ಮುದ್ದು ನನ್ನ ಪದ್ದು

ಥೂ! ಹುಡುಗಿ ಮುಂದೆ ಮರ್ಯಾದೆ ತೆಗೀತೀಯ...?  ಹುಡುಗರ ಮುಂದೆ, ಹುಡುಗಿಯರ ಮುಂದೆ ಎಲ್ಲ 'ನಮ್ಮ ಪದ್ಮಾವತಿ ಅಂಥೋಳು ಇಂಥೋಳು' ಅಂತ ಎಲ್ಲ ಹೇಳಿದ್ನಲ್ಲೇ...ಇವಳ ಮುಂದೆ ಕೂಡ ನಿನ್ನ ಹೊಗಳಿದೀನಿ ಕಣೇ...ಯಾಕೆ ಈ ತರ ಮಾಡ್ತೀಯಾ...? ನೋಡು... ಈಗ ಅರ್ಜೆಂಟ್ ಇದೆ ನನ್ನ ಹುಡುಗೀನ ರೈಲ್ವೆ ಸ್ಟೇಷನ್ ಗೆ ಬಿಡಬೇಕು...ಇನ್ನೂ ಬರಿ ಅರ್ದ ಗಂಟೆ ಇದೆ ರೈಲು ಹೊರಡೋಕೆ, ಈಗಲೇ ಯಾಕೆ ಹಠ ಮಾಡ್ತೀಯಾ.. ನಿಂಗೆ ಏನ್ ಬೇಕೋ ಅದ್ನೆಲ್ಲ ಕೊಟ್ಟಿದೀನಿ...ಆದರೂ ಸ್ಟಾರ್ಟ್ ಆಗಲ್ವೇನೆ...? ಅಬ್ಬ ಕಾಲೆಲ್ಲ ನೋಯ್ತಾ ಇದೆ ಕಿಕ್ ಒದ್ದು ಒದ್ದು...ಹಾಳಾದ್ ಬೈಕು (ಪದ್ಮಾವತಿ). ಅಲ್ಲ.. ಯಾವಾಗಲು ಒಂದೇ  ಕಿಕ್ ಗೆ ಸ್ಟಾರ್ಟ್  ಆಗ್ತಿತ್ತು .. ಇವತ್ತೇ ಕೈ ಕೊಡ್ತಾ ಇದೆ. ಪೆಟ್ರೋಲ್ ಇಲ್ವೇನೋ ಅಂತ ಅಲ್ಲಾಡಿಸಿ ನೋಡಿದೆ, ಸಾಕಷ್ಟಿದೆ. ನಿನ್ನೆ ತಾನೇ ೨ ಲೀಟರ್ ಹಾಕ್ಸಿದೀನಿ. ೪ ಕಿ.ಮಿ. ಗೆ ೨ ಲೀಟರ್  ಕುಡಿಯೋ  ಅಷ್ಟು ಎಣ್ಣೆ ಪಿಪಾಸು ಅಲ್ಲ ನನ್ನ ಪದ್ಮಾವತಿ. ಆದರೂ ಯಾಕೆ ಸ್ಟಾರ್ಟ್ ಆಗ್ತಾ ಇಲ್ಲಾ... ಅಬ್ಬಾ! ಹುಡುಗಿ ಮುಖ, ಕಣ್ಣು ಕೆಂಪ್ ಮಾಡ್ಕೊಂಡ್ ನೋಡ್ತಿದಾಳೆ...ಸ್ಟಾರ್ಟ್ ಆಗೇ... ಒಳ್ಳೆ ಮದುವೆ ದಿನಾ ಮದುಮಗಂಗೆ ಅತಿಸಾರ ಬೇದಿ ಕೆಣಕಿದ ಅನುಭವ. ನನ್ನ ಕಷ್ಟ ನೋಡಿದರೂ ನನ್ನ ಪದ್ಮಾವತಿಗೆ ಕನಿಕರನೆ ಬರ್ತಾ ಇಲ್ಲಾ... ಒಂದು ಕಡೆ ಕಿಕ್ ಒದ್ದು ಒದ್ದು ಕಾಲು ನೋವು, ಇನ್ನೊಂದ್ ಕಡೆ ಬಿಸಿಲಲ್ಲಿ  ಅರ್ಧ ಗಂಟೆಯಿಂದ ನಿಂತು ಬೆವರು ಇಳಿತಾ ಇದೆ, ಅದರ ಮಧ್ಯೆ ನನ್ನವಳ ನೋಟಕ್ಕೆ ಬೇರೆ x - ray ತೀಕ್ಷ್ಣತೆ ಬಂದಿದೆ. ಅವಳ ಕಣ್ಣಿನ ಬಾಣಾಗಳಿಂದ ತಪ್ಪಿಸಿಕೊಳ್ಳೋಕೋಸ್ಕರ ನನ್ನ ಮುಖ ಅವಳ ಕಡೆ ತಿರುಗ್ತಾನೆ ಇಲ್ಲಾ. ಅಯ್ಯೋ.. ಶರಣಾದೆ ಪದ್ಮಾವತಿ.. ಸ್ಟಾರ್ಟ್ ಅಗ್ಬಿದೆ.. ಪ್ಲೀಸ್... ಅಪ್ಪ ಶಿವ ಶಂಕರ ನನ್ನ ಗಾಡೀನ ಸ್ಟಾರ್ಟ್ ಮಾಡಪ್ಪ..ಲೇ..ಪದ್ಮಾವತಿ! ಸ್ಟಾರ್ಟ್ ಆಗ್ತೀಯೋ  ಇಲ್ವೋ... ಊಹುಂ..