ಮಧ್ಯಾಹ್ನದ ಊಟದ ನಂತರದ ನಿದ್ರೆಯ ಸುಖ ಅನುಭವಿಸಿದವನೇ ಬಲ್ಲ. ಅದ್ಯಾವ ಮೇಷ್ಟ್ರು ಅದೆಂಥ ಪಾಠವನ್ನೇ ಮಾಡ್ತಾ ಇರಲಿ ಊಟವಾದ ಮೇಲೆ ನಿದ್ರಿಸಿಯೇ ಬಿಡುವ ಹಠ ಮಾಡಿದ್ದಾಗಿದೆ. ಇವತ್ತಂತು ಸ್ವಲ್ಪ ಹೆಚ್ಚೆನ್ನುವಷ್ಟೇ ತಿಂದಿದ್ದೆ. ಅದರ ಪರಿಣಾಮವೋ ಎಂಬಂತೆ ತರಗತಿ ಪ್ರಾರಂಭವಾದ ಹತ್ತೇ ನಿಮಿಷಕ್ಕೆ ನಿದ್ರಾ ದೇವಿಯ ಮಡಿಲು ಹೊಕ್ಕಿದ್ದೆ. ಮೇಷ್ಟ್ರು ಬಂದಿದ್ದೊಂದು ಗೊತ್ತು. ನಂತರದ್ದೆಲ್ಲ ಕೇಳಿದೆ ಅಂದ್ರೆ ಕೇಳಿದೆ, ಇಲ್ಲ ಅಂದ್ರೆ ಇಲ್ಲ ಎನ್ನುವಂತಿತ್ತು. ಒಮ್ಮೆಲೇ ಯಾರದೋ ಧ್ವನಿ "ಎಕ್ಸ್ಕೋಸ್ ಮಿ ಸರ್.. ಸ್ವಲ್ಪ ಅವನ್ನ ಕರೀತೀರ" ಅಂತ ನನ್ನೆಡೆಗೆ ಬೊಟ್ಟು ಮಾಡಿದಂತಾಯಿತು. ಮೇಷ್ಟ್ರ ಅಪ್ಪಣೆಗೆ ಕಾಯದೆ ಸೀದಾ ಅವರೆಡೆಗೆ ಹೋಗಿ 'ಯಾರು ನೀವು..?' ಎಂದೆ. ಅದಕ್ಕೆ ಆತ ನಕ್ಕು 'ನನ್ನ ಗುರುತು ಸಿಗಲಿಲ್ಲವೇ..? ನಾನು ದೇವರು' ಅಂದ. ನನಗೋ ಗಾಬರಿಯಾಯಿತು. ದೇವರು ನೋಡಲು ದೇವರಂತೆ ಇಲ್ಲ. ಇದ್ಯಾವ ದೇವರು...? ಕೈಯಲ್ಲಿ ಚಕ್ರ ಇಲ್ಲ, ವಿಷ್ಣು ಅಲ್ಲ... ಕೊಳಲು ಇಲ್ಲ, ಕೃಷ್ಣ ಇಲ್ಲ... ಕೊರಳಲ್ಲಿ ಹಾವಿಲ್ಲ, ಶಿವ ಅಲ್ಲ... ಹೀಗೆ ನನಗೆ ಚಿಕ್ಕವಯಸ್ಸಿನಿಂದಲೂ ತಿಳಿದಿದ್ದ, ಸ್ವಲ್ಪ ಜನಪ್ರಿಯರಾಗಿದ್ದ ಎಲ್ಲಾ ದೇವರ ಹೋಲಿಕೆ ಮಾಡಿ ನೋಡಿದರೂ ಗುರುತು ಹತ್ತಲಿಲ್ಲ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸವಿರದ ಕಾರಣ ಹಾಗು ದೇವರು ಮಾರುವೇಷದಲ್ಲಿ ಬರುತ್ತಾನೆಂದು ತಿಳಿದಿದ್ದ ಕಾರಣ ' ನೀನು ಯಾವ ದೇವರು..?' ಎಂದು ಕೇಳಿಯೇ ಬಿಟ್ಟೆ. 'ನಾನು ಕಣಪ್ಪ... ಶಿವಪ್ಪ...' ಎಂದ. 'ಅಯ್ಯೋ ಶಿವನೆ...! ನೀನು ಶಿವನೆ...? ಕತ್ತಲ್ಲಿದ್ದ ಹಾವೆಲ್ಲಿ' ಎಂದದ್ದಕ್ಕೆ ಇಲ್ಲಿ ಪ್ರಾಣಿ ದಯಾ ಸಂ ಘದವರಿಂದ ತೊಂದರೆ ಆದೀತು ಎಂದು ಕೈಲಾಸದಲ್ಲೇ ಬಿಟ್ಟು ಬಂದೆ ಅಂದ. ಮತ್ತೆ ಜಡೆ..? ಉದ್ದನೆ ಜಟೆ ಅನಾಗರೀಕತೆಯ ಸಂಕೇತ ಎಂದಾರು ಎಂದು ಅದನ್ನೂ ಅಲ್ಲಿಯೇ ಬಿಟ್ಟು ಬಂದೆ ಅಂದ. ಮೊದಲನೇ ಉತ್ತರ ಸ್ವಲ್ಪ ಲಾಜಿಕಲ್ ಅನ್ಸಿದ್ರೂ ಎರಡನೆಯದು ಸಮಂಜಸ ಅನ್ನಿಸಲಿಲ್ಲ. ಸರಿ... ಈಗೇನು ಬಂದಿದ್ದು ಅನ್ನೋ ಪ್ರಶ್ನೆ ನಂದು. ನನ್ನನ್ನ ಹುಡುಕಿಕೊಂಡು ಸ್ವತಃ ದೇವರೇ ಬಂದಿದ್ದು ನನಗೆ ಸ್ವಲ್ಪ ಗಾಬರಿಯನ್ನು ಉಂಟುಮಾಡಿತ್ತು. ದೇವರದು ನೇರ ಪ್ರಶ್ನೆ ' ನೀನು ಆಸ್ತಿಕನೋ..? ಅಥವಾ ನಾಸ್ತಿಕನೋ..?' ನನಗೆ ನನ್ನ ಮೇಲಿದ್ದ ಸಂಶಯ ಈಗ ದೇವರಿಗೂ ಬಂದಿತ್ತು. ಆತನ ನೇರ ಪ್ರಶ್ನೆಗೆ ನನ್ನದೂ ಅಷ್ಟೇ ನೇರ ಎನ್ನುವಂತೆ, ದೇವರೇ ಇಲ್ಲ, ದೇವರು ಎಂಬುದೇ ಸುಳ್ಳು, ಭ್ರಮೆ, ಅದು ಕೇವಲ ಅಲಂಕಾರಗೊಂಡ ಕಲ್ಲು ಎಂದಿಲ್ಲ.. ನಾನು ನಾಸ್ತಿಕ ಅಲ್ಲ. ದೇವರಿದಾನೆ ಅಂತ ಮೂರು ಹೊತ್ತು ವಿಭೂತಿ ಬಡಿದು, ಮೂಗು ಮುಚ್ಚಿ ಕೂತಿಲ್ಲ, ದಿನಕ್ಕೆರಡು ಬಾರಿ ದೇವಸ್ಥಾನ ಸುತ್ ತಿಲ್ಲ... ನಾನು ಆಸ್ತಿಕ ಅಲ್ಲ. ಎರಡು ಅಭಿಪ್ರಾಯಗಳ ನಡುವೆ ನನ್ನ ದಾರಿ ಎಂದೆ. ದೇವರಂಥ ದೇವರೇ ಗಾಬರಿಗೊಂಡ ಸಮಯ ಅದು. ಅಡ್ಡ ಗೋಡೆಯ ಮೇಲೆ ದೀಪ ಇರಿಸೋದು ಇತ್ತೀಚಿಗೆ ಅಭ್ಯಾಸ ಆಗಿತ್ತು. ನಾನು ನಾಸ್ತಿಕ ಎಂದರೆ ದೇವರಿಗೆ ಕೋಪ ಬಂದೀತು. ಆತನಿಗೆ ಕೋಪ ಬಂದಾಗ ಅದೆಂತೆಂಥ ಶಾಪ ಕೊಡ್ತಾನೆ ಅಂತ ಹಳೇ ಸಿನಿಮಾಗಳನ್ನ ನೋಡಿ ತಿಳಿದಿತ್ತು. ಆಸ್ತಿಕ ಎಂದರೆ ಎಲ್ಲಿ ಕಾಣಿಕೆ ಎಂದಾನು ಅನ್ನೋ ಭಯ. ಹಾಗಾಗಿ ಗೋಡೆ ಮೇಲೆ ದೀಪ ಇಟ್ಟು, ಎರಡೂ ಕಡೆ ಬೆಳಕು ತೋರ್ಸಿ ದೇವರನ್ನ ಕತ್ತಲಲ್ಲೇ ಕೂರಿಸಿದ್ದೆ. ದೇವರ ಮೇಲೆ ನನಗೆ ಇದ್ದ ಅದಮ್ಯ ಕೋಪದ ಮೂಲ ತಿಳಿಯಲು ಬಂದಿದ್ದನೆಂದು ತಿಳಿಯಿತು ನಂತರದ ಮಾತುಗಳಿಂದ. ವಿಷಯ ಅರ್ಧ ಸತ್ಯವಾಗಿತ್ತು. ನನಗೆ ದೇವರ ಮೇಲೆ ಯಾವುದೇ ದ್ವೇಷವಿರಲಿಲ್ಲ. ಆದರೆ ಆತನ ಪಾಲಿಸಿಗಳು ನನ್ನ ಅಭಿಪ್ರಾಯಕ್ಕೆ ಹೋಲುತ್ತಿರಲಿಲ್ಲ. ಪ್ರಪಂಚದಲ್ಲಿ ಅರ್ಥವಾಗದೆ ಇರೋದಕ್ಕೆ ಗಣಿತ ಅಂತ ಕರೀತಾರೆ ಅನ್ನೋದು ನನ್ನ ತಿಳುವಳಿಕೆ. ಆದರೆ ಅರ್ಥ ಮಾಡಿಕೊಳ್ಳಲು ಅದಕ್ಕಿಂತ ಕಷ್ಟ ಅಂದ್ರೆ ದೇವರ ಪಾಲಿಸಿಗಳು. ಅರ್ಥವಾಗದ್ದನ್ನು ದ್ವೇಷಿಸೋದು ನನ್ನ ಪರಿಪಾಠ. ಅದನ್ನೇ ದೇವರಿಗೂ ತಿಳಿಸಿದೆ. ಆತನ ಮೇಲೆ ನನಗೆ ಸಿಟ್ಟಿಲ್ಲವೆಂದು ತಿಳಿದು ದೇವರಿಗೆ ಸ್ವಲ್ಪ ಸಮಾಧಾನವಾದಂತಾಯಿತು. ಅಂತೆಯೇ ಆತನ ಯಾವ್ಯಾವ ಪಾಲಿಸಿಗಳ ಮೇಲೆ ನನ್ನ ಕೋಪ ಎಂದು ತಿಳಿಯುವ ಕುತೂಹಲ ದೇವರಿಗೆ. ಕೇಳಿಯೇ ಬಿಟ್ಟ. ತೀರಾ ದೇವರಿಗೂ ಬೇಜಾರು ಮಾಡೋದು ಇಷ್ಟವಿಲ್ಲದ್ದರಿಂದ ಸ್ವಲ್ಪ ನಯವಾಗಿಯೇ ಹೇಳಿದೆ, 'ನೀನು ಎಲ್ಲದಕ್ಕೂ ಒಂದು ನಿಯಮ ಅಂತ ಮಾಡಿದೀಯ. ಆದ್ರೆ ನೀನೆ ಆ ನಿಯಮಗಳಿಗೆ ಬದ್ದನಾಗಿಲ್ಲ. ಪ್ರತಿ ನಿಯಮಕ್ಕೂ ಒಂದು ಸ್ಟಾರ್ ಹಾಕಿ, ಕೆಳಗೆ ಕಂಡಿಶನ್ಸ್ ಅಪ್ಲೇ ಅಂತ ಬರೀತೀಯ. ಹೊಟ್ಟೆ ತುಂಬೋ ಅಷ್ಟು ತಿನ್ಸಿ ನಂತರ ಬಿರಿಯಾನಿ ಕೊಡ್ತೀಯ, ಹೊಟ್ಟೆ ಹಸಿವು ಎಂದಾಗ ತುತ್ತು ಅನ್ನಾನು ಕೊಡಲ್ಲ, ಸರಿಯಿಲ್ಲ ನೀನು' ಅಂದೆ. ದೇವರ ಮುಖದ ಮೇಲೆ ಮೂಡಿದ ಪ್ರಶ್ನೆ ನೋಡಿ ಇನ್ನೂ ವಿವರಣೆಯ ಅಗತ್ಯವಿದೆಯೆಂದು ತಿಳಿಯಿತು. 'ನೋಡಪ್ಪ ಶಿವಪ್ಪ... ನನಗೆ ನನ್ನ ಹೊಟ್ಟೆಪಾಡಿನ ಚಿಂತೆ ಸ್ವಲ್ಪ ಜಾಸ್ತಿ. ನೀನೇನ್ ಮಾಡ್ತೀಯ ಅಂದ್ರೆ... ಮಧ್ಯಾಹ್ನ ಊಟ ಸಿಗತ್ತೆ ಅನ್ನೋವಾಗ ಊಟಕ್ಕೆ ಮೊದಲು ಒಂದಷ್ಟು ತಿನ್ನೋಕೆ ಕೊಡ್ತೀಯ. ನೀನು ಕೊಟ್ಟೆ ಅಂತ ತಿನ್ನೋದಾಯ್ತು. ಊಟ ಆದ ಮೇಲೂ ಏನೇನೋ ತಿನ್ನೋಕೆ ಕೊಡ್ತೀಯ. ನನ್ನ ಹೊಟ್ಟೆಗೆ ಅದೇನೂ ಹೆಚ್ಚಲ್ಲ ಬಿಡು. ಹಡಗು ತುಂಬ್ಸೋಕೆ ಹೋದವ ವಾಪಸ್ ಬಂದ್ನಂತೆ ಆದ್ರೆ ಹೊಟ್ಟೆ ತುಂಬ್ಸಕ್ಕೆ ಹೋದವ ವಾಪಸ್ ಬರಲೇ ಇಲ್ವಂತೆ. ಹೊಟ್ಟೆ ಗಾತ್ರ ಅಂತದ್ದು. ಆದ್ರೆ ಹೊಟ್ಟೆ ಹಸಿವು ಅಂದಾಗ ಊಟಾನು ಕೊಡಲ್ಲ, ಊಟದ ನಂತರ, ಮೊದಲು ಎಲ್ಲ ಕೊಡ್ತಾ ಇದ್ಯಲ ಅದೂ ಇಲ್ಲ. ಒಂದಿಡೀ ದಿನ ಉಪವಾಸ. ಹೊಟ್ಟೆಗೊಸ್ಕರನೆ ಬದುಕೋ ನನ್ನಂಥವರಿಗೆ ಇವು ಸರಿ ಕಾಣಲ್ಲಪ' ಅಂದೆ. ನನ್ನ ಮಾತು ದೇವರ ಮನಸ್ಸನ್ನ ತಟ್ತೂ ಅಂತ ಕಾಣತ್ತೆ, ಈ ವಿಚಾರವಾಗಿ ಸ್ವಲ್ಪ ವಿಚಾರ ಮಾಡಬೇಕು. ನಾಳೆ ಮತ್ತೆ ೯.೩೦ ಕ್ಕೆ ಬರ್ತೀನಿ ಅಂತ ಹೊರಟೆ ಬಿಟ್ಟ. ಪಕ್ಕದಲ್ಲಿದವ ತಟ್ಟಿದ್ದರಿಂದ ಎಚ್ಚರಗೊಂಡು ಕಣ್ಣು ಬಿಟ್ಟು ನೋಡ್ತೀನಿ ಮೇಷ್ಟ್ರು ಬಾಗಿಲ ಬಳಿ ಹೋ ಗ್ತಾ ಇದ್ರು. ನಾಳೆ ೯.೩೦ ಕ್ಕೆ ಕ್ಲಾಸ್ ತಗೋತೀನಿ ಅಂದು ಹೋದರಂತೆ ಅನ್ನೋದು ಕೊನೆಗೆ ತಿಳಿದ ವಿಚಾರ.
ಮಿಡ್ನೈಟ್ ಸೀಕ್ರೆಟ್ಸ್
ಮಧ್ಯರಾತ್ರಿಯಲ್ಲೊಂದು ಸಣ್ಣ ಗದ್ದಲ, ನೂರೆಂಟು ಮಾತು, ಗರಂ ಗರಂ ಚಹಾ, ಬೇಕಾದವರಿಗೊಂದು ಆಮ್ಲೆಟ್,ಕಾಡು ಹರಟೆ... ಎಂಬಲ್ಲಿಗೆ ಒಂದು ರಾತ್ರಿ ವಿದಾಯ ಹೇಳಿರತ್ತೆ. ಸೂರ್ಯೋದಯದ ಮೊದಲ ಕಿರಣ ನಮ್ಮನ್ನು ಸೋಕದಂತೆ ಮುಸುಕು ಮುಚ್ಚಿ ಮಲಗಿರುತ್ತೇವೆ. ಜೀವನದಲ್ಲಿ ಪಿಯುಸಿ ಎಂಬುದೊಂದನ್ನ ಮಾಡದೆ ಇದ್ದಿದ್ರೆ, ಆ ವಿದ್ಯಾರ್ಜನೆಗಾಗಿ ಉಡುಪಿ ಕ್ಷೇತ್ರಕ್ಕೆ ಹೋಗದೆ ಇದ್ದಿದ್ರೆ ಮಧ್ಯರಾತ್ರಿನ ಕಣ್ತುಂಬ ನೋಡ್ತಿದ್ನೋ ಇಲ್ವೋ. ಉಡುಪಿ ಶ್ರೀಕೃಷ್ಣ ಮಠದ ಭೋಜನಶಾಲೆಯಲ್ಲಿರುವ ಮಹಾಪ್ರಾಣನ ಆಶೀರ್ವಾದದೊಂದಿಗೆ ಊಟ ಮುಗಿಸಿ, ರಾಜಾಂಗಣದಲ್ಲಿ ನಡಿಯೋ ಯಕ್ಷಗಾನದ ಸವಿಯನ್ನೂ ಉಂಡು ಹಾಸ್ಟೆಲ್ ಸೇರ್ತಿದಿದ್ದು ರಾತ್ರಿ ಹತ್ತೂವರೆ ಸುಮಾರಿಗೆ. ಅದೂ ಇಂತದ್ದೆ ಒಂದು ರಾತ್ರೆ, ಆದ್ರೆ ಮರುದಿನ ಬೆಳಗ್ಗೆಗೆ ಅದರದೇ ಆದ ಮಹತ್ವ ಇತ್ತು. ನಮ್ಮ ಸೆಕೆಂಡ್ ಪಿಯುಸಿಯ ಭೌತಶಾಸ್ತ್ರದ ಪರೀಕ್ಷೆ ನಡೆಯುಹುದರಲ್ಲಿತ್ತು. ಪರೀಕ್ಷೆಯ ಹಿಂದಿನ ದಿನ ಕ್ರಿಕೆಟ್ ಮುಗಿಸಿ ಸಂಜೆ ಗೋದೂಳಿ ಮುಹೂರ್ತದ ಶುಭ ಲಗ್ನದಲ್ಲಿ ಓದಕ್ಕೆ ಕೂತರೆ ಕಣ್ಣಲ್ಲಿ ನಿದ್ರೆ ಮನೆ ಮಾಡಿತ್ತು. ನಿದ್ರೆ ಓಡಿಸೋದು ಅಂದ್ರೆ ಏನ್ ಸುಮ್ನೇನಾ..! ಸರಿ.. ಎದ್ದು ರಥಬೀದಿನ ಒಂದೆ ಒಂದು ಸುತ್ತು ಹಾಕಿ, ಮಠದಲ್ಲಿ ಊಟ ಮಾಡಿ ಬಂದು ಓದಕ್ಕೆ ಕೂತರೆ ನಿದ್ದೆ ಹೋಗಿರತ್ತೇನೋ ಅನ್ನೋ ಆಶಾಭಾವ. ತಡ ಮಾಡದೆ ಹೊರಟ್ರೂ ತಡವಾಗಿತ್ತು ಮೊದಲ ಪಂಕ್ತಿಯ ಊಟಕ್ಕೆ. ಮತ್ತೊಂದು ಸುತ್ತು ಹೊಡೆದು ಬಂದ್ರೆ ಸರಿ ಆದೀತೆ ಎಂಬ ದ್ವಂದ್ವ ಮೂಡುವ ಮೊದಲೇ ಹೊರಟಾಗಿತ್ತು. ಪರೀಕ್ಷೆ ಸಾಂಗವಾಗಿ ನೆರವೇರಲಿ ಎಂದು ಶ್ರೀಕೃಷ್ಣನ ದಿವ್ಯಾನುಗ್ರಹ ಪಡೆದೂ ಆಯಿತು ಅದರ ಮದ್ಯದಲ್ಲೇ. ಮತ್ತೊಂದು ಸುತ್ತು ಹಾಕಿ ಬಂದು ಊಟ ಮಾಡುವ ವೇಳೆಗೆ ಎಂಥದೋ ಸದ್ದು. ಚಂಡೆದಾ..? ರಾಜಾಂಗಣದಲ್ಲಿ ಯಕ್ಷಗಾನ ಇರೋದು ಖಾತ್ರಿಯಾಯ್ತು. ದೇವಿ ಮಹಾತ್ಮೆ ಪ್ರಸಂಗ ಅಂತ ಅವರಿವರ ಬಾಯಿಂದ ಹರಿದಾಡ್ತಾ ನಮ್ಮ ಕಿವಿಗೂ ಬೀಳಬೇಕೆ..? ನನ್ನಂತ ನಾನೂ ದೇವಿಯನ್ನು ಅಲಕ್ಷಿಸಿ ಓದೋಕೆ ಕೂತ್ರೆ ಓದಿದ್ದು ತಲೆಗೆ ಹತ್ತೀತೆ..? ಹತ್ತೀತೇನೋ, ಯಕ್ಷಗಾನದ ಹುಚ್ಚು ಹತ್ತದಿದ್ದ ಪಕ್ಷದಲ್ಲಿ. ಒಂದಷ್ಟು ಹೊತ್ತು ತಾಳಕ್ಕೆ ಹೆಜ್ಜೆ ಹಾಕಿ, ಚಂಡೆಯ ಸದ್ದು ಕಿವಿಯಲ್ಲಿಟ್ಟುಕೊಂಡು ಹೊರಟಾಯ್ತು. ಎಲ್ಲಿಗೆ ಕೇಳಬೇಡಿ. ಓದೋದಿದೆ. so ಓದೋಕೆ ಹೊರಟೆ. ಅಂದ್ರೆ ಓದಿದೆ ಅಂತ ಅರ್ಥೈಸಬೇಡಿ. ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ರಾತ್ರಿ ಹನ್ನೊಂದು ಗಂಟೆ. ಹಾಸ್ಟೆಲ್ ನಿಂದ ಗಂಡುಪಾಳ್ಯ ಹೊರಟಿತ್ತು ಟೀ ಅಂಗಡಿಗೆ. ಪ್ರತಿದಿನ ರಾತ್ರಿ ಹನ್ನೊಂದಾದಮೇಲೆ ಕೆಲವರು ನೈಂಟಿ ತಗೋತಿದ್ರು, ನಾವು ಪ್ಲೈನ್ ಟೀ ತಗೋತಿದ್ವಿ. ರಾತ್ರಿ ಹನ್ನೊಂದಕ್ಕೆ ಟೀ ಕುಡಿಯೋದು ಪದ್ಧತಿ. ಮುರಿಯಲಾದೀತೇ..? ಟೀ ಅಂಗಡಿಯವನೂ ಬದುಕಬ್ಯಾದ್ವೆ..? ಹನ್ನೊಂದರ ಟೀ ಕುಡಿದು ಓದೋಕೆ ಕೂರೋದು ಒಳ್ಳೇದು, ನಿದ್ದ್ದೆ ಬರಲ್ಲ. ನಿದ್ದೆ ಈಗಲೂ ಬರ್ತಾ ಇರ್ಲಿಲ್ಲ ಅನ್ನೋ ವಿಚಾರದ ಕಡೆ ಗಮನ ಹರಿಸದೆ ಗಂಡು ಪಾಳ್ಯದಲ್ಲೊಂದಾದೆ. ಟೀಗೆ ಅಂತ ಹೋದಮೇಲೆ ಯಾವ ಮುಟ್ಟಾಳನೂ ಬರಿ ಟೀ ಕುಡಿದು ಬರಲ್ಲ. ಜೊತೆಗೆ ಒಡೆನೋ, ಬಜ್ಜಿನೋ, ನೂಡಲ್ಸೋ, ಯಾವುದೂ ಇಲ್ಲ ಅಂದ್ರೆ ಅಮ್ಲೆಟ್ ಆದ್ರೂ ಆದೀತು. ಜೊತೆಗಾರರು ಸಿಗರೆಟ್ ಗಮವನ್ನೋ ತಗೊಂಡ ಮೇಲೆ ಮರಳಿ ಛಾತ್ರಾಲಯ. ಅಂತೂ ಕೆಲವರು ನಡೆದಾಡಿ ಮತ್ತೆ ಕೆಲವರು ತೂರಾಡಿ ಹಾಸ್ಟೆಲ್ ಸೇರೋ ಅಷ್ಟ್ರಲ್ಲಿ ದಿನ ಕಳೆದು ಅರ್ದ ಗಂಟೆ ಆಗಿತ್ತು. ಪರೀಕ್ಷೆಗೆ ಉಳಿದಿದ್ದು ಬೆರಳೆಣಿಕೆಯ ಗಂಟೆಗಳು. ಓದಲೇ ಬೇಕಾದ ಪರಿಸ್ಥಿತಿ. ಸರಿ ಆದಂತೆ ಆಗ್ಲಿ ಓದಕ್ಕೆ ಕುಳಿತೆ ಬಿಟ್ಟೆ, ಕಟಿಂಬದ್ವಾ. ಪಕ್ಕದಲ್ಲೆಲ್ಲೋ ಗಲಾಟೆ. ಬ್ಯಾಟು ಬಾಲುಗಳ ಸದ್ದು. ಬೈತಾನು ಇದಾರೆ. ಹೋಗಿ ನೋಡಿದ್ರೆ ಕ್ರಿಕೆಟ್ ಅಡ್ತ ಇರೋದೇ ಪಕ್ಕದ ರೂಮಲ್ಲಿ. ಪರೀಕ್ಷೆ ಇದ್ದಾಗ ಕ್ರಿಕೆಟ್ ಯಾಕೆ ಆಡ್ತೀರಿ ಅಂತ ಮತ್ತೊಬ್ಬ ಗಲಾಟೆ ಮಾಡ್ತಿದ್ದ. ಇಂಥ ಸರಿರಾತ್ರಿಯ ಸರಿ ಹೊತ್ತಲ್ಲಿ ಕ್ರಿಕೆಟ್ ಆಡೋದು ಸರಿಯಿಲ್ಲ ಅನ್ನೋದೇ..! ಓದೋ ಮಹಾಶಯ ಹಾಸ್ಟೆಲ್ ಗೆ ಯಾಕೆ ಸೇರಿದ್ನೋ..! ಅಂತೂ ಆ ಗಲಾಟೆ ಬಿಡಿಸಿ ನಾವು ಒಂದೆರಡು ಮ್ಯಾಚ್ ನ ಮಟ್ಟಿಗೆ ಆಡೇ ಬಿಡುವ ಹುಮ್ಮಸ್ಸು. ಸರಿ.. ಆಡಿದ್ದು ಆಯ್ತು. ಸಮಯ ರಾತ್ರಿಯ ೩ ಗಂಟೆ.ಈಗ್ಲಾದ್ರೂ ಓದೋಣ ಅಂತ ಕೂತರೆ ಅಮ್ಮನ ಮಾತುಗಳು ನೆನಪಿಗೆ ಬಂದವು. ಮಗನೆ ತುಂಬ ನಿದ್ದೆಗೆಟ್ಟು ಓಡಬೇಡ ಎಂಬ ಕರುಳಿನ ಕೂಗು. ಇನ್ನೂ ಓದಲಾದೀತೇ ಅಮ್ಮನ ಮಾತನ್ನೂ ಮೀರಿ..? ಒಂದೆರದೆ ಗಳಿಗೆಯಲ್ಲಿ ನಿದ್ರಾದೇವಿಯ ಮಡಿಲು ಹೊಕ್ಕಿ ಆಯ್ತು. ಬೆಳಗ್ಗೆ ಎದ್ದು ಓದಿರೋ ಸಂಭವ ನಿಮಗೆ ಈಗಲೇ ಅರ್ಥ ಆಗಿರಬೇಕು. ಇಷ್ಟೆಲ್ಲಾ ಆಗಿಯೂ ನಾನೂ ಪಾಸಾದೆ ಅಂದ್ರೆ ನೀವು ನಂಬಲೇ ಬೇಕು.
