ಮಿಡ್‌ನೈಟ್ ಸೀಕ್ರೆಟ್ಸ್

ಮಧ್ಯರಾತ್ರಿಯಲ್ಲೊಂದು ಸಣ್ಣ ಗದ್ದಲ, ನೂರೆಂಟು ಮಾತು, ಗರಂ ಗರಂ ಚಹಾ, ಬೇಕಾದವರಿಗೊಂದು ಆಮ್ಲೆಟ್,ಕಾಡು ಹರಟೆ... ಎಂಬಲ್ಲಿಗೆ ಒಂದು ರಾತ್ರಿ ವಿದಾಯ ಹೇಳಿರತ್ತೆ. ಸೂರ್ಯೋದಯದ ಮೊದಲ ಕಿರಣ ನಮ್ಮನ್ನು ಸೋಕದಂತೆ ಮುಸುಕು ಮುಚ್ಚಿ ಮಲಗಿರುತ್ತೇವೆ. ಜೀವನದಲ್ಲಿ ಪಿಯುಸಿ ಎಂಬುದೊಂದನ್ನ ಮಾಡದೆ ಇದ್ದಿದ್ರೆ, ಆ ವಿದ್ಯಾರ್ಜನೆಗಾಗಿ ಉಡುಪಿ ಕ್ಷೇತ್ರಕ್ಕೆ ಹೋಗದೆ ಇದ್ದಿದ್ರೆ ಮಧ್ಯರಾತ್ರಿನ ಕಣ್ತುಂಬ ನೋಡ್ತಿದ್ನೋ ಇಲ್ವೋ. ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿರುವ ಮಹಾಪ್ರಾಣನ ಆಶೀರ್ವಾದದೊಂದಿಗೆ ಊಟ ಮುಗಿಸಿ, ರಾಜಾಂಗಣದಲ್ಲಿ ನಡಿಯೋ ಯಕ್ಷಗಾನದ ಸವಿಯನ್ನೂ ಉಂಡು ಹಾಸ್ಟೆಲ್ ಸೇರ್ತಿದಿದ್ದು ರಾತ್ರಿ ಹತ್ತೂವರೆ ಸುಮಾರಿಗೆ. ಅದೂ  ಇಂತದ್ದೆ ಒಂದು ರಾತ್ರೆ, ಆದ್ರೆ ಮರುದಿನ ಬೆಳಗ್ಗೆಗೆ ಅದರದೇ ಆದ ಮಹತ್ವ ಇತ್ತು. ನಮ್ಮ ಸೆಕೆಂಡ್ ಪಿಯುಸಿಯ ಭೌತಶಾಸ್ತ್ರದ ಪರೀಕ್ಷೆ ನಡೆಯುಹುದರಲ್ಲಿತ್ತು. ಪರೀಕ್ಷೆಯ ಹಿಂದಿನ ದಿನ ಕ್ರಿಕೆಟ್ ಮುಗಿಸಿ ಸಂಜೆ ಗೋದೂಳಿ ಮುಹೂರ್ತದ ಶುಭ ಲಗ್ನದಲ್ಲಿ ಓದಕ್ಕೆ ಕೂತರೆ ಕಣ್ಣಲ್ಲಿ ನಿದ್ರೆ ಮನೆ ಮಾಡಿತ್ತು. ನಿದ್ರೆ ಓಡಿಸೋದು ಅಂದ್ರೆ ಏನ್ ಸುಮ್ನೇನಾ..! ಸರಿ.. ಎದ್ದು ರಥಬೀದಿನ ಒಂದೆ ಒಂದು ಸುತ್ತು ಹಾಕಿ, ಮಠದಲ್ಲಿ ಊಟ ಮಾಡಿ ಬಂದು ಓದಕ್ಕೆ ಕೂತರೆ ನಿದ್ದೆ ಹೋಗಿರತ್ತೇನೋ ಅನ್ನೋ ಆಶಾಭಾವ. ತಡ ಮಾಡದೆ ಹೊರಟ್ರೂ ತಡವಾಗಿತ್ತು ಮೊದಲ ಪಂಕ್ತಿಯ ಊಟಕ್ಕೆ. ಮತ್ತೊಂದು ಸುತ್ತು ಹೊಡೆದು ಬಂದ್ರೆ ಸರಿ ಆದೀತೆ ಎಂಬ ದ್ವಂದ್ವ ಮೂಡುವ ಮೊದಲೇ ಹೊರಟಾಗಿತ್ತು. ಪರೀಕ್ಷೆ ಸಾಂಗವಾಗಿ ನೆರವೇರಲಿ ಎಂದು ಶ್ರೀಕೃಷ್ಣನ ದಿವ್ಯಾನುಗ್ರಹ ಪಡೆದೂ ಆಯಿತು ಅದರ ಮದ್ಯದಲ್ಲೇ. ಮತ್ತೊಂದು ಸುತ್ತು ಹಾಕಿ ಬಂದು ಊಟ ಮಾಡುವ ವೇಳೆಗೆ ಎಂಥದೋ ಸದ್ದು. ಚಂಡೆದಾ..? ರಾಜಾಂಗಣದಲ್ಲಿ ಯಕ್ಷಗಾನ ಇರೋದು ಖಾತ್ರಿಯಾಯ್ತು. ದೇವಿ ಮಹಾತ್ಮೆ ಪ್ರಸಂಗ ಅಂತ ಅವರಿವರ ಬಾಯಿಂದ ಹರಿದಾಡ್ತಾ ನಮ್ಮ ಕಿವಿಗೂ ಬೀಳಬೇಕೆ..?  ನನ್ನಂತ ನಾನೂ ದೇವಿಯನ್ನು ಅಲಕ್ಷಿಸಿ ಓದೋಕೆ ಕೂತ್ರೆ ಓದಿದ್ದು ತಲೆಗೆ ಹತ್ತೀತೆ..? ಹತ್ತೀತೇನೋ, ಯಕ್ಷಗಾನದ ಹುಚ್ಚು ಹತ್ತದಿದ್ದ ಪಕ್ಷದಲ್ಲಿ. ಒಂದಷ್ಟು ಹೊತ್ತು ತಾಳಕ್ಕೆ ಹೆಜ್ಜೆ ಹಾಕಿ, ಚಂಡೆಯ ಸದ್ದು ಕಿವಿಯಲ್ಲಿಟ್ಟುಕೊಂಡು ಹೊರಟಾಯ್ತು. ಎಲ್ಲಿಗೆ ಕೇಳಬೇಡಿ. ಓದೋದಿದೆ. so ಓದೋಕೆ ಹೊರಟೆ. ಅಂದ್ರೆ ಓದಿದೆ ಅಂತ ಅರ್ಥೈಸಬೇಡಿ. ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ರಾತ್ರಿ ಹನ್ನೊಂದು ಗಂಟೆ. ಹಾಸ್ಟೆಲ್ ನಿಂದ ಗಂಡುಪಾಳ್ಯ ಹೊರಟಿತ್ತು ಟೀ ಅಂಗಡಿಗೆ. ಪ್ರತಿದಿನ ರಾತ್ರಿ ಹನ್ನೊಂದಾದಮೇಲೆ ಕೆಲವರು ನೈಂಟಿ ತಗೋತಿದ್ರು, ನಾವು ಪ್ಲೈನ್ ಟೀ ತಗೋತಿದ್ವಿ. ರಾತ್ರಿ ಹನ್ನೊಂದಕ್ಕೆ ಟೀ ಕುಡಿಯೋದು ಪದ್ಧತಿ. ಮುರಿಯಲಾದೀತೇ..? ಟೀ ಅಂಗಡಿಯವನೂ ಬದುಕಬ್ಯಾದ್ವೆ..? ಹನ್ನೊಂದರ ಟೀ ಕುಡಿದು ಓದೋಕೆ ಕೂರೋದು ಒಳ್ಳೇದು, ನಿದ್ದ್ದೆ ಬರಲ್ಲ. ನಿದ್ದೆ ಈಗಲೂ ಬರ್ತಾ ಇರ್ಲಿಲ್ಲ ಅನ್ನೋ ವಿಚಾರದ ಕಡೆ ಗಮನ ಹರಿಸದೆ ಗಂಡು ಪಾಳ್ಯದಲ್ಲೊಂದಾದೆ.  