ವಜ್ರಮುನಿ ಸ್ಟೈಲ್ ನಲ್ ಹೇಳಿದ್ರು ಸ್ಟಾರ್ಟ್ ಆಗಲ್ಲ ಅಂತಾಳೆ. ಎನ್ಥೆನ್ಥೆ ಹೀರೋ ಗಳನ್ನೆಲ್ಲ ಹೆದರಿಸಿದ ವಜ್ರಮುನಿ ನನ್ನ ಪದ್ಮಾವತಿಯನ್ನ ಹೆದರಸ್ತ ಇಲ್ಲಾ. ಅಯ್ಯೋ ಪದ್ದು... ನನ್ನ ಹುಡುಗಿ ಎದುರಿಗೆ ನನ್ನ ಮಾನ ಕಾಪಾದೆ. ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಸ್ಟಾರ್ಟ್ ಆಗ್ತಾ ಇಲ್ಲಾ. ನನ್ನ ಹುಡುಗಿ ರೈಲು ಬರೋ ಸಮಯ ಬೇರೆ ಆಯಿತು. ನನಗೆ ಗೊತ್ತಿದ್ದ, ಮತ್ತೆ ಸೇರಿಸಲು ಬರುವ ಎಲ್ಲ  ವೈರ್ ಗಳನ್ನೂ ತೆಗೆದು ಮತ್ತೆ ಜೋಡಿಸಿ ಕಿಕ್ ಒದ್ದೆ.. ಊಹುಂ.. ಇಲ್ಲಾ.. ಡುರ್ ಎಂದು ಶಬ್ದ ಮಾಡಿ ಸುಮ್ಮನಾಗಿ ಬಿಟ್ಲು ಪದ್ಮಾವತಿ. ಈ ಪೆಟ್ರೋಲ್ ಪೈಪ್ ತೆಗೆದು ನೋಡಿದೆ.. ೨ ರೂ ಗಳಷ್ಟು ಪೆಟ್ರೋಲ್ ನೆಲದ ಪಾಲಾದ ಮೇಲೇ ತಿಳೀತು ಪೆಟ್ರೋಲ್ ಇದೆ ಮತ್ತು ಅದು ಎಂಜಿನ್ ಗೆ ಬರ್ತಾ ಇದೆ. ಮತ್ತೇನ್ ದಾಡಿ ನನ್ ಪದ್ಮಾವತಿಗೆ ಸ್ಟಾರ್ಟ್ ಆಗಕ್ಕೆ...? ಅದೇನೋ ಕಾರ್ಬೋರೆಟಾರ್ ಅಂತಾರಲ್ಲ ತೆಗೆದು, ಹಾಕಿ, ಮತ್ತೆ ಒದ್ದು ನೋಡಿದ್ರೂ ಸ್ಟಾರ್ಟ್ ಆಗ್ತಾ ಇಲ್ಲಾ.. 
-----------------------------------------------------------------------------------------------------------------------------------------------------------------------------------------------------------------------
ಅಬ್ಬ.. ಅಂತೂ ನನ್ ಹುಡುಗಿ ಟ್ರೈನ್ ಸಿಗ್ತು. ಅವಳನ್ನ ಟ್ರೈನ್ ಸೀಟ್ ನಲ್ಲಿ ಕೂರಿಸಿ ರೈಲು ಹೊರಡುವವರೆಗೂ ಅಲ್ಲೆ ಇದ್ದು ಟಾಟಾ ಮಾಡಿ ಬಂದು ಮತ್ತೆ ಪದ್ಮವತಿಯೊಂದಿಗೆ ಮನೆ ಕಡೆ ಹೊರಟೆ . 
ಓ ನನ್ ಹುಡುಗಿನ ಹೇಗೆ ರೈಲಿಗೆ ಬಿಟ್ಟೆ ಅಂತಾನ...? ಅದ್ನೇನ್ ಕೇಳ್ತೀರಾ... ಆಗ್ಲೇ ಹೇಳಿದ್ನಲ.. ನನ್ನ ಪದ್ಮಾವತಿ ನಂಗೆ ಕೈ ಕೊಡಲ್ಲ ಅಂತ..ಹೌದು  ಕಣ್ರೀ.. ನನ್ನ ಪದ್ಮಾವತಿ ನನ್ನ ಯಾವತ್ತು ಅರ್ಧ ದಾರೀಲೆ ಕೈ ಬಿಟ್ಟಿದ್ದೆ ಇಲ್ಲಾ... ಓ.. ಏನಂದ್ರಿ...?  ಹೆಂಗೆ ಸ್ಟಾರ್ಟ್ ಆಯಿತು ಅಂತಾನ...? ಅದೇನಿಲ್ಲ ಕಣ್ರೀ... ಕೀ ಆನ್ ಮಾಡಿ ಕಿಕ್ ಒದ್ದೆ ನೋಡಿ... ಪಾಪ ಪದ್ದು ಸ್ಟಾರ್ಟ್ ಆಗೆ ಬಿಟ್ಲು. 

ವಿ.ಸೂ. 25 ಜನವರಿ 2011ರಂದು ಉದಯವಾಣಿ ಯ ಪುರವಣಿ 'ಜೋಶ್' ನಲ್ಲಿ ಪ್ರಕಟವಾದ ಲೇಖನ.