ಕೈಯಿಗೂ ಬರಲಿಲ್ಲ.. ಬಾಯಿಗೂ ಬರಲಿಲ್ಲ..
ಪ್ಲಾಟ್ ಫಾರ್ಮ್ ನಲ್ಲಿ ವಿದ್ಯುತ್ ಸಂಚಾರ... ಕೂ ಎಂದು ಕೂಗ್ತಾ ಬರ್ತಾ ಇರೋ ರೈಲಿನೆಡೆಗೆ ಎಲ್ಲರ ಗಮನ... ಟ್ರೈನ್ ಖಾಲಿ ಇದೆ ಅಂತ ಅನ್ಸಿದ್ರು ಅದನ್ನ ಹತ್ತಿ ಸೀಟು ಹಿಡಿದು ಕೂರೋ ವರೆಗೂ ಯಾರಲ್ಲೂ ಸಮಾಧಾನ ಇಲ್ಲ. ಕಿಟಕಿ ಪಕ್ಕದ ಸೀಟು ಹಿಡಿಬೇಕು ಅನ್ನೋದು ಎಲ್ಲರ ಗುರಿ. ಹೆಂಗಸು- ಗಂಡಸು ಎಂಬ ಭೇದ ಇಲ್ದೆ ಎಲ್ಲರು ಸಮಾನ ಸ್ಪರ್ಧೆಯಿಂದ ಮುನ್ನುಗ್ಗಿ ಪಡೆಯಬಹುದಾದಂತ ಏಕೈಕ ಗುರಿ- ಕಿಟಕಿ ಪಕ್ಕದ ಸೀಟು. ಅಂತೆಯೇ ನಾನೂ ಮುನ್ನುಗ್ಗಿ, ಜಗ್ಗಾಡಿ, ಗುದ್ದಾಡಿ, ನುಗ್ಗಿ- ನುಸುಳಿ ಅಂತು ಇಂತೂ ವಿಂಡೋ ಸೀಟ್ ಹಿಡಿದೆ. ಅದೊಂಥರ ಯುದ್ದವನ್ನೇ ಗೆದ್ದ ಭಾವ. ಇಂಟರ್ ಸಿಟಿ ಎಕ್ಷ್ಪ್ರೆಸ್ನಲ್ಲಿ ಸೀಟು ಹಿಡಿಯೋದು ಅಂದ್ರೆ ಸುಮ್ನೆನಾ... ನನ್ನ ಸಣಕಲು ದೇಹದ ಬಗ್ಗೆ ನನಗೆ ಅಭಿಮಾನ ಮೂಡೋ ಏಕೈಕ ಘಳಿಗೆ ಅದು. ನನಗಂತೂ ಸೀಟು ಸಿಕ್ತು. ಪಕ್ಕದ ಸೀಟಿಗೆ ಬ್ಯಾಗ್ ಹಾಕಿ ಕೂತೆ, ನಮಗೆ ಇಷ್ಟವಾದವರು ಬಂದ್ರೆ ಕೂರಿಸಿಕೊಳ್ಳುವ ಅಂತ. ಮಧ್ಯ ವಯಸ್ಸಿನ ಹೆಂಡಸರು ಬಂದು ಕೂತ್ರೆ ಕೊತ್ತಂಬರಿಯಿಂದ ಹಿಡಿದು ಕಾದಂಬರಿ ವರೆಗೂ ಮಾತು, ಗಂಡಸರು ಬಂದ್ರೆ ಜಮೀನಿನಲ್ಲಿ ತೆಗಿಯೋ ಬಾವಿಯಿಂದ ಹಿಡಿದು ಬರಾಕ್ ಒಬಾಮ ವರೆಗೂ ಮಾತು. ಅವರ ಮಾತು ಕೇಳಿ ಕೇಳಿ ೪ ಕ್ರೋಸಿನ್ ಸಾಕಾಗಲ್ಲ ತಲೆನೋವು ಹೋಗ್ಲಿಕ್ಕೆ. ಮಧ್ಯೆ ಮಧ್ಯೆ ಹ್ಮ್ ಅನ್ನೋ ಕರ್ಮ ಬೇರೆ. ಹಾಗಾಗಿ ಕಾಲೇಜಿಗೆ ಹೋಗೋ ವಯಸ್ಸಿನವರಿಗೆ ಸೀಟು ಬಿಡಬೇಕು ಅನ್ನೋದು ನನ್ನ ಇಚ್ಛೆ, ಅದರಲ್ಲೂ ಹುಡುಗಿಯರಿಗೆ ಮೊದಲ ಆಧ್ಯತೆ. ಅದೆಷ್ಟು ಬಾರಿ ದೇವರ ಹತ್ರ ಬೇಡಿಕೊಂದಿದ್ನೋ ಪಕ್ಕದಲ್ಲಿ ಹುಡುಗಿನ ಕೂರ್ಸು ಅಂತ. ಆದರು ಇಷ್ಟು ದಿನ ೪ ಕ್ರೋಸಿನ್ ನುಂಗೋ ಭಾಗ್ಯವೇ ನನ್ನದಾಗಿತ್ತು. ಈ ಹೆಂಗಸರು ಅಂದ್ರೆ ನಂಗೆ ಎಲ್ಲಿಲ್ಲದ ಕುತೂಹಲ, ಅದೊಂದು ಅಚ್ಚರಿಯ ಪೆಟ್ಟಿಗೆ. ಅವರಿಗೆ ಮಾತಾಡುವ ವಿಷಯವೇ ಮುಗಿಯಲ್ವೋ ಅಥವಾ ವಿಷಯವೇ ಇಲ್ದೆ ಮಾತಾಡುವ ಕಲೆ ಕರಗತವೋ ಗೊತ್ತಿಲ್ಲ. ಅವರ ಮಾತನ್ನೆಲ್ಲ ಕೇಳಿ ಕೇಳಿ ಅದೆಷ್ಟು ಸಲ ಕಿಟಕಿ ಪಕ್ಕದ ಸೀಟಿನಂತ ಸೀಟನ್ನೇ ಬಿಟ್ಟು ಬಾಗಿಲ ಬಳಿ ಜೋತು ಬಿದ್ದಿದ್ನೋ ಆ ದೇವರಿಗೆ ಗೊತ್ತು. ಹಾಗಾಗಿ ನನ್ನ ಪಕ್ಕದ ಸೀಟು ಕಾಲೇಜು ಕನ್ಯೆಗೆ ಮೀಸಲು. ಆದರು ಪ್ರತಿ ಬಾರಿ ಬೇರೆಯವರ ದಬ್ಬಾಳಿಕೆಯ ಫಲವಾಗಿ ಅತಿಕ್ರಮ ಪ್ರವೇಶಕ್ಕೆ ಒಳಗಾಗ್ತಾ ಇತ್ತು ಪಕ್ಕದ ಸೀಟು. ಆದ್ರೆ ಇವತ್ತು ಅದ್ಯಾವ ಹೆಣ್ಣು ದೇವತೆಗೆ ನನ್ನ ಮೊರೆ ಮುಟ್ಟಿತ್ತೋ ಕಾಣೆ, ಒಬ್ಬಳು ಲಲನಾಮಣಿಯ ಪ್ರವೇಶ ನಾನಿದ್ದ ಬೋಗಿಗೆ ಆಯ್ತು. ಅವಳನ್ನ ನೋಡಿದ್ದೇ ತಡ ನನ್ನ ಬ್ಯಾಗ್ ತನ್ನ ಜಾಗದಿಂದ ಸರಿದು ನನ್ನ ತೊಡೆಯ ಮೇಲೇ ಬೆಚ್ಚಗೆ ಕುಳಿತುಕೊಳ್ತು. ಆ ಸುಂದರಿಗೆ ಸೀಟು ಕೊಟ್ಟ ಕೂಡ್ಲೇ ಅಲ್ಲಿ ಇಲ್ಲಿ ನೇತಾಡ್ತಾ ಇದ್ದ ಹತ್ತಾರು ಗಂಡಸರ ಕೆಂಗಣ್ಣಿನ ನೋಟವನ್ನ ಎದುರಿಸಬೇಕಾಗಿ ಬಂದದ್ದು, ಹಾಗೆ ಎದುರಿಸಿಯೂ 'ಆಕೆ'ಗೆ ಸೀಟು ಕೊಟ್ಟದ್ದು ನನಗೆ ಆಕೆಯ ಮೇಲಿದ್ದ ಕಾಳಜಿಯನ್ನ ತೋರ್ಸತ್ತೆ. ಅವಳಾದರು ಅದೆಷ್ಟು ಚನಾಗಿ ಇದ್ಲು ಅಂತೀರಾ... ಕೈ ತೊಳೆದು ಮುಟ್ಟಬೇಕು ಅಂತಾರಲ್ಲ ಹಾಗಿದ್ಲು ಕಂಡ್ರಿ. ಕೈಯನ್ನೇನೋ ತೊಳೆದಿದ್ದೆ, ಆದ್ರೆ ಮುಟ್ಟೋ ಧೈರ್ಯ ಇರ್ಲಿಲ್ಲ ಅಷ್ಟೇ. ನಕ್ಕರೆ ಗುಳಿ ಬೀಳೋ ಕೆನ್ನೆ... ಅಗಲಗಳ ಕಣ್ಣುಗಳು.... ಆಗಾಗ ಮುಖದ ಮೇಲೇ ಬೀಳೋ ಕೂದಲು... ಹಾಲಿನಂತ ಬಣ್ಣ... ಒಟ್ಟಿನಲ್ಲಿ ಒಂದೇ ನೋಟಕ್ಕೆ ಹೃದಯದ ಕದ ತಟ್ಟಿಬಿಟ್ಟಿದ್ಲು ಕಂಡ್ರಿ. ರೈಲು ಹತ್ತಿದ ಕೂಡ್ಲೆ ನಿದ್ದೆ ಮಾಡೋದು ನನ್ನ ವೀಕ್ ನೆಸ್ಸು. ಕಣ್ಣು ಎಳೀತಿತ್ತು. ಆದ್ರು ಪಕ್ಕದ ಸುಂದರಿ ಮಾತಾಡ್ತಾಳೆನೋ ಅಂತ ನಿದ್ದೇನ ಅದುಮಿಟ್ಟಿದ್ದೆ. ಎಷ್ಟು ಬಾರಿ ಅವಳನ್ನ ಕದ್ದು ಕದ್ದು ನೋಡಿದ್ರೂ ಆಕೆಯದು ದಿವ್ಯ ನಿರ್ಲಕ್ಷ್ಯ. ಅದ್ಯಾವ ಘಳಿಗೆಯಲ್ಲೋ ನಿದ್ದೆಗೆ ಜಾರಿದ್ದೆ. ರೈಲು ಹೊಳೆ ನರಸೀಪುರದಲ್ಲಿ ನಿಂತಾಗ ಎಚ್ಚರವಾಯ್ತು. ಪಕ್ಕದ ಸುಂದರಿ ಹಾಗೆ ಕೂತಿದ್ಲು. ತೀರಾ ಸಭ್ಯಸ್ತನಾದ ನನಗೆ ಅವಳನ್ನ ಮಾತಾಡಿಸೋಕೆ ನಾಚಿಕೆ, ಅಥವಾ ಧೈರ್ಯ ಸಾಕಗ್ಲಿಲ್ವೋ ಗೊತ್ತಿಲ್ಲ. ಇಂಟರ್ ಸಿಟಿ ಎಕ್ಷ್ಪ್ರೆಸ್ ಯಕಶ್ಚಿತ್ ಪ್ಯಾಸೆಂಜೆರ್ ಟ್ರೈನ್ ಗೆ ಕಾಯ್ತಾ ಇತ್ತು. ಎದುರಿನ ಸೀಟಿನಲ್ಲಿದ್ದ ಎಲ್ಲರ ದೃಷ್ಟಿ ಪಕ್ಕದ ಸುಂದರಿ ಮೇಲೇ ನೆಟ್ಟಿದ್ದರಿಂದ ಅವಳು ನಾನಂದುಕೊಂಡಿದ್ದಕ್ಕಿಂತ ಚೆನ್ನಾಗೆ ಇದ್ದಾಳೆ ಅಂತ ಗೊತ್ತಾಯ್ತು. ತಿರುಗಿ ಅವಳನ್ನ ನೋಡೋ ಧೈರ್ಯ ಇಲ್ಲ... ಎಷ್ಟಂದ್ರು ಸಭ್ಯಸ್ತ. ನೋಡೋ ತವಕ, ಮಾತಾಡೋ ತುಡಿತ ಎರಡನ್ನು ಇಟ್ಕೊಂಡು ಅರಸೀಕೆರೆವರೆಗೂ ಕುಳಿತಿದ್ದೆ. ಶಿವಮೊಗ್ಗದಲ್ಲಿ ಅವಳು ಇಳಿತಾಳೆ ಅಂತ ತಿಳಿದಿತ್ತು. ಇನ್ನೂ ಮೂರು ಗಂಟೆಗಳ ಕಾಲಾವಕಾಶ ಮಾತಾಡಿಸೋಕೆ. ಬೇರೆಯವರೆಲ್ಲ ಮಾತಾಡಿ ಮಾತಾಡಿ ಹಿಂಸಿಸ್ತಾ ಇದ್ರೆ ಇವಳು ಮಾತ್ರ ಮೌನವಾಗೇ ಕೊಲ್ತಿದ್ಲು. ಅವಳ ಕೂದಲು ಮುಖದ ಮೇಲೆ ಬರಲು ಹಠ ಮಾಡ್ತಿದ್ರು ಅವಳು ಬಲವಂತವಾಗಿ ಅದನ್ನ ಹಿಂದೆ ಹಾಕ್ತಿದ್ಲು. ಅವಳು ಹಾಗೆ ಕೂದಲನ್ನ ಹಿಂದೆ ಹಾಕುವ ಪರಿ ನೋಡೋದೇ ಕಣ್ಣಿಗೆ ಹಬ್ಬ. ಈಗ ನಿದ್ದೆಗೆ ಜಾರುವ ಸರದಿ ಅವಳದ್ದು. ಅವಳು ನಿದ್ದೆ ಮಾಡುವಾಗ ಸರಿಯಾಗಿ ನೋಡಿದೆ ಅವಳನ್ನ. ನಾನಂದುಕೊಂಡಿದ್ದಕ್ಕಿಂತ ಸುಂದರವಾಗೆ ಇದ್ಲು.. ಇನ್ನೂ ನೋಡ್ತಾನೆ ಇರಬೇಕು ಅನ್ನೋ ಅಷ್ಟು.
ಅದೆಂಥ ನಿದ್ರೆನೋ ಅವಳದ್ದು...! ಶಿವಮೊಗ್ಗದ ಹತ್ರ ಬರೋವರೆಗೂ ಮಲಗೆ ಇದ್ಲು. ನಂತರ ಎದ್ದು ತನ್ನ ಲಗೇಜ್ ತಗೊಂಡು ಹೋಗಿ ಬಾಗಿಲ ಬಳಿ ನಿಂತಳು . ಮಾತಾಡ್ಸೋ ಆಸೆಗೆ ತಿಲಾಂಜಲಿ ಬಿಟ್ಟು ಸುಮ್ನೆ ಕೂತೆ. ಅವಳು ಇಳಿದು ಹೋದ ಮೇಲೆ ಅನಾಥನಂಥಾಗಿದ್ದ ನಾನು ಅವಳ ನೆನೆಪಲ್ಲೆ ಸಾಗರ ಸೇರಿದೆ. ತೀರ ಬಂದವರೆಲ್ಲ ನಮ್ಮವರಲ್ಲ, ನಮ್ಮವರೆಲ್ಲ ಕೊನೆ ತನಕ ನಮ್ಮ ಜೊತೆ ಇರ್ತಾರೆ ಅನ್ನೋಕಾಗಲ್ಲ. ಬದುಕ ಪಯಣದಲಿ ಬಂದವರೆಷ್ಟೋ , ತಪ್ಪಿಹೋದವರೆಷ್ಟೋ, ಎಲ್ಲರು ಅವರವರ ನಿಲ್ದಾಣ ಬಂದಾಗ ಪಯಣ ಕೊನೆಗಳಿಸಲೇಬೇಕು. ನಮ್ಮದು ಮುಗಿಯುವವರೆಗೆ ಮುಂದುವರಿಯಲೇಬೇಕು .
ಈಗ ದೇವರಲ್ಲಿ ನನ್ನ ಬೇಡಿಕೆ ಬೇರೆಯಾಗಿದೆ. ನನ್ನ ಪಕ್ಕದ ಸೀಟಿನಲ್ಲಿ ಯಾರಿನ್ನಾದ್ರು ಕೂರ್ಸಪ್ಪ ದೇವ್ರೇ.. ಆದ್ರೆ ನನ್ನ ಎದುರಿನ ಸೀಟ್ ನಲ್ಲಿ ಮಾತ್ರ ಇವಳಂಥ ಸುಂದರಿನೆ ಕೂರ್ಸು.
ಹಣ್ಣೆಲೆ ಉದುರುವಾಗ
‘ಏನೇ
ಹೇಳಿ, ಇಷ್ಟು ವರ್ಷ ಬದುಕಿರಬಾರದು ಕಣ್ರಿ, ವಯಸ್ಸಾಗೋಕು
ಮುಂಚೆ ಸತ್ತುಬಿಡಬೆಕು’ ಎಂಬ ಯೋಚನೆ ಆ ಹಣ್ಣೆಲೆಗೆ ಬಂದು ಆಗಲೆ ಮೂರು-ನಾಲ್ಕು ದಿನಗಳಾಗಿತ್ತು.
ಶರಾವತಿಯ ತಟದಲ್ಲಿರೋ ಒಂದು ಬನ್ನಿ ಮರ, ಆ ಮರದ ರಾಶಿ,ರಾಶಿ ಎಲೆಗಳ ಮದ್ಯೆ ಚಿಗುರಿದ ಆ ಎಲೆಗೆ ಏನೋ ಸಂಭ್ರಮ. ಅದರ ಬಾಲ್ಯದ ದಿನಗಳು ಇನ್ನೂ
ಕಣ್ಣಿಗೆ ಕಟ್ಟುವಂತಿದ್ದರೂ ಹನಿಗಳು ತುಂಬಿ ಮಂಜಾದ ಕಣ್ಣಿನಲ್ಲಿ ಕೆಲ ನೆನಪುಗಳು ಅಸ್ಪಷ್ಟ. ಮರದ
ಮೂಲೆಯಲ್ಲೆಲ್ಲೋ ಕುಳಿತರೂ ಶರಾವತಿಯ ಬಳುಕಿನ ನಡಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ದಿನ ತೆಪ್ಪ
ದಾಟಿ ಹೋಗುವ ಶಾಲೆಯ ಹುಡುಗರು, ಗುದ್ದಲಿ ಹೊತ್ತು ಬರುವ ಕೆಲಸದವರು,
ನೀರು ಕುಡಿಯಲು ಬರುವ ದನ-ಕರುಗಳು, ನೀರಿನಾಳಕ್ಕೆ ಬಲೆ
ಬೀಸಿ ಮೀನು ಹಿಡಿಯುವ ಬೆಸ್ತರು, ಬಲೆಗೆ ಸಿಗುವವರೆಗೂ ಸಂಪೂರ್ಣ
ಸ್ವಾತಂತ್ರ್ಯ ಅನುಭವಿಸುವ ಮೀನುಗಳು, ಗೂಡಿನಿಂದ ಹೊರ ಇಣುಕಿದ ಏಡಿಗಳು.
