ಇರೋದು ಯಾರಿಗಾಗಿ..? ತನ್ನವರೆನ್ನು ವವರು ಯಾರೂ  ಈಗ ಬದುಕಿಲ್ವೋ..? ಅಥವಾ.. ಮೊದಲಿಂದಲೂ ಇರ್ಲಿಲ್ವೋ..? ಗೊಂದಲಕ್ಕೆ ಬಿದ್ದು ಬಿಡ್ತಾ ಇದ್ದ. ಇಷ್ಟು ದಿನ ಇದ್ದದ್ದು ರಾತ್ರೆ ಬಿದ್ದ ಕನಸೇ..? ಆತನಿಗಂತೂ ಗೊತ್ತಿರ್ಲಿಲ್ಲ. ಅತ್ತಲಿನ ಧ್ವನಿ ಉತ್ತರಿಸಬೇಕಿತ್ತು. ಉತ್ತರಿಸುತ್ತಿತ್ತೇನೋ.. ಧ್ವನಿ ಇದ್ದಿದ್ರೆ. ಬೆಳಗ್ಗೆ ಹೆಣ ಹೊತ್ಕೊಂಡು ಕೆಲಸಕ್ಕೆ ಹೋಗೋದು, ಸಂಜೆಯವರೆಗೂ ತನ್ನ ಹೆಣದ ಮೇಲೆ ಅಕ್ಕಿ, ಸಕ್ಕರೆ, ಬೇಳೆ-ಕಾಳುಗಳ ಮೂಟೆ ಸಾಗಿಸೋದು, ಸಂಜೆ ನೇತ್ರಾವತಿ ಬಾರ್ ನಲ್ಲಿ ಕರುಳಿನಿಂದ ಗಂಟಲಿನವರೆಗೂ ತುಂಬುವಂತೆ  ಕುಡಿಯೋದು, ತನ್ನದೇ ಹೆಣ ಹೊತ್ತು ರೂಮು ಸೇರೋದು. ಘಳಿಗೆಗೊಮ್ಮೆ ಫೋನ್ ನೋಡೋದು. ಕುಡಿದ ಮಬ್ಬು ಇಳಿದರೆ ಮತ್ತೆ ಕೆಲಸಕ್ಕೆ, ಇಲ್ಲ ಅಂದ್ರೆ ಒಂಟಿ ರೂಮಿನಲ್ಲಿ ಒಂಟಿಯಾಗಿ ಬರಬಹುದಾದ ಫೋನ್ ಗಾಗಿ ಕಾಯೋದು. ಇದಿಷ್ಟೇ ಆತನ ದಿನಚರಿ. ಒಂದೆ ಒಂದು ಫೋನು ಬರಬೇಕಿತ್ತು, ಎಲ್ಲವನ್ನು ಹೇಳಿ ತಾನು ಖಾಲಿಯಾಗಿ ಬಿಡಬೇಕಿತ್ತು. ಇದೆ ಕೊನೆ ಆಸೆ ಎಂಬಂತೆ ಬದುಕ್ತಾ ಇದ್ದ. ಸ್ಸಾರಿ.. ಉಸಿರಾಡ್ತಾ ಇದ್ದ ಅಷ್ಟೇ. ಪ್ರತಿ ದಿನ ಕುಡಿದಾಗಲೂ ಒಂದೇ ಕನಸು ಬೀಳುತ್ತಿತ್ತು ಹಾಗು ಅದು ವಾಸ್ತವಕ್ಕೆ ತುಂಬಾ ಹತ್ತಿರವಿರುತ್ತಿತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪ್ಪನ ಹೊಟ್ಟೆಗೆ ಚೂರಿ ಹಾಕಿದಂತೆ, ಅದನ್ನ ನೋಡಿದ ಅಮ್ಮ ಕತ್ತಲಲ್ಲಿ ಕಣ್ಮರೆ ಆದಂತೆ, ಜೀವದ ಗೆಳೆಯ ನಕ್ಕು ಮರೆ ಆದಂತೆ ಹಾಗು ಪ್ರೀತಿಯ ಹುಡುಗಿ ಮರು ಮದುವೆಯಾದಂತೆ. ಇಷ್ಟೆಲ್ಲಾ ಕನಸ ಪರದೆಯಲ್ಲಿ ಹರಿದಾಡಿದಂತೆ ಎಚ್ಚರಾಗಿ ಬಿಡ್ತಿದ್ದ ಹೆಬ್ಬಾವು ತುಳಿದಂತೆ. ತಾನು ಹೇಳಲೇ ಬೇಕಿತ್ತು, ಅಪ್ಪನನ್ನು ಕೊಂಡದ್ದು ನಾನಲ್ಲ, ಅದು ಜೀವದ ಗೆಳೆಯ. ಬೇರೆ ಯಾರಿಗೂ ಅಲ್ಲದಿದ್ರೂ ಕತ್ತಲಲ್ಲಿ ಕಣ್ಮರೆಯಾದ ಅಮ್ಮನಿಗೆ ಹಾಗೂ ಕೊಲೆಗಾರನ ಪ್ರೆಯಸಿಯಾಗಳು ಒಪ್ಪದೇ ಬೇರೆ ಮದುವಯಾದ ತನ್ನ ಹುಡುಗಿಗೆ ಹೇಳಲೇ ಬೇಕಿತ್ತು. ಊರು ಬಿಟ್ಟು ಬಂದ ಮೇಲೆ ತನ್ನವರ ಸುಳಿವಿಲ್ಲ. ಅವನ ಗೆಳೆಯರೊಂದಿಗೆ ಸೇತುವೆ ಬೆಸೆಯಬಲ್ಲಂತ ಫೋನು ಸ್ಥಬ್ದ ವಾಗಿತ್ತು. ಮನಸ್ಸು ಮೂಖವಾಗಿತ್ತು. ಕುಡಿದು ಖಾಲಿಯಾದ ಬಾಟಲ್ ಆತನ ಬದುಕನ್ನ ಪ್ರತಿಬಿಂಬಿಸುತ್ತಿತ್ತು. 

