ಆ ಮಳೆಯ ಹನಿಗೆ ಇದು ಮೊದಲ ಪ್ರಯಾಣ. ಮೋಡದಲ್ಲಿದ್ದ ತನ್ನವರನ್ನೆಲ್ಲ ಬಿಟ್ಟು ಧರೆಗೆ ಧುಮುಕಬೇಕಾದ ಘಳಿಗೆ ಬಂದಿದೆ. ಹನಿಯ ಮನದಲ್ಲೇನೋ ಒಂಥರಾ ದುಗುಡ, ದುಮ್ಮಾನ. ಇಷ್ಟು ದಿನ ಒಟ್ಟಿಗೆ ಮೋಡ ದಲ್ಲಿದ್ದ ಸಹವರ್ತಿಗಳೂ ಸಹ ಮಳೆಯ ರೂಪ ತಾಳಿ ಇಳೆಗೆ ಬರುತ್ತಾರಾದರೂ ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಸೇರುತ್ತೇವೋ ಇಲ್ಲವೋ ತಿಳಿಯದೆ ಮನ ಮಂಕಾಗಿತ್ತು. ಈ ಹನಿಗೆ ತನ್ನ ಜೀವನದ ಹಳೆಯ ನೆನಪುಗಳೆಲ್ಲ ಮರೆತಂತಿತ್ತು. ತಾನು ಹೇಗೆ ಈ ಮೋಡದಲ್ಲಿ ಒಂದಾದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.ಆದರೆ ಈ ಮೋಡದ ಮನೆಗೆ ಬಂದ ನಂತರ ಅಲ್ಲಿದ್ದವರೆಲ್ಲರೊಂದಿಗೂ ಬೆರೆತು... ಅದೆಲ್ಲಿಂದಲೋ ಹೊರಟು... ಸಾವಿರಾರು ಮೈಲಿ ಕ್ರಮಿಸಿ ಈಗ ಮೋಡ ಬಿಟ್ಟು ಧರೆಗಿಳಿಯಬೇಕಾದ ಸಮಯ ಬಂದಿತ್ತು. ಆ ಮೋಡದಲ್ಲೊಂದಾದ ದಿನ ತನಗೆ ಸಿಕ್ಕ ಸ್ವಾಗತವನ್ನು ನೆನೆದು ಮನ ತುಂಬಿ ಬಂದು ಕಣ್ಣೀರ ಹನಿ ಹೊರಟಿತ್ತು. ಅಂದೇ ತಿಳಿದದ್ದು ತಾನು ಸ್ವಾತಿ ಮಳೆಯ ಮೋಡಕ್ಕೆ ಸೇರಿದ್ದೇನೆಂದು ಹಾಗು ಸ್ವಾತಿ ಮಳೆಗೆ ಇದ್ದ ಅದರದೇ ಆದ ಸ್ಥಾನದ ಬಗ್ಗೆ ಅಂದೇ ಹೇಳಿದ್ದರು ಸುತ್ತಮುತ್ತಲಿದ್ದ ಹನಿಗಳು. ತಾನು ಮುತ್ತಾಗುವ ಅವಕಾಶ ಹೊಂದಿದ್ದೇನೆಂದು ತಿಳಿದು ಎದೆಯುಬ್ಬಿಸಿ ನಿಂತು ಸಂತಸಪಟ್ಟಿತ್ತು. ಈಗಲೂ ಈ ಹನಿಗೆ ಅದೇ ಆಸೆ... ತನ್ನ ಮೊದಲ ಪ್ರಯಾಣದಲ್ಲೇ ಕಪ್ಪೆ ಚಿಪ್ಪಿನ ಗರ್ಭಕ್ಕೆ ಸೇರಿ ತಾನು ಮುತ್ತಿನ ಜನ್ಮ ತಾಳಿ ಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆಯಬೇಕೆಂದು. ಆದರೂ, ಇಷ್ಟು ದಿನ ಜೊತೆಗಿದ್ದವರ ಅಗಲಿ ಮುತ್ತಾಗುವ ಆಸೆ ತನ್ನ ಸ್ವಾರ್ಥಕ್ಕೆ ಹಿಡಿದ ಕನ್ನಡಿಯೇನೋ ಎಂಬ ಶಂಕೆ ಈಗ.
ಸ್ವಾತಿ ಮಳೆಯ ಪ್ರತಿ ಹನಿಯೂ ಮುತ್ತಾಗುಹುದಿಲ್ಲ. ತಾನು ಕಪ್ಪೆ ಚಿಪ್ಪಿನೊಳಗೆ ಹೋದರೆ ಮಾತ್ರ ಮುತ್ತಾಗುವ ಭಾಗ್ಯ. ಇಲ್ಲದಿದ್ದರೆ...? ಯಾರ ಮನೆಯ ಹಂಚಿನ ಮೇಲೋ.. ಯಾವ ರಸ್ತೆಯ ಗುಂಡಿಯ ಒಳಗೋ... ಯಾವ ಕಾಡಿನ ಯಾವ ಮರದ ಎಲೆಯ ತುದಿಗೋ... ಅಥವಾ... ತನಗಿಂತ ಅದೆಷ್ಟೋ ಪಾಲು ದೊಡ್ದದಿರುವ ಬಯಲಿನಲ್ಲಿನ ಹುಲ್ಲಿನ ಬುಡವೊ... ತನ್ನ ಗತಿ ಇನ್ನೂ ನಿರ್ಧಾರವಾಗಿಲ್ಲ. ಮುತ್ತಾದರೆ ಮುಕ್ತಿ. ಇಲ್ಲದಿದ್ದರೆ ಇನ್ನೆಷ್ಟು ಬಾರಿ ತನ್ನ ಜೀವನ ಚಕ್ರ ಉರುಳಬೇಕೋ..? ಯೋಚನೆ ಸಾಗುತ್ತಿರುವಾಗಲೇ ಯಾರೋ ದೂಡಿದ ಅನುಭವ. ತನ್ನ ಪಯಣ ಪ್ರಾರಂಭ. ದೇವರೇ... ನನ್ನನ್ನ ಮುತ್ತಾಗಿಸಪ್ಪ ಎಂಬ ಮೋರೆ ಮುಗಿದಿತ್ತೋ ಇಲ್ವೋ, ಮೋಡ ಬಿಟ್ಟು ಭೂಮಿಗೆ ಅಭಿಮುಖವಾಗಿ ಹೊರಟಾಗಿತ್ತು. ಅಯ್ಯೋ... ಈ ಎತ್ತರ ನೋಡಿ ತಲೆ ತಿರುಗ್ತಾ ಇದೆ. ಈ ರಭಸದಿಂದ ಭೂಮಿಗೆ ಬಿದ್ರೆ ತಮ್ಮ ಮುಖಕ್ಕೆ ಏನೂ ಆಗಲ್ವೇ ಎಂದು ಪಕ್ಕದಲ್ಲಿ ತನ್ನಷ್ಟೇ ರಭಸದಿಂದ ಬೀಳ್ತಾ ಇದ್ದ ಹನಿಗೆ ಕೂಗಿ ಕೇಳಿತು. ಶರವೇಗದಲ್ಲಿ ಬೀಳುವಾಗ ಪಕ್ಕದ ಹನಿ ಹೇಳಿದ್ದು ಸರಿಯಾಗಿ ಕೇಳಲಿಲ್ಲ. ಕೇಳಿದ್ದಿಷ್ಟು- ತಾವು ನೀರ ಹನಿಗಳು. ಎಷ್ಟೇ ಎತ್ತರದಿಂದ, ಎಷ್ಟೇ ರಭಸವಾಗಿ, ಎಲ್ಲಿಗೆ ಬಿದ್ದರೂ ತಮಗೆ ಮತ್ತೆ ತಮ್ಮ ಆಕಾರ ತಾಳುವ ಶಕ್ತಿ ಇದೆ. ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಟಪ್... ಓ.. ಮನೆಯ ಹಂಚಿನ ಮೇಲೆ ಬಿದ್ದಿದ್ದೇನೆ. ನಾನು ಮುತ್ತಾಗಲಿಲ್ಲ. ಅರೆ... ಎಲ್ಲರು ಮುಂದೆ ಹೋಗುತ್ತಿದ್ದಾರೆ. ತಾನೇಕೆ ಬಿದ್ದಲ್ಲಿಯೇ ನಿಂತುಬಿಟ್ಟೆ. ಕೈ, ಕಾಲು ಮುಖ ಎಲ್ಲವನ್ನು ಮುಟ್ಟಿ ನೋಡಿಕೊಂಡಿತು. ಎಲ್ಲವೂ ಸರಿಯಾಗೇ ಇದೆ ಆದರೆ ತಾನೇಕೆ ಚಲಿಸುತ್ತಿಲ್ಲ? ನಾನು ಸಿಕ್ಕಿಕೊಂಡಿದ್ದೇನೆ. ಬಿದ್ದ ರಭಸಕ್ಕೆ ಬಿದ್ದಲ್ಲಿಂದ ಹಾರಿ ಪಕ್ಕದಲ್ಲಿದ್ದ ಕಸಕ್ಕೆ ಬಂದು ಸಿಕ್ಕಿಕೊಂಡಿದ್ದೇನೆಂದು ತಿಳಿಯಿತು. ತನ್ನ ಜನ್ಮ ಇಲ್ಲೇ ನಶಿಸುಹುದೆಂದು ದುಃಖಿಸುವಾಗ ಯಾರೋ ಕಾಲೆಳೆದಂತಾಯಿತು. ಓ.. ಬೀಳುವಾಗ ಪಕ್ಕದಲ್ಲಿದ್ದ ಹನಿ... ತನ್ನನ್ನು ಇಲ್ಲಿಂದ ಬಿಡಿಸಲು ಕಾಲೆಳೆಯುತ್ತಿದೆ. ಅದರ ಶ್ರಮ ಮೊದಲಿಗೆ ವ್ಯರ್ಥವಾಯಿತಾದರೂ ಅದರ ಪ್ರಯತ್ನಕ್ಕೆ ಹತ್ತಾರು ಹನಿಗಳ ಸಹಾಯ ದೊರೆತ ನಂತರ ಫಲ ನೀಡಿತು. ಈಗ ನಾನು ಬಂಧಿ ಮುಕ್ತ. ಹಂಚಿನ ಮೇಲೆ ನಾಜೂಕಾಗಿ, ಎರಡು ಹಂಚುಗಳ ನಡುವೆ ಇದ್ದ ಸಣ್ಣ ಜಾಗದಲ್ಲಿ ಬೀಳದಂತೆ ಜಾರಿ... ಟಪ್... ಮಣ್ಣಿನ ವಾಸನೆ ಮೂಗಿಗೆ ಬಡೀತಾ ಇದೆ. ಓ.. ಭೂಮಿಗೆ ಬಂದಿದ್ದೇನೆ. ಇನ್ನೂ ತಾನು ಸಾಗರ ಸೇರಬೇಕು. ಈ ಪಯಣದಲ್ಲಂತೂ ಮುತ್ತಾಗಲಿಲ್ಲ. ಸಾಗರ ಸೇರಿ ಸೂರ್ಯನ ಬಿಸಿಲಿನೊಡನೆ ಆಕಾಶಕ್ಕೆ ಹಾರಿ ಮತ್ತೆ ಮೋಡವಾಗಿ ಭೂಮಿಗಿಳಿಯಬೇಕು. ಮತ್ತದೇ ಸ್ವಾತಿ ಮಳೆಯ ಮೋಡವಾಗುತ್ತೇನೋ ಇಲ್ವೋ ಗೊತ್ತಿಲ್ಲ. ಅದೆಷ್ಟೋ ಹನಿಗಳಲ್ಲಿ ತಾನೂ ಒಂದಾಗಿ ಎತ್ತ ಹೋಗುತ್ತಿದ್ದೇನೆ ಎಂಬುದೂ ತಿಳಿಯದೆ ತನ್ನ ಭವಿಷ್ಯವನ್ನು ಯೋಚಿಸುತ್ತ ಸಾಗುತ್ತಿತ್ತು. ಒಮ್ಮೆ ಮೋಡದಿಂದ ಬೀಳುವಾಗಿನ ರಭಸ ಮತ್ತೊಮ್ಮೆ ನಿಂತ ನೀರಿನಷ್ಟೇ ಮಂದ.. ಅಂತೂ ಪಯಣ ಸಾಗುತ್ತಿತ್ತು. ಅಣ್ಣಾ... ಸಮುದ್ರ ಇನ್ನೂ ಎಷ್ಟು ದೂರವಿದೆ ಎಂದು ಮುಂದೆ ಹೋಗುತ್ತಿದ್ದ ಹನಿಯನ್ನು ಕೇಳಿತು. ಅಯ್ಯೋ.. ಮಂಕೆ..! ನಮ್ಮ ಪ್ರಯಾಣ ಈಗಿನ್ನೂ ಪ್ರಾರಂಭವಾಗಿದೆ. ಈ ಚರಂಡಿಯಿಂದ ಹೊಳೆ ಸೇರಿ, ಹೊಳೆಯಿಂದ ನದಿ, ನದಿಯಿಂದ ಸಮುದ್ರ ಇನ್ನೆರಡು ತಿಂಗಳಾದರೂ ಬೇಕು ಎಂದಿತು ಎದುರಿನ ಹನಿ. ಅಬ್ಬ.. ಏನಿದು ವಾಸನೆ..? ಗಟಾರದ ಗಬ್ಬಿಗೆ ಮೂಗು ಮುಚ್ಚಿಕೊಂಡು ಸಾಗತೊಡಗಿತು.
ಎರಡು ತಿಂಗಳ ನಿರಂತರ ಚಲನೆಯಿಂದ ಸಮುದ್ರ ಸೇರಿಯಾಗಿತ್ತು. ಒಮ್ಮೆ ಕಡಲ ತೀರ, ಮತ್ತೊಮ್ಮೆ ಕಡಲಾಳ.. ಹೀಗೆ.. ಎತ್ತಲೆತ್ತಲೋ ಬದುಕು ಸಾಗುತ್ತಿತ್ತು. ಸಧ್ಯಕ್ಕೆ ಸೂರ್ಯ ರಶ್ಮಿಗೆ ಕಾಯುತ್ತಾ ಸಮುದ್ರದ ಮೇಲೆ ತೇಲುತ್ತಿತ್ತು. ಸೂರ್ಯನ ತಾಪ ಖಾರವಾಗಲು ಮತ್ತೊಂದು ತಿಂಗಳು ಕಾಯಬೇಕು. ಹನಿ ಹಣೆಬರಹವೋ.. ವಿಧಿಯ ಕುಚೆಷ್ಟೆಯೋ.. ಅಷ್ಟರಲ್ಲಿ ಹೋದ ಹಡಗಿನಿಂದ ತೈಲ ಸುರಿಯಿತು. ತೈಲ ಬಂಧಿಯಾದ ಹನಿ ಬಿಡುಗಡೆಗೆ ಇನ್ನೂ ಕಾಯ್ತಾ ಇದೆ. ಬಂಧಮುಕ್ತವಾದರೆ ಅದರ ಕನಸು ಕೈಗೂಡಬಹುದೇನೋ. ಆಸೆ ಕಮರುವ ಮೊದಲು ಶಿಶಿರನ ತಾಪ ತಾಗಿದರೆ ಮತ್ತೊಮ್ಮೆ ಮೋಡವಾಗಬಹುದು. ಇಲ್ಲದಿದ್ದರೆ...?
ವಿ. ಸೂ. ೨೨/ ೧೧/ ೧೧/ ರ ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ. ಪ್ರಕಟ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು.
This comment has been removed by the author.
ReplyDeleteGood one....
ReplyDeletedhanyavadagalu
ReplyDelete