ಒಂದಲ್ಲಾ ಒಂದು ಊರಲ್ಲಿ ಒಬ್ಬ ಇದ್ನಂತೆ. ಅವನ ಮನೆಯ ಮುಂದೆ ಒಂದು ಹಲಸಿನ ಮರ ಇತ್ತಂತೆ. ಆಗಿನ ಕಾಲದಲ್ಲಿ ಹಲಸಿನ ಹಣ್ಣಿಗೆ ಮುಳ್ಳು ಇರಲಿಲ್ವಂತೆ. ಒಂದಿನ ಒದ್ದ ಭಿಕ್ಷುಕ ಬಂದು ಆ ಮನೆಯ ಯಜಮಾನನ ಹತ್ರ ಹಣ್ಣು ಕೇಳಿದನಂತೆ. ಅವ ಕೊಡ್ಲಿಲ್ವಂತೆ. ಭಿಕ್ಷುಕನಿಗೆ ಸಿಟ್ಟು ಬಂದು ಹಣ್ಣಿನ ತುಂಬಾ ಮುಳ್ಳು ಬರಲಿ ಅಂತ ಶಾಪ ಕೊಟ್ನಂತೆ. ಅವತ್ತಿಂದ ಹಲಸಿನ ಹಣ್ಣಿನ ಮೇಲೆ ಮುಳ್ಳು ಬಂತಂತೆ. ಶಿವ ಆ ಯಜಮಾನನನ್ನ ಪರೀಕ್ಷೆ ಮಾಡಬೇಕು ಅಂತ ಭಿಕ್ಷುಕನ ರೂಪದಲ್ಲಿ ಬಂದಿದ್ನಂತೆ. ಅಮ್ಮ ಹೇಳುತ್ತಿದ್ದ ಕಥೆ ಈಗಲೂ ಕಣ್ಣಿಗೆ ಕಟ್ಟೋ ಹಾಗಿದೆ. ಪ್ರತಿ ದಿನ ಅಮ್ಮ ಕಥೆ ಹೇಳಲೇ ಬೇಕು, ನಾನು ಕಥೆ ಕೇಳ್ತಾ ಮಲಗಲೇ ಬೇಕು. ಎಷ್ಟೋ ಸಲ ಅರ್ಧ ಕಥೆಗೆ ನಿದ್ದೆ ಬರ್ತಿದಿದ್ದೂ ಉಂಟು. ಮರುದಿನ ಬೆಳಗ್ಗೆ ಮತ್ತೆ ಆ ಕಥೆಯ ಮುಂದುವರಿದ ಭಾಗ ಹೇಳು ಅಂತ ಪೀಡಿಸ್ತಿದ್ದೆ. ಅಮ್ಮನ ಕಥೆಯಲ್ಲಿ ಮೊಲ ಮಾತಾಡ್ತಿತ್ತು, ಕಲ್ಲಿನ ಬಸವ ಎದ್ದು ನಿಲ್ತಾ ಇತ್ತು, ಸೂರ್ಯಂಗೇ ಕೋಪ ಬರ್ತಿತ್ತು, ಹೂವು ಹುಡುಗಿಯಾಗ್ತಿತ್ತು, ಹುಡುಗಿ ಹಾವಾಗ್ತಿದ್ಲು, ನರಿ ಮೋಸ ಮಾಡ್ತಿತ್ತು. ಎಂಥಾ ಅದ್ಬುತ ಕಲ್ಪನೆಗಳು. ಪ್ರಪಂಚದಲ್ಲಿರೋ ಎಲ್ಲಾ ನಿರ್ಜೀವ ವಸ್ತುಗಳಿಗೂ ಜೀವ ತುಂಬುವ ಶಕ್ತಿ ಅಮ್ಮನಿಗಿತ್ತು. ಹತ್ತನೇ ಕ್ಲಾಸ್ ಫೇಲಾದ ಅಮ್ಮ ಕಥೆಗಳಲ್ಲಿ ಒಂದು ಅದ್ಬುತ ಲೋಕವನ್ನೇ ತೋರಿಸ್ತಿದ್ಲು. ಅದೆಷ್ಟೋ ಪ್ರಶ್ನೆಗಳಿಗೆ ಅಮ್ಮನ ಕಥೆಗಳಲ್ಲಿ ಉತ್ತರ ಇರ್ತ ಇತ್ತು. ಅಮ್ಮ ತೀರಾ ಕಲಿತವಳಲ್ಲ, ಹಾಗೆಂದು ಅವಳೇನು ಅವಿದ್ಯಾವಂತಳಲ್ಲ. ಅವಳ ಕಥೆಗಳಲ್ಲಿ ವೈಚಾರಿಕತೆಯಿತ್ತು, ಅನುಭವವಿತ್ತು, ನೀತಿಯಿತ್ತು ಹಾಗೂ ಮುಖ್ಯವಾಗಿ , ಹೇಳೋ ಅವಳಲ್ಲಿ, ಕೇಳೋ ನನ್ನಲ್ಲಿ ಖುಷಿ ಇತ್ತು. ಅಮ್ಮನ ಕಥೆಗೆ ಎಂಥದ್ದೆಲ್ಲ ವಸ್ತುವಾಗ್ತಿತ್ತು. ಕಾಗೆಯ ಬಾಯಾರಿಕೆ, ನರಿಯ ಕುತಂತ್ರ, ಮಂತ್ರಿಯ ನಿಷ್ಠೆ, ಬಾನಂಗಳದ ಚಂದಮಾಮ, ಹೊಂಡದ ಕಪ್ಪೆ ಎಲ್ಲವೂ ವಸ್ತುಗಳೇ. ಪಾತಾಳದಿಂದ ನಾಗಕನ್ಯೆಯರನ್ನು ಕರೆತರ್ತಿದ್ಲು, ಗಂಧರ್ವಲೋಕದಿಂದ ಗಂಧರ್ವರು ಹಾಡು ಹೇಳ್ತಾಯಿದ್ರು, ಸ್ವರ್ಗದಿಂದ ದೇವತೆಗಳು ಬರ್ತಿದ್ರು, ಅದ್ಯಾವುದೋ ಲೋಕದಿಂದ ರಾಕ್ಷಸರುಗಳನ್ನೇ ಎಳೆದು ತಂದು ಕಣ್ಣ ಮುಂದೆ ಇಡ್ತಾ ಇದ್ಲು. ಅಮ್ಮ ಪುಸ್ತಕ ಓದಿ ಕಥೆ ಕಲಿತವಳಲ್ಲ. ಕಥೆ ಹೇಳಲು ಅಮ್ಮನಿಗೆ ಟಿವಿಯನ್ನೂ ನೋಡಬೇಕಿಲ್ಲ. ಆಕೆಗೆ ಕಥೆ ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು, ಮಾತಾಡುವಷ್ಟೇ ಸರಾಗ. ಆಕೆಯ ಉಸಿರಲ್ಲಿ ಕಥೆಯಿತ್ತು, ಆ ಕಥೆಗಳಿಗೂ ಜೀವ ಇತ್ತು. ಆಕೆಗೆ ಕಥೆ ಹೇಳುವ ಕಲೆ ತಿಳಿದಿತ್ತು. ದೆವ್ವ, ಭೂತ, ಪಿಶಾಚಿಗಳ ಕಥೆ ಹೇಳಿ ಹೆದರಿಸ್ತಿದ್ಲು , ಮಾಯಾಲೋಕದ ಕಿನ್ನರರ ಕಥೆ ಹೇಳಿ ಮೋಡಿ ಮಾಡ್ತಿದ್ಲು, ದೇವರ ಕಥೆ ಹೇಳಿ ಭಕ್ತಿ ಹುಟ್ಟಿಸ್ತಿದ್ಲು, ಅದ್ಯಾವುದೋ ಕಥೆ ಹೇಳಿ ನಗುಸ್ತಿದ್ಲು, ಅಳುಸ್ತಿದ್ಲು. ನಮ್ಮನ್ನ ಕಥೆಯ ಒಂದು ಭಾಗವನ್ನಾಗಿಸಿಬಿಡ್ತಿದ್ಲು. ನಮ್ಮ ನಿಮ್ಮೆಲ್ಲರ ಇಮ್ಯಾಜಿನೇಶನ್ ಪವರ್ ಇದ್ಯಲಾ ಅದರ ಮೂಲ ಬಹುಶಃ ನಾವು ಹಿಂದೆಂದೋ ಕೇಳಿದ ಕಥೆ. ಇದು ನನ್ನೊಬ್ಬ ಅಮ್ಮನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ತಾಯಿಯೂ ಕಥೆಗಳ ಗುಚ್ಛ. ಅವರಲ್ಲಿ ಹೇಳಿದಷ್ಟೂ ಕಥೆಯಿದೆ. ಅವರೊಂದು ಕಥೆಗಳ ಖಜಾನೆ. ಅವರಲ್ಲೊಬ್ಬ ಅದ್ಬುತ ಕಥೆಗಾರ ಕುಳಿತುಬಿಟ್ಟಿದ್ದಾನೆ. ಆದರೆ... ಈಗ ನಾವು..? ನಮಗೆ ಸಿನಿಮಾದ ಕಥೆಬಿಟ್ಟು ಬೇರೆ ಕಥೆ ಗೊತ್ತಿಲ್ಲ. ಕಥೆಗಳ ಸೃಜನಶೀಲತೆ ನಮ್ಮಲ್ಲಿಲ್ಲ. ಲವ್ ಸ್ಟೋರಿ , ಆಕ್ಷನ್ ಫಿಲಂ ಗಳ ಆಚೆಗೆ ಬೇರೆಯದೇ ಆದ, ಒಂದಷ್ಟು ನೀತಿಯಿರುವ, ನಮ್ಮಲ್ಲೊಂದು ವೈಚಾರಿಕತೆ ಮೂಡಿಸುವ ಕಥೆಗಳ ಕಲ್ಪನೆಯೂ ನಮಗೀಗ ಬರಲಿಕ್ಕಿಲ್ಲ. ಕಥೆ ಹೇಳೋ ಕಲೆ ನಮ್ಮಲ್ಲಿಲ್ಲ. ಹೇಳೋ ಕಥೆ ಕೇಳುವ ವ್ಯವಧಾನವೂ ಬಹುಶಃ ಈಗ ನಮಗೆ ಹಾಗು ಈಗಿನ ಚಿಕ್ಕ ಮಕ್ಕಳಿಗೆ ಇರಲಿಕ್ಕಿಲ್ಲ. ಟಿವಿ ಸೀರಿಯಲ್ ಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಗೇಮ್ ಗಳಲ್ಲಿ, ಸಿನಿಮಾ ಹಾಡುಗಳಲ್ಲಿ ಕಥೆ ಕಾಣೆಯಾಗಿದೆ. ಅಮ್ಮನ ಕಥೆಗಳಲ್ಲಿ ಅನ್ಯಾಯ ಇರ್ತಾ ಇರ್ಲಿಲ್ಲ, ರಕ್ತ ಇರ್ತಿರಲಿಲ್ಲ, ಮುಖವಾಡ ಇರ್ತಿರಲಿಲ್ಲ ಅಥವಾ ಅವೆಲ್ಲ ಇದ್ರೂ ಕೊನೆಗೊಂದು ಹ್ಯಾಪಿ ಎಂಡಿಂಗ್ ಇತ್ತು, ನೈತಿಕತೆ ಮರೆತ ಎಲ್ಲರಿಗೂ ಶಿಕ್ಷೆ ಆಗ್ತಾ ಇತ್ತು. ನಮ್ಮ ತಲೆಯೊಳಗೆ ಅಂತಹ ನೈತಿಕತೆ ಮೆರೆಯುವ ಒಂದೇ ಒಂದು ಸ್ವಂತ ಕಥೆ ಬರಲೂ ಸಾಧ್ಯವಿಲ್ಲ ಹಾಗು ಹಿಂದೆಂದೋ ಕೇಳಿದ ಕಥೆಯನ್ನ ಅಮ್ಮ ಹೇಳಿದಷ್ಟೇ ರಸವತ್ತಾಗಿ ಹೇಳುವ ಕಲೆಯೂ ನಮಗೆ ಗೊತ್ತಿಲ್ಲ. ಕಥೆಯ ಕೊಂಡಿ ಕಳಚುತ್ತಾ ಇದೆ. ಸಿಕ್ಕಾಪಟ್ಟೆ ಬಿಜಿಯಾಗಿರುವ ಅಪ್ಪ ಹಾಗು ಟಿವಿ ಸೀರಿಯಲ್ಲುಗಳಲ್ಲೇ ಮುಳುಗಿ ಹೋಗಿರುವ ಅಮ್ಮ... ಇವರಿಬ್ಬರ ನಡುವೆ ಕಾಣೆಯಾಗುತ್ತಿರುವ ಕಥೆ.ಹೀಗೆಯೇ ಆದಲ್ಲಿ ಮುಂದೊಂದು ದಿನ ವಿಶ್ವವಿದ್ಯಾನಿಲಯಗಳು ಕಥೆ ಹೇಳುವುದು ಕಲಿಸುವ ಕೋರ್ಸು ಪ್ರಾರಭಿಸಬೇಕಾದೀತು. ನಾವೇ ನಮ್ಮ ಯಾಂತ್ರಿಕ ಜೀವನ ಶೈಲಿಯಲ್ಲಿ ಕೊಂದ ಕಥೆಗಾರ ಮತ್ತೆ ಹುಟ್ಟಿ ಬರಲಿ, ಇಂದಿನ ಮಕ್ಕಳು ಹೋಂ ವರ್ಕ್ , ಟ್ಯೂಶನ್ ಗಳ ಒತ್ತಡದಿಂದ ಹೊರಬಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ರಿಸಲಿ.
ನಾನ್ಯಾರೆಂದರೆ ನಾನ್ಯಾರು..?
ನಿದ್ದೆ ಮಂಪರಿನಲ್ಲಿದ್ದ ನನಗೆ "ನಾನ್ಯಾರು... ನಾನ್ಯಾಕೆ ಇಲ್ಲಿ ಇದೀನಿ.... ಭೂಮಿಯ ಮೇಲೇ ನನ್ನ ಅಸ್ತಿತ್ವ ಏನು...? ಎಂಬಂಥ ಪ್ರಶ್ನೆಗಳು ಕಾಡುತ್ತಿತ್ತು. ತೀರಾ ಆಧ್ಯಾತ್ಮದವರೆಗೂ ಕರೆದೊಯ್ಯಬಲ್ಲಂಥ ಇಂಥ ಪ್ರಶ್ನೆಗಳು ಸಧ್ಯಕ್ಕೆ ನನ್ನನ್ನು ನಿದ್ದೆಯಿಂದ ಎಬ್ಬಿಸಿತ್ತು. ಮಧ್ಯಾಹ್ನ ಉಟ ಮಾಡಿ ಸಂಜೆಯವರೆಗೂ ಮಲಗಿಕೊಳ್ಳುವಂಥ ಖಯಾಲಿ ಇಂದು ನಿನ್ನೆಯದಲ್ಲ. ಆದರೆ, ಹೀಗೆ ನನ್ನ ಜೀವನದ ಉದ್ದೇಶಗಳ ಬಗೆಗಿನ ಪ್ರಶ್ನೆ ತೀರಾ ಇತ್ತೀಚಿನದು. ನಾನೆಂಬ ನಾನು ಕೇವಲ ಅಪ್ಪ-ಅಮ್ಮನ ಮಗ.. ಅಜ್ಜ-ಅಜ್ಜಿಯ ಮೊಮ್ಮಗ.. ಅಣ್ಣನ ತಮ್ಮ... ತಂಗಿಯ ಅಣ್ಣ... ಹೀಗೆ, ಇವಷ್ಟೇ ಉತ್ತರಗಳು ನನ್ನ ಬಳಿ, ನಾನ್ಯಾರೆಂದರೆ. ಯಾರಾದ್ರು ನನ್ನನ್ನು 'ನೀನ್ಯಾರು..?' ಎಂದು ಕೇಳಿದ್ರೆ, ಇಂಥ ಊರಿನವನಾದ ನಾನು ಇಂಥವರ ಮೊಮ್ಮಗನಾಗಿದ್ದೇನೆ, ಇಂಥವರ ಮಗನಾದ ನನ್ನ ಹೆಸರು ಇಂಥದ್ದು... ಇಷ್ಟು ಮಾತ್ರ ನನ್ನ ಬಗ್ಗೆ ನನಗೆ ತಿಳಿದಿದ್ದ ವಿವರಗಳು. ನಿಜ ಅಂದ್ರೆ, 'ನಾನ್ಯಾರು' ಎಂಬ ಯಾರದೋ ಪ್ರಶ್ನೆಗೆ ಇಷ್ಟು ವಿವರಗಳು ಸಾಕು. ಆದ್ರೆ ನನ್ನಲ್ಲೇ ಈ ಪ್ರಶ್ನೆಗಳು ಹುಟ್ಟಿದ್ರೆ...? ಹುಟ್ಟಿತ್ತು...! ನಾನು ಇಂಥ ಊರಿನವನು... ಇಂಥವರ ಮಗ ಎಂಬಷ್ಟೇ ಉತ್ತರಗಳು ತೃಪ್ತಿ ನೀಡಲಿಲ್ಲ. ಊರು, ಅಜ್ಜ, ಅಜ್ಜಿ, ಅಪ್ಪ, ಅಮ್ಮ ಹೀಗೆ ಯಾರಾದರೊಬ್ಬರ/ ಯಾಹುದಾದರೊಂದರ ರೆಫೆರೆನ್ಸೆ ಬೇಕು, ನಾನ್ಯಾರು ಎಂಬ ಪ್ರಶ್ನೆಯ ಉತ್ತರಕ್ಕೆ. ಯಾರೊಬ್ಬರ ರೆಫೆರೆನ್ಸೆ ಕೂಡ ಇಲ್ಲದೆ 'ನಾನ್ಯಾರು' ಅಂತ ಹೇಳಲಿಕ್ಕೆ ಸಾಧ್ಯವ... ಜೀವನಕ್ಕೊಂದು ಉದ್ದೇಶ ಇದ್ಯಾ...? ಇದು ಇವತ್ತು ನಿದ್ದೆ ಮಂಪರಿನಲ್ಲಿದ್ದಾಗಿನ ಪ್ರಶ್ನೆಯಾಗಿತ್ತು. ಎದ್ದು ಸೀದಾ ಬಚ್ಚಲ ಮನೆಗೆ ಹೋಗಿ ಮುಖ ತೊಳೆಯತೊಡಗಿಗೆ. ನನ್ನದೇ ಪ್ರಶ್ನೆಯ ಉತ್ತರಕ್ಕಾಗಿ ಯಾರನ್ನು ಕೇಳೋದು.. ಬಚ್ಚಲ ಮನೆಯ ಹಂಡೆ, ನೀರು, ಚೊಂಬು, ಬಕೆಟ್ ಗಳಿಗೆ ಗೊತ್ತಿರಲಿಕ್ಕಿಲ್ಲ. ಬಚ್ಚಲ ಮನೆಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರು ಬರ್ತಾರೆ. ಬಂದದ್ದು ಯಾರು ಎಂದು ಗುರುತಿಸುವ ಶಕ್ತಿ ಅವುಗಳಿಗಿಲ್ಲ. ಮುಖ ತೊಳೆದು ಸೀದಾ ಜಗಲಿಯತ್ತ ನಡೆದೆ, ಅಮ್ಮನನ್ನರಸಿ. ಮೋಡ ಮುಸುಕಿದ ಭಾನು ಮಳೆಯ ಸೂಚನೆ ಕೊಡುತ್ತಿತ್ತು. ಮಧ್ಯಾಹ್ನ ಊಟ ಮುಗಿಸಿ, ಒಂದೊಳ್ಳೆ ನಿದ್ದೆ ಮಾಡಿ ಎದ್ದು ಕಾಫಿ ಕುಡಿಯುಹುದು ಮಲೆನಾಡಿನ ವಾಡಿಕೆ. ಅಂತೆಯೇ ನಾನು ಎದ್ದಿದೀನಿ, ಕಾಫಿ ಕುಡಿಯಲು ತಯಾರು ಎಂಬ ಸಂದೇಶ ಹೊತ್ತು ಜಗಲಿಗೆ ಬಂದಿದ್ದೆ. ಟಿವಿ ತನ್ನ ಪಾಡಿಗೆ ತಾನು ಉರಿಯುತ್ತಿತ್ತು... ಉರಿಯೋದೆ ತನ್ನ ಕೆಲಸವೆಂಬಂತೆ. ಮೆಘಾ ಸೀರಿಯಲ್ ಗಳ ಒಂದೊಂದು ಪಾತ್ರವಾಗಿಬಿಟ್ಟಿದ್ದ ಮನೆಯವರೆಲ್ಲ ಈ ದಿನ ತಮ್ಮ ಪಾತ್ರದಲ್ಲಿ ಮಗ್ನರಾಗಿರಲಿಲ್ಲ. ಪ್ರಪಂಚದ ಎಂಟನೆ ಅದ್ಭುತ ನೋಡಿದ ಭಾಗ್ಯ ನನ್ನದಾಗಿತ್ತು.... ಟಿವಿ ಅನಾಥವಾಗಿತ್ತು. ನನ್ನ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ನಾನೇ ನನಗೆ ಪ್ರಶ್ನೆಯಾಗಿದ್ದೆ. ಉತ್ತರ ಸಿಗಲಾರದ ಪ್ರಶ್ನೆಗಳೇ ಹೀಗೆ.. ಒಂದಷ್ಟು ದಿನ ಕೊರೆಯತ್ತೆ... ಕಾಡತ್ತೆ.. ಮರೆಯತ್ತೆ. ಮರೆಯೋಕೆ ಸ್ವಲ್ಪ ಸಮಯ ಬೇಕಾಗಿದ್ರಿಂದ ಈ ಪ್ರಶ್ನೆಗಳು ಕಾಡುತ್ತಿತ್ತು. ಕಾಫಿ ಬೀಳದ ಬಾಯಿ ಒಣಗುತ್ತಿತ್ತು. ಚಿಕ್ಕಮ್ಮನ ಧ್ವನಿ ಜಗಲಿಯ ಪಕ್ಕದಲ್ಲಿದ್ದ ರೂಮಿನಿಂದ ಬಂದಂತಾಯಿತು. ಹೆಂಗಸರ ಬೆಟಾಲಿಯನ್ ನ ಕಮಾನ್ಡೆರ್ ಚಿಕ್ಕಮ್ಮ. ಅವರ ಧ್ವನಿ ಬಂದತ್ತಲೇ ಹೊರಟೆ.. ಅಮ್ಮನೂ ಇರಬಹುದೆಂದು. ಕಪ್ಪಂಚಿನ ಬಿಳಿ ಸೀರೆಯನ್ನು ತಿರುಗಿಸಿ, ಮುರುಗಿಸಿ, ಮುತ್ತಿ ನೋಡಿ ಪರಿಶೀಲಿಸುತ್ತಿತ್ತು ಬೆಟಾಲಿಯನ್. ಮುಂದಿನ ತಿಂಗಳು ಇದ್ದ ಅಕ್ಕನ ಮದುವೆಗೆ ತಂದ ಸೀರೆ ಬೆಟಾಲಿಯನ್ ನ ಪರೀಕ್ಷೆಗೆ ಒಳಪಟ್ಟಿತ್ತು. ನನ್ನ ಬದುಕಿನ ಉದ್ದೇಶ ಏನು ಎಂಬುದು ಇನ್ನೂ ನನಗೆ ತಿಳಿಯದಾಗಿತ್ತು. ನನ್ನ ಅಸ್ತಿತ್ವ ಸೀರೆ ಇಂದ ಮುಚ್ಚಿತ್ತು. ನಾನು ಅಲ್ಲಿ ಇದ್ ದದ್ದನ್ನ ಇನ್ನೂ ಯಾರೂ ಗಮನಿಸಿರಲಿಲ್ಲ. ಬಹುಷಃ ಆ ಸೀರೆ ಚಿಕ್ಕಮ್ಮನಿಗೆ ಇಷ್ಟ ವಾಗಲಿಲ್ಲ ಅನ್ಸತ್ತೆ. ನಾಳೆ ಸೀರೆ ಬದಲಿಸುವ ಕುರಿತು ಚರ್ಚೆ ನಡೆಯುತ್ತಿತ್ತು. ಅಂತ ಒಂದು ಸೀರಿಯಸ್ ವಿಚಾರ ಚರ್ಚೆಯಿಂ ದ ಅಮ್ಮನನ್ನು ಹೊರತಂದು ಕಾಫಿ ಮಾಡಿಸೋ ದು ಅಸಾಧ್ಯ ಅಂತ ನನಗೆ ಅನುಭವದಿಂದ ಗೊತ್ತಿದೆ. ಸರಿ.. ನನ್ನ ಪ್ರಶ್ನೆಗಳಿಗೆ ಉತ್ತರ ಬೆಂಬತ್ತಿ ಹಿ ತ್ತಲ ಕದೆಯತ್ತ ನಡೆದೇ. ಮೋಡ, ಮಿಂಚು , ಗುಡುಗು... ಮಳೆ ಬರುವ ಮುನ್ಸೂಚನೆ. ಒಂದೆರಡು ಹನಿ ಬಿದ್ದ ಮೇಲೇ ಅಕ್ಕ ಓದಿ ಬಂದ್ಲು, ಒಣ ಹಾಕಿದ್ದ ಬಟ್ಟೆ ತೆಗಿಯಲು. ಅಲ್ಲಿದ್ದ ಎಲ್ಲ ಬಟ್ಟೆಯನ್ನು ತೆಗೆದು, ಬಾ ಇಲ್ಲಿ ಎಂದು ನನ್ನನ್ನ ಕರೆದ್ಲು. ಎರಡೂ ಹೆಗಲಿಗೆ ಹಿಡಿಯೋ ಅಷ್ಟು ಬಟ್ಟೆಯನ್ನ ನನ್ನ ಹೆಗಲಿಗೆ ಹಾಕಿ, ಉಳಿದ ಒಂದು ಕರ್ಚೀಪ್ ಹಿಡಿದು. ಹೊರಟೆ ಬಿಟ್ಲು. ನನ್ನ ಪ್ರಶ್ನೆಗೆ ಉತ್ತರ ಅರ್ಧ ಸಿಕ್ಕಂತಾಗಿ ನಾನೂ ಅವಳ ಹಿಂದೆ ಹೊರಟೆ. ಬಹುಷಃ ಮಳೆ ಬಂದಾಗ ಒಣ ಹಾಕಿದ ಬಟ್ಟೆ ತೆಗೆಯೋದು ನನ್ನ ಜೀವನದ ಉದ್ದೇಶ ಗಳಲ್ಲೊಂದಾಗಿರ ಬಹುದ... ಅಥವಾ... ಅದೊಂದೇ ಉದ್ದೇಶವ ನನ್ನ ಬದುಕಿಗೆ...!
Subscribe to:
Posts (Atom)