ಮೊದಲ ಪತ್ರ

ಪ್ರೀತಿಯ ಜೀವನ್ಮುಖಿ...
                ಅಂಚೆಯಣ್ಣನ ಕೈ ಸೇರದೆ, ನನ್ನ ಪೋಸ್ಟಾಫೀಸಿಗೆ ಬಿದ್ದ ಮೊದಲ ಪತ್ರ. ಎಂದೂ ನಿನ್ನ ಕೈ ಸೇರದ ಪತ್ರ. ನಿನ್ನ  ಹೆಸರೇನೆಮ್ಬುದೆ ಗೊತ್ತಿರದ  ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು  ಸೆಳೆತ ಸೃಷ್ಟಿಸಿ ಬಿಟ್ಯಲ್ಲಾ..? ಆ ಸೆಳೆತ ಈ  ಪತ್ರದಲ್ಲಿ  ಎರಕಾ ಹೊಯ್ಯುವಂತೆ  ಮಾಡಿದ್ಯಲ್ಲಾ..? ಅದ್ಯಾವ ಶಕ್ತಿ ನಿನ್ನಲ್ಲಿತ್ತೋ ಕಾಣೆ. ಹೆಸರೇ ಗೊತ್ತಿರದ ಸಂದರ್ಭದಲ್ಲಿ ಮೂಡಿದ  ಸೆಳೆತಕ್ಕೊಂದು ಹೆಸರಿಟ್ಟು  ಬಿಟ್ಟೆ  ಅಂದೇ.. ಇಟ್ಟ  ಆ ಅಸಂಬದ್ದ ಹೆಸರು 'ಪ್ರೀತಿ'.
               ಇದೇನು ಪ್ರಕೃತಿ ಸಹಜ ಆಕರ್ಷಣೆಯಾ..? ಸುಂದರಿ ಕಡೆಗೊಂದು ಸೆಳೆತವಾ..? ನಿನ್ನ ಮಾತಿಗಂಟಿದ  ವಶೀಕರನವಾ..?  ಇದು ನನ್ನ ಮೌನದಲ್ಲೇ ಅವೀರ್ಭವಿಸಿದ ಅಮ್ರುತಧಾರೆಯಾ ..? ಪ್ರೀತಿ-ಪ್ರೇಮ ಎಂಬ ಹುಚ್ಚಟವಾ..? ಅಥವಾ.. ಅದೆಲ್ಲಕ್ಕೂ ಮೀರಿದ ಆರಾಧನೆಯ..? ನಿಜ ಅಂದ್ರೆ, ನಿನ್ನ ಕಂಡ ದಿನ ನಿನ್ನ ಕೊರಳಲ್ಲೊಂದು ಕೊಳಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ ಹಾಗು ಆ ಕೊಳಲಲ್ಲೊಂದು 'ರಾಗ' ನಾನಾಗ ಬಯಸಿದ್ದು ತಿಳಿಯಲೇ ಇಲ್ಲ. ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಮೂಡಿದ ಅನಿರ್ವಚನೀಯ ಭಾವಕ್ಕೆ ಮುನ್ನುಡಿಯೇನು ? ನಿನ್ನ ಕಣ್ಣಲ್ಲಿದ್ದ ಅಮ್ಮನ ಮಮಕಾರವಾ..? ಹಟಕ್ಕೆ ಬಿದ್ದ ಆ ಮುಂಗುರುಳಾ ..? ಒಡಲಾಳದಿಂದ ಹುಟ್ಟೋ ಕಪಟವಿಲ್ಲದ ನಗುವ..? ಊಹೂ .. ಪ್ರಶ್ನಾ ಮಾಲಿಕೆಯಾಗಿಬಿಟ್ಟೆ ನೀನು.
ಈ ಪತ್ರ ಎಂದೂ ನಿನ್ನ ಕೈ ಸೇರದು ಎಂದುಕೊಂಡಿದ್ದೇನೆ. ಒಂದು ಪಕ್ಷ ಸಿಕ್ಕಿದ್ದೇ ಆದಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತು 'ಶರಾವತಿ'ಯ ಆ ಹಸಿರು ದಂಡೆಯ ಮೇಲೆ ಒಂದೇ ಉಸುರಿನಲ್ಲಿ ಓದಿಬಿಡೋಣ.  

ನನ್ನೆಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಿರು. ಇಬ್ಬರೂ ಸೇರಿ ಈ ಬಂಧಕ್ಕೊಂದು ಚಂದನೆ ಹೆಸರಿಡೋಣ.
                                 
                                                                                                      ಇಂತಿ ನಿನ್ನವನಾಗ ಬಯಸಿದ
                                                                                                                     ನಾನು