ಎಲ್ಲವೂ ನೆನಪಿದೆ... ಬೇಸಿಗೆಯ ಸೊರಗಿದ ಶರಾವತಿಯ ಕಂಡು ಮರುಗಿದ ಮನಸ್ಸು, ಹೆದರಿಕೆ ಹುಟ್ಟಿಸಿದ ಮಳೆಗಾಲದ ಅವಳ ರಭಸ. ಇನ್ನೂ ನೆನಪಿದೆ... ಯೌವನದಲ್ಲಿನ ಆ ಹುರುಪು,
ಇಡೀ ಮರಕ್ಕೆ ಬೇಕಾಗುವಷ್ಟು ಆಹಾರ ನಾನೊಬ್ಬನೇ ತಯಾರಿಸಬಲ್ಲೆನೆಂಬ ಉತ್ಸಾಹ,
ಮರದ ಜೀವಂತಿಕೆಗೆ ನಾನೇ ಬೇಕೆಂಬ ಅಹಂಕಾರ, ಭೂಮಿಯ
ಸಾರವನ್ನೆಲ್ಲ ಹೀರಿಸಿ ಮರ ಬೆಳಸಿಬಿಡುವೆನೆಂಬ ಹುಂಬತನ. ಆದರೆ ಈಗೆಲ್ಲಿ ಹೋಯಿತು ಆ ಶಕ್ತಿ,
ಆ ಉತ್ಸಾಹ, ಆ ಬಂಡತನ..? ಇನ್ನೇನು
ಉದುರುವ ’ಹಣ್ಣೆಲೆ’ ಎಂದ ಮಾತ್ರಕ್ಕೆ ಉತ್ಸಾಹವೇಕೆ ಕುಗ್ಗಬೇಕು..? ಕುಗ್ಗದೆ
ಇನ್ನೇನು..! ಈ ಇಳಿ ವಯಸ್ಸಿನಲ್ಲಿ ಬಂದ ದಾರಿ ತಿರುಗಿ ನೋಡಿದರೆ ಜೀವನದ ಸಾರ್ಥಕತೆ
ಕಾಣುತ್ತಿಲ್ಲ. ನಾನಿದ್ದರೂ, ಇರದಿದ್ದರೂ ಈ ಮರದಲ್ಲೇನು
ಬದಲಾವಣೆಯಿಲ್ಲ. ಶಕ್ತಿ ಇರುವವರೆಗೂ ಆಹಾರ ತಯಾರಿಸಿದೆ, ಈಗ ಶಕ್ತಿಹೀನನಾಗಿ ಉದುರುವ ಭಯದಲ್ಲಿದ್ದೇನೆ. ಹುಟ್ಟಿನಿಂದ ಇಲ್ಲಿಯವರೆಗೂ
ಈ ಮರಕ್ಕಾಗಿ ದುಡಿದೆ. ಆದರೆ ಈಗ..? ಉದುರುವ ಕಾಲದಲ್ಲಿ ನನಗಾಗಿ ಕಂಬನಿ
ಮಿಡಿಯುವವರಿಲ್ಲ. ನಾನಿನ್ನೂ ಇದ್ದೀನ, ಉದುರಿಹೋಗಿದ್ದೀನ ಎಂಬುದೇ ಈ
ಮರಕ್ಕೆ ಗೊತ್ತಿರಲಿಕ್ಕಿಲ್ಲ. ಒಂದೊಮ್ಮೆ ಗೊತ್ತಿದ್ದರೂ ನನಗಾಗಿ ಏನನ್ನೂ ಮಾಡುವ
ಸ್ಥಿತಿಯಲ್ಲಿಲ್ಲ. ಈ ಅಸಂಖ್ಯ ಜೊತೆಗಾರರ ಮಧ್ಯೆಯೂ ಒಂಟಿತನ ಕಾಡುತ್ತಿದೆ. ಇಲ್ಲಿ ಯಾರೂ ಯಾರಿಗೂ
ಅಲ್ಲ, ಇಲ್ಲಿರುವವರೆಲ್ಲ ತನ್ನವರಲ್ಲವೆಂಬ ಅನಾಥ ಪ್ರಜ್ನೆ
ಕಾಡುತ್ತಿದೆ.ಮಾಗಿಯ ಚಳಿಯಲ್ಲಿ ಮಾಗಿದ ಎಲೆಯಾಗಿ ಉದುರುವೆ. ತಣ್ಣನೆಯ ಗಾಳಿ ಬೀಸಿದಾಗ ಮೈಯೊಡ್ಡುವ
ಮನಸ್ಸಿಲ್ಲ. ಮನಸ್ಸಿನಲ್ಲೆಲ್ಲ ಭಯ..! ಗಾಳಿಯೊಡನೆ ಉದುರಿಯೇನೆ..? ಬಹುಶಃ
ಈಗ ನೋಡುತ್ತಿರುವ ಸೂರ್ಯಾಸ್ತವೆ ಕೊನೆಯದಿರಬಹುದು ನನ್ನ ಪಾಲಿಗೆ. ಬೆಳಗ್ಗೆ ಏಳುವ ಸೂರ್ಯನನ್ನು
ನೋಡಿಯೇನೆಂಬ ನಂಬಿಕೆಯಿಲ್ಲ.
ರಾತ್ರಿಯಿಡೀ ಆ
ಎಲೆಗೆ ನಿದ್ರೆಯಿಲ್ಲ. ಚಳಿಗೆ ಮುದುಡಿ ಕುಳಿತರೂ ಮೈ ಬೆವರುತ್ತಿದೆ. ಸಾವಿನ ಭಯ. ಬಹುಶಃ ಬರಿ
ಸಾವಿನ ಭಯವಲ್ಲ. ಜೀವನದಲ್ಲಿ ಬೇರೆಯವರಿಗೋಸ್ಕರವೇ ನಿಸ್ಸ್ವಾರ್ಥವಾಗಿ ದುಡಿದರೂ
ಗುರುತಿಸಲ್ಪಡಲಿಲ್ಲ ಎಂಬ ವ್ಯಥೆ, ತನ್ನವರೆಂದು ತೋರುವವರ್ಯಾರೂ ತನ್ನವರಲ್ಲವೆಂಬ
ಅನಾಥ ