ಮಧ್ಯಾಹ್ನದ ಊಟದ ನಂತರದ ನಿದ್ರೆಯ ಸುಖ ಅನುಭವಿಸಿದವನೇ ಬಲ್ಲ. ಅದ್ಯಾವ ಮೇಷ್ಟ್ರು ಅದೆಂಥ ಪಾಠವನ್ನೇ ಮಾಡ್ತಾ ಇರಲಿ ಊಟವಾದ ಮೇಲೆ ನಿದ್ರಿಸಿಯೇ ಬಿಡುವ ಹಠ ಮಾಡಿದ್ದಾಗಿದೆ. ಇವತ್ತಂತು ಸ್ವಲ್ಪ ಹೆಚ್ಚೆನ್ನುವಷ್ಟೇ ತಿಂದಿದ್ದೆ. ಅದರ ಪರಿಣಾಮವೋ ಎಂಬಂತೆ ತರಗತಿ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ನಿದ್ರಾ ದೇವಿಯ ಮಡಿಲು ಹೊಕ್ಕಿದ್ದೆ. ಮೇಷ್ಟ್ರು ಬಂದಿದ್ದೊಂದು ಗೊತ್ತು. ನಂತರದ್ದೆಲ್ಲ ಕೇಳಿದೆ ಅಂದ್ರೆ ಕೇಳಿದೆ, ಇಲ್ಲ ಅಂದ್ರೆ ಇಲ್ಲ ಎನ್ನುವಂತಿತ್ತು. ಒಮ್ಮೆಲೇ ಯಾರದೋ ಧ್ವನಿ "ಎಕ್ಸ್ಕೋಸ್ ಮಿ ಸರ್.. ಸ್ವಲ್ಪ ಅವನ್ನ ಕರೀತೀರ" ಅಂತ ನನ್ನೆಡೆಗೆ ಬೊಟ್ಟು ಮಾಡಿದಂತಾಯಿತು. ಮೇಷ್ಟ್ರ ಅಪ್ಪಣೆಗೆ ಕಾಯದೆ ಸೀದಾ ಅವರೆಡೆಗೆ ಹೋಗಿ 'ಯಾರು ನೀವು..?' ಎಂದೆ. ಅದಕ್ಕೆ ಆತ ನಕ್ಕು 'ನನ್ನ ಗುರುತು ಸಿಗಲಿಲ್ಲವೇ..? ನಾನು ದೇವರು' ಅಂದ. ನನಗೋ ಗಾಬರಿಯಾಯಿತು. ದೇವರು ನೋಡಲು ದೇವರಂತೆ ಇಲ್ಲ. ಇದ್ಯಾವ ದೇವರು...? ಕೈಯಲ್ಲಿ ಚಕ್ರ ಇಲ್ಲ, ವಿಷ್ಣು ಅಲ್ಲ... ಕೊಳಲು ಇಲ್ಲ, ಕೃಷ್ಣ ಇಲ್ಲ... ಕೊರಳಲ್ಲಿ ಹಾವಿಲ್ಲ, ಶಿವ ಅಲ್ಲ... ಹೀಗೆ ನನಗೆ ಚಿಕ್ಕವಯಸ್ಸಿನಿಂದಲೂ ತಿಳಿದಿದ್ದ, ಸ್ವಲ್ಪ ಜನಪ್ರಿಯರಾಗಿದ್ದ ಎಲ್ಲಾ ದೇವರ ಹೋಲಿಕೆ ಮಾಡಿ ನೋಡಿದರೂ ಗುರುತು ಹತ್ತಲಿಲ್ಲ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸವಿರದ ಕಾರಣ ಹಾಗು ದೇವರು ಮಾರುವೇಷದಲ್ಲಿ ಬರುತ್ತಾನೆಂದು ತಿಳಿದಿದ್ದ ಕಾರಣ ' ನೀನು ಯಾವ ದೇವರು..?' ಎಂದು ಕೇಳಿಯೇ ಬಿಟ್ಟೆ. 'ನಾನು ಕಣಪ್ಪ... ಶಿವಪ್ಪ...' ಎಂದ. 'ಅಯ್ಯೋ ಶಿವನೆ...! ನೀನು ಶಿವನೆ...? ಕತ್ತಲ್ಲಿದ್ದ ಹಾವೆಲ್ಲಿ' ಎಂದದ್ದಕ್ಕೆ ಇಲ್ಲಿ ಪ್ರಾಣಿ ದಯಾ ಸಂ ಘದವರಿಂದ ತೊಂದರೆ ಆದೀತು ಎಂದು ಕೈಲಾಸದಲ್ಲೇ ಬಿಟ್ಟು ಬಂದೆ ಅಂದ. ಮತ್ತೆ ಜಡೆ..? ಉದ್ದನೆ ಜಟೆ ಅನಾಗರೀಕತೆಯ ಸಂಕೇತ ಎಂದಾರು ಎಂದು ಅದನ್ನೂ ಅಲ್ಲಿಯೇ ಬಿಟ್ಟು ಬಂದೆ ಅಂದ. ಮೊದಲನೇ ಉತ್ತರ ಸ್ವಲ್ಪ ಲಾಜಿಕಲ್ ಅನ್ಸಿದ್ರೂ ಎರಡನೆಯದು ಸಮಂಜಸ ಅನ್ನಿಸಲಿಲ್ಲ. ಸರಿ... ಈಗೇನು ಬಂದಿದ್ದು ಅನ್ನೋ ಪ್ರಶ್ನೆ ನಂದು. ನನ್ನನ್ನ ಹುಡುಕಿಕೊಂಡು ಸ್ವತಃ ದೇವರೇ ಬಂದಿದ್ದು ನನಗೆ ಸ್ವಲ್ಪ ಗಾಬರಿಯನ್ನು ಉಂಟುಮಾಡಿತ್ತು. ದೇವರದು ನೇರ ಪ್ರಶ್ನೆ ' ನೀನು ಆಸ್ತಿಕನೋ..? ಅಥವಾ ನಾಸ್ತಿಕನೋ..?' ನನಗೆ ನನ್ನ ಮೇಲಿದ್ದ ಸಂಶಯ ಈಗ ದೇವರಿಗೂ ಬಂದಿತ್ತು. ಆತನ ನೇರ ಪ್ರಶ್ನೆಗೆ ನನ್ನದೂ ಅಷ್ಟೇ ನೇರ ಎನ್ನುವಂತೆ, ದೇವರೇ ಇಲ್ಲ, ದೇವರು ಎಂಬುದೇ ಸುಳ್ಳು, ಭ್ರಮೆ, ಅದು ಕೇವಲ ಅಲಂಕಾರಗೊಂಡ ಕಲ್ಲು ಎಂದಿಲ್ಲ.. ನಾನು ನಾಸ್ತಿಕ ಅಲ್ಲ. ದೇವರಿದಾನೆ ಅಂತ ಮೂರು ಹೊತ್ತು ವಿಭೂತಿ ಬಡಿದು, ಮೂಗು ಮುಚ್ಚಿ ಕೂತಿಲ್ಲ, ದಿನಕ್ಕೆರಡು ಬಾರಿ ದೇವಸ್ಥಾನ ಸುತ್ ತಿಲ್ಲ... ನಾನು ಆಸ್ತಿಕ ಅಲ್ಲ. ಎರಡು ಅಭಿಪ್ರಾಯಗಳ ನಡುವೆ ನನ್ನ ದಾರಿ ಎಂದೆ. ದೇವರಂಥ ದೇವರೇ ಗಾಬರಿಗೊಂಡ ಸಮಯ ಅದು. ಅಡ್ಡ ಗೋಡೆಯ ಮೇಲೆ ದೀಪ ಇರಿಸೋದು ಇತ್ತೀಚಿಗೆ ಅಭ್ಯಾಸ ಆಗಿತ್ತು. ನಾನು ನಾಸ್ತಿಕ ಎಂದರೆ ದೇವರಿಗೆ ಕೋಪ ಬಂದೀತು. ಆತನಿಗೆ ಕೋಪ ಬಂದಾಗ ಅದೆಂತೆಂಥ ಶಾಪ ಕೊಡ್ತಾನೆ ಅಂತ ಹಳೇ ಸಿನಿಮಾಗಳನ್ನ ನೋಡಿ ತಿಳಿದಿತ್ತು. ಆಸ್ತಿಕ ಎಂದರೆ ಎಲ್ಲಿ ಕಾಣಿಕೆ ಎಂದಾನು ಅನ್ನೋ ಭಯ. ಹಾಗಾಗಿ ಗೋಡೆ ಮೇಲೆ ದೀಪ ಇಟ್ಟು, ಎರಡೂ ಕಡೆ ಬೆಳಕು ತೋರ್ಸಿ ದೇವರನ್ನ ಕತ್ತಲಲ್ಲೇ ಕೂರಿಸಿದ್ದೆ. ದೇವರ ಮೇಲೆ ನನಗೆ ಇದ್ದ ಅದಮ್ಯ ಕೋಪದ ಮೂಲ ತಿಳಿಯಲು ಬಂದಿದ್ದನೆಂದು ತಿಳಿಯಿತು ನಂತರದ ಮಾತುಗಳಿಂದ. ವಿಷಯ ಅರ್ಧ ಸತ್ಯವಾಗಿತ್ತು. ನನಗೆ ದೇವರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಆತನ ಪಾಲಿಸಿಗಳು ನನ್ನ ಅಭಿಪ್ರಾಯಕ್ಕೆ ಹೋಲುತ್ತಿರಲಿಲ್ಲ. ಪ್ರಪಂಚದಲ್ಲಿ ಅರ್ಥವಾಗದೆ ಇರೋದಕ್ಕೆ ಗಣಿತ ಅಂತ ಕರೀತಾರೆ ಅನ್ನೋದು ನನ್ನ ತಿಳುವಳಿಕೆ. ಆದರೆ ಅರ್ಥ ಮಾಡಿಕೊಳ್ಳಲು ಅದಕ್ಕಿಂತ ಕಷ್ಟ ಅಂದ್ರೆ ದೇವರ ಪಾಲಿಸಿಗಳು. ಅರ್ಥವಾಗದ್ದನ್ನು ದ್ವೇಷಿಸೋದು ನನ್ನ ಪರಿಪಾಠ. ಅದನ್ನೇ ದೇವರಿಗೂ ತಿಳಿಸಿದೆ. ಆತನ ಮೇಲೆ ನನಗೆ ಸಿಟ್ಟಿಲ್ಲವೆಂದು ತಿಳಿದು ದೇವರಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಅಂತೆಯೇ ಆತನ ಯಾವ್ಯಾವ ಪಾಲಿಸಿಗಳ ಮೇಲೆ ನನ್ನ ಕೋಪ ಎಂದು ತಿಳಿಯುವ ಕುತೂಹಲ ದೇವರಿಗೆ. ಕೇಳಿಯೇ ಬಿಟ್ಟ. ತೀರಾ ದೇವರಿಗೂ ಬೇಜಾರು ಮಾಡೋದು ಇಷ್ಟವಿಲ್ಲದ್ದರಿಂದ ಸ್ವಲ್ಪ ನಯವಾಗಿಯೇ ಹೇಳಿದೆ, 'ನೀನು ಎಲ್ಲದಕ್ಕೂ ಒಂದು ನಿಯಮ ಅಂತ ಮಾಡಿದೀಯ. ಆದ್ರೆ ನೀನೆ ಆ ನಿಯಮಗಳಿಗೆ ಬದ್ದನಾಗಿಲ್ಲ. ಪ್ರತಿ ನಿಯಮಕ್ಕೂ ಒಂದು ಸ್ಟಾರ್ ಹಾಕಿ, ಕೆಳಗೆ ಕಂಡಿಶನ್ಸ್ ಅಪ್ಲೇ ಅಂತ ಬರೀತೀಯ. ಹೊಟ್ಟೆ ತುಂಬೋ ಅಷ್ಟು ತಿನ್ಸಿ ನಂತರ ಬಿರಿಯಾನಿ ಕೊಡ್ತೀಯ, ಹೊಟ್ಟೆ ಹಸಿವು ಎಂದಾಗ ತುತ್ತು ಅನ್ನಾನು ಕೊಡಲ್ಲ, ಸರಿಯಿಲ್ಲ ನೀನು' ಅಂದೆ. ದೇವರ ಮುಖದ ಮೇಲೆ ಮೂಡಿದ ಪ್ರಶ್ನೆ ನೋಡಿ ಇನ್ನೂ ವಿವರಣೆಯ ಅಗತ್ಯವಿದೆಯೆಂದು ತಿಳಿಯಿತು. 'ನೋಡಪ್ಪ ಶಿವಪ್ಪ... ನನಗೆ ನನ್ನ ಹೊಟ್ಟೆಪಾಡಿನ ಚಿಂತೆ ಸ್ವಲ್ಪ ಜಾಸ್ತಿ. ನೀನೇನ್ ಮಾಡ್ತೀಯ ಅಂದ್ರೆ... ಮಧ್ಯಾಹ್ನ ಊಟ ಸಿಗತ್ತೆ ಅನ್ನೋವಾಗ ಊಟಕ್ಕೆ ಮೊದಲು ಒಂದಷ್ಟು ತಿನ್ನೋಕೆ ಕೊಡ್ತೀಯ. ನೀನು ಕೊಟ್ಟೆ ಅಂತ ತಿನ್ನೋದಾಯ್ತು. ಊಟ ಆದ ಮೇಲೂ ಏನೇನೋ ತಿನ್ನೋಕೆ ಕೊಡ್ತೀಯ. ನನ್ನ ಹೊಟ್ಟೆಗೆ ಅದೇನೂ ಹೆಚ್ಚಲ್ಲ ಬಿಡು. ಹಡಗು ತುಂಬ್ಸೋಕೆ ಹೋದವ ವಾಪಸ್ ಬಂದ್ನಂತೆ ಆದ್ರೆ ಹೊಟ್ಟೆ ತುಂಬ್ಸಕ್ಕೆ ಹೋದವ ವಾಪಸ್ ಬರಲೇ ಇಲ್ವಂತೆ. ಹೊಟ್ಟೆ ಗಾತ್ರ ಅಂತದ್ದು. ಆದ್ರೆ ಹೊಟ್ಟೆ ಹಸಿವು ಅಂದಾಗ ಊಟಾನು ಕೊಡಲ್ಲ, ಊಟದ ನಂತರ, ಮೊದಲು ಎಲ್ಲ ಕೊಡ್ತಾ ಇದ್ಯಲ ಅದೂ ಇಲ್ಲ. ಒಂದಿಡೀ ದಿನ ಉಪವಾಸ. ಹೊಟ್ಟೆಗೊಸ್ಕರನೆ ಬದುಕೋ ನನ್ನಂಥವರಿಗೆ ಇವು ಸರಿ ಕಾಣಲ್ಲಪ' ಅಂದೆ. ನನ್ನ ಮಾತು ದೇವರ ಮನಸ್ಸನ್ನ ತಟ್ತೂ ಅಂತ ಕಾಣತ್ತೆ, ಈ ವಿಚಾರವಾಗಿ ಸ್ವಲ್ಪ ವಿಚಾರ ಮಾಡಬೇಕು. ನಾಳೆ ಮತ್ತೆ ೯.೩೦ ಕ್ಕೆ ಬರ್ತೀನಿ ಅಂತ ಹೊರಟೆ ಬಿಟ್ಟ. ಪಕ್ಕದಲ್ಲಿದವ ತಟ್ಟಿದ್ದರಿಂದ ಎಚ್ಚರಗೊಂಡು ಕಣ್ಣು ಬಿಟ್ಟು ನೋಡ್ತೀನಿ ಮೇಷ್ಟ್ರು ಬಾಗಿಲ ಬಳಿ ಹೋ ಗ್ತಾ ಇದ್ರು. ನಾಳೆ ೯.೩೦ ಕ್ಕೆ ಕ್ಲಾಸ್ ತಗೋತೀನಿ ಅಂದು ಹೋದರಂತೆ ಅನ್ನೋದು ಕೊನೆಗೆ ತಿಳಿದ ವಿಚಾರ.
Showing posts with label ಹಾಗೆ ಸುಮ್ಮನೆ.... Show all posts
Showing posts with label ಹಾಗೆ ಸುಮ್ಮನೆ.... Show all posts
ಮಿಡ್‌ನೈಟ್ ಸೀಕ್ರೆಟ್ಸ್
ಮಧ್ಯರಾತ್ರಿಯಲ್ಲೊಂದು ಸಣ್ಣ ಗದ್ದಲ, ನೂರೆಂಟು ಮಾತು, ಗರಂ ಗರಂ ಚಹಾ, ಬೇಕಾದವರಿಗೊಂದು ಆಮ್ಲೆಟ್,ಕಾಡು ಹರಟೆ... ಎಂಬಲ್ಲಿಗೆ ಒಂದು ರಾತ್ರಿ ವಿದಾಯ ಹೇಳಿರತ್ತೆ. ಸೂರ್ಯೋದಯದ ಮೊದಲ ಕಿರಣ ನಮ್ಮನ್ನು ಸೋಕದಂತೆ ಮುಸುಕು ಮುಚ್ಚಿ ಮಲಗಿರುತ್ತೇವೆ. ಜೀವನದಲ್ಲಿ ಪಿಯುಸಿ ಎಂಬುದೊಂದನ್ನ ಮಾಡದೆ ಇದ್ದಿದ್ರೆ, ಆ ವಿದ್ಯಾರ್ಜನೆಗಾಗಿ ಉಡುಪಿ ಕ್ಷೇತ್ರಕ್ಕೆ ಹೋಗದೆ ಇದ್ದಿದ್ರೆ ಮಧ್ಯರಾತ್ರಿನ ಕಣ್ತುಂಬ ನೋಡ್ತಿದ್ನೋ ಇಲ್ವೋ. ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿರುವ ಮಹಾಪ್ರಾಣನ ಆಶೀರ್ವಾದದೊಂದಿಗೆ ಊಟ ಮುಗಿಸಿ, ರಾಜಾಂಗಣದಲ್ಲಿ ನಡಿಯೋ ಯಕ್ಷಗಾನದ ಸವಿಯನ್ನೂ ಉಂಡು ಹಾಸ್ಟೆಲ್ ಸೇರ್ತಿದಿದ್ದು ರಾತ್ರಿ ಹತ್ತೂವರೆ ಸುಮಾರಿಗೆ. ಅದೂ ಇಂತದ್ದೆ ಒಂದು ರಾತ್ರೆ, ಆದ್ರೆ ಮರುದಿನ ಬೆಳಗ್ಗೆಗೆ ಅದರದೇ ಆದ ಮಹತ್ವ ಇತ್ತು. ನಮ್ಮ ಸೆಕೆಂಡ್ ಪಿಯುಸಿಯ ಭೌತಶಾಸ್ತ್ರದ ಪರೀಕ್ಷೆ ನಡೆಯುಹುದರಲ್ಲಿತ್ತು. ಪರೀಕ್ಷೆಯ ಹಿಂದಿನ ದಿನ ಕ್ರಿಕೆಟ್ ಮುಗಿಸಿ ಸಂಜೆ ಗೋದೂಳಿ ಮುಹೂರ್ತದ ಶುಭ ಲಗ್ನದಲ್ಲಿ ಓದಕ್ಕೆ ಕೂತರೆ ಕಣ್ಣಲ್ಲಿ ನಿದ್ರೆ ಮನೆ ಮಾಡಿತ್ತು. ನಿದ್ರೆ ಓಡಿಸೋದು ಅಂದ್ರೆ ಏನ್ ಸುಮ್ನೇನಾ..! ಸರಿ.. ಎದ್ದು ರಥಬೀದಿನ ಒಂದೆ ಒಂದು ಸುತ್ತು ಹಾಕಿ, ಮಠದಲ್ಲಿ ಊಟ ಮಾಡಿ ಬಂದು ಓದಕ್ಕೆ ಕೂತರೆ ನಿದ್ದೆ ಹೋಗಿರತ್ತೇನೋ ಅನ್ನೋ ಆಶಾಭಾವ. ತಡ ಮಾಡದೆ ಹೊರಟ್ರೂ ತಡವಾಗಿತ್ತು ಮೊದಲ ಪಂಕ್ತಿಯ ಊಟಕ್ಕೆ. ಮತ್ತೊಂದು ಸುತ್ತು ಹೊಡೆದು ಬಂದ್ರೆ ಸರಿ ಆದೀತೆ ಎಂಬ ದ್ವಂದ್ವ ಮೂಡುವ ಮೊದಲೇ ಹೊರಟಾಗಿತ್ತು. ಪರೀಕ್ಷೆ ಸಾಂಗವಾಗಿ ನೆರವೇರಲಿ ಎಂದು ಶ್ರೀಕೃಷ್ಣನ ದಿವ್ಯಾನುಗ್ರಹ ಪಡೆದೂ ಆಯಿತು ಅದರ ಮದ್ಯದಲ್ಲೇ. ಮತ್ತೊಂದು ಸುತ್ತು ಹಾಕಿ ಬಂದು ಊಟ ಮಾಡುವ ವೇಳೆಗೆ ಎಂಥದೋ ಸದ್ದು. ಚಂಡೆದಾ..? ರಾಜಾಂಗಣದಲ್ಲಿ ಯಕ್ಷಗಾನ ಇರೋದು ಖಾತ್ರಿಯಾಯ್ತು. ದೇವಿ ಮಹಾತ್ಮೆ ಪ್ರಸಂಗ ಅಂತ ಅವರಿವರ ಬಾಯಿಂದ ಹರಿದಾಡ್ತಾ ನಮ್ಮ ಕಿವಿಗೂ ಬೀಳಬೇಕೆ..? ನನ್ನಂತ ನಾನೂ ದೇವಿಯನ್ನು ಅಲಕ್ಷಿಸಿ ಓದೋಕೆ ಕೂತ್ರೆ ಓದಿದ್ದು ತಲೆಗೆ ಹತ್ತೀತೆ..? ಹತ್ತೀತೇನೋ, ಯಕ್ಷಗಾನದ ಹುಚ್ಚು ಹತ್ತದಿದ್ದ ಪಕ್ಷದಲ್ಲಿ. ಒಂದಷ್ಟು ಹೊತ್ತು ತಾಳಕ್ಕೆ ಹೆಜ್ಜೆ ಹಾಕಿ, ಚಂಡೆಯ ಸದ್ದು ಕಿವಿಯಲ್ಲಿಟ್ಟುಕೊಂಡು ಹೊರಟಾಯ್ತು. ಎಲ್ಲಿಗೆ ಕೇಳಬೇಡಿ. ಓದೋದಿದೆ. so ಓದೋಕೆ ಹೊರಟೆ. ಅಂದ್ರೆ ಓದಿದೆ ಅಂತ ಅರ್ಥೈಸಬೇಡಿ. ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ರಾತ್ರಿ ಹನ್ನೊಂದು ಗಂಟೆ. ಹಾಸ್ಟೆಲ್ ನಿಂದ ಗಂಡುಪಾಳ್ಯ ಹೊರಟಿತ್ತು ಟೀ ಅಂಗಡಿಗೆ. ಪ್ರತಿದಿನ ರಾತ್ರಿ ಹನ್ನೊಂದಾದಮೇಲೆ ಕೆಲವರು ನೈಂಟಿ ತಗೋತಿದ್ರು, ನಾವು ಪ್ಲೈನ್ ಟೀ ತಗೋತಿದ್ವಿ. ರಾತ್ರಿ ಹನ್ನೊಂದಕ್ಕೆ ಟೀ ಕುಡಿಯೋದು ಪದ್ಧತಿ. ಮುರಿಯಲಾದೀತೇ..? ಟೀ ಅಂಗಡಿಯವನೂ ಬದುಕಬ್ಯಾದ್ವೆ..? ಹನ್ನೊಂದರ ಟೀ ಕುಡಿದು ಓದೋಕೆ ಕೂರೋದು ಒಳ್ಳೇದು, ನಿದ್ದ್ದೆ ಬರಲ್ಲ. ನಿದ್ದೆ ಈಗಲೂ ಬರ್ತಾ ಇರ್ಲಿಲ್ಲ ಅನ್ನೋ ವಿಚಾರದ ಕಡೆ ಗಮನ ಹರಿಸದೆ ಗಂಡು ಪಾಳ್ಯದಲ್ಲೊಂದಾದೆ. ಟೀಗೆ ಅಂತ ಹೋದಮೇಲೆ ಯಾವ ಮುಟ್ಟಾಳನೂ ಬರಿ ಟೀ ಕುಡಿದು ಬರಲ್ಲ. ಜೊತೆಗೆ ಒಡೆನೋ, ಬಜ್ಜಿನೋ, ನೂಡಲ್ಸೋ, ಯಾವುದೂ ಇಲ್ಲ ಅಂದ್ರೆ ಅಮ್ಲೆಟ್ ಆದ್ರೂ ಆದೀತು. ಜೊತೆಗಾರರು ಸಿಗರೆಟ್ ಗಮವನ್ನೋ ತಗೊಂಡ ಮೇಲೆ ಮರಳಿ ಛಾತ್ರಾಲಯ. ಅಂತೂ ಕೆಲವರು ನಡೆದಾಡಿ ಮತ್ತೆ ಕೆಲವರು ತೂರಾಡಿ ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ದಿನ ಕಳೆದು ಅರ್ದ ಗಂಟೆ ಆಗಿತ್ತು. ಪರೀಕ್ಷೆಗೆ ಉಳಿದಿದ್ದು ಬೆರಳೆಣಿಕೆಯ ಗಂಟೆಗಳು. ಓದಲೇ ಬೇಕಾದ ಪರಿಸ್ಥಿತಿ. ಸರಿ ಆದಂತೆ ಆಗ್ಲಿ ಓದಕ್ಕೆ ಕುಳಿತೆ ಬಿಟ್ಟೆ, ಕಟಿಂಬದ್ವಾ. ಪಕ್ಕದಲ್ಲೆಲ್ಲೋ ಗಲಾಟೆ. ಬ್ಯಾಟು ಬಾಲುಗಳ ಸದ್ದು. ಬೈತಾನು ಇದಾರೆ. ಹೋಗಿ ನೋಡಿದ್ರೆ ಕ್ರಿಕೆಟ್ ಅಡ್ತ ಇರೋದೇ ಪಕ್ಕದ ರೂಮಲ್ಲಿ. ಪರೀಕ್ಷೆ ಇದ್ದಾಗ ಕ್ರಿಕೆಟ್ ಯಾಕೆ ಆಡ್ತೀರಿ ಅಂತ ಮತ್ತೊಬ್ಬ ಗಲಾಟೆ ಮಾಡ್ತಿದ್ದ. ಇಂಥ ಸರಿರಾತ್ರಿಯ ಸರಿ ಹೊತ್ತಲ್ಲಿ ಕ್ರಿಕೆಟ್ ಆಡೋದು ಸರಿಯಿಲ್ಲ ಅನ್ನೋದೇ..! ಓದೋ ಮಹಾಶಯ ಹಾಸ್ಟೆಲ್ ಗೆ ಯಾಕೆ ಸೇರಿದ್ನೋ..! ಅಂತೂ ಆ ಗಲಾಟೆ ಬಿಡಿಸಿ ನಾವು ಒಂದೆರಡು ಮ್ಯಾಚ್ ನ ಮಟ್ಟಿಗೆ ಆಡೇ ಬಿಡುವ ಹುಮ್ಮಸ್ಸು. ಸರಿ.. ಆಡಿದ್ದು ಆಯ್ತು. ಸಮಯ ರಾತ್ರಿಯ ೩ ಗಂಟೆ.ಈಗ್ಲಾದ್ರೂ ಓದೋಣ ಅಂತ ಕೂತರೆ ಅಮ್ಮನ ಮಾತುಗಳು ನೆನಪಿಗೆ ಬಂದವು. ಮಗನೆ ತುಂಬ ನಿದ್ದೆಗೆಟ್ಟು ಓಡಬೇಡ ಎಂಬ ಕರುಳಿನ ಕೂಗು. ಇನ್ನೂ ಓದಲಾದೀತೇ ಅಮ್ಮನ ಮಾತನ್ನೂ ಮೀರಿ..? ಒಂದೆರದೆ ಗಳಿಗೆಯಲ್ಲಿ ನಿದ್ರಾದೇವಿಯ ಮಡಿಲು ಹೊಕ್ಕಿ ಆಯ್ತು. ಬೆಳಗ್ಗೆ ಎದ್ದು ಓದಿರೋ ಸಂಭವ ನಿಮಗೆ ಈಗಲೇ ಅರ್ಥ ಆಗಿರಬೇಕು. ಇಷ್ಟೆಲ್ಲಾ ಆಗಿಯೂ ನಾನೂ ಪಾಸಾದೆ ಅಂದ್ರೆ ನೀವು ನಂಬಲೇ ಬೇಕು.
ಕೈಯಿಗೂ ಬರಲಿಲ್ಲ.. ಬಾಯಿಗೂ ಬರಲಿಲ್ಲ..
ಪ್ಲಾಟ್ ಫಾರ್ಮ್ ನಲ್ಲಿ ವಿದ್ಯುತ್ ಸಂಚಾರ... ಕೂ ಎಂದು ಕೂಗ್ತಾ ಬರ್ತಾ ಇರೋ ರೈಲಿನೆಡೆಗೆ ಎಲ್ಲರ ಗಮನ... ಟ್ರೈನ್ ಖಾಲಿ ಇದೆ ಅಂತ ಅನ್ಸಿದ್ರು ಅದನ್ನ ಹತ್ತಿ ಸೀಟು ಹಿಡಿದು ಕೂರೋ ವರೆಗೂ ಯಾರಲ್ಲೂ ಸಮಾಧಾನ ಇಲ್ಲ. ಕಿಟಕಿ ಪಕ್ಕದ ಸೀಟು ಹಿಡಿಬೇಕು ಅನ್ನೋದು ಎಲ್ಲರ ಗುರಿ. ಹೆಂಗಸು- ಗಂಡಸು ಎಂಬ ಭೇದ ಇಲ್ದೆ ಎಲ್ಲರು ಸಮಾನ ಸ್ಪರ್ಧೆಯಿಂದ ಮುನ್ನುಗ್ಗಿ ಪಡೆಯಬಹುದಾದಂತ ಏಕೈಕ ಗುರಿ- ಕಿಟಕಿ ಪಕ್ಕದ ಸೀಟು. ಅಂತೆಯೇ ನಾನೂ ಮುನ್ನುಗ್ಗಿ, ಜಗ್ಗಾಡಿ, ಗುದ್ದಾಡಿ, ನುಗ್ಗಿ- ನುಸುಳಿ ಅಂತು ಇಂತೂ ವಿಂಡೋ ಸೀಟ್ ಹಿಡಿದೆ. ಅದೊಂಥರ ಯುದ್ದವನ್ನೇ ಗೆದ್ದ ಭಾವ. ಇಂಟರ್ ಸಿಟಿ ಎಕ್ಷ್ಪ್ರೆಸ್ನಲ್ಲಿ ಸೀಟು ಹಿಡಿಯೋದು ಅಂದ್ರೆ ಸುಮ್ನೆನಾ... ನನ್ನ ಸಣಕಲು ದೇಹದ ಬಗ್ಗೆ ನನಗೆ ಅಭಿಮಾನ ಮೂಡೋ ಏಕೈಕ ಘಳಿಗೆ ಅದು. ನನಗಂತೂ ಸೀಟು ಸಿಕ್ತು. ಪಕ್ಕದ ಸೀಟಿಗೆ ಬ್ಯಾಗ್ ಹಾಕಿ ಕೂತೆ, ನಮಗೆ ಇಷ್ಟವಾದವರು ಬಂದ್ರೆ ಕೂರಿಸಿಕೊಳ್ಳುವ ಅಂತ. ಮಧ್ಯ ವಯಸ್ಸಿನ ಹೆಂಡಸರು ಬಂದು ಕೂತ್ರೆ ಕೊತ್ತಂಬರಿಯಿಂದ ಹಿಡಿದು ಕಾದಂಬರಿ ವರೆಗೂ ಮಾತು, ಗಂಡಸರು ಬಂದ್ರೆ ಜಮೀನಿನಲ್ಲಿ ತೆಗಿಯೋ ಬಾವಿಯಿಂದ ಹಿಡಿದು ಬರಾಕ್ ಒಬಾಮ ವರೆಗೂ ಮಾತು. ಅವರ ಮಾತು ಕೇಳಿ ಕೇಳಿ ೪ ಕ್ರೋಸಿನ್ ಸಾಕಾಗಲ್ಲ ತಲೆನೋವು ಹೋಗ್ಲಿಕ್ಕೆ. ಮಧ್ಯೆ ಮಧ್ಯೆ ಹ್ಮ್ ಅನ್ನೋ ಕರ್ಮ ಬೇರೆ. ಹಾಗಾಗಿ ಕಾಲೇಜಿಗೆ ಹೋಗೋ ವಯಸ್ಸಿನವರಿಗೆ ಸೀಟು ಬಿಡಬೇಕು ಅನ್ನೋದು ನನ್ನ ಇಚ್ಛೆ, ಅದರಲ್ಲೂ ಹುಡುಗಿಯರಿಗೆ ಮೊದಲ ಆಧ್ಯತೆ. ಅದೆಷ್ಟು ಬಾರಿ ದೇವರ ಹತ್ರ ಬೇಡಿಕೊಂದಿದ್ನೋ ಪಕ್ಕದಲ್ಲಿ ಹುಡುಗಿನ ಕೂರ್ಸು ಅಂತ. ಆದರು ಇಷ್ಟು ದಿನ ೪ ಕ್ರೋಸಿನ್ ನುಂಗೋ ಭಾಗ್ಯವೇ ನನ್ನದಾಗಿತ್ತು. ಈ ಹೆಂಗಸರು ಅಂದ್ರೆ ನಂಗೆ ಎಲ್ಲಿಲ್ಲದ ಕುತೂಹಲ, ಅದೊಂದು ಅಚ್ಚರಿಯ ಪೆಟ್ಟಿಗೆ. ಅವರಿಗೆ ಮಾತಾಡುವ ವಿಷಯವೇ ಮುಗಿಯಲ್ವೋ ಅಥವಾ ವಿಷಯವೇ ಇಲ್ದೆ ಮಾತಾಡುವ ಕಲೆ ಕರಗತವೋ ಗೊತ್ತಿಲ್ಲ. ಅವರ ಮಾತನ್ನೆಲ್ಲ ಕೇಳಿ ಕೇಳಿ ಅದೆಷ್ಟು ಸಲ ಕಿಟಕಿ ಪಕ್ಕದ ಸೀಟಿನಂತ ಸೀಟನ್ನೇ ಬಿಟ್ಟು ಬಾಗಿಲ ಬಳಿ ಜೋತು ಬಿದ್ದಿದ್ನೋ ಆ ದೇವರಿಗೆ ಗೊತ್ತು. ಹಾಗಾಗಿ ನನ್ನ ಪಕ್ಕದ ಸೀಟು ಕಾಲೇಜು ಕನ್ಯೆಗೆ ಮೀಸಲು. ಆದರು ಪ್ರತಿ ಬಾರಿ ಬೇರೆಯವರ ದಬ್ಬಾಳಿಕೆಯ ಫಲವಾಗಿ ಅತಿಕ್ರಮ ಪ್ರವೇಶಕ್ಕೆ ಒಳಗಾಗ್ತಾ ಇತ್ತು ಪಕ್ಕದ ಸೀಟು. ಆದ್ರೆ ಇವತ್ತು ಅದ್ಯಾವ ಹೆಣ್ಣು ದೇವತೆಗೆ ನನ್ನ ಮೊರೆ ಮುಟ್ಟಿತ್ತೋ ಕಾಣೆ, ಒಬ್ಬಳು ಲಲನಾಮಣಿಯ ಪ್ರವೇಶ ನಾನಿದ್ದ ಬೋಗಿಗೆ ಆಯ್ತು. ಅವಳನ್ನ ನೋಡಿದ್ದೇ ತಡ ನನ್ನ ಬ್ಯಾಗ್ ತನ್ನ ಜಾಗದಿಂದ ಸರಿದು ನನ್ನ ತೊಡೆಯ ಮೇಲೇ ಬೆಚ್ಚಗೆ ಕುಳಿತುಕೊಳ್ತು. ಆ ಸುಂದರಿಗೆ ಸೀಟು ಕೊಟ್ಟ ಕೂಡ್ಲೇ ಅಲ್ಲಿ ಇಲ್ಲಿ ನೇತಾಡ್ತಾ ಇದ್ದ ಹತ್ತಾರು ಗಂಡಸರ ಕೆಂಗಣ್ಣಿನ ನೋಟವನ್ನ ಎದುರಿಸಬೇಕಾಗಿ ಬಂದದ್ದು, ಹಾಗೆ ಎದುರಿಸಿಯೂ 'ಆಕೆ'ಗೆ ಸೀಟು ಕೊಟ್ಟದ್ದು ನನಗೆ ಆಕೆಯ ಮೇಲಿದ್ದ ಕಾಳಜಿಯನ್ನ ತೋರ್ಸತ್ತೆ. ಅವಳಾದರು ಅದೆಷ್ಟು ಚನಾಗಿ ಇದ್ಲು ಅಂತೀರಾ... ಕೈ ತೊಳೆದು ಮುಟ್ಟಬೇಕು ಅಂತಾರಲ್ಲ ಹಾಗಿದ್ಲು ಕಂಡ್ರಿ. ಕೈಯನ್ನೇನೋ ತೊಳೆದಿದ್ದೆ, ಆದ್ರೆ ಮುಟ್ಟೋ ಧೈರ್ಯ ಇರ್ಲಿಲ್ಲ ಅಷ್ಟೇ. ನಕ್ಕರೆ ಗುಳಿ ಬೀಳೋ ಕೆನ್ನೆ... ಅಗಲಗಳ ಕಣ್ಣುಗಳು.... ಆಗಾಗ ಮುಖದ ಮೇಲೇ ಬೀಳೋ ಕೂದಲು... ಹಾಲಿನಂತ ಬಣ್ಣ... ಒಟ್ಟಿನಲ್ಲಿ ಒಂದೇ ನೋಟಕ್ಕೆ ಹೃದಯದ ಕದ ತಟ್ಟಿಬಿಟ್ಟಿದ್ಲು ಕಂಡ್ರಿ. ರೈಲು ಹತ್ತಿದ ಕೂಡ್ಲೆ ನಿದ್ದೆ ಮಾಡೋದು ನನ್ನ ವೀಕ್ ನೆಸ್ಸು. ಕಣ್ಣು ಎಳೀತಿತ್ತು. ಆದ್ರು ಪಕ್ಕದ ಸುಂದರಿ ಮಾತಾಡ್ತಾಳೆನೋ ಅಂತ ನಿದ್ದೇನ ಅದುಮಿಟ್ಟಿದ್ದೆ. ಎಷ್ಟು ಬಾರಿ ಅವಳನ್ನ ಕದ್ದು ಕದ್ದು ನೋಡಿದ್ರೂ ಆಕೆಯದು ದಿವ್ಯ ನಿರ್ಲಕ್ಷ್ಯ. ಅದ್ಯಾವ ಘಳಿಗೆಯಲ್ಲೋ ನಿದ್ದೆಗೆ ಜಾರಿದ್ದೆ. ರೈಲು ಹೊಳೆ ನರಸೀಪುರದಲ್ಲಿ ನಿಂತಾಗ ಎಚ್ಚರವಾಯ್ತು. ಪಕ್ಕದ ಸುಂದರಿ ಹಾಗೆ ಕೂತಿದ್ಲು. ತೀರಾ ಸಭ್ಯಸ್ತನಾದ ನನಗೆ ಅವಳನ್ನ ಮಾತಾಡಿಸೋಕೆ ನಾಚಿಕೆ, ಅಥವಾ ಧೈರ್ಯ ಸಾಕಗ್ಲಿಲ್ವೋ ಗೊತ್ತಿಲ್ಲ. ಇಂಟರ್ ಸಿಟಿ ಎಕ್ಷ್ಪ್ರೆಸ್ ಯಕಶ್ಚಿತ್ ಪ್ಯಾಸೆಂಜೆರ್ ಟ್ರೈನ್ ಗೆ ಕಾಯ್ತಾ ಇತ್ತು. ಎದುರಿನ ಸೀಟಿನಲ್ಲಿದ್ದ ಎಲ್ಲರ ದೃಷ್ಟಿ ಪಕ್ಕದ ಸುಂದರಿ ಮೇಲೇ ನೆಟ್ಟಿದ್ದರಿಂದ ಅವಳು ನಾನಂದುಕೊಂಡಿದ್ದಕ್ಕಿಂತ ಚೆನ್ನಾಗೆ ಇದ್ದಾಳೆ ಅಂತ ಗೊತ್ತಾಯ್ತು. ತಿರುಗಿ ಅವಳನ್ನ ನೋಡೋ ಧೈರ್ಯ ಇಲ್ಲ... ಎಷ್ಟಂದ್ರು ಸಭ್ಯಸ್ತ. ನೋಡೋ ತವಕ, ಮಾತಾಡೋ ತುಡಿತ ಎರಡನ್ನು ಇಟ್ಕೊಂಡು ಅರಸೀಕೆರೆವರೆಗೂ ಕುಳಿತಿದ್ದೆ. ಶಿವಮೊಗ್ಗದಲ್ಲಿ ಅವಳು ಇಳಿತಾಳೆ ಅಂತ ತಿಳಿದಿತ್ತು. ಇನ್ನೂ ಮೂರು ಗಂಟೆಗಳ ಕಾಲಾವಕಾಶ ಮಾತಾಡಿಸೋಕೆ. ಬೇರೆಯವರೆಲ್ಲ ಮಾತಾಡಿ ಮಾತಾಡಿ ಹಿಂಸಿಸ್ತಾ ಇದ್ರೆ ಇವಳು ಮಾತ್ರ ಮೌನವಾಗೇ ಕೊಲ್ತಿದ್ಲು. ಅವಳ ಕೂದಲು ಮುಖದ ಮೇಲೆ ಬರಲು ಹಠ ಮಾಡ್ತಿದ್ರು ಅವಳು ಬಲವಂತವಾಗಿ ಅದನ್ನ ಹಿಂದೆ ಹಾಕ್ತಿದ್ಲು. ಅವಳು ಹಾಗೆ ಕೂದಲನ್ನ ಹಿಂದೆ ಹಾಕುವ ಪರಿ ನೋಡೋದೇ ಕಣ್ಣಿಗೆ ಹಬ್ಬ. ಈಗ ನಿದ್ದೆಗೆ ಜಾರುವ ಸರದಿ ಅವಳದ್ದು. ಅವಳು ನಿದ್ದೆ ಮಾಡುವಾಗ ಸರಿಯಾಗಿ ನೋಡಿದೆ ಅವಳನ್ನ. ನಾನಂದುಕೊಂಡಿದ್ದಕ್ಕಿಂತ ಸುಂದರವಾಗೆ ಇದ್ಲು.. ಇನ್ನೂ ನೋಡ್ತಾನೆ ಇರಬೇಕು ಅನ್ನೋ ಅಷ್ಟು.
ಅದೆಂಥ ನಿದ್ರೆನೋ ಅವಳದ್ದು...! ಶಿವಮೊಗ್ಗದ ಹತ್ರ ಬರೋವರೆಗೂ ಮಲಗೆ ಇದ್ಲು. ನಂತರ ಎದ್ದು ತನ್ನ ಲಗೇಜ್ ತಗೊಂಡು ಹೋಗಿ ಬಾಗಿಲ ಬಳಿ ನಿಂತಳು . ಮಾತಾಡ್ಸೋ ಆಸೆಗೆ ತಿಲಾಂಜಲಿ ಬಿಟ್ಟು ಸುಮ್ನೆ ಕೂತೆ. ಅವಳು ಇಳಿದು ಹೋದ ಮೇಲೆ ಅನಾಥನಂಥಾಗಿದ್ದ ನಾನು ಅವಳ ನೆನೆಪಲ್ಲೆ ಸಾಗರ ಸೇರಿದೆ. ತೀರ ಬಂದವರೆಲ್ಲ ನಮ್ಮವರಲ್ಲ, ನಮ್ಮವರೆಲ್ಲ ಕೊನೆ ತನಕ ನಮ್ಮ ಜೊತೆ ಇರ್ತಾರೆ ಅನ್ನೋಕಾಗಲ್ಲ. ಬದುಕ ಪಯಣದಲಿ ಬಂದವರೆಷ್ಟೋ , ತಪ್ಪಿಹೋದವರೆಷ್ಟೋ, ಎಲ್ಲರು ಅವರವರ ನಿಲ್ದಾಣ ಬಂದಾಗ ಪಯಣ ಕೊನೆಗಳಿಸಲೇಬೇಕು. ನಮ್ಮದು ಮುಗಿಯುವವರೆಗೆ ಮುಂದುವರಿಯಲೇಬೇಕು .
ಈಗ ದೇವರಲ್ಲಿ ನನ್ನ ಬೇಡಿಕೆ ಬೇರೆಯಾಗಿದೆ. ನನ್ನ ಪಕ್ಕದ ಸೀಟಿನಲ್ಲಿ ಯಾರಿನ್ನಾದ್ರು ಕೂರ್ಸಪ್ಪ ದೇವ್ರೇ.. ಆದ್ರೆ ನನ್ನ ಎದುರಿನ ಸೀಟ್ ನಲ್ಲಿ ಮಾತ್ರ ಇವಳಂಥ ಸುಂದರಿನೆ ಕೂರ್ಸು.
ಅಮ್ಮ ಹೇಳುತ್ತಿದ್ದ ಕಥೆ
ಒಂದಲ್ಲಾ ಒಂದು ಊರಲ್ಲಿ ಒಬ್ಬ ಇದ್ನಂತೆ. ಅವನ ಮನೆಯ ಮುಂದೆ ಒಂದು ಹಲಸಿನ ಮರ ಇತ್ತಂತೆ. ಆಗಿನ ಕಾಲದಲ್ಲಿ ಹಲಸಿನ ಹಣ್ಣಿಗೆ ಮುಳ್ಳು ಇರಲಿಲ್ವಂತೆ. ಒಂದಿನ ಒದ್ದ ಭಿಕ್ಷುಕ ಬಂದು ಆ ಮನೆಯ ಯಜಮಾನನ ಹತ್ರ ಹಣ್ಣು ಕೇಳಿದನಂತೆ. ಅವ ಕೊಡ್ಲಿಲ್ವಂತೆ. ಭಿಕ್ಷುಕನಿಗೆ ಸಿಟ್ಟು ಬಂದು ಹಣ್ಣಿನ ತುಂಬಾ ಮುಳ್ಳು ಬರಲಿ ಅಂತ ಶಾಪ ಕೊಟ್ನಂತೆ. ಅವತ್ತಿಂದ ಹಲಸಿನ ಹಣ್ಣಿನ ಮೇಲೆ ಮುಳ್ಳು ಬಂತಂತೆ. ಶಿವ ಆ ಯಜಮಾನನನ್ನ ಪರೀಕ್ಷೆ ಮಾಡಬೇಕು ಅಂತ ಭಿಕ್ಷುಕನ ರೂಪದಲ್ಲಿ ಬಂದಿದ್ನಂತೆ. ಅಮ್ಮ ಹೇಳುತ್ತಿದ್ದ ಕಥೆ ಈಗಲೂ ಕಣ್ಣಿಗೆ ಕಟ್ಟೋ ಹಾಗಿದೆ. ಪ್ರತಿ ದಿನ ಅಮ್ಮ ಕಥೆ ಹೇಳಲೇ ಬೇಕು, ನಾನು ಕಥೆ ಕೇಳ್ತಾ ಮಲಗಲೇ ಬೇಕು. ಎಷ್ಟೋ ಸಲ ಅರ್ಧ ಕಥೆಗೆ ನಿದ್ದೆ ಬರ್ತಿದಿದ್ದೂ ಉಂಟು. ಮರುದಿನ ಬೆಳಗ್ಗೆ ಮತ್ತೆ ಆ ಕಥೆಯ ಮುಂದುವರಿದ ಭಾಗ ಹೇಳು ಅಂತ ಪೀಡಿಸ್ತಿದ್ದೆ. ಅಮ್ಮನ ಕಥೆಯಲ್ಲಿ ಮೊಲ ಮಾತಾಡ್ತಿತ್ತು, ಕಲ್ಲಿನ ಬಸವ ಎದ್ದು ನಿಲ್ತಾ ಇತ್ತು, ಸೂರ್ಯಂಗೇ ಕೋಪ ಬರ್ತಿತ್ತು, ಹೂವು ಹುಡುಗಿಯಾಗ್ತಿತ್ತು, ಹುಡುಗಿ ಹಾವಾಗ್ತಿದ್ಲು, ನರಿ ಮೋಸ ಮಾಡ್ತಿತ್ತು. ಎಂಥಾ ಅದ್ಬುತ ಕಲ್ಪನೆಗಳು. ಪ್ರಪಂಚದಲ್ಲಿರೋ ಎಲ್ಲಾ ನಿರ್ಜೀವ ವಸ್ತುಗಳಿಗೂ ಜೀವ ತುಂಬುವ ಶಕ್ತಿ ಅಮ್ಮನಿಗಿತ್ತು. ಹತ್ತನೇ ಕ್ಲಾಸ್ ಫೇಲಾದ ಅಮ್ಮ ಕಥೆಗಳಲ್ಲಿ ಒಂದು ಅದ್ಬುತ ಲೋಕವನ್ನೇ ತೋರಿಸ್ತಿದ್ಲು. ಅದೆಷ್ಟೋ ಪ್ರಶ್ನೆಗಳಿಗೆ ಅಮ್ಮನ ಕಥೆಗಳಲ್ಲಿ ಉತ್ತರ ಇರ್ತ ಇತ್ತು. ಅಮ್ಮ ತೀರಾ ಕಲಿತವಳಲ್ಲ, ಹಾಗೆಂದು ಅವಳೇನು ಅವಿದ್ಯಾವಂತಳಲ್ಲ. ಅವಳ ಕಥೆಗಳಲ್ಲಿ ವೈಚಾರಿಕತೆಯಿತ್ತು, ಅನುಭವವಿತ್ತು, ನೀತಿಯಿತ್ತು ಹಾಗೂ ಮುಖ್ಯವಾಗಿ , ಹೇಳೋ ಅವಳಲ್ಲಿ, ಕೇಳೋ ನನ್ನಲ್ಲಿ ಖುಷಿ ಇತ್ತು. ಅಮ್ಮನ ಕಥೆಗೆ ಎಂಥದ್ದೆಲ್ಲ ವಸ್ತುವಾಗ್ತಿತ್ತು. ಕಾಗೆಯ ಬಾಯಾರಿಕೆ, ನರಿಯ ಕುತಂತ್ರ, ಮಂತ್ರಿಯ ನಿಷ್ಠೆ, ಬಾನಂಗಳದ ಚಂದಮಾಮ, ಹೊಂಡದ ಕಪ್ಪೆ ಎಲ್ಲವೂ ವಸ್ತುಗಳೇ. ಪಾತಾಳದಿಂದ ನಾಗಕನ್ಯೆಯರನ್ನು ಕರೆತರ್ತಿದ್ಲು, ಗಂಧರ್ವಲೋಕದಿಂದ ಗಂಧರ್ವರು ಹಾಡು ಹೇಳ್ತಾಯಿದ್ರು, ಸ್ವರ್ಗದಿಂದ ದೇವತೆಗಳು ಬರ್ತಿದ್ರು, ಅದ್ಯಾವುದೋ ಲೋಕದಿಂದ ರಾಕ್ಷಸರುಗಳನ್ನೇ ಎಳೆದು ತಂದು ಕಣ್ಣ ಮುಂದೆ ಇಡ್ತಾ ಇದ್ಲು. ಅಮ್ಮ ಪುಸ್ತಕ ಓದಿ ಕಥೆ ಕಲಿತವಳಲ್ಲ. ಕಥೆ ಹೇಳಲು ಅಮ್ಮನಿಗೆ ಟಿವಿಯನ್ನೂ ನೋಡಬೇಕಿಲ್ಲ. ಆಕೆಗೆ ಕಥೆ ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು, ಮಾತಾಡುವಷ್ಟೇ ಸರಾಗ. ಆಕೆಯ ಉಸಿರಲ್ಲಿ ಕಥೆಯಿತ್ತು, ಆ ಕಥೆಗಳಿಗೂ ಜೀವ ಇತ್ತು. ಆಕೆಗೆ ಕಥೆ ಹೇಳುವ ಕಲೆ ತಿಳಿದಿತ್ತು. ದೆವ್ವ, ಭೂತ, ಪಿಶಾಚಿಗಳ ಕಥೆ ಹೇಳಿ ಹೆದರಿಸ್ತಿದ್ಲು , ಮಾಯಾಲೋಕದ ಕಿನ್ನರರ ಕಥೆ ಹೇಳಿ ಮೋಡಿ ಮಾಡ್ತಿದ್ಲು, ದೇವರ ಕಥೆ ಹೇಳಿ ಭಕ್ತಿ ಹುಟ್ಟಿಸ್ತಿದ್ಲು, ಅದ್ಯಾವುದೋ ಕಥೆ ಹೇಳಿ ನಗುಸ್ತಿದ್ಲು, ಅಳುಸ್ತಿದ್ಲು. ನಮ್ಮನ್ನ ಕಥೆಯ ಒಂದು ಭಾಗವನ್ನಾಗಿಸಿಬಿಡ್ತಿದ್ಲು. ನಮ್ಮ ನಿಮ್ಮೆಲ್ಲರ ಇಮ್ಯಾಜಿನೇಶನ್ ಪವರ್ ಇದ್ಯಲಾ ಅದರ ಮೂಲ ಬಹುಶಃ ನಾವು ಹಿಂದೆಂದೋ ಕೇಳಿದ ಕಥೆ. ಇದು ನನ್ನೊಬ್ಬ ಅಮ್ಮನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ತಾಯಿಯೂ ಕಥೆಗಳ ಗುಚ್ಛ. ಅವರಲ್ಲಿ ಹೇಳಿದಷ್ಟೂ ಕಥೆಯಿದೆ. ಅವರೊಂದು ಕಥೆಗಳ ಖಜಾನೆ. ಅವರಲ್ಲೊಬ್ಬ ಅದ್ಬುತ ಕಥೆಗಾರ ಕುಳಿತುಬಿಟ್ಟಿದ್ದಾನೆ. ಆದರೆ... ಈಗ ನಾವು..? ನಮಗೆ ಸಿನಿಮಾದ ಕಥೆಬಿಟ್ಟು ಬೇರೆ ಕಥೆ ಗೊತ್ತಿಲ್ಲ. ಕಥೆಗಳ ಸೃಜನಶೀಲತೆ ನಮ್ಮಲ್ಲಿಲ್ಲ. ಲವ್ ಸ್ಟೋರಿ , ಆಕ್ಷನ್ ಫಿಲಂ ಗಳ ಆಚೆಗೆ ಬೇರೆಯದೇ ಆದ, ಒಂದಷ್ಟು ನೀತಿಯಿರುವ, ನಮ್ಮಲ್ಲೊಂದು ವೈಚಾರಿಕತೆ ಮೂಡಿಸುವ ಕಥೆಗಳ ಕಲ್ಪನೆಯೂ ನಮಗೀಗ ಬರಲಿಕ್ಕಿಲ್ಲ. ಕಥೆ ಹೇಳೋ ಕಲೆ ನಮ್ಮಲ್ಲಿಲ್ಲ. ಹೇಳೋ ಕಥೆ ಕೇಳುವ ವ್ಯವಧಾನವೂ ಬಹುಶಃ ಈಗ ನಮಗೆ ಹಾಗು ಈಗಿನ ಚಿಕ್ಕ ಮಕ್ಕಳಿಗೆ ಇರಲಿಕ್ಕಿಲ್ಲ. ಟಿವಿ ಸೀರಿಯಲ್ ಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಗೇಮ್ ಗಳಲ್ಲಿ, ಸಿನಿಮಾ ಹಾಡುಗಳಲ್ಲಿ ಕಥೆ ಕಾಣೆಯಾಗಿದೆ. ಅಮ್ಮನ ಕಥೆಗಳಲ್ಲಿ ಅನ್ಯಾಯ ಇರ್ತಾ ಇರ್ಲಿಲ್ಲ, ರಕ್ತ ಇರ್ತಿರಲಿಲ್ಲ, ಮುಖವಾಡ ಇರ್ತಿರಲಿಲ್ಲ ಅಥವಾ ಅವೆಲ್ಲ ಇದ್ರೂ ಕೊನೆಗೊಂದು ಹ್ಯಾಪಿ ಎಂಡಿಂಗ್ ಇತ್ತು, ನೈತಿಕತೆ ಮರೆತ ಎಲ್ಲರಿಗೂ ಶಿಕ್ಷೆ ಆಗ್ತಾ ಇತ್ತು. ನಮ್ಮ ತಲೆಯೊಳಗೆ ಅಂತಹ ನೈತಿಕತೆ ಮೆರೆಯುವ ಒಂದೇ ಒಂದು ಸ್ವಂತ ಕಥೆ ಬರಲೂ ಸಾಧ್ಯವಿಲ್ಲ ಹಾಗು ಹಿಂದೆಂದೋ ಕೇಳಿದ ಕಥೆಯನ್ನ ಅಮ್ಮ ಹೇಳಿದಷ್ಟೇ ರಸವತ್ತಾಗಿ ಹೇಳುವ ಕಲೆಯೂ ನಮಗೆ ಗೊತ್ತಿಲ್ಲ. ಕಥೆಯ ಕೊಂಡಿ ಕಳಚುತ್ತಾ ಇದೆ. ಸಿಕ್ಕಾಪಟ್ಟೆ ಬಿಜಿಯಾಗಿರುವ ಅಪ್ಪ ಹಾಗು ಟಿವಿ ಸೀರಿಯಲ್ಲುಗಳಲ್ಲೇ ಮುಳುಗಿ ಹೋಗಿರುವ ಅಮ್ಮ... ಇವರಿಬ್ಬರ ನಡುವೆ ಕಾಣೆಯಾಗುತ್ತಿರುವ ಕಥೆ.ಹೀಗೆಯೇ ಆದಲ್ಲಿ ಮುಂದೊಂದು ದಿನ ವಿಶ್ವವಿದ್ಯಾನಿಲಯಗಳು ಕಥೆ ಹೇಳುವುದು ಕಲಿಸುವ ಕೋರ್ಸು ಪ್ರಾರಭಿಸಬೇಕಾದೀತು. ನಾವೇ ನಮ್ಮ ಯಾಂತ್ರಿಕ ಜೀವನ ಶೈಲಿಯಲ್ಲಿ ಕೊಂದ ಕಥೆಗಾರ ಮತ್ತೆ ಹುಟ್ಟಿ ಬರಲಿ, ಇಂದಿನ ಮಕ್ಕಳು ಹೋಂ ವರ್ಕ್ , ಟ್ಯೂಶನ್ ಗಳ ಒತ್ತಡದಿಂದ ಹೊರಬಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ರಿಸಲಿ.
ನಾನ್ಯಾರೆಂದರೆ ನಾನ್ಯಾರು..?
