ಮಧ್ಯಾಹ್ನದ ಊಟದ ನಂತರದ ನಿದ್ರೆಯ ಸುಖ ಅನುಭವಿಸಿದವನೇ ಬಲ್ಲ. ಅದ್ಯಾವ ಮೇಷ್ಟ್ರು ಅದೆಂಥ ಪಾಠವನ್ನೇ ಮಾಡ್ತಾ ಇರಲಿ ಊಟವಾದ ಮೇಲೆ ನಿದ್ರಿಸಿಯೇ ಬಿಡುವ ಹಠ ಮಾಡಿದ್ದಾಗಿದೆ. ಇವತ್ತಂತು ಸ್ವಲ್ಪ ಹೆಚ್ಚೆನ್ನುವಷ್ಟೇ ತಿಂದಿದ್ದೆ. ಅದರ ಪರಿಣಾಮವೋ ಎಂಬಂತೆ ತರಗತಿ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ನಿದ್ರಾ ದೇವಿಯ ಮಡಿಲು ಹೊಕ್ಕಿದ್ದೆ. ಮೇಷ್ಟ್ರು ಬಂದಿದ್ದೊಂದು ಗೊತ್ತು. ನಂತರದ್ದೆಲ್ಲ ಕೇಳಿದೆ ಅಂದ್ರೆ ಕೇಳಿದೆ, ಇಲ್ಲ ಅಂದ್ರೆ ಇಲ್ಲ ಎನ್ನುವಂತಿತ್ತು. ಒಮ್ಮೆಲೇ ಯಾರದೋ ಧ್ವನಿ "ಎಕ್ಸ್ಕೋಸ್ ಮಿ ಸರ್.. ಸ್ವಲ್ಪ ಅವನ್ನ ಕರೀತೀರ" ಅಂತ ನನ್ನೆಡೆಗೆ ಬೊಟ್ಟು ಮಾಡಿದಂತಾಯಿತು. ಮೇಷ್ಟ್ರ ಅಪ್ಪಣೆಗೆ ಕಾಯದೆ ಸೀದಾ ಅವರೆಡೆಗೆ ಹೋಗಿ 'ಯಾರು ನೀವು..?' ಎಂದೆ. ಅದಕ್ಕೆ ಆತ ನಕ್ಕು 'ನನ್ನ ಗುರುತು ಸಿಗಲಿಲ್ಲವೇ..? ನಾನು ದೇವರು' ಅಂದ. ನನಗೋ ಗಾಬರಿಯಾಯಿತು. ದೇವರು ನೋಡಲು ದೇವರಂತೆ ಇಲ್ಲ. ಇದ್ಯಾವ ದೇವರು...? ಕೈಯಲ್ಲಿ ಚಕ್ರ ಇಲ್ಲ, ವಿಷ್ಣು ಅಲ್ಲ... ಕೊಳಲು ಇಲ್ಲ, ಕೃಷ್ಣ ಇಲ್ಲ... ಕೊರಳಲ್ಲಿ ಹಾವಿಲ್ಲ, ಶಿವ ಅಲ್ಲ... ಹೀಗೆ ನನಗೆ ಚಿಕ್ಕವಯಸ್ಸಿನಿಂದಲೂ ತಿಳಿದಿದ್ದ, ಸ್ವಲ್ಪ ಜನಪ್ರಿಯರಾಗಿದ್ದ ಎಲ್ಲಾ ದೇವರ ಹೋಲಿಕೆ ಮಾಡಿ ನೋಡಿದರೂ ಗುರುತು ಹತ್ತಲಿಲ್ಲ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸವಿರದ ಕಾರಣ ಹಾಗು ದೇವರು ಮಾರುವೇಷದಲ್ಲಿ ಬರುತ್ತಾನೆಂದು ತಿಳಿದಿದ್ದ ಕಾರಣ ' ನೀನು ಯಾವ ದೇವರು..?' ಎಂದು ಕೇಳಿಯೇ ಬಿಟ್ಟೆ. 