ಟೀಗೆ ಅಂತ ಹೋದಮೇಲೆ ಯಾವ ಮುಟ್ಟಾಳನೂ ಬರಿ ಟೀ ಕುಡಿದು ಬರಲ್ಲ. ಜೊತೆಗೆ ಒಡೆನೋ, ಬಜ್ಜಿನೋ, ನೂಡಲ್ಸೋ, ಯಾವುದೂ ಇಲ್ಲ ಅಂದ್ರೆ ಅಮ್ಲೆಟ್ ಆದ್ರೂ ಆದೀತು. ಜೊತೆಗಾರರು ಸಿಗರೆಟ್ ಗಮವನ್ನೋ ತಗೊಂಡ ಮೇಲೆ ಮರಳಿ ಛಾತ್ರಾಲಯ. ಅಂತೂ ಕೆಲವರು ನಡೆದಾಡಿ ಮತ್ತೆ ಕೆಲವರು ತೂರಾಡಿ ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ದಿನ ಕಳೆದು ಅರ್ದ ಗಂಟೆ ಆಗಿತ್ತು. ಪರೀಕ್ಷೆಗೆ ಉಳಿದಿದ್ದು ಬೆರಳೆಣಿಕೆಯ ಗಂಟೆಗಳು. ಓದಲೇ ಬೇಕಾದ ಪರಿಸ್ಥಿತಿ. ಸರಿ ಆದಂತೆ ಆಗ್ಲಿ ಓದಕ್ಕೆ ಕುಳಿತೆ ಬಿಟ್ಟೆ, ಕಟಿಂಬದ್ವಾ. ಪಕ್ಕದಲ್ಲೆಲ್ಲೋ ಗಲಾಟೆ. ಬ್ಯಾಟು ಬಾಲುಗಳ ಸದ್ದು. ಬೈತಾನು  ಇದಾರೆ. ಹೋಗಿ ನೋಡಿದ್ರೆ ಕ್ರಿಕೆಟ್ ಅಡ್ತ ಇರೋದೇ ಪಕ್ಕದ ರೂಮಲ್ಲಿ. ಪರೀಕ್ಷೆ  ಇದ್ದಾಗ ಕ್ರಿಕೆಟ್ ಯಾಕೆ ಆಡ್ತೀರಿ ಅಂತ ಮತ್ತೊಬ್ಬ ಗಲಾಟೆ ಮಾಡ್ತಿದ್ದ. ಇಂಥ ಸರಿರಾತ್ರಿಯ ಸರಿ ಹೊತ್ತಲ್ಲಿ ಕ್ರಿಕೆಟ್ ಆಡೋದು ಸರಿಯಿಲ್ಲ ಅನ್ನೋದೇ..! ಓದೋ ಮಹಾಶಯ ಹಾಸ್ಟೆಲ್ ಗೆ ಯಾಕೆ ಸೇರಿದ್ನೋ..! ಅಂತೂ ಆ ಗಲಾಟೆ ಬಿಡಿಸಿ ನಾವು ಒಂದೆರಡು ಮ್ಯಾಚ್ ನ ಮಟ್ಟಿಗೆ ಆಡೇ ಬಿಡುವ ಹುಮ್ಮಸ್ಸು. ಸರಿ.. ಆಡಿದ್ದು ಆಯ್ತು. ಸಮಯ  ರಾತ್ರಿಯ ೩ ಗಂಟೆ.ಈಗ್ಲಾದ್ರೂ ಓದೋಣ  ಅಂತ ಕೂತರೆ ಅಮ್ಮನ ಮಾತುಗಳು ನೆನಪಿಗೆ ಬಂದವು. ಮಗನೆ ತುಂಬ ನಿದ್ದೆಗೆಟ್ಟು ಓಡಬೇಡ ಎಂಬ ಕರುಳಿನ ಕೂಗು. ಇನ್ನೂ ಓದಲಾದೀತೇ ಅಮ್ಮನ ಮಾತನ್ನೂ ಮೀರಿ..? ಒಂದೆರದೆ ಗಳಿಗೆಯಲ್ಲಿ ನಿದ್ರಾದೇವಿಯ ಮಡಿಲು ಹೊಕ್ಕಿ ಆಯ್ತು. ಬೆಳಗ್ಗೆ ಎದ್ದು ಓದಿರೋ ಸಂಭವ ನಿಮಗೆ ಈಗಲೇ ಅರ್ಥ ಆಗಿರಬೇಕು. ಇಷ್ಟೆಲ್ಲಾ ಆಗಿಯೂ ನಾನೂ ಪಾಸಾದೆ ಅಂದ್ರೆ ನೀವು ನಂಬಲೇ ಬೇಕು.