ನಿದ್ದೆ ಮಂಪರಿನಲ್ಲಿದ್ದ ನನಗೆ "ನಾನ್ಯಾರು... ನಾನ್ಯಾಕೆ ಇಲ್ಲಿ ಇದೀನಿ.... ಭೂಮಿಯ ಮೇಲೇ ನನ್ನ ಅಸ್ತಿತ್ವ ಏನು...? ಎಂಬಂಥ ಪ್ರಶ್ನೆಗಳು ಕಾಡುತ್ತಿತ್ತು. ತೀರಾ ಆಧ್ಯಾತ್ಮದವರೆಗೂ ಕರೆದೊಯ್ಯಬಲ್ಲಂಥ ಇಂಥ ಪ್ರಶ್ನೆಗಳು ಸಧ್ಯಕ್ಕೆ ನನ್ನನ್ನು ನಿದ್ದೆಯಿಂದ ಎಬ್ಬಿಸಿತ್ತು. ಮಧ್ಯಾಹ್ನ ಉಟ ಮಾಡಿ ಸಂಜೆಯವರೆಗೂ ಮಲಗಿಕೊಳ್ಳುವಂಥ ಖಯಾಲಿ ಇಂದು ನಿನ್ನೆಯದಲ್ಲ. ಆದರೆ, ಹೀಗೆ ನನ್ನ ಜೀವನದ ಉದ್ದೇಶಗಳ ಬಗೆಗಿನ ಪ್ರಶ್ನೆ ತೀರಾ ಇತ್ತೀಚಿನದು. ನಾನೆಂಬ ನಾನು ಕೇವಲ ಅಪ್ಪ-ಅಮ್ಮನ ಮಗ.. ಅಜ್ಜ-ಅಜ್ಜಿಯ ಮೊಮ್ಮಗ.. ಅಣ್ಣನ ತಮ್ಮ... ತಂಗಿಯ ಅಣ್ಣ... ಹೀಗೆ, ಇವಷ್ಟೇ ಉತ್ತರಗಳು ನನ್ನ ಬಳಿ, ನಾನ್ಯಾರೆಂದರೆ. ಯಾರಾದ್ರು ನನ್ನನ್ನು 'ನೀನ್ಯಾರು..?' ಎಂದು ಕೇಳಿದ್ರೆ, ಇಂಥ ಊರಿನವನಾದ ನಾನು ಇಂಥವರ ಮೊಮ್ಮಗನಾಗಿದ್ದೇನೆ, ಇಂಥವರ ಮಗನಾದ ನನ್ನ ಹೆಸರು ಇಂಥದ್ದು... ಇಷ್ಟು ಮಾತ್ರ ನನ್ನ ಬಗ್ಗೆ ನನಗೆ ತಿಳಿದಿದ್ದ ವಿವರಗಳು. ನಿಜ ಅಂದ್ರೆ, 'ನಾನ್ಯಾರು' ಎಂಬ ಯಾರದೋ ಪ್ರಶ್ನೆಗೆ ಇಷ್ಟು ವಿವರಗಳು ಸಾಕು. ಆದ್ರೆ ನನ್ನಲ್ಲೇ ಈ ಪ್ರಶ್ನೆಗಳು ಹುಟ್ಟಿದ್ರೆ...? ಹುಟ್ಟಿತ್ತು...! ನಾನು ಇಂಥ ಊರಿನವನು... ಇಂಥವರ ಮಗ ಎಂಬಷ್ಟೇ ಉತ್ತರಗಳು ತೃಪ್ತಿ ನೀಡಲಿಲ್ಲ. ಊರು, ಅಜ್ಜ, ಅಜ್ಜಿ, ಅಪ್ಪ, ಅಮ್ಮ ಹೀಗೆ ಯಾರಾದರೊಬ್ಬರ/ ಯಾಹುದಾದರೊಂದರ ರೆಫೆರೆನ್ಸೆ ಬೇಕು, ನಾನ್ಯಾರು ಎಂಬ ಪ್ರಶ್ನೆಯ ಉತ್ತರಕ್ಕೆ. ಯಾರೊಬ್ಬರ ರೆಫೆರೆನ್ಸೆ ಕೂಡ ಇಲ್ಲದೆ 'ನಾನ್ಯಾರು' ಅಂತ ಹೇಳಲಿಕ್ಕೆ ಸಾಧ್ಯವ... ಜೀವನಕ್ಕೊಂದು ಉದ್ದೇಶ ಇದ್ಯಾ...? ಇದು ಇವತ್ತು ನಿದ್ದೆ ಮಂಪರಿನಲ್ಲಿದ್ದಾಗಿನ ಪ್ರಶ್ನೆಯಾಗಿತ್ತು. ಎದ್ದು ಸೀದಾ ಬಚ್ಚಲ ಮನೆಗೆ ಹೋಗಿ ಮುಖ ತೊಳೆಯತೊಡಗಿಗೆ. ನನ್ನದೇ ಪ್ರಶ್ನೆಯ ಉತ್ತರಕ್ಕಾಗಿ ಯಾರನ್ನು ಕೇಳೋದು.. ಬಚ್ಚಲ ಮನೆಯ ಹಂಡೆ, ನೀರು, ಚೊಂಬು, ಬಕೆಟ್ ಗಳಿಗೆ ಗೊತ್ತಿರಲಿಕ್ಕಿಲ್ಲ. ಬಚ್ಚಲ ಮನೆಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರು ಬರ್ತಾರೆ. ಬಂದದ್ದು ಯಾರು ಎಂದು ಗುರುತಿಸುವ ಶಕ್ತಿ ಅವುಗಳಿಗಿಲ್ಲ. ಮುಖ ತೊಳೆದು ಸೀದಾ ಜಗಲಿಯತ್ತ ನಡೆದೆ, ಅಮ್ಮನನ್ನರಸಿ. ಮೋಡ ಮುಸುಕಿದ ಭಾನು ಮಳೆಯ ಸೂಚನೆ ಕೊಡುತ್ತಿತ್ತು. ಮಧ್ಯಾಹ್ನ ಊಟ ಮುಗಿಸಿ, ಒಂದೊಳ್ಳೆ ನಿದ್ದೆ ಮಾಡಿ ಎದ್ದು ಕಾಫಿ ಕುಡಿಯುಹುದು ಮಲೆನಾಡಿನ ವಾಡಿಕೆ. ಅಂತೆಯೇ ನಾನು ಎದ್ದಿದೀನಿ, ಕಾಫಿ ಕುಡಿಯಲು ತಯಾರು ಎಂಬ ಸಂದೇಶ ಹೊತ್ತು ಜಗಲಿಗೆ ಬಂದಿದ್ದೆ. ಟಿವಿ ತನ್ನ ಪಾಡಿಗೆ ತಾನು ಉರಿಯುತ್ತಿತ್ತು... ಉರಿಯೋದೆ ತನ್ನ ಕೆಲಸವೆಂಬಂತೆ. ಮೆಘಾ ಸೀರಿಯಲ್ ಗಳ ಒಂದೊಂದು ಪಾತ್ರವಾಗಿಬಿಟ್ಟಿದ್ದ ಮನೆಯವರೆಲ್ಲ ಈ ದಿನ ತಮ್ಮ ಪಾತ್ರದಲ್ಲಿ ಮಗ್ನರಾಗಿರಲಿಲ್ಲ. ಪ್ರಪಂಚದ ಎಂಟನೆ ಅದ್ಭುತ ನೋಡಿದ ಭಾಗ್ಯ ನನ್ನದಾಗಿತ್ತು.... ಟಿವಿ ಅನಾಥವಾಗಿತ್ತು. ನನ್ನ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ನಾನೇ ನನಗೆ ಪ್ರಶ್ನೆಯಾಗಿದ್ದೆ. ಉತ್ತರ ಸಿಗಲಾರದ ಪ್ರಶ್ನೆಗಳೇ ಹೀಗೆ.. ಒಂದಷ್ಟು ದಿನ ಕೊರೆಯತ್ತೆ... ಕಾಡತ್ತೆ.. ಮರೆಯತ್ತೆ. ಮರೆಯೋಕೆ ಸ್ವಲ್ಪ ಸಮಯ ಬೇಕಾಗಿದ್ರಿಂದ ಈ ಪ್ರಶ್ನೆಗಳು ಕಾಡುತ್ತಿತ್ತು. ಕಾಫಿ ಬೀಳದ ಬಾಯಿ ಒಣಗುತ್ತಿತ್ತು. ಚಿಕ್ಕಮ್ಮನ ಧ್ವನಿ ಜಗಲಿಯ ಪಕ್ಕದಲ್ಲಿದ್ದ ರೂಮಿನಿಂದ ಬಂದಂತಾಯಿತು. ಹೆಂಗಸರ ಬೆಟಾಲಿಯನ್ ನ ಕಮಾನ್ಡೆರ್ ಚಿಕ್ಕಮ್ಮ. ಅವರ ಧ್ವನಿ ಬಂದತ್ತಲೇ ಹೊರಟೆ.. ಅಮ್ಮನೂ ಇರಬಹುದೆಂದು. ಕಪ್ಪಂಚಿನ ಬಿಳಿ ಸೀರೆಯನ್ನು ತಿರುಗಿಸಿ, ಮುರುಗಿಸಿ, ಮುತ್ತಿ ನೋಡಿ ಪರಿಶೀಲಿಸುತ್ತಿತ್ತು ಬೆಟಾಲಿಯನ್. ಮುಂದಿನ ತಿಂಗಳು ಇದ್ದ ಅಕ್ಕನ ಮದುವೆಗೆ ತಂದ ಸೀರೆ ಬೆಟಾಲಿಯನ್ ನ ಪರೀಕ್ಷೆಗೆ ಒಳಪಟ್ಟಿತ್ತು. ನನ್ನ ಬದುಕಿನ ಉದ್ದೇಶ ಏನು ಎಂಬುದು ಇನ್ನೂ ನನಗೆ ತಿಳಿಯದಾಗಿತ್ತು. ನನ್ನ ಅಸ್ತಿತ್ವ ಸೀರೆ ಇಂದ ಮುಚ್ಚಿತ್ತು. ನಾನು ಅಲ್ಲಿ ಇದ್ ದದ್ದನ್ನ ಇನ್ನೂ ಯಾರೂ ಗಮನಿಸಿರಲಿಲ್ಲ. ಬಹುಷಃ ಆ ಸೀರೆ ಚಿಕ್ಕಮ್ಮನಿಗೆ ಇಷ್ಟ ವಾಗಲಿಲ್ಲ ಅನ್ಸತ್ತೆ. ನಾಳೆ ಸೀರೆ ಬದಲಿಸುವ ಕುರಿತು ಚರ್ಚೆ ನಡೆಯುತ್ತಿತ್ತು. ಅಂತ ಒಂದು ಸೀರಿಯಸ್ ವಿಚಾರ ಚರ್ಚೆಯಿಂ ದ ಅಮ್ಮನನ್ನು ಹೊರತಂದು ಕಾಫಿ ಮಾಡಿಸೋ ದು ಅಸಾಧ್ಯ ಅಂತ ನನಗೆ ಅನುಭವದಿಂದ ಗೊತ್ತಿದೆ. ಸರಿ.. ನನ್ನ ಪ್ರಶ್ನೆಗಳಿಗೆ ಉತ್ತರ ಬೆಂಬತ್ತಿ ಹಿ ತ್ತಲ ಕದೆಯತ್ತ ನಡೆದೇ. ಮೋಡ, ಮಿಂಚು , ಗುಡುಗು... ಮಳೆ ಬರುವ ಮುನ್ಸೂಚನೆ. ಒಂದೆರಡು ಹನಿ ಬಿದ್ದ ಮೇಲೇ ಅಕ್ಕ ಓದಿ ಬಂದ್ಲು, ಒಣ ಹಾಕಿದ್ದ ಬಟ್ಟೆ ತೆಗಿಯಲು. ಅಲ್ಲಿದ್ದ ಎಲ್ಲ ಬಟ್ಟೆಯನ್ನು ತೆಗೆದು, ಬಾ ಇಲ್ಲಿ ಎಂದು ನನ್ನನ್ನ ಕರೆದ್ಲು. ಎರಡೂ ಹೆಗಲಿಗೆ ಹಿಡಿಯೋ ಅಷ್ಟು ಬಟ್ಟೆಯನ್ನ ನನ್ನ ಹೆಗಲಿಗೆ ಹಾಕಿ, ಉಳಿದ ಒಂದು ಕರ್ಚೀಪ್ ಹಿಡಿದು. ಹೊರಟೆ ಬಿಟ್ಲು. ನನ್ನ ಪ್ರಶ್ನೆಗೆ ಉತ್ತರ ಅರ್ಧ ಸಿಕ್ಕಂತಾಗಿ ನಾನೂ ಅವಳ ಹಿಂದೆ ಹೊರಟೆ. ಬಹುಷಃ ಮಳೆ ಬಂದಾಗ ಒಣ ಹಾಕಿದ ಬಟ್ಟೆ ತೆಗೆಯೋದು ನನ್ನ ಜೀವನದ ಉದ್ದೇಶ ಗಳಲ್ಲೊಂದಾಗಿರ ಬಹುದ... ಅಥವಾ... ಅದೊಂದೇ ಉದ್ದೇಶವ ನನ್ನ ಬದುಕಿಗೆ...!
ಟ್ರಿನ್ ಟ್ರಿನ್ ...
ಅದೆಷ್ಟು ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ನೋ ಗೊತ್ತಿಲ್ಲ. ಮಹಾ ನಗರದಲ್ಲಿ
ಒಂಟಿ ರೂಮು ಮಾಡಿ ಒಂಟಿಯಾಗಿದ್ದ ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ದ.
ಘಳಿಗೆಗೊಮ್ಮೆ ಫೋನ್ ನೋಡಿ ಬಡಬಡಿಸ್ಥ ಇದ್ದ. ಯಾರೋ ಕೇಳ ಬೇಕಾದ್ದೊಂದು ಯಾರಿಗೂ ಕೇಳದೆ
ಅಲೆ ಅಲೆಯಾಗಿ ಹೋಗಿ ಗಾಳಿಯಲ್ಲಿ ವಿಲೀನವಾಗುತ್ತಿತ್ತು. ಅಂತರಾಳದ ಮಾತು ಆತ್ಮಹತ್ಯೆ
ಮಾಡಿಕೊಳ್ಳುತ್ತಿದ್ವು. ಸತ್ತ ಪ್ರತಿ ಮಾತು ಒಂಟಿ ರೂಮಿನಲ್ಲಿ ಪ್ರತಿಧ್ವನಿಸುತ್ತಿದ್ವು.
ಕೇಳುವವರಿಲ್ಲದೆ ಕಮರಿ ಕಣ್ಮರೆಯಾಗುತ್ತಿದ್ವು. ಬಹುಶಃ ಅದೊಂದು ಫೋನ್ ಕಾಲ್ ಬಂದಿದ್ರೆ
ಮಾತು ಹಾಗು ಮನಸ್ಸು ಎರಡಕ್ಕೂ ಉಸಿರಿರುತ್ತಿತ್ತೇನೋ. ಮಹಾನಗರದಲ್ಲಿ ಯಾರಿಗೂ
ಸಮಯವಿರಲ್ಲಿಲ್ಲ ಮಾತಿನ ಹೆಣ ಹೊತ್ತು ಹಾಕಲು. ಕೊಳೆತು ನಾರುವ ಮನಸ್ಸಿಗೊಂದು ಸಾಬೂನು
ಹಾಕಲು. ಬೆಳಗ್ಗೆ ಅದೆಷ್ಟೋ ಹೊತ್ತಿಗೆ ಮೊಬೈಲ್ ರಿಂಗಿನುಸುತ್ತಿತ್ತು. ಆತುರದಿಂದ
ನೋಡಿದ್ರೆ ಹಾಳಾದ್ದು ಅಲಾರಂ. ಬಹುಶಃ ಅದೊಂದೇ ಅವನ ಮೊಬೈಲ್ ನಲ್ಲಿ ಬರುತ್ತಿದ್ದ ಶಬ್ದ.
ಯಾರಿಗೂ ನೆನಪಾಗದೆ ಇರೋದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯ ಹಿಂದೆ ಉತ್ತರ
ಸಿದ್ಧವಿರುತ್ತಿತ್ತು, ನೀನೆ ಇದ್ದೀಯಲ್ಲೋ, ಯಾರ ನೆನಪಿಗೂ ಬಾರದೆ. ಅದು ಸರಿಯೇ..
ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ತನ್ನದಲ್ಲ, ತನ್ನನ್ನು ನೆನಪಿಟ್ಟು ಕೊಳ್ಳಲು
ತನ್ನವರ್ಯಾರೂ ಇಲ್ಲ. ಹಾಗಾದ್ರೆ ತಾನು ಕಾಯ್ತಾ ಇರೋ ಫೋನ್ ಕಾಲ್ ಯಾರಿದ್ದು..? ತಾನು
ಕಾಯ್ತಾ ಇರೋದು ಯಾರಿಗಾಗಿ..? ತನ್ನವರೆನ್ನು ವವರು ಯಾರೂ ಈಗ ಬದುಕಿಲ್ವೋ..? ಅಥವಾ..
ಮೊದಲಿಂದಲೂ ಇರ್ಲಿಲ್ವೋ..? ಗೊಂದಲಕ್ಕೆ ಬಿದ್ದು ಬಿಡ್ತಾ ಇದ್ದ. ಇಷ್ಟು ದಿನ ಇದ್ದದ್ದು
ರಾತ್ರೆ ಬಿದ್ದ ಕನಸೇ..? ಆತನಿಗಂತೂ ಗೊತ್ತಿರ್ಲಿಲ್ಲ. ಅತ್ತಲಿನ ಧ್ವನಿ
ಉತ್ತರಿಸಬೇಕಿತ್ತು. ಉತ್ತರಿಸುತ್ತಿತ್ತೇನೋ.. ಧ್ವನಿ ಇದ್ದಿದ್ರೆ. ಬೆಳಗ್ಗೆ ಹೆಣ
ಹೊತ್ಕೊಂಡು ಕೆಲಸಕ್ಕೆ ಹೋಗೋದು, ಸಂಜೆಯವರೆಗೂ ತನ್ನ ಹೆಣದ ಮೇಲೆ ಅಕ್ಕಿ, ಸಕ್ಕರೆ,
ಬೇಳೆ-ಕಾಳುಗಳ ಮೂಟೆ ಸಾಗಿಸೋದು, ಸಂಜೆ ನೇತ್ರಾವತಿ ಬಾರ್ ನಲ್ಲಿ ಕರುಳಿನಿಂದ
ಗಂಟಲಿನವರೆಗೂ ತುಂಬುವಂತೆ ಕುಡಿಯೋದು, ತನ್ನದೇ ಹೆಣ ಹೊತ್ತು ರೂಮು ಸೇರೋದು.
ಘಳಿಗೆಗೊಮ್ಮೆ ಫೋನ್ ನೋಡೋದು. ಕುಡಿದ ಮಬ್ಬು ಇಳಿದರೆ ಮತ್ತೆ ಕೆಲಸಕ್ಕೆ, ಇಲ್ಲ ಅಂದ್ರೆ
ಒಂಟಿ ರೂಮಿನಲ್ಲಿ ಒಂಟಿಯಾಗಿ ಬರಬಹುದಾದ ಫೋನ್ ಗಾಗಿ ಕಾಯೋದು. ಇದಿಷ್ಟೇ ಆತನ ದಿನಚರಿ.
ಒಂದೆ ಒಂದು ಫೋನು ಬರಬೇಕಿತ್ತು, ಎಲ್ಲವನ್ನು ಹೇಳಿ ತಾನು ಖಾಲಿಯಾಗಿ ಬಿಡಬೇಕಿತ್ತು. ಇದೆ
ಕೊನೆ ಆಸೆ ಎಂಬಂತೆ ಬದುಕ್ತಾ ಇದ್ದ. ಸ್ಸಾರಿ.. ಉಸಿರಾಡ್ತಾ ಇದ್ದ ಅಷ್ಟೇ. ಪ್ರತಿ ದಿನ
ಕುಡಿದಾಗಲೂ ಒಂದೇ ಕನಸು ಬೀಳುತ್ತಿತ್ತು ಹಾಗು ಅದು ವಾಸ್ತವಕ್ಕೆ ತುಂಬಾ
ಹತ್ತಿರವಿರುತ್ತಿತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪ್ಪನ ಹೊಟ್ಟೆಗೆ ಚೂರಿ
ಹಾಕಿದಂತೆ, ಅದನ್ನ ನೋಡಿದ ಅಮ್ಮ ಕತ್ತಲಲ್ಲಿ ಕಣ್ಮರೆ ಆದಂತೆ, ಜೀವದ ಗೆಳೆಯ ನಕ್ಕು ಮರೆ
ಆದಂತೆ ಹಾಗು ಪ್ರೀತಿಯ ಹುಡುಗಿ ಮರು ಮದುವೆಯಾದಂತೆ. ಇಷ್ಟೆಲ್ಲಾ ಕನಸ ಪರದೆಯಲ್ಲಿ
ಹರಿದಾಡಿದಂತೆ ಎಚ್ಚರಾಗಿ ಬಿಡ್ತಿದ್ದ ಹೆಬ್ಬಾವು ತುಳಿದಂತೆ. ತಾನು ಹೇಳಲೇ ಬೇಕಿತ್ತು,
ಅಪ್ಪನನ್ನು ಕೊಂಡದ್ದು ನಾನಲ್ಲ, ಅದು ಜೀವದ ಗೆಳೆಯ. ಬೇರೆ ಯಾರಿಗೂ ಅಲ್ಲದಿದ್ರೂ
ಕತ್ತಲಲ್ಲಿ ಕಣ್ಮರೆಯಾದ ಅಮ್ಮನಿಗೆ ಹಾಗೂ ಕೊಲೆಗಾರನ ಪ್ರೆಯಸಿಯಾಗಳು ಒಪ್ಪದೇ ಬೇರೆ
ಮದುವಯಾದ ತನ್ನ ಹುಡುಗಿಗೆ ಹೇಳಲೇ ಬೇಕಿತ್ತು. ಊರು ಬಿಟ್ಟು ಬಂದ ಮೇಲೆ ತನ್ನವರ
ಸುಳಿವಿಲ್ಲ. ಅವನ ಗೆಳೆಯರೊಂದಿಗೆ ಸೇತುವೆ ಬೆಸೆಯಬಲ್ಲಂತ ಫೋನು ಸ್ಥಬ್ದ ವಾಗಿತ್ತು.
ಮನಸ್ಸು ಮೂಖವಾಗಿತ್ತು. ಕುಡಿದು ಖಾಲಿಯಾದ ಬಾಟಲ್ ಆತನ ಬದುಕನ್ನ
ಪ್ರತಿಬಿಂಬಿಸುತ್ತಿತ್ತು.
ಕೆಂಪು ಛತ್ರಿ ಹಾಗೂ ಸಮಾಜಸೇವೆ
ಹುಡುಗರ ಬಿಸೀನ ಕಡಿಮೆ ಮಾಡಕ್ಕೋ ಏನೋ ಅಂತೂ ಮಳೆ ಬಂದಿದೆ. ಕಳೆದ ಮಳೆಗಾಲದಲ್ಲೇ ಕಡ್ಡಿ ಮುರಿದು ಮೂಲೆ ಸೇರಿದ್ದ ಛತ್ರಿಗಳು ಜೀರ್ಣೋದ್ದಾರಗೊಂದು ರಸ್ತೆಗಿಳಿದಿವೆ. ಅದ್ಯಾಕೋ ಮಳೆ ಜೊತೆಗೆ ಹಳೆ ನೆನಪುಗಳು ಸೇರ್ಕೊಂಡ್ ಬಿಟ್ಟಿವೆ. ಇಂಥ ಭಯಂಕರ ಮಳೆ ಬಂದಾಗೆಲ್ಲ ನೆನಪಾಗೋದು ಕೆಂಪು ಛತ್ರಿಯದ್ದು.. ಸ್ಸಾರಿ... ಕೆಂಪು ಛತ್ರಿ ಹಿಡಿದ ಆ ಹುಡುಗಿಯದ್ದು. ಈಗ್ಗೆ ಒಂದಷ್ಟು ವರ್ಷದ ಹಿಂದೆ ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದೆ. ಯಾಕೆ ಅಂತ ಕೇಳಬೇಡಿ. ಇನ್ಯಾಕೆ..? ಬಸ್ಸಿಗೆ ಹೋಗೋಣ ಅಂತ. ಎಂದೂ ಸಮಯಕ್ಕೆ ಸರಿಯಾಗಿ ಬಸ್ ಬಂದ ದಾಖಲೆ ನಮ್ಮೂರ ಬಸ್ ಸ್ಟ್ಯಾಂಡ್ ಗಂತೂ ಇಲ್ಲ. ಮನಸಾರೆ ಬಯ್ಯೋದು ಅಭ್ಯಾಸ. ಬೈದಿದ್ರಿಂದ ಬಸ್ ಬರ್ದಿದ್ರು ಮನಸ್ಸಿಗಂತು ಸಮಾಧಾನ ಇದ್ದೆ ಇದೆ. ಕಾದಿದ್ದಕ್ಕಾದ್ರು ಫಲ ಇದ್ರೆ ಅದೊಂಥರ.. ಈ ಸರ್ಕಾರಿ ಬಸ್ ಗಳು ಒಂದು ದಿನ ಬಂದ್ರೆ ಮೂರು ದಿನ ಕರು ಹಾಕಿ ಕೂರತ್ತೆ. ನಮ್ಮಜ್ಜ ಮಾಡಿದ್ದ ಪುಣ್ಯ ದಿಂದಲೋ ಅಥವಾ ನಾನೂ ಸ್ನಾನ ಮಾಡಿ ಬಂದಿದ್ರಿಂದಲೋ ಈ ದಿನ ಕಾದಿದ್ದಕ್ಕೆ ಸಾರ್ಥಕತೆ ಸಿಕ್ತು. ದೂರದಲ್ಲಿ ನಮ್ಮೊರ ಬಸ್ ಗಬ್ಬದ ಎಮ್ಮೆ ತರ ಬರ್ತಾ ಇತ್ತು. ಅದೇ ಸಮಯಕ್ಕೆ ಎಂಟ್ರಿ ಆಯಿತು ಕಣ್ರೀ ಕಥೆ ಹೀರೋಯಿನ್ ದು. ಅದೇ ಹೇಳಿದ್ನಲ.. ಕೆಂಪು ಛತ್ರಿಯ ಹುಡುಗಿಯದ್ದು. ಅಷ್ಟು ಹೊತ್ತು ಎಲ್ಲಿದ್ಲೋ ಏನೋ ಧಿಡೀರನೆ ಎದುರಿಗೆ ಬಂದ್ಲು ಅದೇ ಕೆಂಪು ಛತ್ರಿ ಹಿಡಿದು. "ಅರೆ ನೀನೇನೋ... ಎಷ್ಟು ದಿನ ಆಯ್ತು ನಿನ್ನ ನೋಡಿ.. ಗುರುತೇ ಸಿಗಲ್ಲ.. ತುಂಬಾ ತೆಳ್ಳಗೆ ಆಗಿದ್ದಿ...!" ಅಂದ್ಲು. ಒಂದರೆ ಕ್ಷಣ ನಾನೂ ಕಕ್ಕಾಬಿಕ್ಕಿ. ನನ್ಯಾವಾಗ ದಪ್ಪ ಇದ್ದೆ ಅನ್ನೋ ಪ್ರಶ್ನೆ ಬೇರೆ ಮನಸ್ಸಲ್ಲಿ. "ಅಯ್ಯೋ.. ಅದ್ಯಾಕ್ ಹಂಗೆ ನೋಡ್ತಿ...? ನನ್ನ ಗುರುತು ಹತ್ಲಿಲ್ವೆ...? ನಾನೂ ಸಂಗೀತ... ನಿನ್ನ PUC ಕ್ಲಾಸ್ ಮೇಟ್". ಗೀತ, ಸಂಗೀತ ಇಂತ ಹೆಸರಿನವರ್ಯಾರು ಇದ್ದ ನೆನಪು ಹತ್ತಲಿಲ್ಲ. ಆದ್ರು ಹುಡುಗಿ ಮಾತಿಗೆ ಇಲ್ಲ ಅಂದು ಅಭ್ಯಾಸ ಇಲ್ಲ. "ಓ ಸಂಗೀತ.. ಅಯ್ಯೋ ನಿನ್ನ ಮರಿಯಕ್ಕಾಗತ್ತ..! ತುಂಬಾ ಬದಲಾಗಿದ್ದೀಯ. ಸ್ವಲ್ಪ ದಪ್ಪ ಆದೆ ಅನ್ಸತ್ತೆ ಅಲಾ" ಅಂದು ನಕ್ಕೆ.. ನಕ್ಕಿದ್ದು ನನಗೇ ಅನುಮಾನ ಬರುವಂತೆ. ಅಷ್ಟೊತ್ತಿಗೆ ಬಸ್ ಬಂದು ನಿಂತಿತ್ತು. ಜನ ಎಲ್ಲ ಬಸ್ ಹತ್ತುತ್ತ ಇದ್ರು . ಬಸ್ ಹತ್ತಕ್ಕೆ ನನಗೇನೂ ಅವಸರ ಇರ್ಲಿಲ್ಲ. ಎಷ್ಟಂದ್ರು ೧೫ ನಿಮಿಷ ಅಲ್ಲೆ ನಿಂತಿರತ್ತೆ. ಅದೂ ಅಲ್ದೆ ಜೀವನದಲ್ಲಿ ಮೊದಲ ಬಾರಿಗೆ ಸಂಗೀತ ಕೇಳ್ತಾ ಇದೆ. ಶ್ರುತಿ ತಪ್ಪದಿದ್ರೆ ಸಾಕು. " ಏ.. ನಿಂಗೊತ್ತಾ.. ನಮ್ಮ ಇಂಗ್ಲಿಷ್ ಟೀಚರ್ ಸತ್ತೂದ್ರಂತೆ", ಅಂದ ಧ್ವನಿ ಸ್ವಲ್ಪ ನಡುಗ್ತಾ ಇದ್ದಂತೆ ಅನ್ಸ್ತು. "ಯಾರು.. KVS ಸಾ ?" ಅಂದೆ. ಹು ಅಂದಿದ್ದು ಗಂಟಲಲ್ಲೇ ಉಳೀತು. ಅಥವಾ ನಂಗೆ ಹಾಗೆ ಅನಿಸ್ತು. ಮೇಷ್ಟ್ರು ಸತ್ರು ಅನ್ನೋ ದುಃಖ ಹುಡುಗಿಯ ಕಳೆಗುಂದಿದ ಮುಖ ನೋಡಿ ಇಮ್ಮುಡಿಗೊಂಡಿತು. ಆದ್ರು ನಿಜವಾದ ದುಃಖ ಮೇಷ್ಟ್ರು ಸತ್ತಿದ್ದಕ್ಕ ಅಥವಾ ಹುಡುಗಿಯ ಬೇಸರಕ್ಕ ಕೊನೆಗೂ ತಿಳೀಲೇ ಇಲ್ಲ. ಏನಂದ್ರು ಮೇಷ್ಟ್ರು ಹಿಂಗೆ ಹೇಳದೆ ಕೇಳದೆ ಸಾಯಬಾರದಿತ್ತು ಅನ್ನಿ. ಅದರ ಸಲುವಾಗಿ ಒಂದೆರಡು ನಿಮಿಷ ಮೌನಾಚರಣೆ. ಮತ್ತೆ ಮಾತಿಗಿಳಿದಳು. "ಯಾವ ಕಡೆ ಹೋಗ್ತಾ ಇದ್ದಿ..?" ಸಂಗೀತದ ಅದ್ಯಾವುದೋ ರಾಗದಲ್ಲೇ ಹೇಳಿದಳು. ಮೂಲತಃ ಎಲ್ಲಿಗೋ ಹೊರಟಿದ್ದೆ ಅನ್ನೋದೇ ಮರೆತಿತ್ತು ಸಂಗೀತದ ಗುಂಗಿನಲ್ಲಿ. ನೆನಪು ಮಾಡಿಕೊಂಡು ಹೇಳಿದೆ " ಈ ಬಸ್ ಎಲ್ಲೀವರೆಗೆ ಹೋಗತ್ತೋ ಅಲ್ಲೆವರೆಗೆ " ಅಂತ. " ಅಂದ್ರೆ ಲಾಸ್ಟ್ ಸ್ಟಾಪ್..? ಸರಿ, ನಾನೂ ಅಲ್ಲಿಗೆ ಹೊರಟಿದ್ದೆ. ಬಾ ಹೋಗೋಣ. ನಾನಾ ticket ತೆಗ್ಸೋ" ಅಂದ್ಲು. ಅದ್ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸ್ತು. ಹುಡುಗಿ ನನ್ನ ಕ್ಲಾಸ್ ಮೇಟ್ ಹೌದೋ ಅಲ್ವೋ ಅಂತಾನೇ ನೆನಪಿಗೆ ಬರ್ತಾ ಇಲ್ಲ. ನನಗಂತೂ ನನ್ನ ನೆನಪಿನ ಶಕ್ತಿ ಮೇಲೆ ಅಪಾರ ನಂಬಿಕೆ. ಇತ್ತೀಚಿಗೆ ಮರೆತ ನೆನಪೇ ಇಲ್ಲ. ಅದರಲ್ಲೂ ಹುಡುಗಿ ಹೆಸರು ಮರೆಯೋದ.! ಮುಂದಿನ ಯೋಚನೆಗೆ ಬ್ರೇಕ್ ಬಿತ್ತು,, " ಅಯ್ಯೋ ಇನ್ನೂ ನಿನ್ನ ಕಂಜೂಸ್ ಬುದ್ದಿ ಬಿಟ್ಟಿಲ್ವ...? ೧೦ ರುಪಾಯಿಗೂ ಮುಖ ನೋಡ್ತಿಯಲ್ಲ" ಅಂದಾಗ. "ಏ ಹಂಗೇನಿಲ್ಲ..ನೀನು ಅಲ್ಲಿಗೆ ಯಾಕೆ ಬರ್ತಿದೀಯ ಅಂತ ಯೋಚನೆ ಮಾಡ್ತಿದ್ದೆ ಅಷ್ಟೇ. ಸರಿ, ಹತ್ತು ಬಸ್" ಅಂದೆ. ಅಂತೂ ಬಸ್ ಹತ್ತಿ ಕುಳಿತಿದ್ದಾಯ್ತು. ಕಂಡಕ್ಟರ್ ಮಹಾಶಯಂಗೆ ದುಡ್ಡು ಕೊಟ್ಟು ಟಿಕೆಟ್ ತಗೊಂಡಿದ್ದು ಆಯ್ತು. ಯಾಕೋ ಯಾರೋ ನಕ್ಕಂತೆ..! ಜೇಬಿನಲ್ಲಿ ಕುಳಿತ ಟಿಕೆಟ್ ಆಗಿರಬಹುದೇ ಅನ್ನೋ ಕೆಟ್ಟ ಅನುಮಾನ. ನೆನಪಿನ ಅಳಕ್ಕೆ ಹೊಕ್ಕಿ ನೋಡಿದ್ರೂ ಯಾರ್ಯಾರಿದ್ದೋ ಜುಮುಕಿ, ಬಳೆ ಎಲ್ಲ ಸಿಗತ್ತೆ, ಇವಳ ಮುಖ ಕಾಣ್ತಾಯಿಲ್ಲ. ಇಂಥ ಸಂಗೀತ ಎಂದು ಕೇಳಿದ್ದಿಲ್ಲ. ಹೊಸ ರಾಗ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸ ಹಾಗು ಅವಶ್ಯಕತೆ ಇಲ್ಲ. ಹೆಂಗು ಅವಳೇ ನನ್ನ ಕ್ಲಾಸ್ ಮೇಟ್ ಅಂದಿದಾಳಲ್ಲ, ಅದರಲ್ಲೋ ನನ್ನ ಕಂಜೂಸ್ ಬುದ್ದಿ ಬಗ್ಗೆ ಹೇಳ್ತಾ ಇದಾಳೆ ಅಂದ್ರೆ ನನ್ನ ಪರಿಚಯ ಇರತ್ತೆ ಅನ್ನಿಸಿ ಸಣ್ಣ ನಿದ್ದೆಗೆ ಶರಣು ಹೋದೆ. "ಯಾರ್ರಿ last stop ?" ಎಂಬ ಧ್ವನಿ ಕೇಳಿದ ಮೇಲೇನೆ ಎಚ್ಚರ ಆಗಿದ್ದು. ಕಣ್ಣು ಬಿಟ್ಟು ನೋಡಿದ್ರೆ ಹುಡುಗಿ ಮುಂದಿನ ಬಾಗಿಲಲ್ಲಿ ಇಳಿತಾ ಇದೆ. ಸ್ವಲ್ಪ ವೇಗದಿಂದಲೇ ಬಸ್ ಇಳಿದು ಅತ್ತ ಕಡೆ ಹೋಗ್ತಾ ಇದ್ದವಳನ್ನ "ಸಂಗೀತ" ಎಂದು ಕೂಗಿದೆ. ನಿಂತಳು. ಹತ್ರ ಹೋದ್ರೆ ಹಿಂಗನ್ನೋದೆ...! "ನಾನು ಸಂಗೀತ ಅಲ್ಲ". ಅಂತೂ ಅಪಶ್ರುತಿ ಬಂದೇ ಬಿಡ್ತು ಸಂಗೀತದಲ್ಲಿ. ಮತ್ತೆ..? ಎಂದೆ. "ನಾನು ರಮ್ಯ. ನಿಮಗೆ ಮೋಸ ಮಾಡಿದ್ದಕ್ಕೆ ನಿಜವಾಗಲು ಸ್ಸಾರಿ. ನಾನು ಮುಂಬಯಿಯವಳು. ನನ್ನ ಫ್ರೆಂಡ್ ಮನೆಗೆ ಬಂದಿದ್ದೆ. ಇವತ್ತು ಪೇಟೆ ಸುತ್ತೋಕೆ ಅಂತ ಹೋಗಿದ್ದೆ. ಅಲ್ಲಿ ನನ್ನ ಪರ್ಸ್ ಕಳೆದು ಹೋಯ್ತು. ಹೆಂಗಪ್ಪ ಬರೋದು ಅಂತ ಯೋಚನೆ ಮಾಡ್ತಾ ಇದ್ದಾಗಲೇ ನೀವು ಕಂಡ್ರಿ. ಕಾಳು ಹಾಕಿದೆ. ಆಯ್ಕಂದ್ರಿ. anyway thank you . ನಾಳೆ ಬೆಳಗ್ಗೆ ಮೊದಲ ಬಸ್ ಗೆ ವಾಪಸ್ ಹೋಗ್ತಾ ಇದೀನಿ. ಸರಿಯಾದ ಸಮಯಕ್ಕೆ ಬಸ್ ಸ್ಟ್ಯಾಂಡ್ ಗೆ ಬಂದ್ರೆ ನಿಮ್ಮ ೧೦ ರುಪಾಯಿ ಕೊಡ್ತೀನಿ. ಸರಿ.. ನಾನಿನ್ನು ಬರ್ತೀನಿ. KVS ಬದುಕಿದ್ರೂ ಇರಬಹುದು ವಿಚಾರಿಸಿ ನೋಡಿ" ಎಂದು ಹೊರಟೆ ಹೋದ್ಲು ಕೆಂಪು ಛತ್ರಿ ಹಿಡಿದು. ಹೌದು... ನಿಜವಾಗಲು ನಕ್ಕಿದ್ದು ಕೇಳ್ತು. ಜೇಬಿನಲ್ಲಿದ್ದ ಟಿಕೆಟ್ ನಗ್ತಾ ಉಂಟು. ಅದನ್ನು ತೆಗೆದು ಬಿಸಾಕಿ, ಅಯ್ಯೋ ಮೋಸ ಹೋದ್ರೆ ಏನಂತೆ..? ಸಹಾಯ ಮಾಡಿದ ಹಾಗೆ ಆಯ್ತು ಎಂದು ಸಮಾಧಾನಪಟ್ಕೊಳ್ತಾ ನಾನೂ ಹೊರಟೆ, ಸಮಾಜ ಸೇವೆಯ ಗುಂಗಿನಲ್ಲಿ.
ಯಾವನಿಗೊತ್ತು
ಅವಳದ್ದೋ ಫುಲ್ ಸ್ಟಾಪ್ ಇಲ್ದಂಗೆ ಮಾತಾಡೋ ಖಯಾಲಿ. ನಂದು ಮಾತಾಡಿದ್ರೆ ಮುತ್ತು ಉದ್ರತ್ತೇನೋ ಅನ್ನೋ ಹಾಗೆ ದಿವ್ಯ ಮೌನ. ನಾನು ಭಯಂಕರ ಭಾವ ಜೀವಿ, ಅವಳು ತೀರಾ ಪ್ರಾಕ್ಟಿಕಲ್ಲು. ಅವಳದ್ದು ಹಾಲಿನಂಥ ಬಣ್ಣ, ನಂದು ತೊಳೆದ ಕೆಂಡ. ಹೀಗೆ, ಪ್ರಪಂಚದಲ್ಲಿ ಯಾವ್ಯಾವ್ದಕ್ಕೆ ವಿರುದ್ಧ ಪದಗಳಿವೆಯೋ ಅವುಗಳಿಗೆಲ್ಲ ಜೀವಂತ ಉದಾಹರಣೆ, ನಾನು-ಅವಳು. ವಿರುದ್ಧ ದ್ರುವಗಳು ಆಕರ್ಷಿಸುತ್ತವೆ ಅನ್ನೋದು ಫ್ಯಾಕ್ಟು. ನಂಗೆ ಅವಳ ಮಾತು ಇಷ್ಟ, ಅವಳು ನನ್ನ ಮೌನಕ್ಕೆ ಶರಣು. ಇಷ್ಟು ವರ್ಷ ಅದೆಲ್ಲಿದ್ಲೋ ಕಾಣೆ. ಒಂದಷ್ಟು ದಿನದ ಹಿಂದೆ ಸಿಕ್ಕಳು, ಸುಮ್ನೆ ನಕ್ಕಳು. ಆಗಬಾರದ್ದೆಲ್ಲ ಆಯ್ತು. ಆದ ಮೇಲೆ ತಿಳೀತು ಅವಳು ಎತ್ತು, ಏರಿಗೆ ಎಳಿತಾಳೆ, ನಾನು ಕೋಣ , ನೀರಿಗೆ ಎಳೀತೀನಿ ಅಂತ. ಆದ್ರು ನಮ್ಮಿಬ್ಬರ ಮಧ್ಯೆ ಜಗಳ ಆಗಿದ್ದು ಕಡಿಮೆ. ಅವಳಿಗೆ ಸಿಟ್ಟು ಬಂದು ಕೂಗಾಡಿ, ರೇಗಾಡಿ ಮುಖ ಗಂಟಾಕಿಕೊಂಡು ಎದ್ದು ನಿಂತ್ರೆ ನಂಗೆ ಸಾಕ್ಷಾತ್ ಚಾಮುಂಡಿ ದರ್ಶನ. ಬ್ರಹ್ಮಂಗೆ ಅದೇನು ಸಿಟ್ಟಿತ್ತೋ ಕಾಣೆ, ಸೇಡು ತೀರಿಸ್ಕೊಂದು ಬಿಟ್ಟ, ನಿನ್ನಂಥ ವಾಚಾಳೀನ ಗಂಟು ಹಾಕಿ ಅಂತ ನಾನಂದ್ರೆ, ನಂದು ಸೇಮ್ ಫೀಲಿಂಗು, ಬ್ರಹ್ಮನ ಸೇಡಿಗೆ ನಾನೂ ಬಲಿ, ನಿನ್ನಂತ ಮೂಕನ್ನ ತಗುಲಿ ಹಾಕಿದ, ನೀನು ಒಂದೇ ಶಿರಾಡಿ ಘಾಟಿಯಲ್ಲಿರೋ ಕಲ್ಲುಬಂಡೆಗಳು ಒಂದೇ ಅನ್ನೋದು ಅವಳ ಉತ್ತರ. ಮಳೆಗಾಲ ಸಕತ್ತಾಗಿದೆ ಒಂದೇ ಒಂದು ಸಾರಿ ಬಾ ಮಳೆಯ ರಾಗಕ್ಕೆ ನಾವು ತಾಳ ಹಾಕುವ ಅಂದ್ರೆ ಮಳೇಲಿ ನೆಂದ್ರೆ ಜ್ವರ ಬರತ್ತೆ, ಸುಮ್ನೆ ೨೦೦ ರೂಪಾಯಿ ದಂಡ ಅಂತಾಳೆ. ನೀನೊಬ್ನೇ ನೆನಿ ಬಣ್ಣ ಬಿಟ್ರೂ ಬಿಡಬಹುದು ಅಂತ ರೇಗಿಸ್ತಾಳೆ. ಬಣ್ಣ ಬದಲಾಯಿಸೋದು ನಿಮ್ಗೆ ದೇವ್ರು ಕೊಟ್ಟ ಕಾಣಿಕೆ ಅಂದ್ರೆ ಕಣ್ಣು ಕೆಂಪು ಮಾಡ್ತಾಳೆ. ಅಲ್ನೋಡು ಹೂವು ಎಷ್ಟು ಚೆನ್ನಾಗಿದೆ, ಆ ಗಿಡಕ್ಕೆ ದೇವರು ಮಾಡಿರೋ ಅಲಂಕಾರ ಆ ಹೂವು ಅನ್ಸತ್ತೆ ಅಂದ್ರೆ, ಅರ್ಥ ಆಗದೆ ಇರೋ ಹಾಗೆಲ್ಲ ಮಾತಾಡ್ಬೇಡ.. ಚೆನ್ನಗಿರೋದೇನೋ ಹೌದು.. ಹುಡ್ಗ ಕಿತ್ಕೊಡೋ... ಪ್ಲೀಸ್... ಅಂತಾಳೆ. ಅಷ್ಟ್ರು ಮೇಲು ಅಂದ ಇರೋದು ಆನಂದಿಸೋಕೆ, ಅನುಭವಿಸಬೇಕು ಅನ್ನೋದು ತಪ್ಪು ಅಂತೇನಾದ್ರೂ ಅಂದ್ರೆ ಕಿತ್ಕೊಡ್ತೀಯೋ ಇಲ್ವೋ ಅಂತ ಕಣ್ಣಲ್ಲೇ ಧಮಕಿ ಹಾಕ್ತಾಳೆ. ಹೀಗೆ ನಮ್ಮಿಬ್ಬರದು ತದ್ವಿರುದ್ಧ. ಇಬ್ಬರ ಮದ್ಯೆ ಏನಿದ್ಯೋ ಗೊತ್ತಿಲ್ಲ. ಆದ್ರೆ ಒಂದಂತು ಸತ್ಯ, ಅವಳಿಲ್ಲದೆ ಬದುಕೋದು ಕಷ್ಟ. ಅವಳ ಕಣ್ಣಲ್ಲಿ ನೀರು ಬಂದ್ರೆ ನನ್ನ ಕಣ್ಣಲ್ಲಿ ರಕ್ತ ಬಂದ ಹಾಗೆ ಆಗತ್ತೆ. ಅವಳ ಮಾತು ಕೇಳದ ದಿನ ವ್ಯರ್ಥ ಅನ್ಸತ್ತೆ. ಅವಳು ನನ್ನ ಭಾವದ ಮಾತಿನ ರೂಪ ಅನ್ನೋದು ನನ್ನ ವಿಚಾರ. ನನ್ನ ಮೌನಕ್ಕೆ ಅರ್ಥ ಅವ್ಳು, ಅವಳ ಮಾತಿಗೆ ಕಿವಿ ನಾನು. ವಿಷಯದ ಹಂಗಿಲ್ದೆ ಮಾತಾಡೋ ಕಲೆ ಅವಳದ್ದು, ಮೌನದಿಂದಲೇ ಉತ್ತರಿಸೋ ಕಲೆ ನಂದು. ಆದ್ರು ಮನದ ಮೂಲೆಯಲ್ಲೆಲ್ಲೋ ವಿವರಣೆಗೆ ನಿಲುಕದ ಭಯ... ಅವಳು ಸಿಕ್ತಾಳ ಕೈಯಿ ಕೊಡ್ತಾಳ.. ಯಾವನಿಗೊತ್ತು.
ಏಕ್ ಬೂಂದ್ ಕೀ ಕಹಾನಿ
ಆ ಮಳೆಯ ಹನಿಗೆ ಇದು ಮೊದಲ ಪ್ರಯಾಣ. ಮೋಡದಲ್ಲಿದ್ದ ತನ್ನವರನ್ನೆಲ್ಲ ಬಿಟ್ಟು ಧರೆಗೆ ಧುಮುಕಬೇಕಾದ ಘಳಿಗೆ ಬಂದಿದೆ. ಹನಿಯ ಮನದಲ್ಲೇನೋ ಒಂಥರಾ ದುಗುಡ, ದುಮ್ಮಾನ. ಇಷ್ಟು ದಿನ ಒಟ್ಟಿಗೆ ಮೋಡ ದಲ್ಲಿದ್ದ ಸಹವರ್ತಿಗಳೂ ಸಹ ಮಳೆಯ ರೂಪ ತಾಳಿ ಇಳೆಗೆ ಬರುತ್ತಾರಾದರೂ ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಸೇರುತ್ತೇವೋ ಇಲ್ಲವೋ ತಿಳಿಯದೆ ಮನ ಮಂಕಾಗಿತ್ತು. ಈ ಹನಿಗೆ ತನ್ನ ಜೀವನದ ಹಳೆಯ ನೆನಪುಗಳೆಲ್ಲ ಮರೆತಂತಿತ್ತು. ತಾನು ಹೇಗೆ ಈ ಮೋಡದಲ್ಲಿ ಒಂದಾದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.ಆದರೆ ಈ ಮೋಡದ ಮನೆಗೆ ಬಂದ ನಂತರ ಅಲ್ಲಿದ್ದವರೆಲ್ಲರೊಂದಿಗೂ ಬೆರೆತು... ಅದೆಲ್ಲಿಂದಲೋ ಹೊರಟು... ಸಾವಿರಾರು ಮೈಲಿ ಕ್ರಮಿಸಿ ಈಗ ಮೋಡ ಬಿಟ್ಟು ಧರೆಗಿಳಿಯಬೇಕಾದ ಸಮಯ ಬಂದಿತ್ತು. ಆ ಮೋಡದಲ್ಲೊಂದಾದ ದಿನ ತನಗೆ ಸಿಕ್ಕ ಸ್ವಾಗತವನ್ನು ನೆನೆದು ಮನ ತುಂಬಿ ಬಂದು ಕಣ್ಣೀರ ಹನಿ ಹೊರಟಿತ್ತು. ಅಂದೇ ತಿಳಿದದ್ದು ತಾನು ಸ್ವಾತಿ ಮಳೆಯ ಮೋಡಕ್ಕೆ ಸೇರಿದ್ದೇನೆಂದು ಹಾಗು ಸ್ವಾತಿ ಮಳೆಗೆ ಇದ್ದ ಅದರದೇ ಆದ ಸ್ಥಾನದ ಬಗ್ಗೆ ಅಂದೇ ಹೇಳಿದ್ದರು ಸುತ್ತಮುತ್ತಲಿದ್ದ ಹನಿಗಳು. ತಾನು ಮುತ್ತಾಗುವ ಅವಕಾಶ ಹೊಂದಿದ್ದೇನೆಂದು ತಿಳಿದು ಎದೆಯುಬ್ಬಿಸಿ ನಿಂತು ಸಂತಸಪಟ್ಟಿತ್ತು. ಈಗಲೂ ಈ ಹನಿಗೆ ಅದೇ ಆಸೆ... ತನ್ನ ಮೊದಲ ಪ್ರಯಾಣದಲ್ಲೇ ಕಪ್ಪೆ ಚಿಪ್ಪಿನ ಗರ್ಭಕ್ಕೆ ಸೇರಿ ತಾನು ಮುತ್ತಿನ ಜನ್ಮ ತಾಳಿ ಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆಯಬೇಕೆಂದು. ಆದರೂ, ಇಷ್ಟು ದಿನ ಜೊತೆಗಿದ್ದವರ ಅಗಲಿ ಮುತ್ತಾಗುವ ಆಸೆ ತನ್ನ ಸ್ವಾರ್ಥಕ್ಕೆ ಹಿಡಿದ ಕನ್ನಡಿಯೇನೋ ಎಂಬ ಶಂಕೆ ಈಗ.
ಸ್ವಾತಿ ಮಳೆಯ ಪ್ರತಿ ಹನಿಯೂ ಮುತ್ತಾಗುಹುದಿಲ್ಲ. ತಾನು ಕಪ್ಪೆ ಚಿಪ್ಪಿನೊಳಗೆ ಹೋದರೆ ಮಾತ್ರ ಮುತ್ತಾಗುವ ಭಾಗ್ಯ. ಇಲ್ಲದಿದ್ದರೆ...? ಯಾರ ಮನೆಯ ಹಂಚಿನ ಮೇಲೋ.. ಯಾವ ರಸ್ತೆಯ ಗುಂಡಿಯ ಒಳಗೋ... ಯಾವ ಕಾಡಿನ ಯಾವ ಮರದ ಎಲೆಯ ತುದಿಗೋ... ಅಥವಾ... ತನಗಿಂತ ಅದೆಷ್ಟೋ ಪಾಲು ದೊಡ್ದದಿರುವ ಬಯಲಿನಲ್ಲಿನ ಹುಲ್ಲಿನ ಬುಡವೊ... ತನ್ನ ಗತಿ ಇನ್ನೂ ನಿರ್ಧಾರವಾಗಿಲ್ಲ. ಮುತ್ತಾದರೆ ಮುಕ್ತಿ. ಇಲ್ಲದಿದ್ದರೆ ಇನ್ನೆಷ್ಟು ಬಾರಿ ತನ್ನ ಜೀವನ ಚಕ್ರ ಉರುಳಬೇಕೋ..? ಯೋಚನೆ ಸಾಗುತ್ತಿರುವಾಗಲೇ ಯಾರೋ ದೂಡಿದ ಅನುಭವ. ತನ್ನ ಪಯಣ ಪ್ರಾರಂಭ. ದೇವರೇ... ನನ್ನನ್ನ ಮುತ್ತಾಗಿಸಪ್ಪ ಎಂಬ ಮೋರೆ ಮುಗಿದಿತ್ತೋ ಇಲ್ವೋ, ಮೋಡ ಬಿಟ್ಟು ಭೂಮಿಗೆ ಅಭಿಮುಖವಾಗಿ ಹೊರಟಾಗಿತ್ತು. ಅಯ್ಯೋ... ಈ ಎತ್ತರ ನೋಡಿ ತಲೆ ತಿರುಗ್ತಾ ಇದೆ. ಈ ರಭಸದಿಂದ ಭೂಮಿಗೆ ಬಿದ್ರೆ ತಮ್ಮ ಮುಖಕ್ಕೆ ಏನೂ ಆಗಲ್ವೇ ಎಂದು ಪಕ್ಕದಲ್ಲಿ ತನ್ನಷ್ಟೇ ರಭಸದಿಂದ ಬೀಳ್ತಾ ಇದ್ದ ಹನಿಗೆ ಕೂಗಿ ಕೇಳಿತು. ಶರವೇಗದಲ್ಲಿ ಬೀಳುವಾಗ ಪಕ್ಕದ ಹನಿ ಹೇಳಿದ್ದು ಸರಿಯಾಗಿ ಕೇಳಲಿಲ್ಲ. ಕೇಳಿದ್ದಿಷ್ಟು- ತಾವು ನೀರ ಹನಿಗಳು. ಎಷ್ಟೇ ಎತ್ತರದಿಂದ, ಎಷ್ಟೇ ರಭಸವಾಗಿ, ಎಲ್ಲಿಗೆ ಬಿದ್ದರೂ ತಮಗೆ ಮತ್ತೆ ತಮ್ಮ ಆಕಾರ ತಾಳುವ ಶಕ್ತಿ ಇದೆ. ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಟಪ್... ಓ.. ಮನೆಯ ಹಂಚಿನ ಮೇಲೆ ಬಿದ್ದಿದ್ದೇನೆ. ನಾನು ಮುತ್ತಾಗಲಿಲ್ಲ. ಅರೆ... ಎಲ್ಲರು ಮುಂದೆ ಹೋಗುತ್ತಿದ್ದಾರೆ. ತಾನೇಕೆ ಬಿದ್ದಲ್ಲಿಯೇ ನಿಂತುಬಿಟ್ಟೆ. ಕೈ, ಕಾಲು ಮುಖ ಎಲ್ಲವನ್ನು ಮುಟ್ಟಿ ನೋಡಿಕೊಂಡಿತು. ಎಲ್ಲವೂ ಸರಿಯಾಗೇ ಇದೆ ಆದರೆ ತಾನೇಕೆ ಚಲಿಸುತ್ತಿಲ್ಲ? ನಾನು ಸಿಕ್ಕಿಕೊಂಡಿದ್ದೇನೆ. ಬಿದ್ದ ರಭಸಕ್ಕೆ ಬಿದ್ದಲ್ಲಿಂದ ಹಾರಿ ಪಕ್ಕದಲ್ಲಿದ್ದ ಕಸಕ್ಕೆ ಬಂದು ಸಿಕ್ಕಿಕೊಂಡಿದ್ದೇನೆಂದು ತಿಳಿಯಿತು. ತನ್ನ ಜನ್ಮ ಇಲ್ಲೇ ನಶಿಸುಹುದೆಂದು ದುಃಖಿಸುವಾಗ ಯಾರೋ ಕಾಲೆಳೆದಂತಾಯಿತು. ಓ.. ಬೀಳುವಾಗ ಪಕ್ಕದಲ್ಲಿದ್ದ ಹನಿ... ತನ್ನನ್ನು ಇಲ್ಲಿಂದ ಬಿಡಿಸಲು ಕಾಲೆಳೆಯುತ್ತಿದೆ. ಅದರ ಶ್ರಮ ಮೊದಲಿಗೆ ವ್ಯರ್ಥವಾಯಿತಾದರೂ ಅದರ ಪ್ರಯತ್ನಕ್ಕೆ ಹತ್ತಾರು ಹನಿಗಳ ಸಹಾಯ ದೊರೆತ ನಂತರ ಫಲ ನೀಡಿತು. ಈಗ ನಾನು ಬಂಧಿ ಮುಕ್ತ. ಹಂಚಿನ ಮೇಲೆ ನಾಜೂಕಾಗಿ, ಎರಡು ಹಂಚುಗಳ ನಡುವೆ ಇದ್ದ ಸಣ್ಣ ಜಾಗದಲ್ಲಿ ಬೀಳದಂತೆ ಜಾರಿ... ಟಪ್... ಮಣ್ಣಿನ ವಾಸನೆ ಮೂಗಿಗೆ ಬಡೀತಾ ಇದೆ. ಓ.. ಭೂಮಿಗೆ ಬಂದಿದ್ದೇನೆ. ಇನ್ನೂ ತಾನು ಸಾಗರ ಸೇರಬೇಕು. ಈ ಪಯಣದಲ್ಲಂತೂ ಮುತ್ತಾಗಲಿಲ್ಲ. ಸಾಗರ ಸೇರಿ ಸೂರ್ಯನ ಬಿಸಿಲಿನೊಡನೆ ಆಕಾಶಕ್ಕೆ ಹಾರಿ ಮತ್ತೆ ಮೋಡವಾಗಿ ಭೂಮಿಗಿಳಿಯಬೇಕು. ಮತ್ತದೇ ಸ್ವಾತಿ ಮಳೆಯ ಮೋಡವಾಗುತ್ತೇನೋ ಇಲ್ವೋ ಗೊತ್ತಿಲ್ಲ. ಅದೆಷ್ಟೋ ಹನಿಗಳಲ್ಲಿ ತಾನೂ ಒಂದಾಗಿ ಎತ್ತ ಹೋಗುತ್ತಿದ್ದೇನೆ ಎಂಬುದೂ ತಿಳಿಯದೆ ತನ್ನ ಭವಿಷ್ಯವನ್ನು ಯೋಚಿಸುತ್ತ ಸಾಗುತ್ತಿತ್ತು. ಒಮ್ಮೆ ಮೋಡದಿಂದ ಬೀಳುವಾಗಿನ ರಭಸ ಮತ್ತೊಮ್ಮೆ ನಿಂತ ನೀರಿನಷ್ಟೇ ಮಂದ.. ಅಂತೂ ಪಯಣ ಸಾಗುತ್ತಿತ್ತು. ಅಣ್ಣಾ... ಸಮುದ್ರ ಇನ್ನೂ ಎಷ್ಟು ದೂರವಿದೆ ಎಂದು ಮುಂದೆ ಹೋಗುತ್ತಿದ್ದ ಹನಿಯನ್ನು ಕೇಳಿತು. ಅಯ್ಯೋ.. ಮಂಕೆ..! ನಮ್ಮ ಪ್ರಯಾಣ ಈಗಿನ್ನೂ ಪ್ರಾರಂಭವಾಗಿದೆ. ಈ ಚರಂಡಿಯಿಂದ ಹೊಳೆ ಸೇರಿ, ಹೊಳೆಯಿಂದ ನದಿ, ನದಿಯಿಂದ ಸಮುದ್ರ ಇನ್ನೆರಡು ತಿಂಗಳಾದರೂ ಬೇಕು ಎಂದಿತು ಎದುರಿನ ಹನಿ. ಅಬ್ಬ.. ಏನಿದು ವಾಸನೆ..? ಗಟಾರದ ಗಬ್ಬಿಗೆ ಮೂಗು ಮುಚ್ಚಿಕೊಂಡು ಸಾಗತೊಡಗಿತು.
ಎರಡು ತಿಂಗಳ ನಿರಂತರ ಚಲನೆಯಿಂದ ಸಮುದ್ರ ಸೇರಿಯಾಗಿತ್ತು. ಒಮ್ಮೆ ಕಡಲ ತೀರ, ಮತ್ತೊಮ್ಮೆ ಕಡಲಾಳ.. ಹೀಗೆ.. ಎತ್ತಲೆತ್ತಲೋ ಬದುಕು ಸಾಗುತ್ತಿತ್ತು. ಸಧ್ಯಕ್ಕೆ ಸೂರ್ಯ ರಶ್ಮಿಗೆ ಕಾಯುತ್ತಾ ಸಮುದ್ರದ ಮೇಲೆ ತೇಲುತ್ತಿತ್ತು. ಸೂರ್ಯನ ತಾಪ ಖಾರವಾಗಲು ಮತ್ತೊಂದು ತಿಂಗಳು ಕಾಯಬೇಕು. ಹನಿ ಹಣೆಬರಹವೋ.. ವಿಧಿಯ ಕುಚೆಷ್ಟೆಯೋ.. ಅಷ್ಟರಲ್ಲಿ ಹೋದ ಹಡಗಿನಿಂದ ತೈಲ ಸುರಿಯಿತು. ತೈಲ ಬಂಧಿಯಾದ ಹನಿ ಬಿಡುಗಡೆಗೆ ಇನ್ನೂ ಕಾಯ್ತಾ ಇದೆ. ಬಂಧಮುಕ್ತವಾದರೆ ಅದರ ಕನಸು ಕೈಗೂಡಬಹುದೇನೋ. ಆಸೆ ಕಮರುವ ಮೊದಲು ಶಿಶಿರನ ತಾಪ ತಾಗಿದರೆ ಮತ್ತೊಮ್ಮೆ ಮೋಡವಾಗಬಹುದು. ಇಲ್ಲದಿದ್ದರೆ...?
ವಿ. ಸೂ. ೨೨/ ೧೧/ ೧೧/ ರ ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ. ಪ್ರಕಟ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು.
ಮುದ್ದು ನನ್ನ ಪದ್ದು
ಥೂ! ಹುಡುಗಿ ಮುಂದೆ ಮರ್ಯಾದೆ ತೆಗೀತೀಯ...? ಹುಡುಗರ ಮುಂದೆ, ಹುಡುಗಿಯರ ಮುಂದೆ ಎಲ್ಲ 'ನಮ್ಮ ಪದ್ಮಾವತಿ ಅಂಥೋಳು ಇಂಥೋಳು' ಅಂತ ಎಲ್ಲ ಹೇಳಿದ್ನಲ್ಲೇ...ಇವಳ ಮುಂದೆ ಕೂಡ ನಿನ್ನ ಹೊಗಳಿದೀನಿ ಕಣೇ...ಯಾಕೆ ಈ ತರ ಮಾಡ್ತೀಯಾ...? ನೋಡು... ಈಗ ಅರ್ಜೆಂಟ್ ಇದೆ ನನ್ನ ಹುಡುಗೀನ ರೈಲ್ವೆ ಸ್ಟೇಷನ್ ಗೆ ಬಿಡಬೇಕು... ಇನ್ನೂ ಬರಿ ಅರ್ದ ಗಂಟೆ ಇದೆ ರೈಲು ಹೊರಡೋಕೆ, ಈಗಲೇ ಯಾಕೆ ಹಠ ಮಾಡ್ತೀಯಾ.. ನಿಂಗೆ ಏನ್ ಬೇಕೋ ಅದ್ನೆಲ್ಲ ಕೊಟ್ಟಿ ದೀನಿ...ಆದರೂ ಸ್ಟಾರ್ಟ್ ಆಗಲ್ವೇನೆ. ..? ಅಬ್ಬ ಕಾಲೆಲ್ಲ ನೋಯ್ತಾ ಇದೆ ಕಿಕ್ ಒದ್ದು ಒದ್ದು...ಹಾಳಾದ್ ಬೈಕು (ಪದ್ಮಾವತಿ). ಅಲ್ಲ.. ಯಾವಾಗಲು ಒಂದೇ ಕಿಕ್ ಗೆ ಸ್ಟಾರ್ಟ್ ಆಗ್ತಿತ್ತು .. ಇವತ್ತೇ ಕೈ ಕೊಡ್ತಾ ಇದೆ. ಪೆಟ್ರೋಲ್ ಇಲ್ವೇನೋ ಅಂತ ಅಲ್ಲಾಡಿಸಿ ನೋಡಿದೆ, ಸಾಕಷ್ಟಿದೆ. ನಿನ್ನೆ ತಾನೇ ೨ ಲೀಟರ್ ಹಾಕ್ಸಿದೀನಿ . ೪ ಕಿ.ಮಿ. ಗೆ ೨ ಲೀಟರ್ ಕುಡಿಯೋ ಅಷ್ಟು ಎಣ್ಣೆ ಪಿಪಾಸು ಅಲ್ಲ ನನ್ನ ಪದ್ಮಾವತಿ. ಆದರೂ ಯಾಕೆ ಸ್ಟಾರ್ಟ್ ಆಗ್ತಾ ಇಲ್ಲಾ... ಅಬ್ಬಾ! ಹುಡುಗಿ ಮುಖ, ಕಣ್ಣು ಕೆಂಪ್ ಮಾಡ್ಕೊಂಡ್ ನೋಡ್ತಿದಾಳೆ...ಸ್ಟಾರ್ಟ್ ಆಗೇ... ಒಳ್ಳೆ ಮದುವೆ ದಿನಾ ಮದುಮಗಂಗೆ ಅತಿಸಾರ ಬೇದಿ ಕೆಣಕಿದ ಅನುಭವ. ನನ್ನ ಕಷ್ಟ ನೋಡಿದರೂ ನನ್ನ ಪದ್ಮಾವತಿಗೆ ಕನಿಕರನೆ ಬರ್ತಾ ಇಲ್ಲಾ... ಒಂದು ಕಡೆ ಕಿಕ್ ಒದ್ದು ಒದ್ದು ಕಾಲು ನೋವು, ಇನ್ನೊಂದ್ ಕಡೆ ಬಿಸಿಲಲ್ಲಿ ಅರ್ಧ ಗಂಟೆಯಿಂದ ನಿಂತು ಬೆವರು ಇಳಿ ತಾ ಇದೆ, ಅದರ ಮಧ್ಯೆ ನನ್ನವಳ ನೋಟಕ್ಕೆ ಬೇರೆ x - ray ತೀಕ್ಷ್ಣತೆ ಬಂದಿದೆ. ಅವಳ ಕಣ್ ಣಿನ ಬಾಣಾಗಳಿಂದ ತಪ್ಪಿಸಿಕೊಳ್ಳೋಕೋ ಸ್ಕರ ನನ್ನ ಮುಖ ಅವಳ ಕಡೆ ತಿರುಗ್ತಾನೆ ಇಲ್ಲಾ. ಅಯ್ಯೋ.. ಶರಣಾದೆ ಪದ್ಮಾವತಿ.. ಸ್ಟಾರ್ಟ್ ಅಗ್ಬಿದೆ.. ಪ್ಲೀಸ್... ಅಪ್ಪ ಶಿವ ಶಂಕರ ನನ್ನ ಗಾಡೀನ ಸ್ಟಾರ್ಟ್ ಮಾಡಪ್ಪ..ಲೇ..ಪದ್ಮಾವತಿ! ಸ್ಟಾರ್ಟ್ ಆಗ್ತೀಯೋ ಇಲ್ವೋ... ಊಹುಂ..ವಜ್ರಮುನಿ ಸ್ಟೈಲ್ ನಲ್ ಹೇಳಿ ದ್ರು ಸ್ಟಾರ್ಟ್ ಆಗಲ್ಲ ಅಂತಾಳೆ. ಎನ್ಥೆನ್ಥೆ ಹೀರೋ ಗಳನ್ನೆಲ್ಲ ಹೆದರಿ ಸಿದ ವಜ್ರಮುನಿ ನನ್ನ ಪದ್ಮಾವತಿಯನ್ನ ಹೆದರಸ್ತ ಇಲ್ಲಾ. ಅಯ್ಯೋ ಪದ್ದು... ನನ್ನ ಹುಡುಗಿ ಎದುರಿಗೆ ನನ್ನ ಮಾನ ಕಾಪಾದೆ. ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಸ್ಟಾರ್ಟ್ ಆಗ್ತಾ ಇಲ್ಲಾ. ನನ್ನ ಹುಡುಗಿ ರೈಲು ಬರೋ ಸಮಯ ಬೇರೆ ಆಯಿತು. ನನಗೆ ಗೊತ್ತಿದ್ದ, ಮತ್ತೆ ಸೇರಿಸಲು ಬರುವ ಎಲ್ಲ ವೈರ್ ಗಳನ್ನೂ ತೆಗೆದು ಮತ್ತೆ ಜೋಡಿಸಿ ಕಿಕ್ ಒದ್ದೆ.. ಊಹುಂ.. ಇಲ್ಲಾ.. ಡುರ್ ಎಂದು ಶಬ್ದ ಮಾಡಿ ಸುಮ್ಮನಾಗಿ ಬಿಟ್ಲು ಪದ್ಮಾವತಿ . ಈ ಪೆಟ್ರೋಲ್ ಪೈಪ್ ತೆಗೆದು ನೋಡಿದೆ.. ೨ ರೂ ಗಳಷ್ಟು ಪೆಟ್ರೋಲ್ ನೆಲದ ಪಾಲಾದ ಮೇಲೇ ತಿಳೀತು ಪೆಟ್ರೋ ಲ್ ಇದೆ ಮತ್ತು ಅದು ಎಂಜಿನ್ ಗೆ ಬರ್ತಾ ಇದೆ. ಮತ್ತೇನ್ ದಾಡಿ ನನ್ ಪದ್ಮಾವತಿಗೆ ಸ್ಟಾರ್ಟ್ ಆಗಕ್ಕೆ...? ಅದೇನೋ ಕಾರ್ಬೋರೆಟಾರ್ ಅಂತಾರಲ್ಲ ತೆಗೆದು, ಹಾಕಿ, ಮತ್ತೆ ಒದ್ದು ನೋಡಿದ್ರೂ ಸ್ಟಾರ್ಟ್ ಆಗ್ತಾ ಇಲ್ಲಾ..
------------------------------ ------------------------------ ------------------------------ ------------------------------ ------------------------------ ------------------------------ ------------------------------ -----
ಅಬ್ಬ.. ಅಂತೂ ನನ್ ಹುಡುಗಿ ಟ್ರೈನ್ ಸಿಗ್ತು. ಅವಳನ್ನ ಟ್ರೈನ್ ಸೀಟ್ ನಲ್ಲಿ ಕೂರಿಸಿ ರೈಲು ಹೊರಡುವವರೆಗೂ ಅಲ್ಲೆ ಇದ್ದು ಟಾಟಾ ಮಾಡಿ ಬಂದು ಮತ್ತೆ ಪದ್ಮವತಿಯೊಂದಿಗೆ ಮನೆ ಕಡೆ ಹೊರಟೆ .
ಓ ನನ್ ಹುಡುಗಿನ ಹೇಗೆ ರೈಲಿಗೆ ಬಿಟ್ಟೆ ಅಂತಾನ...? ಅದ್ನೇನ್ ಕೇಳ್ತೀರಾ... ಆಗ್ಲೇ ಹೇಳಿದ್ನಲ.. ನನ್ನ ಪದ್ಮಾವತಿ ನಂಗೆ ಕೈ ಕೊಡಲ್ಲ ಅಂತ..ಹೌದು ಕಣ್ರೀ.. ನನ್ನ ಪದ್ಮಾವತಿ ನನ್ನ ಯಾವತ್ತು ಅರ್ಧ ದಾರೀಲೆ ಕೈ ಬಿಟ್ಟಿದ್ದೆ ಇಲ್ಲಾ... ಓ.. ಏನಂದ್ರಿ...? ಹೆಂಗೆ ಸ್ಟಾರ್ಟ್ ಆಯಿತು ಅಂತಾನ...? ಅದೇನಿಲ್ಲ ಕಣ್ರೀ... ಕೀ ಆನ್ ಮಾಡಿ ಕಿಕ್ ಒದ್ದೆ ನೋಡಿ... ಪಾಪ ಪದ್ದು ಸ್ಟಾರ್ಟ್ ಆಗೆ ಬಿಟ್ಲು.
ವಿ.ಸೂ. 25 ಜನವರಿ 2011ರಂದು ಉದಯವಾಣಿ ಯ ಪುರವಣಿ 'ಜೋಶ್' ನಲ್ಲಿ ಪ್ರಕಟವಾದ ಲೇಖನ.
ವಿ.ಸೂ. 25 ಜನವರಿ 2011ರಂದು ಉದಯವಾಣಿ ಯ ಪುರವಣಿ 'ಜೋಶ್' ನಲ್ಲಿ ಪ್ರಕಟವಾದ ಲೇಖನ.
ಒಂಟಿ.... ಒಂಟಿಯಾಗಿರುಹುದು....
ಎಲ್ಲರಿಗೂ ಇಂಥದ್ದೊಂದು 'ಬೋರು' ಕಾಡತ್ತೇನೋ... ಯಾವುದರಲ್ಲೂ ಮನಸ್ಸು ನಿಲ್ಲದು, ಹೇಳಿಕೊಳ್ಳುವಂತ ಒಂಟಿತನವಲ್ಲ, ಜೀವನವೇ ಇಷ್ಟು ಎನ್ನುವ ವೈರಾಗ್ಯವಲ್ಲ.... ಬಾಳಿನ ಬಗ್ಗೆ ಜಿಗುಪ್ಸೆಯಂತೂ ಅಲ್ಲವೇ ಅಲ್ಲ. ಹಾಗಾದರೆ ಇದೆಂಥ...? ಬರೇ 'ಬೋರು'. ಓದಲು ಬೋರು...ಆಡಲು ಬೋರು...ಮಲಗಲು ಬೋರು... ಮಾತನಾಡಲು ಬೋರು...ಮಾತನಾಡದೆ ಇರಲೂ ಬೋರು...ಬರೆಯಲಂತೂ ಬೋರೋ ಬೋರು. ಏನಿದು 'ಬೋರು'...? 'ಬೇಸರ' ಎನ್ನುವುದರ ಕನ್ನಡ ಉಚ್ಚಾರಣೆಯ...? ಬಹುಷಃ ಕನ್ನಡ ಆಗಿರಲಿಕ್ಕಿಲ್ಲ. ಇಂಗ್ಲಿಷ್ ನ 'bore ' ಕನ್ನಡದ 'ಬೋರು' ಆಯ್ತಾ....? ಅಯ್ಯೋ...ಬಿಡಿ ಪದ ಎಲ್ಲಿಂದ ಬಂದ್ರೆ ಏನು ಬೋರಂತು ಆಗಿತ್ತು...ಆಗಿದೆ...ಮುಂದೇನು ಆಗತ್ತೆ. ಇವತ್ತು ಗೆಳತಿಯ ಜೊತೆ 'ಬೋರ್' ಎಂದು ಮಾತನಾಡಿದ್ರೆ...ನಾಳೆ ಅವಳೊಟ್ಟಿಗೆ ಮಾತನಾಡಿದ್ರಿಂದಲೇ 'ಬೋರು' ಬರತ್ತೆ. "ಏ...ಬೋರು ಆಗ್ತಾ ಇತ್ತು..ಫಿಲಂಗೆ ಹೋದೆ" ಅಂತಾರೆ... ಮತ್ತೊಮ್ಮೆ...ಇಲ್ಲಾ ಮಗದೊಬ್ಬ.... "ಏ ಫಿಲಂಗೆ ಹೋಗಿದ್ದೆ ಬೋರ್ ಬಂತು" ಅಂತಾರೆ. ಅಂದ್ರೆ ಕೆಲವು ಸಲ 'ಬೋರ್' ಆಗತ್ತೆ ...ಮತ್ತೊಂದು ಸಲ 'ಬೋರ್' ಬರತ್ತೆ ಅಂತಾಯ್ತು. ಹಾಗಾದ್ರೆ 'ಬಂದ' ಬೋರು ಬೇಗ ಹೋಗತ್ತ..? ಅಥವಾ 'ಆದ' ಬೋರು ಬೇಗೆ ಹೋಗತ್ತ....? ಯಾಕೆ ಬೋರ್ ಬಂತಾ...? ನಂಗೂ ಅದೇ 'ಬೋರು' ಕಂಡ್ರಿ. ಯಾಕೋ ಇತ್ತೀಚಿಗೆ ಸ್ವಲ್ಪ ಜಾಸ್ತೀನೆ ಬೋರು. ಬೋರಿಗೆ 'ಬೋರು' ಬಂದು ಹೋಗತ್ತೇನೋ ಅಂತ ಕಾಯ್ತಾ ಇದೀನಿ.... ಯಾಕೋ ಹೋಗೋ ಹಾಗೆ ಕಾಣ್ತಾ ಇಲ್ಲಾ. ಬೋರಯ್ತು ಅಂತ ಬರೆಯಕ್ಕೆ ಕೂತೆ...ಬರೆದು ಬೋರು ಅಂತ ಬುಕ್ ಮಡಚಿ ಇಟ್ಟೆ. ಗೊತ್ತೇ ಆಗ್ತಾ ಇಲ್ಲ ಕಂಡ್ರಿ ಯಾಕೆ ಬೋರು ಅಂತ. ಬೋರಿಗೇ ಬೋರಾಗೋ ಅಂತ ಬೋರು ಬರಬೇಕು ಕಂಡ್ರಿ. ಆಗ ನಾವೆಲ್ಲಾ ಬಚಾವ್ ಆಗ್ತೀವಿ. ಇದ್ಯಂತಾ ಬೋರಿಂದೆ ಕಥೆ...ಬರಿ ಬೋರು ಅನ್ನಿಸ್ತಿದ್ಯಾ....? ಅನಿಸಲೇ ಬೇಕು ಕಂಡ್ರಿ... ಆಗಲೇ ಬೋರಿಗೂ ಒಂದು ಮರ್ಯಾದೆ, ನನ್ನ ಲೇಖನಕ್ಕೋ ಒಂದು ಬೆಲೆ ಅಂತ ಬರೋದು. ಒಂದಾನೊಂದು ಕಾಲದ ಜನ 'ಬೇಸರ' ಆಗ್ತಾ ಇದೆ ಅಂತ ಇದ್ರಲ ಅದಕ್ಕೆ ಅಧುನಿಕ ಕನ್ನಡದಲ್ಲಿ 'ಬೋರು' ಅನ್ತಾರೆನ್ರಿ...? ಬೇಸರ-ಬೋರು ಎರಡು ಒಂದೇ ಅಲ್ಲ ಅನ್ಸತ್ತೆ. exam ನಲ್ಲಿ ಕಡಿಮೆ marks ಬಂದಾಗ 'ಬೇಸರ'... ಎಗ್ಸಾಮ್ ಗೆ ಓದಬೇಕು ಅಂದಾಗ 'ಬೋರು', ಕಾಲೇಜಿಗೆ ಹೋಗಬೇಕು ಅಂದ್ರೆ ಬೇಸರ.. ಲೆಕ್ಚರ್ ಪಾಠ ಅಂದ್ರೆ 'ಬೋರು'. ಬೋರಿನ peak ಬೇಸರ ಅನ್ಸತ್ತೆ. ಅದರೂ ಬೇಸರಕ್ಕಿಂತ ಬೋರ್ ಅಂದ್ರೆ ಬೋರು ಕಂಡ್ರಿ. ಎಷ್ಟೋ ಸಲ ಬೋರು ಆಗತ್ತೆ ಆದ್ರೆ ಹೆಚ್ಚಿನ ಸಲ ಯಾಕೆ ಬೋರು ಅಂತಾನೇ ಗೊತ್ತಾಗಲ್ಲ ಕಂಡ್ರಿ. ಕಾರಣ ಇಲ್ದೆ ಬರೋದ್ರಲ್ಲಿ ಬೋರಿಗೇ ಪ್ರಥಮ ಸ್ಥಾನ ಏನೋ ? ಅದರ strong competent 'ಸಿಟ್ಟು' ಅನ್ಸತ್ತೆ. ಕೆಲವು ಸಲ ಬೋರು ಅದಾಗ ಸಿಟ್ಟು ಬರತ್ತೆ. ಬೋರಲ್ಲೋ ಬೇರೆ ಬೇರೆ ಹಂತ ಇದೆ ಕಂಡ್ರಿ...ಬೋರು...ಸಿಕ್ಕಾಪಟ್ಟೆ ಬೋರು....ಕೆಟ್ ಬೋರು...ಸಕತ್ ಬೋರು.... ಹೀಗೆ. ಎಲ್ಲ ಬೋರು ಕೆಟ್ಟದ್ದೇ ಅದರೂ 'ಕೆಟ್ ಬೋರು' ಮತ್ತೋ ಕೆಟ್ಟದ್ದು. ಯಾಕ್ರೀ ಬೋರ್ ಆಗ್ತಾ ಇದ್ಯಾ...? ಇದನ್ನ ಓದಿ ಬೋರಾದ್ರೆ ನಾನು ಜವಾಬ್ದಾರನಲ್ಲ..ಓದಿ ಬೋರು ಹೋದ್ರೆ ಮಾತ್ರ ಅದರ ಕ್ರೆಡಿಟ್ ನಂಗೇ ಸಲ್ಲಬೇಕು. ಅಬ್ಬಾ....ನನಗಂತೂ ಈಗ ಅರಾಮಾಯ್ತು... ಬೋರಾಗ್ತಿತ್ತು ಅಂತ ಬರಿಯಕ್ಕೆ ಕೂತೆ 'ಬೋರು' ಅನ್ನೋದೇ ವಿಷಯ ಆಗಿದ್ರಿಂದ ಬೋರಿಗೇ ಬೋರು ಬಂತೇನೋ ಬೋರಲಾಗಿ ಮಲಗಿ ಬಿಟ್ಟಿದೆ ಅಥವಾ... ನನ್ನ ಬೋರನ್ನ ನಿಮಗೆ ವರ್ಗಾಯಿಸಿದ್ನ....?
ನಿಮಗೆ, ನಿಮ್ಮ ಮನೆಯವರಿಗೆ 'ಬೋರೆಶ್ವರ' ಕಾಡದಿರಲೆಂದು ಪ್ರಾರ್ಥಿಸುತ್ತ ನಿಮಗೆ ಬೋರು ಹೊದಿಸೋದನ್ನ ನಿಲ್ಲಿಸ್ತೀನಿ. ಮತ್ತೊಮ್ಮೆ ಬೋರಾದಾಗ ಸಿಗೋಣ.
ವಿ.ಸೂ. ಬೋರಾಗ್ತಾ ಇದ್ರೆ ಓದಿ....ಬೋರು ಹೋಗಬಹುದು...ಓದಿಯೂ ಬೋರಾದ್ರೆ....? ಹೆಂಗಾದ್ರೂ ನನ್ನ ಲೇಖನ ಸಾರ್ಥಕ.
ಮುಳುಗುವವನ ಕೂಗು.....
ಸಮುದ್ರ ತೀರದಲ್ಲಿ ಕೂತಾಗೆಲ್ಲ ನೀನೆ ನೆನಪಾಗ್ತೀಯ ಕಣೇ...ಇದೆ ಕಲ್ಲು ಬಂಡೆ ಮೇಲೇ ಕೂತು ಅಲ್ವಾ ಎಷ್ಟೋ ಸಂಜೆ ಸೂರ್ಯ ಮುಳುಗೊದಕ್ಕೆ ನಾವಿಬ್ರೂ ಸಾಕ್ಷಿ ಆಗಿದ್ದು.....ಆಗ ಎಷ್ಟು ಚಂದ ಕಾಣತಿದ್ದ ಅಲ ಸೂರ್ಯ... ಕೆಂಪಗೆ... ಗುಂಡಗೆ.... ಸಮುದ್ರದ ನೀರನ್ನೆಲ ಕೆಂಪಗೆ ಮಾಡಿ ಹೋಗ್ತಿದ್ದ. ಅವ ಅತ್ತ ಹೋದ ಮೇಲೆ ನಾವು ಇತ್ತ ಬರ್ತಿದ್ವಿ. ಎಂಥ ಆನಂದ ಇತ್ತು ಸೂರ್ಯ ಮುಳುಗೊದನ್ನ ನೋಡಿ.. ಮನಸ್ಸು ತುಂಬಿ ಬರ್ತಿತ್ತು...ಮಂದಿಗೆಲ್ಲ ಹೀಗೆ... ಯಾರಾದ್ರು ಮುಳುಗೊದನ್ನ ನೋಡಿದ್ರೆ ವಿವರಿಸಾಗದ ಹರ್ಷ...ನೀನು ಹಾಗೆ ಅಲ್ವಾ....? ನನ್ನನ್ನ ಮುಳುಗಿಸಿ ನೀನು ಸಂತೋಷ ಪಡ್ತಾ ಇದೀಯ... ಮುಳುಗೋ ಸೂರ್ಯ ಕೂಡ ನಮಗೆ ಏಳೋ ಶಕ್ತಿ ಕೊಡ್ತಿದ್ದ ಅಲಾ...
ಹಿಂದೊಂದು ದಿನ ನಮ್ಮ ಸಂತೋಷಕ್ಕೆ ಕಾರಣವಾದ ಈ ಸಮುದ್ರ ತೀರ ಈಗ ನನ್ನ ಬಿಕ್ಕಳಿಕೆಗೆ ಸಾಂತ್ವಾನ ಹೇಳ್ತಾ ಇದೆ...ಒಂದು ಮಾತೂ ಹೇಳ್ದೆ ಹೊರಟೇ ಹೋದ್ಯಲ್ಲ....ಯಾಕೆ....? ಎಲ್ಲಿಗೆ ಹೋದೆ ಅಂತ ಹೇಳದೆ ಇದ್ರೂ ಯಾಕೆ ಹೋದೆ ಅಂತನಾದ್ರೂ ಹೇಳು...ಎದ್ರಿಗೆ ಸಿಕ್ಕಿದ್ರೆ ಕುತ್ತಿಗೆ ಹಿಡಿದು ಕೇಳೋಣ ಅನ್ಸತ್ತೆ 'ಯಾಕೆ ಹೋದೆ...?' ಅಂತ....'ನೀನೆ ಪ್ರಾಣ' ಅಂತಿದ್ದೆ...ಈಗ ಈ ಪ್ರಾಣ ಬಿಟ್ಟು ಇನ್ನೂ ಬದುಕಿದ್ದೀಯ...? ನಾನಂತೂ ಸತ್ತೋದೆ...ಕುಂತ್ರೆ ನಿಂತ್ರೆ ಬರಿ ನಿಂದೆ ನೆನಪು....ಸಮುದ್ರದ ಅಲೆಗಳಂತೂ ಕೇಕೆ ಹಾಕಿ ನಗ್ತಾ ಇದೆಯೇನೋ ಅನ್ನಿಸ್ತಾ ಇದೆ...ಇಲ್ಲಿರೋ ಮರಳಿನ ಒಂದೊಂದು ಕಣಕ್ಕೂ ಕೂಗಿ ಕೂಗಿ ಹೇಳೋಣ ಅನ್ನಿಸ್ತಾ ಇದೆ ನಿನ್ನ ಕರಿಯಕ್ಕೆ... ಮನೆಕಟ್ಟೋ ಶಕ್ತಿ ಇರೋ ಈ ಮರಳು ಮನಸ್ಸನ್ನೂ ಕಟ್ಟತ್ತೇನೋ ಅಂತ...ನಿನ್ನ ಒಂದೊಂದು ಮಾತೂ ನನಗೆ ಅಪ್ಪಣೆ ಅಗಿತ್ತಲಾ ಗೆಳತೀ....ಸಲಹೇನ ಸೂಚನೆ ಅಂತಲೂ...ಸೂಚನೆನ ಕಟ್ಟಾಜ್ಞೆ ಅಂತಲೂ ಪಾಲಿಸಿದ್ನಲ್ಲ...ಅದೇ ನಾನ್ ಮಾಡಿದ ತಪ್ಪಾ ಎಂಬ ಯೋಚನೆ ಬರ್ತಾ ಇದೆ....ನಿನ್ನ ಮುಂದೆ ಚೀಪ್ ಅದ್ನೇನೋ ಅನ್ನಿಸ್ತ ಇದೆ... ಈಗ್ಲೂ ಅದೇ ಸೂರ್ಯ ಮುಳುಗೋದನ್ನ ನೋಡ್ತಾ ಇದೀನಿ.... ಹಾಗೆ... ಕೆಂಪಗೆ...ಗುಂಡಗೆ...ಸಮುದ್ರನೆಲ್ಲಾ ಕೆಂಪು ಮಾಡ್ತಾ...ಹಿಂದೊಂದು ದಿನ ಅಭೂತ ಪೂರ್ವ ಸಂತೋಷ ಕೊಟ್ಟ ಸೂರ್ಯ...ಈಗ ಆತ್ಮಹತ್ಯೆ ಮಾಡಿಕೊಳ್ತಾ ಇದಾನೇನೂ ಅನ್ನಿಸ್ತಾ ಇದೆ...ಇಲ್ಲಿ ಬೀಸೋ ಗಾಳಿಗೆ ನಿನ್ನ ಕೂದಲು ಹಾರತ ಇತ್ತಲ...ಮುಖದ ಮೇಲೇ ಬರ್ತಿದ್ದ ನಿನ್ನ ಕೂದಲು...ಅದನ್ನ ಬೆರಳ ತುದಿಯಿಂದ ನೀನು ಹಿಂದೆ ಹಾಕ್ತಿದ್ದ ಪರಿ...ಎಲ್ಲ ನೆನಪು...ಹಿಂದೊಮ್ಮೆ ತಂಪಾಗಿದ್ದ ಇಲ್ಲಿಯ ಗಾಳಿ ಈಗ ಬಿಸಿಯಾಗಿರೋ ಹಾಗಿದೆ...ನನ್ನ ಮನಸ್ಸಿನ ಬಿಸಿನ ತಣ್ಣಗಾಗಿಸೋ ಶಕ್ತಿನ ಕಳಕೊಂಡಿದೆ....ಈಗ ಆ ತಂಗಾಳಿಯೇ ಇಲ್ಲಾ...ಗಾಳಿ ಇನ್ದನೂ ದೂರವಾದ ಭಾವ...ಮೈಯನ್ನ ಮಾತ್ರ ತಣ್ಣಗಾಗಿಸೋ ತಂಗಾಳಿಕಿಂತ ಮನಸ್ಸನ್ನ ತಂಪಾಗಿಸೋ ನಿನ್ನ ಮಾತೆ ಬೇಕು ಅಂತ ಕೂಗಿ ಹೇಳಬೇಕು ಅನ್ನಿಸ್ತಾ ಇದೆ...ಆದರೆಲ್ಲಿ....? ನನ್ನ ಹೃದಯದ ಬಡಿತವನ್ನೂ ಕೂಡ ಕೇಳಬಲ್ಲ ಮನಸ್ಸಿದ್ದ ನೀನು ನನ್ನ ಮಾತನ್ನೂ ಕೇಳದವಳಂತೆ ಆಗ್ಬಿಟ್ಟೆ...ನಾನೇ ಮುಳುಗ್ತಿರೂ ಈ ಸಮಯದಲ್ಲಿ ಮುಳುಗ್ತಿರೋ ಸೂರ್ಯ ಕೂಡ ಖುಷಿ ಕೊಡ್ತಾ ಇಲ್ಲಾ...ಎಷ್ಟೊಂದು ಜನ... ಹೆಂಗಸರು...ಮಕ್ಕಳು...ಮುದುಕರು...ತರುಣರು...ಎಲ್ಲರಿಗು ಖುಷಿ ಕೊಡೊ ಈ ಸಮುದ್ರ... ಸೂರ್ಯಾಸ್ತ... ಅಲೆಗಳ ಆಟ...ತಂಪಾದ ಗಾಳಿ...ಕೆಂಪನೆ ಆಕಾಶ...ನನ್ನನ್ನ ಮಾತ್ರ ನೆನಪಲ್ಲಿ ಬೇಯಿಸ್ತಾ ಇದೆ. ಎಲ್ಲರೂ ಅವರವರ ಮನೆಯತ್ತ ಮುಖ ಮಾಡಿರೋವಾಗ... ಇಲ್ಲಿ ನಾನ್ ಮಾತ್ರ ಸಮುದ್ರದ ಕಡೆ ಮುಖ ಮಾಡಿ ಮುಳುಗಿದ ಸೂರ್ಯ...ನಾಳೆ ಮತ್ತೆ ಹುಟ್ಟಬಹುದಾದ ಸೂರ್ಯನ ನಿರೀಕ್ಷೆಯಲ್ಲಿ... ಇಲ್ಲೇ... ಇಲ್ಲೇ..ಕೂತಿದೀನಿ. ನನಗೆ ಗೊತ್ತು ಗೆಳತಿ... ಇಲ್ಲೇ ಕೂತಿದ್ರೆ ಹುಟ್ಟೋ ಸೂರ್ಯ ನನಗೆ ಕಾಣಲ್ಲ ಅಂತ...ನಾಳೆ ಮತ್ತೆ ಮುಳುಗೋ ಸೂರ್ಯನ್ನೇ ನೋಡ್ತೀನಿ ಅಂತ... ಆದರೂ ನಿನ್ನ ಕನಸನ್ನ ಹೊತ್ತ ಮನಸ್ಸು ನಿನ್ನ ನೆನಪಿರೋ ಈ ಜಾಗಾನ ಬಿಟ್ಟು ಕದಲತ ಇಲ್ಲಾ ಕಣೇ...ಜೀವನದಲ್ಲಿ ಮುಳುಗ್ತಿರೋ ನಂಗೆ ಈ ಮುಳುಗ್ತಾ ಇರೋ ಸೂರ್ಯಾನೆ ಜೊತೆಗಾರ...ನಾಳೆ ಬರೋ ಸೂರ್ಯ ನಿನ್ನನ್ನೂ ಕರೆ ತಂದು ನನ್ನ ಜೀವನವನ್ನ ಬೆಳಕಾಗಿಸ್ತಾನೇನೋ ಅಂತ ಕಾದು ಕೂತು ನಾಲ್ಕು ತಿಂಗಳಾಯ್ತಲ್ವಾ...? ಇಲ್ಲಾ ಎರಡೇ ತಿಂಗಳಾಗಿದ್ದು... ಈಗಲೂ ಮರಳ ಮೇಲೇ ಕೈ ಇಟ್ಟೊಡನೆ ಬೆರಳು ನನಗೆ ಗೊತ್ತಿಲ್ಲದಂತೆ ನಿನ್ನ ಹೆಸರನ್ನೇ ಬರಿಯತ್ತೆ ಕಣೇ....ಮರುಕ್ಷಣ....ಹೆಸರು ಇದ್ದದ್ದೇ ಭ್ರಮೆಯೇನೋ ಎಂಬಂತೆ ಅಲೆ ಅಳಿಸಿಹಾಕಿ ಬಿಡತ್ತೆ...ನನ್ನ ಉಸಿರಲ್ಲಿರೋ ನಿನ್ನ ಹೆಸರು ಅಳಿಸಲಿಕ್ಕೆ ಅಲೆಗಂತೂ ಸಾದ್ಯ ಇಲ್ಲಾ.... ನೀನೆ ಬಂದು ಬಿಡೆ...ಪ್ಲೀಸ್.
ಹಿಂದೊಂದು ದಿನ ನಮ್ಮ ಸಂತೋಷಕ್ಕೆ ಕಾರಣವಾದ ಈ ಸಮುದ್ರ ತೀರ ಈಗ ನನ್ನ ಬಿಕ್ಕಳಿಕೆಗೆ ಸಾಂತ್ವಾನ ಹೇಳ್ತಾ ಇದೆ...ಒಂದು ಮಾತೂ ಹೇಳ್ದೆ ಹೊರಟೇ ಹೋದ್ಯಲ್ಲ....ಯಾಕೆ....? ಎಲ್ಲಿಗೆ ಹೋದೆ ಅಂತ ಹೇಳದೆ ಇದ್ರೂ ಯಾಕೆ ಹೋದೆ ಅಂತನಾದ್ರೂ ಹೇಳು...ಎದ್ರಿಗೆ ಸಿಕ್ಕಿದ್ರೆ ಕುತ್ತಿಗೆ ಹಿಡಿದು ಕೇಳೋಣ ಅನ್ಸತ್ತೆ 'ಯಾಕೆ ಹೋದೆ...?' ಅಂತ....'ನೀನೆ ಪ್ರಾಣ' ಅಂತಿದ್ದೆ...ಈಗ ಈ ಪ್ರಾಣ ಬಿಟ್ಟು ಇನ್ನೂ ಬದುಕಿದ್ದೀಯ...? ನಾನಂತೂ ಸತ್ತೋದೆ...ಕುಂತ್ರೆ ನಿಂತ್ರೆ ಬರಿ ನಿಂದೆ ನೆನಪು....ಸಮುದ್ರದ ಅಲೆಗಳಂತೂ ಕೇಕೆ ಹಾಕಿ ನಗ್ತಾ ಇದೆಯೇನೋ ಅನ್ನಿಸ್ತಾ ಇದೆ...ಇಲ್ಲಿರೋ ಮರಳಿನ ಒಂದೊಂದು ಕಣಕ್ಕೂ ಕೂಗಿ ಕೂಗಿ ಹೇಳೋಣ ಅನ್ನಿಸ್ತಾ ಇದೆ ನಿನ್ನ ಕರಿಯಕ್ಕೆ... ಮನೆಕಟ್ಟೋ ಶಕ್ತಿ ಇರೋ ಈ ಮರಳು ಮನಸ್ಸನ್ನೂ ಕಟ್ಟತ್ತೇನೋ ಅಂತ...ನಿನ್ನ ಒಂದೊಂದು ಮಾತೂ ನನಗೆ ಅಪ್ಪಣೆ ಅಗಿತ್ತಲಾ ಗೆಳತೀ....ಸಲಹೇನ ಸೂಚನೆ ಅಂತಲೂ...ಸೂಚನೆನ ಕಟ್ಟಾಜ್ಞೆ ಅಂತಲೂ ಪಾಲಿಸಿದ್ನಲ್ಲ...ಅದೇ ನಾನ್ ಮಾಡಿದ ತಪ್ಪಾ ಎಂಬ ಯೋಚನೆ ಬರ್ತಾ ಇದೆ....ನಿನ್ನ ಮುಂದೆ ಚೀಪ್ ಅದ್ನೇನೋ ಅನ್ನಿಸ್ತ ಇದೆ... ಈಗ್ಲೂ ಅದೇ ಸೂರ್ಯ ಮುಳುಗೋದನ್ನ ನೋಡ್ತಾ ಇದೀನಿ.... ಹಾಗೆ... ಕೆಂಪಗೆ...ಗುಂಡಗೆ.
ನೆನಪಿನರಮನೆ.....
ಯಾಕೇ ಹುಡುಗಿ ಇಷ್ಟು ಕಾಡ್ತಿಯಾ...? ತೀರಾ ಇಷ್ಟು ಕಾಡುವಂತದ್ದು ಏನಿದೆ ಗೆಳತಿ ನಿನ್ನಲ್ಲಿ...? ಊರು ಬಿಟ್ಟು ಊರಿಗೆ ಬಂದ್ರೂ ಮಾಸದ ನೆನಪು... ಕಾಡಬೇಕು ಅಂತಾನೇ ಕಂಡ್ಯೇನೋ ಅನ್ನಿಸೋ ಹಾಗೆ ಮಾಡಿಬಿಟ್ಟಿದೆ ನಿನ್ನ ನೆನಪು. ನಿಂಗೊತ್ತಾ...ಕಾಲೇಜಿನ ಮೊದಲದಿನ ಕ್ಲಾಸ್ ರೂಂನಲ್ಲಿ ನೋಡಿಡ್ನಲಾ ಗೆಳತಿ ನಿನ್ನ ಆಗ್ಲೇ 'ಬಿದ್ದೆ'... ಲವ್ವೂ- ಪವ್ವೂ ಏನೂ ಅರ್ಥ ಅಗ್ದಿದ್ರೂ ಒಂದು ರೀತಿಯ ಸೆಳೆತಕ್ಕೆ, ಸಮ್ಮೋಹನಕ್ಕೆ ಒಳಗಾಗಿದ್ದಂತೂ ನಿಜ.ಹೇಳ್ಕಳಕ್ಕೂ ಆಗದ..ಹೇಳದೆ ಇರಲಿಕ್ಕೂ ಆಗದ ಭಾವ. ಒಂದೇ ಒಂದು ದಿನಾನೂ ನಿನ್ನ ನೋಡದೇ ಇರಲಾಗದಂತಹ ಸ್ಥಿತಿ.ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ... ಎಷ್ಟೋ ದಿನ ಬಸ್ಸು ಸಿಗದಿದ್ರೂ ೮ ಕಿ.ಮೀ.ನಡೆದೇ ಕಾಲೇಜಿಗೆ ಬರ್ತಾ ಇದ್ದಿದ್ದು ನಿನ್ನ ನೋಡಲೆಂದೇ ಎಂದು...! practical record ಬರಿಯೋ ಅಷ್ಟು ಟೈಮು, ವ್ಯವಧಾನ, source ಎಲ್ಲ ಇದ್ರೂ ಬರಿಯದೆ ಲ್ಯಾಬ್ ನಲ್ಲಿ ನನ್ನ ನೆಚ್ಚಿನ ಮಾಸ್ಟರ್ 'ಸುಬ್ರಾವ್' ಹತ್ರ ಬೈಸಿಕೊಳ್ತಾ ಇದ್ದಿದ್ದು... ಎಲ್ಲಾ ನಿನಗೆ ನೆನಪಿದೆ ಅಂದ್ಕೋತೀನಿ. ಆದ್ರೆ ಯಾಕೆ ಅಂತ ನಿಂಗೆ ಗೊತ್ತಿಲ್ಲಾ ಅಲಾ....? ಅವ್ರು ಬೈದಾಗ ನಿನ್ನ ಮುಖದ ಮೇಲೆ ನಗೂ ಬರ್ತಿತ್ತಲಾ ಆಗ ನೀನು ಎಷ್ಟು ಮುದ್ದಾಗಿ ಕಾಣ್ತಿದ್ದೆ ಗೊತ್ತಾ....ಇನ್ನೂ ಒಂದು ಕಾರಣ ಇದೆ ಗೆಳೆತಿ ಬರೀದೆ ಇರೋದಕ್ಕೆ.... ಬೈಸಿಕೊಂಡು ಆದ ಮೇಲೆ ಲ್ಯಾಬ್ ಮುಗೀತಿತ್ತಲ (ಬೈಸಿಕೊಲ್ದೆ ಲ್ಯಾಬ್ ಮುಗ್ದಿದ್ದೆ ಇಲ್ಲ) ಆಮೇಲೆ ನಿನ್ನ ರೆಕಾರ್ಡ್ ತಗೂಳೋ ಅವಕಾಶದಿಂದ ವಂಚಿತನಾಗಲು ನಾನು ಸುತಾರಾಂ ತಯಾರಿರ್ಲಿಲ್ಲ....ನಿನ್ಕಿಂತಾ ಚೆನ್ನಾಗಿ ರೆಕಾರ್ಡ್ ಬರಿಯೋರಿದ್ರೂ ನಿನ್ ರೆಕಾರ್ಡ್ ನೇ ತಗೋಬೇಕು ಅಂತ ಮನಸ್ಸು ಹಠ ಹಿಡಿದು ಬಿಡ್ತಿತ್ತು ಕಣೇ.....ಅದು ಹೇಗೆ ಮನದ ಮಾತು ಕೇಳದೆ ಇರ್ಲಿ ಹೇಳು... ನಿನ್ನ ಹಾಸ್ಟೆಲ್ ಮುಂದೆ ಹೋಗೋವಾಗ್ಲೆಲ್ಲ ಕಣ್ಣು ನಿನ್ನ ಹುಡುಕ್ತಾ ಇತ್ತು...ಆದ್ರೆ...ನೀನು ಒಂದ್ ದಿನಾನು ಕಾಣಲೇ ಇಲ್ವಲ್ಲಾ...ಯಾಕೆ ಗೆಳೆತಿ.......? ವರ್ಷಕ್ಕೆ ಒಂದು ಸಲದಂತೆ ಮೂರು ವರ್ಷಕ್ಕೆ ಮೂರು ಸಲ ಲೈಬ್ರರಿಗೆ ಹೋದದ್ದು, ಅದೂ ನೀನು ಹೋಗಿದ್ದು ನೋಡಿ ಅಂದ್ರೆ 'ಸರ್'ಗೆ ಸಿಟ್ಟು ಬರಬಹುದು ಗೆಳೆತಿ. ಆದ್ರಿಂದ ಅದೊಂದು ಸತ್ಯ ನನ್ ಹತ್ರಾನೆ ಇರಲಿ. ನೀನು ಎದ್ರಿಗೆ ಇದ್ದಾಗ ಮಾತಾಡೋ ಆಸೇನೆಲ್ಲಾ ಅದುಮಿಟ್ಟೆ...ಆದ್ರೆ ಈಗ ಅವೇ ಆಸೆಗಳು ಒಂದ್ ಕೊರತೆ ಆಗಿ ಕಾಡ್ತಾ ಇದೆಯಲ್ಲಾ ಗೆಳತಿ.....ಮಾತಾಡಲೇ ಬೇಕು ಅನ್ನೋ ಮನಸ್ಸಿನ ಅಸೆ, ಮನೆಯಲ್ಲಿ ಮಾಡಿಕೊಂಡ ಸಂಕಲ್ಪ, ಗೆಳೆಯರು ನೀಡುತಿದ್ದ ಧೈರ್ಯ,ಎಲ್ಲಾನೂ ನಿನ್ನ ಒಂದೇ ಒಂದು ನೋಟ ಕರಗಿಸಿಬಿಡ್ತಿತ್ತಲಾ.....ಏನಿಟ್ಟಿದ್ದೀ ಅಂಥದ್ದು ನಿನ್ನ ಆ ಕಣ್ಣಲ್ಲಿ...? ನಿನಗೆ ಸಿಟ್ಟು ಜಾಸ್ತಿ ಆಲ್ವಾ.....? ಹಾಗೇನೆ ಸೊಕ್ಕು ಕೂಡ.... ಅದೆಂತಹ ಸಿಟ್ಟೇ ಗೆಳತಿ ನಿಂದು..! ಅವತ್ತು ಏನೋ ಅಂದ ಅಂತ ಅವನಿಗೆ ಕ್ಯಾಂಟೀನ್ನಲ್ಲೆ ಎಲ್ಲರ ಎದ್ರಿಗೆ ಬೈದ್ಬಿಟ್ಯಲಾ...ಅದೂ ಒಂದು ಕಾರಣಾನೆ ನಿನ್ನ ಮಾತಾಡಿಸೋ ಅಸೆ ಜೀವಂತವಾಗಿದ್ದೋ ಧೈರ್ಯ ಕೈ ಕೊಡ್ಲಿಕ್ಕೆ. ಶುದ್ಧ ಚಾಮುಂಡಿ ಅವತಾರ...ನೆನಸ್ಕೊಂಡ್ರೆ ಈಗ್ಲೂ ಭಯ ಆಗತ್ತೆ....ಏನಂದ್ರು ಅಷ್ಟು ಸಿಟ್ಟು ಒಳ್ಳೇದಲ್ಲ ಗೆಳತಿ...ನೀನು ನಕ್ಕರೆ ಎಷ್ಟು ಚಂದ ಕಾಣ್ತೀ ಗೊತ್ತಾ.....ಹುಣ್ಣಿಮೆ ಬೆಳದಿಂಗಳ ತಂಪು ಇದೆ ಕಣೆ ನಿನ್ನ ನಗುನಲ್ಲಿ.
ಏನೇ ಅಂದ್ರೂ ನೀನಿನ್ನು ಬರಿ ನೆನಪು ಕಣೇ.... ಮತ್ತೆ ಈಗ ಹೇಗಿದೀಯ.....? ಅಷ್ಟು ಸಿಟ್ಟು...ಸೊಕ್ಕನ್ನ ಕಾಪಾಡಿಕೊಂಡಿದೀಯಾ.....? ಎಷ್ಟು ಕಾಡತ್ತೆ ಗೆಳತಿ ನಿನ್ನ ನೆನಪು....ಈ ನೆನಪೇ ವಿಚಿತ್ರ ಆಲ್ವಾ....ಎಲ್ಲ ಜನರ ಮಧ್ಯೆ ನನ್ನ ಒಂಟಿಯಾಗಿಸತ್ತೆ...ಒಂಟಿ ಆಗೇ ಇದ್ದಾಗ ತುಂಬಾ ಜನರಿರುವ ಭಾವ ಕೊಡತ್ತೆ....anyway thank you ಕಣೇ ನಿಂಗೆ... ಮೂರು ವರ್ಷಾನು ಕಾಲೇಜಿಗೆ ಬರೋ ಹಾಗೆ ಮಾಡಿದ್ದಕ್ಕೆ.....
ಏನೇ ಅಂದ್ರೂ ನೀನಿನ್ನು ಬರಿ ನೆನಪು ಕಣೇ.... ಮತ್ತೆ ಈಗ ಹೇಗಿದೀಯ.....? ಅಷ್ಟು ಸಿಟ್ಟು...ಸೊಕ್ಕನ್ನ ಕಾಪಾಡಿಕೊಂಡಿದೀಯಾ.....? ಎಷ್ಟು ಕಾಡತ್ತೆ ಗೆಳತಿ ನಿನ್ನ ನೆನಪು....ಈ ನೆನಪೇ ವಿಚಿತ್ರ ಆಲ್ವಾ....ಎಲ್ಲ ಜನರ ಮಧ್ಯೆ ನನ್ನ ಒಂಟಿಯಾಗಿಸತ್ತೆ...ಒಂಟಿ ಆಗೇ ಇದ್ದಾಗ ತುಂಬಾ ಜನರಿರುವ ಭಾವ ಕೊಡತ್ತೆ....anyway thank you ಕಣೇ ನಿಂಗೆ... ಮೂರು ವರ್ಷಾನು ಕಾಲೇಜಿಗೆ ಬರೋ ಹಾಗೆ ಮಾಡಿದ್ದಕ್ಕೆ.....
Subscribe to:
Posts (Atom)