ಕಾಲನ ಕರೆಗೆ ಓಗೊಟ್ಟಾಗ

            ಅದೆಂತಹ ದಾಹ... ಬದುಕಿದ್ದಾಗ ಇಂತದ್ದೊಂದು ದಾಹ ಕಂಡಿದ್ದೇ ಇಲ್ಲ. ಸತ್ತ ನಂತರ ಇಂತಹ ದಾಹ ಆಗತ್ತೆ ಅಂತ ಮೊದಲೇ ಗೊತ್ತಿರಲಿಲ್ಲ. ಮೊದಲ ಸಲ ಸತ್ತಿದ್ರಿಂದ ಈ ತರಹದ ಅದಮ್ಯ ದಾಹ ಮೊದಲ ಅನುಭವ. ಬೆಂಗಾಡಿನ ಬಯಲಲ್ಲಿ ನನ್ನ ಕರ್ಕೊಂಡು ಹೋಗ್ತಾ ಇದ್ದವನು ಬಹುಶಃ ಯಮ. ನಾನು ಈ ಮೊದಲು ಯಮನನ್ನ ನೋಡಿದ್ದಿಲ್ಲ ಈ ಮೊದಲೇ ಸತ್ತು ಅನುಭವವಿಲ್ಲ ನೋಡಿ. ಆತನನ್ನು ನೋಡಿದ ಪುಣ್ಯಾತ್ಮರ್ಯಾರೂ ನನಗೆ ಸಿಕ್ಕಿರಲಿಲ್ಲ. ಇದು ನನ್ನ-ಯಮನ ಮೊದಲ ಭೇಟಿ. ’ಯಮಕಿಂಕರ’ ಸಿನೆಮಾದಲ್ಲಿ ದೊಡ್ಡಣ್ಣನ್ನ ನೋಡದೆ ಇದ್ದಿದ್ರೆ, ಹಾಗೂ ಯಮರೂಪಿ ಯಮನನ್ನ ಹೊತ್ತೊಯ್ಯೋ ಕೋಣನ ಬಗ್ಗೆ ತಿಳಿದಿರದೆ ಹೋಗಿದ್ರೆ ಆತನ ವಿಸಿಟಿಂಗ್ ಕಾರ್ಡ್ ನೋಡಿಯೇ ಗುರುತು ಹಿಡಿಯಬೇಕಾಗಿತ್ತು. ಈತ ಯಮ ಇರಬಹುದು, ಹಂಗಂತ ಹಿಂಗೆ ಹೇಳದೇ ಕೇಳದೇ ನನ್ನ ಎತ್ಕೊಂಡು ಬರಬಹುದಾ ಅಂತ..? ಒಂದೇ ಒಂದು ನೋಟೀಸ್ ಕಳಸ್ದೆ ಈ ತರ ಎಳ್ಕಂಡು ಬರೋದು ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಪರಾಧ. ಇಂತಹ ಕನಿಷ್ಟ ಜ್ನಾನವೂ ಯಮನಿಗಿಲ್ಲ. ಏನು ಮಾಡಕ್ಕಾದೀತು..? ಮೊದಲೇ ತಿಳಿಸಿದ್ರೆ ಕೊನೆಪಕ್ಷ ಒಂದು ಬಾಟಲ್ ನೀರನ್ನಾದ್ರು ತಗೋತಿದ್ದೆ. ತಾಳೆ ಮರದ ಕೆಳಗೆ ಕುಳಿತು ಕುಡಿದಿದ್ರೆ ’ನೀರಾ’ ಕುಡಿದ ಅನುಭವ ಆದ್ರೂ ಆಗ್ತಿತ್ತೇನೊ..! ಜೀವನದಲ್ಲಿ ಅಂತ ದೊಡ್ಡ ಆಸೆಯೇನೂ ಇರ್ಲಿಲ್ಲ. ಆದ್ರೂ ನಾನು ಬದುಕಿರಬೇಕಾಗಿತ್ತು. ಇವತ್ತೊಂದು ಮದ್ದೂರು ವಡೆ ತಿನ್ನೊ ಬಯಕೆ ಇತ್ತು. ಅದೂ ಆಗ್ಲಿಲ್ಲ. ಬದುಕಿ ಏನೋ ಮಾಡಬೇಕು ಅಂತ ಇಲ್ದಿದ್ರು ಬದುಕಬೇಕು ಅಂತ ಇತ್ತು. ಮೂರೂ ಹೊತ್ತು ಊಟ, ಅರ್ಧ ದಿನ ನಿದ್ರೆ.. ಜೀವನ ಚೆನ್ನಾಗಿತ್ತು. ಬದುಕಬೇಕು ಅನ್ನೊ ಆಸೆ ಇತ್ತು. ಹೇಳದೇ ಕೇಳದೇ ಕರ್ಕೊಂಡು ಬಂದ್ಬಿಟ್ಟ. ಹತ್ರದೋರಿಗೆ ’ಹೋಗಿ ಬರ್ತೀನಿ, ಟಾಟಾ, ಮೇಲೆ ಸಿಗುವ’ ಅಂತ ಹೇಳಕ್ಕೂ ಅವಕಾಶ ಕೊಡದ ಹಾಗೆ. ಎಂಥೆಂತೋರೊ ಬದುಕಿದ್ದಾರೆ, ಭೂಮಿಗೆ ಭಾರವಾಗಿ. ಕೆಲವರ ದೇಹಕ್ಕಂತೂ ಜೀವವೇ ಭಾರ. ಅಂತ ’ಜೀವಭಾರ’ ಆದ ಸ್ನೇಹಿತ ನಂಗೂ ಇದ್ದ. ಜೀವನದಲ್ಲಿ ಆಸಕ್ತಿ ಇಂಗಿ ಇಲಿಪಾಶಾಣ ತಿಂದು ಸಾಯೋಕೆ ಹೊರಟಿದ್ದ. ಈಗಿನ ಕಾಲದಲ್ಲಿ ಇಲಿಪಾಶಾಣ ತಿಂದು ಇಲಿಗಳೇ ಸಾಯಲ್ಲ, ಅಂತದ್ರಲ್ಲಿ ಈತ ಸತ್ತಾನ್ಯೇ..? ಸತ್ರೂ ಸಾಯ್ತಿದ್ನೇನೊ, ಮಲಯಾಳಿ ನರ್ಸ್ ಕರುಳಿನವರೆಗೂ ಕೈ ಹಾಕಿ ವಾಂತಿ ಮಾಡಿಸದ ಪಕ್ಷದಲ್ಲಿ. ಆತನ ವಾಂತೀಲಿ ’ತಲೆಮಾಂಸ’ ಇತ್ತು ಅನ್ನೊ ಸುದ್ದಿ ಇದೆ. ಬ್ರಾಹ್ಮಣನ ಹೊಟ್ಟೇಲಿ ತಲೆಮಾಂಸ ಹೆಂಗೆ ಬಂತು ಅಂತ ಟಿವಿ-9 ಅವ್ರು ಹುಡುಕ್ತಾ ಇದಾರೆ. ಆದ್ದರಿಂದ ತಲೆಮಾಂಸದ ಪ್ರಸ್ತಾಪ ಈ ಸಂದರ್ಭದಲ್ಲಿ ಅಪ್ರಸ್ತುತ.
                               ಇಂಥಾ ಬಟಾ ಬಯಲಿನಲ್ಲಿ ಒಂದು ಹನಿ ನೀರೂ ಇಲ್ದೆ ಹೋಗೊ ಕಷ್ಟ ಸತ್ತೋರಿಗೇ ಗೊತ್ತು. ಮೇಲಿಂದ ತಲೆ ಸುಡೋ ಅಂತ ಬಿಸಿಲು, ಕೆಳಗಡೆ ಕಾಲು ಸುಡೊ ಕಾದ ಹಂಚಾಗಿದ್ದ ಮರಳು. ಸತ್ತ ಮೇಲೆ ಇದೇ ದಾರೀಲೆ ಬರ್ತಾರೆ ಅಂದ್ರೆ ಭೂಮೀಲಿ ಹೆಣ ಸುಡೊ ಅಗತ್ಯ ಇಲ್ಲ. ಇಲ್ಲೆ ರಾಜಸ್ಥಾನದ ಪಕ್ಕದಲ್ಲೆ ಇರಬೇಕು ಯಮಪುರಿ. ಅಶೋಕ್ ಖೇಣಿ ಮೇಲೆ ಬಂದಾಗ ’ಒಂದೊಳ್ಳೆ ’ನೈಸಾ’ದ ರಸ್ತೆ ಮಾಡಪ್ಪ, ಸಾಲುಮರಗಳ ಸಹಿತ’ ಅನ್ನಬೇಕು. "ಯಮರಾಜ, ಬಿಟ್ಟುಬಿಡಪ್ಪ ನನ್ನ, ಥ್ಯಾಂಕ್ಸ್ ಹೇಳ್ತೇನೆ" ಅಂದೆ. ಯಮನಿಂದ ಪ್ರತ್ಯುತ್ತರ ಇಲ್ಲ. ಯಮನಷ್ಟು ಗಡಸು ಮತ್ಯಾರಿಗೂ ಇಲ್ಲ ಕಣ್ರೀ. ಥ್ಯಾಂಕ್ಸ್ ಹೇಳ್ತೀನಿ ಅಂದ್ರು ಬಿಡಲ್ಲ ಅಂತಾನೆ.

