ನೆನಪಿನರಮನೆ.....

  ಯಾಕೇ ಹುಡುಗಿ ಇಷ್ಟು ಕಾಡ್ತಿಯಾ...? ತೀರಾ ಇಷ್ಟು ಕಾಡುವಂತದ್ದು ಏನಿದೆ ಗೆಳತಿ ನಿನ್ನಲ್ಲಿ...? ಊರು ಬಿಟ್ಟು ಊರಿಗೆ ಬಂದ್ರೂ ಮಾಸದ ನೆನಪು... ಕಾಡಬೇಕು ಅಂತಾನೇ ಕಂಡ್ಯೇನೋ ಅನ್ನಿಸೋ ಹಾಗೆ ಮಾಡಿಬಿಟ್ಟಿದೆ ನಿನ್ನ ನೆನಪು. ನಿಂಗೊತ್ತಾ...ಕಾಲೇಜಿನ ಮೊದಲದಿನ ಕ್ಲಾಸ್ ರೂಂನಲ್ಲಿ ನೋಡಿಡ್ನಲಾ ಗೆಳತಿ ನಿನ್ನ ಆಗ್ಲೇ 'ಬಿದ್ದೆ'... ಲವ್ವೂ- ಪವ್ವೂ ಏನೂ ಅರ್ಥ ಅಗ್ದಿದ್ರೂ ಒಂದು ರೀತಿಯ ಸೆಳೆತಕ್ಕೆ, ಸಮ್ಮೋಹನಕ್ಕೆ ಒಳಗಾಗಿದ್ದಂತೂ  ನಿಜ.ಹೇಳ್ಕಳಕ್ಕೂ ಆಗದ..ಹೇಳದೆ ಇರಲಿಕ್ಕೂ ಆಗದ ಭಾವ. ಒಂದೇ  ಒಂದು ದಿನಾನೂ  ನಿನ್ನ ನೋಡದೇ ಇರಲಾಗದಂತಹ ಸ್ಥಿತಿ.ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ... ಎಷ್ಟೋ ದಿನ ಬಸ್ಸು ಸಿಗದಿದ್ರೂ ೮ ಕಿ.ಮೀ.ನಡೆದೇ ಕಾಲೇಜಿಗೆ ಬರ್ತಾ ಇದ್ದಿದ್ದು ನಿನ್ನ ನೋಡಲೆಂದೇ ಎಂದು...! practical record ಬರಿಯೋ ಅಷ್ಟು ಟೈಮು, ವ್ಯವಧಾನ, source ಎಲ್ಲ ಇದ್ರೂ ಬರಿಯದೆ  ಲ್ಯಾಬ್ ನಲ್ಲಿ ನನ್ನ ನೆಚ್ಚಿನ ಮಾಸ್ಟರ್ 'ಸುಬ್ರಾವ್' ಹತ್ರ ಬೈಸಿಕೊಳ್ತಾ ಇದ್ದಿದ್ದು... ಎಲ್ಲಾ ನಿನಗೆ ನೆನಪಿದೆ ಅಂದ್ಕೋತೀನಿ. ಆದ್ರೆ ಯಾಕೆ ಅಂತ ನಿಂಗೆ ಗೊತ್ತಿಲ್ಲಾ ಅಲಾ....? ಅವ್ರು ಬೈದಾಗ ನಿನ್ನ ಮುಖದ ಮೇಲೆ ನಗೂ ಬರ್ತಿತ್ತಲಾ ಆಗ ನೀನು ಎಷ್ಟು ಮುದ್ದಾಗಿ ಕಾಣ್ತಿದ್ದೆ ಗೊತ್ತಾ....ಇನ್ನೂ ಒಂದು ಕಾರಣ ಇದೆ ಗೆಳೆತಿ ಬರೀದೆ ಇರೋದಕ್ಕೆ.... ಬೈಸಿಕೊಂಡು ಆದ ಮೇಲೆ ಲ್ಯಾಬ್ ಮುಗೀತಿತ್ತಲ (ಬೈಸಿಕೊಲ್ದೆ ಲ್ಯಾಬ್ ಮುಗ್ದಿದ್ದೆ ಇಲ್ಲ) ಆಮೇಲೆ ನಿನ್ನ ರೆಕಾರ್ಡ್ ತಗೂಳೋ ಅವಕಾಶದಿಂದ ವಂಚಿತನಾಗಲು ನಾನು ಸುತಾರಾಂ ತಯಾರಿರ್ಲಿಲ್ಲ....ನಿನ್ಕಿಂತಾ ಚೆನ್ನಾಗಿ ರೆಕಾರ್ಡ್ ಬರಿಯೋರಿದ್ರೂ ನಿನ್ ರೆಕಾರ್ಡ್ ನೇ ತಗೋಬೇಕು ಅಂತ ಮನಸ್ಸು ಹಠ ಹಿಡಿದು ಬಿಡ್ತಿತ್ತು ಕಣೇ.....ಅದು ಹೇಗೆ ಮನದ ಮಾತು ಕೇಳದೆ ಇರ್ಲಿ ಹೇಳು... ನಿನ್ನ ಹಾಸ್ಟೆಲ್ ಮುಂದೆ ಹೋಗೋವಾಗ್ಲೆಲ್ಲ ಕಣ್ಣು ನಿನ್ನ ಹುಡುಕ್ತಾ ಇತ್ತು...ಆದ್ರೆ...ನೀನು ಒಂದ್ ದಿನಾನು ಕಾಣಲೇ ಇಲ್ವಲ್ಲಾ...ಯಾಕೆ ಗೆಳೆತಿ.......? ವರ್ಷಕ್ಕೆ ಒಂದು ಸಲದಂತೆ  ಮೂರು ವರ್ಷಕ್ಕೆ ಮೂರು ಸಲ ಲೈಬ್ರರಿಗೆ ಹೋದದ್ದು, ಅದೂ ನೀನು ಹೋಗಿದ್ದು ನೋಡಿ ಅಂದ್ರೆ 'ಸರ್'ಗೆ ಸಿಟ್ಟು ಬರಬಹುದು ಗೆಳೆತಿ. ಆದ್ರಿಂದ ಅದೊಂದು ಸತ್ಯ ನನ್ ಹತ್ರಾನೆ ಇರಲಿ. ನೀನು ಎದ್ರಿಗೆ ಇದ್ದಾಗ ಮಾತಾಡೋ ಆಸೇನೆಲ್ಲಾ ಅದುಮಿಟ್ಟೆ...ಆದ್ರೆ ಈಗ ಅವೇ ಆಸೆಗಳು ಒಂದ್ ಕೊರತೆ ಆಗಿ ಕಾಡ್ತಾ ಇದೆಯಲ್ಲಾ ಗೆಳತಿ.....ಮಾತಾಡಲೇ ಬೇಕು ಅನ್ನೋ ಮನಸ್ಸಿನ ಅಸೆ, ಮನೆಯಲ್ಲಿ ಮಾಡಿಕೊಂಡ ಸಂಕಲ್ಪ, ಗೆಳೆಯರು ನೀಡುತಿದ್ದ ಧೈರ್ಯ,ಎಲ್ಲಾನೂ ನಿನ್ನ ಒಂದೇ ಒಂದು ನೋಟ ಕರಗಿಸಿಬಿಡ್ತಿತ್ತಲಾ.....ಏನಿಟ್ಟಿದ್ದೀ ಅಂಥದ್ದು ನಿನ್ನ ಆ ಕಣ್ಣಲ್ಲಿ...? ನಿನಗೆ ಸಿಟ್ಟು ಜಾಸ್ತಿ ಆಲ್ವಾ.....? ಹಾಗೇನೆ ಸೊಕ್ಕು ಕೂಡ.... ಅದೆಂತಹ ಸಿಟ್ಟೇ ಗೆಳತಿ ನಿಂದು..! ಅವತ್ತು ಏನೋ ಅಂದ ಅಂತ  ಅವನಿಗೆ ಕ್ಯಾಂಟೀನ್ನಲ್ಲೆ ಎಲ್ಲರ ಎದ್ರಿಗೆ ಬೈದ್ಬಿಟ್ಯಲಾ...ಅದೂ ಒಂದು ಕಾರಣಾನೆ ನಿನ್ನ ಮಾತಾಡಿಸೋ ಅಸೆ ಜೀವಂತವಾಗಿದ್ದೋ ಧೈರ್ಯ ಕೈ ಕೊಡ್ಲಿಕ್ಕೆ. ಶುದ್ಧ ಚಾಮುಂಡಿ ಅವತಾರ...ನೆನಸ್ಕೊಂಡ್ರೆ ಈಗ್ಲೂ ಭಯ ಆಗತ್ತೆ....ಏನಂದ್ರು ಅಷ್ಟು ಸಿಟ್ಟು ಒಳ್ಳೇದಲ್ಲ ಗೆಳತಿ...ನೀನು ನಕ್ಕರೆ ಎಷ್ಟು ಚಂದ ಕಾಣ್ತೀ ಗೊತ್ತಾ.....ಹುಣ್ಣಿಮೆ ಬೆಳದಿಂಗಳ ತಂಪು ಇದೆ ಕಣೆ ನಿನ್ನ ನಗುನಲ್ಲಿ.                                                       
             ಏನೇ ಅಂದ್ರೂ ನೀನಿನ್ನು ಬರಿ ನೆನಪು ಕಣೇ.... ಮತ್ತೆ ಈಗ ಹೇಗಿದೀಯ.....? ಅಷ್ಟು ಸಿಟ್ಟು...ಸೊಕ್ಕನ್ನ ಕಾಪಾಡಿಕೊಂಡಿದೀಯಾ.....? ಎಷ್ಟು ಕಾಡತ್ತೆ ಗೆಳತಿ ನಿನ್ನ ನೆನಪು....ಈ ನೆನಪೇ ವಿಚಿತ್ರ ಆಲ್ವಾ....ಎಲ್ಲ ಜನರ ಮಧ್ಯೆ ನನ್ನ ಒಂಟಿಯಾಗಿಸತ್ತೆ...ಒಂಟಿ ಆಗೇ ಇದ್ದಾಗ ತುಂಬಾ ಜನರಿರುವ ಭಾವ ಕೊಡತ್ತೆ....anyway thank you ಕಣೇ ನಿಂಗೆ... ಮೂರು ವರ್ಷಾನು ಕಾಲೇಜಿಗೆ ಬರೋ ಹಾಗೆ ಮಾಡಿದ್ದಕ್ಕೆ.....                                                                    

2 comments: