ಯಾವನಿಗೊತ್ತು

ಅವಳದ್ದೋ ಫುಲ್ ಸ್ಟಾಪ್ ಇಲ್ದಂಗೆ ಮಾತಾಡೋ ಖಯಾಲಿ. ನಂದು ಮಾತಾಡಿದ್ರೆ ಮುತ್ತು ಉದ್ರತ್ತೇನೋ ಅನ್ನೋ ಹಾಗೆ ದಿವ್ಯ ಮೌನ. ನಾನು ಭಯಂಕರ ಭಾವ ಜೀವಿ, ಅವಳು ತೀರಾ ಪ್ರಾಕ್ಟಿಕಲ್ಲು. ಅವಳದ್ದು ಹಾಲಿನಂಥ ಬಣ್ಣ, ನಂದು ತೊಳೆದ ಕೆಂಡ. ಹೀಗೆ, ಪ್ರಪಂಚದಲ್ಲಿ ಯಾವ್ಯಾವ್ದಕ್ಕೆ ವಿರುದ್ಧ ಪದಗಳಿವೆಯೋ ಅವುಗಳಿಗೆಲ್ಲ ಜೀವಂತ ಉದಾಹರಣೆ, ನಾನು-ಅವಳು. ವಿರುದ್ಧ ದ್ರುವಗಳು ಆಕರ್ಷಿಸುತ್ತವೆ ಅನ್ನೋದು ಫ್ಯಾಕ್ಟು. ನಂಗೆ ಅವಳ ಮಾತು ಇಷ್ಟ, ಅವಳು ನನ್ನ ಮೌನಕ್ಕೆ ಶರಣು. ಇಷ್ಟು ವರ್ಷ ಅದೆಲ್ಲಿದ್ಲೋ ಕಾಣೆ. ಒಂದಷ್ಟು ದಿನದ ಹಿಂದೆ ಸಿಕ್ಕಳು, ಸುಮ್ನೆ ನಕ್ಕಳು. ಆಗಬಾರದ್ದೆಲ್ಲ ಆಯ್ತು. ಆದ ಮೇಲೆ ತಿಳೀತು ಅವಳು ಎತ್ತು, ಏರಿಗೆ ಎಳಿತಾಳೆ, ನಾನು ಕೋಣ , ನೀರಿಗೆ ಎಳೀತೀನಿ ಅಂತ. ಆದ್ರು ನಮ್ಮಿಬ್ಬರ ಮಧ್ಯೆ ಜಗಳ ಆಗಿದ್ದು ಕಡಿಮೆ. ಅವಳಿಗೆ ಸಿಟ್ಟು ಬಂದು ಕೂಗಾಡಿ, ರೇಗಾಡಿ ಮುಖ ಗಂಟಾಕಿಕೊಂಡು  ಎದ್ದು ನಿಂತ್ರೆ ನಂಗೆ ಸಾಕ್ಷಾತ್ ಚಾಮುಂಡಿ ದರ್ಶನ. ಬ್ರಹ್ಮಂಗೆ ಅದೇನು ಸಿಟ್ಟಿತ್ತೋ  ಕಾಣೆ, ಸೇಡು ತೀರಿಸ್ಕೊಂದು ಬಿಟ್ಟ, ನಿನ್ನಂಥ ವಾಚಾಳೀನ ಗಂಟು ಹಾಕಿ ಅಂತ ನಾನಂದ್ರೆ, ನಂದು ಸೇಮ್ ಫೀಲಿಂಗು, ಬ್ರಹ್ಮನ ಸೇಡಿಗೆ ನಾನೂ ಬಲಿ, ನಿನ್ನಂತ ಮೂಕನ್ನ ತಗುಲಿ ಹಾಕಿದ, ನೀನು ಒಂದೇ ಶಿರಾಡಿ ಘಾಟಿಯಲ್ಲಿರೋ ಕಲ್ಲುಬಂಡೆಗಳು ಒಂದೇ ಅನ್ನೋದು ಅವಳ ಉತ್ತರ. ಮಳೆಗಾಲ ಸಕತ್ತಾಗಿದೆ ಒಂದೇ ಒಂದು ಸಾರಿ ಬಾ ಮಳೆಯ ರಾಗಕ್ಕೆ ನಾವು ತಾಳ ಹಾಕುವ ಅಂದ್ರೆ ಮಳೇಲಿ ನೆಂದ್ರೆ ಜ್ವರ ಬರತ್ತೆ, ಸುಮ್ನೆ ೨೦೦ ರೂಪಾಯಿ ದಂಡ ಅಂತಾಳೆ. ನೀನೊಬ್ನೇ ನೆನಿ ಬಣ್ಣ ಬಿಟ್ರೂ ಬಿಡಬಹುದು ಅಂತ ರೇಗಿಸ್ತಾಳೆ. ಬಣ್ಣ ಬದಲಾಯಿಸೋದು ನಿಮ್ಗೆ ದೇವ್ರು ಕೊಟ್ಟ ಕಾಣಿಕೆ  ಅಂದ್ರೆ ಕಣ್ಣು ಕೆಂಪು ಮಾಡ್ತಾಳೆ. ಅಲ್ನೋಡು ಹೂವು ಎಷ್ಟು ಚೆನ್ನಾಗಿದೆ, ಆ ಗಿಡಕ್ಕೆ ದೇವರು ಮಾಡಿರೋ ಅಲಂಕಾರ ಆ ಹೂವು ಅನ್ಸತ್ತೆ ಅಂದ್ರೆ, ಅರ್ಥ ಆಗದೆ ಇರೋ ಹಾಗೆಲ್ಲ ಮಾತಾಡ್ಬೇಡ.. ಚೆನ್ನಗಿರೋದೇನೋ ಹೌದು.. ಹುಡ್ಗ ಕಿತ್ಕೊಡೋ... ಪ್ಲೀಸ್... ಅಂತಾಳೆ. ಅಷ್ಟ್ರು ಮೇಲು ಅಂದ ಇರೋದು ಆನಂದಿಸೋಕೆ, ಅನುಭವಿಸಬೇಕು ಅನ್ನೋದು ತಪ್ಪು ಅಂತೇನಾದ್ರೂ ಅಂದ್ರೆ ಕಿತ್ಕೊಡ್ತೀಯೋ ಇಲ್ವೋ ಅಂತ ಕಣ್ಣಲ್ಲೇ ಧಮಕಿ ಹಾಕ್ತಾಳೆ. ಹೀಗೆ ನಮ್ಮಿಬ್ಬರದು ತದ್ವಿರುದ್ಧ. ಇಬ್ಬರ ಮದ್ಯೆ ಏನಿದ್ಯೋ ಗೊತ್ತಿಲ್ಲ. ಆದ್ರೆ ಒಂದಂತು ಸತ್ಯ, ಅವಳಿಲ್ಲದೆ ಬದುಕೋದು ಕಷ್ಟ. ಅವಳ ಕಣ್ಣಲ್ಲಿ ನೀರು ಬಂದ್ರೆ ನನ್ನ ಕಣ್ಣಲ್ಲಿ ರಕ್ತ ಬಂದ ಹಾಗೆ ಆಗತ್ತೆ. ಅವಳ ಮಾತು ಕೇಳದ ದಿನ ವ್ಯರ್ಥ  ಅನ್ಸತ್ತೆ. ಅವಳು ನನ್ನ ಭಾವದ ಮಾತಿನ ರೂಪ ಅನ್ನೋದು ನನ್ನ ವಿಚಾರ. ನನ್ನ ಮೌನಕ್ಕೆ ಅರ್ಥ ಅವ್ಳು, ಅವಳ ಮಾತಿಗೆ ಕಿವಿ ನಾನು. ವಿಷಯದ ಹಂಗಿಲ್ದೆ ಮಾತಾಡೋ ಕಲೆ ಅವಳದ್ದು, ಮೌನದಿಂದಲೇ ಉತ್ತರಿಸೋ ಕಲೆ ನಂದು. ಆದ್ರು ಮನದ ಮೂಲೆಯಲ್ಲೆಲ್ಲೋ ವಿವರಣೆಗೆ ನಿಲುಕದ ಭಯ... ಅವಳು  ಸಿಕ್ತಾಳ ಕೈಯಿ ಕೊಡ್ತಾಳ.. ಯಾವನಿಗೊತ್ತು.