                               ಈ ದಾಹ, ಮೋಹ ಎರಡನ್ನು ತಡ್ಕಳದು ಕಷ್ಟನಪ. ಅಯ್ಯೋ.. ಮೋಹದ ಹೆಸರು ಹೇಳ್ತಾಯಿದ್ದಾಗೆ ಮಳೆ ಬರ್ತಾ ಉಂಟು..! ಆಕಾಶದಲ್ಲಿ ಮೋಡ ಇಲ್ಲ, ಅಸಲಿಗೆ ಅಲ್ಲೊಂದು ಆಕಾಶವೇ ಇಲ್ಲ. ಮೋಡ ಇಲ್ದೆ ಮಳೆ ಬರೊ ಅಚ್ಚರಿ ಕಂಡಂಗಾಯ್ತು. ಎಂಥಾ ಮಳೆ ಅಂತೀರಿ..! ಎರಡೆ ಕ್ಷಣಕ್ಕೆ ಮುಖ, ತಲೆ ಎಲ್ಲ ಒದ್ದೆ ಆಗಿದೆ. ವರುಣ ಏನಾದ್ರೂ ಇತ್ತೀಚಿಗೆ ’ಮುಂಗಾರು ಮಳೆ’ ಸಿನೆಮಾ ನೋಡಿದ್ನಾ..? ಏನೋಪ... ಒಟ್ನಲ್ಲಿ ಮುಖ ಪೂರಾ ಒದ್ದೆಯಾಯ್ತು. ಅರೆ.. ಹಿಂದೇನೆ ಹೆಂಡತಿ ಧ್ವನೀನು ಕೇಳ್ತಾಯಿದೆ..! ಸತೀ ಸಾವಿತ್ರಿ ತರ ನನ್ನ ಗಾಯಿತ್ರೀನೂ ಬಂದ್ಲ ನನ್ನ ಬಿಡುಸ್ಕಂಡ್ ಹೋಗಕ್ಕೆ..? ತಿರುಗಿ ನೋಡಿ ಕೂಗಿದೆ "ಬಂದ್ಬಿಟ್ಯೇನೆ ಗಾಯಿತ್ರೀ ಕರ್ಕೊಂಡ್ ಹೋಗಕ್ಕೆ"? ತಿರುಗಿ ಉತ್ತರ ಬಂತು "ಮೊದಲು ಎದ್ದೇಳ್ರೀ.. ಕಾವೇರಿ ನೀರು ಬರ್ತಾಯಿದೆ ತುಂಬಿ ಕೊಡಿ". ಅಂತೂ ಎದ್ದು ಕೂತೆ, ಈ ಮೋಹಕ್ಕಿಂತ ಆ ದಾಹವೇ ಚೆನ್ನಾಗಿತ್ತು ಅಂದ್ಕೊಳ್ತ. ಏನಂದ್ರೂ ಚಿನ್ನ ನನ್ನ ಗಾಯಿತ್ರಿ.. ಬೆಳಗ್ಗೆ ಎದ್ದು ಮುಖ ತೊಳ್ಯೋ ಕೆಲ್ಸ ಉಳ್ಸಿದಾಳೆ.