'ನಾನು ಕಣಪ್ಪ... ಶಿವಪ್ಪ...' ಎಂದ. 'ಅಯ್ಯೋ ಶಿವನೆ...! ನೀನು ಶಿವನೆ...? ಕತ್ತಲ್ಲಿದ್ದ ಹಾವೆಲ್ಲಿ' ಎಂದದ್ದಕ್ಕೆ ಇಲ್ಲಿ ಪ್ರಾಣಿ ದಯಾ ಸಂ ಘದವರಿಂದ ತೊಂದರೆ ಆದೀತು ಎಂದು ಕೈಲಾಸದಲ್ಲೇ ಬಿಟ್ಟು ಬಂದೆ ಅಂದ. ಮತ್ತೆ ಜಡೆ..? ಉದ್ದನೆ ಜಟೆ ಅನಾಗರೀಕತೆಯ ಸಂಕೇತ ಎಂದಾರು ಎಂದು ಅದನ್ನೂ ಅಲ್ಲಿಯೇ ಬಿಟ್ಟು ಬಂದೆ ಅಂದ. ಮೊದಲನೇ ಉತ್ತರ ಸ್ವಲ್ಪ ಲಾಜಿಕಲ್ ಅನ್ಸಿದ್ರೂ ಎರಡನೆಯದು ಸಮಂಜಸ ಅನ್ನಿಸಲಿಲ್ಲ. ಸರಿ... ಈಗೇನು ಬಂದಿದ್ದು ಅನ್ನೋ ಪ್ರಶ್ನೆ ನಂದು. ನನ್ನನ್ನ ಹುಡುಕಿಕೊಂಡು ಸ್ವತಃ ದೇವರೇ ಬಂದಿದ್ದು ನನಗೆ ಸ್ವಲ್ಪ ಗಾಬರಿಯನ್ನು ಉಂಟುಮಾಡಿತ್ತು. ದೇವರದು ನೇರ ಪ್ರಶ್ನೆ ' ನೀನು ಆಸ್ತಿಕನೋ..? ಅಥವಾ ನಾಸ್ತಿಕನೋ..?' ನನಗೆ ನನ್ನ ಮೇಲಿದ್ದ ಸಂಶಯ ಈಗ ದೇವರಿಗೂ ಬಂದಿತ್ತು. ಆತನ ನೇರ ಪ್ರಶ್ನೆಗೆ ನನ್ನದೂ ಅಷ್ಟೇ ನೇರ ಎನ್ನುವಂತೆ, ದೇವರೇ ಇಲ್ಲ, ದೇವರು ಎಂಬುದೇ ಸುಳ್ಳು, ಭ್ರಮೆ, ಅದು ಕೇವಲ ಅಲಂಕಾರಗೊಂಡ ಕಲ್ಲು ಎಂದಿಲ್ಲ.. ನಾನು ನಾಸ್ತಿಕ ಅಲ್ಲ. ದೇವರಿದಾನೆ ಅಂತ ಮೂರು ಹೊತ್ತು ವಿಭೂತಿ ಬಡಿದು, ಮೂಗು ಮುಚ್ಚಿ ಕೂತಿಲ್ಲ, ದಿನಕ್ಕೆರಡು ಬಾರಿ ದೇವಸ್ಥಾನ ಸುತ್ ತಿಲ್ಲ... ನಾನು ಆಸ್ತಿಕ ಅಲ್ಲ. ಎರಡು ಅಭಿಪ್ರಾಯಗಳ ನಡುವೆ ನನ್ನ ದಾರಿ ಎಂದೆ. ದೇವರಂಥ ದೇವರೇ ಗಾಬರಿಗೊಂಡ ಸಮಯ ಅದು. ಅಡ್ಡ ಗೋಡೆಯ ಮೇಲೆ ದೀಪ ಇರಿಸೋದು ಇತ್ತೀಚಿಗೆ ಅಭ್ಯಾಸ ಆಗಿತ್ತು. ನಾನು ನಾಸ್ತಿಕ ಎಂದರೆ ದೇವರಿಗೆ ಕೋಪ ಬಂದೀತು. ಆತನಿಗೆ ಕೋಪ ಬಂದಾಗ ಅದೆಂತೆಂಥ ಶಾಪ ಕೊಡ್ತಾನೆ ಅಂತ ಹಳೇ ಸಿನಿಮಾಗಳನ್ನ ನೋಡಿ ತಿಳಿದಿತ್ತು. ಆಸ್ತಿಕ ಎಂದರೆ ಎಲ್ಲಿ ಕಾಣಿಕೆ ಎಂದಾನು ಅನ್ನೋ ಭಯ. ಹಾಗಾಗಿ ಗೋಡೆ ಮೇಲೆ ದೀಪ ಇಟ್ಟು, ಎರಡೂ ಕಡೆ ಬೆಳಕು ತೋರ್ಸಿ ದೇವರನ್ನ ಕತ್ತಲಲ್ಲೇ ಕೂರಿಸಿದ್ದೆ. ದೇವರ ಮೇಲೆ ನನಗೆ ಇದ್ದ ಅದಮ್ಯ ಕೋಪದ ಮೂಲ ತಿಳಿಯಲು ಬಂದಿದ್ದನೆಂದು ತಿಳಿಯಿತು ನಂತರದ ಮಾತುಗಳಿಂದ. ವಿಷಯ ಅರ್ಧ ಸತ್ಯವಾಗಿತ್ತು. ನನಗೆ ದೇವರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಆತನ ಪಾಲಿಸಿಗಳು ನನ್ನ ಅಭಿಪ್ರಾಯಕ್ಕೆ ಹೋಲುತ್ತಿರಲಿಲ್ಲ. ಪ್ರಪಂಚದಲ್ಲಿ ಅರ್ಥವಾಗದೆ ಇರೋದಕ್ಕೆ ಗಣಿತ ಅಂತ ಕರೀತಾರೆ ಅನ್ನೋದು ನನ್ನ ತಿಳುವಳಿಕೆ. ಆದರೆ ಅರ್ಥ ಮಾಡಿಕೊಳ್ಳಲು ಅದಕ್ಕಿಂತ ಕಷ್ಟ ಅಂದ್ರೆ ದೇವರ ಪಾಲಿಸಿಗಳು. ಅರ್ಥವಾಗದ್ದನ್ನು ದ್ವೇಷಿಸೋದು ನನ್ನ ಪರಿಪಾಠ. ಅದನ್ನೇ ದೇವರಿಗೂ ತಿಳಿಸಿದೆ. ಆತನ ಮೇಲೆ ನನಗೆ ಸಿಟ್ಟಿಲ್ಲವೆಂದು ತಿಳಿದು ದೇವರಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಅಂತೆಯೇ ಆತನ ಯಾವ್ಯಾವ ಪಾಲಿಸಿಗಳ ಮೇಲೆ ನನ್ನ ಕೋಪ ಎಂದು ತಿಳಿಯುವ ಕುತೂಹಲ ದೇವರಿಗೆ. ಕೇಳಿಯೇ ಬಿಟ್ಟ. ತೀರಾ ದೇವರಿಗೂ ಬೇಜಾರು ಮಾಡೋದು ಇಷ್ಟವಿಲ್ಲದ್ದರಿಂದ ಸ್ವಲ್ಪ ನಯವಾಗಿಯೇ ಹೇಳಿದೆ, 'ನೀನು ಎಲ್ಲದಕ್ಕೂ ಒಂದು ನಿಯಮ ಅಂತ ಮಾಡಿದೀಯ. ಆದ್ರೆ ನೀನೆ ಆ ನಿಯಮಗಳಿಗೆ ಬದ್ದನಾಗಿಲ್ಲ. ಪ್ರತಿ ನಿಯಮಕ್ಕೂ ಒಂದು ಸ್ಟಾರ್ ಹಾಕಿ, ಕೆಳಗೆ ಕಂಡಿಶನ್ಸ್ ಅಪ್ಲೇ ಅಂತ ಬರೀತೀಯ. ಹೊಟ್ಟೆ ತುಂಬೋ ಅಷ್ಟು ತಿನ್ಸಿ ನಂತರ ಬಿರಿಯಾನಿ ಕೊಡ್ತೀಯ, ಹೊಟ್ಟೆ ಹಸಿವು ಎಂದಾಗ ತುತ್ತು ಅನ್ನಾನು ಕೊಡಲ್ಲ, ಸರಿಯಿಲ್ಲ ನೀನು' ಅಂದೆ. ದೇವರ ಮುಖದ ಮೇಲೆ ಮೂಡಿದ ಪ್ರಶ್ನೆ ನೋಡಿ ಇನ್ನೂ ವಿವರಣೆಯ ಅಗತ್ಯವಿದೆಯೆಂದು ತಿಳಿಯಿತು. 'ನೋಡಪ್ಪ ಶಿವಪ್ಪ... ನನಗೆ ನನ್ನ ಹೊಟ್ಟೆಪಾಡಿನ ಚಿಂತೆ ಸ್ವಲ್ಪ ಜಾಸ್ತಿ. ನೀನೇನ್ ಮಾಡ್ತೀಯ ಅಂದ್ರೆ... ಮಧ್ಯಾಹ್ನ ಊಟ ಸಿಗತ್ತೆ ಅನ್ನೋವಾಗ ಊಟಕ್ಕೆ ಮೊದಲು ಒಂದಷ್ಟು ತಿನ್ನೋಕೆ ಕೊಡ್ತೀಯ. ನೀನು ಕೊಟ್ಟೆ ಅಂತ ತಿನ್ನೋದಾಯ್ತು. ಊಟ ಆದ ಮೇಲೂ ಏನೇನೋ ತಿನ್ನೋಕೆ ಕೊಡ್ತೀಯ. ನನ್ನ ಹೊಟ್ಟೆಗೆ ಅದೇನೂ ಹೆಚ್ಚಲ್ಲ ಬಿಡು. ಹಡಗು ತುಂಬ್ಸೋಕೆ ಹೋದವ ವಾಪಸ್ ಬಂದ್ನಂತೆ ಆದ್ರೆ ಹೊಟ್ಟೆ ತುಂಬ್ಸಕ್ಕೆ ಹೋದವ ವಾಪಸ್ ಬರಲೇ ಇಲ್ವಂತೆ. ಹೊಟ್ಟೆ ಗಾತ್ರ ಅಂತದ್ದು. ಆದ್ರೆ ಹೊಟ್ಟೆ ಹಸಿವು ಅಂದಾಗ ಊಟಾನು ಕೊಡಲ್ಲ, ಊಟದ ನಂತರ, ಮೊದಲು ಎಲ್ಲ ಕೊಡ್ತಾ ಇದ್ಯಲ ಅದೂ ಇಲ್ಲ. ಒಂದಿಡೀ ದಿನ ಉಪವಾಸ. ಹೊಟ್ಟೆಗೊಸ್ಕರನೆ ಬದುಕೋ ನನ್ನಂಥವರಿಗೆ ಇವು ಸರಿ ಕಾಣಲ್ಲಪ' ಅಂದೆ. ನನ್ನ ಮಾತು ದೇವರ ಮನಸ್ಸನ್ನ ತಟ್ತೂ ಅಂತ ಕಾಣತ್ತೆ, ಈ ವಿಚಾರವಾಗಿ ಸ್ವಲ್ಪ ವಿಚಾರ ಮಾಡಬೇಕು. ನಾಳೆ ಮತ್ತೆ ೯.೩೦ ಕ್ಕೆ ಬರ್ತೀನಿ ಅಂತ ಹೊರಟೆ ಬಿಟ್ಟ. ಪಕ್ಕದಲ್ಲಿದವ ತಟ್ಟಿದ್ದರಿಂದ ಎಚ್ಚರಗೊಂಡು ಕಣ್ಣು ಬಿಟ್ಟು ನೋಡ್ತೀನಿ ಮೇಷ್ಟ್ರು ಬಾಗಿಲ ಬಳಿ ಹೋ ಗ್ತಾ ಇದ್ರು. ನಾಳೆ ೯.೩೦ ಕ್ಕೆ ಕ್ಲಾಸ್ ತಗೋತೀನಿ ಅಂದು ಹೋದರಂತೆ ಅನ್ನೋದು ಕೊನೆಗೆ ತಿಳಿದ ವಿಚಾರ.
No comments:
Post a Comment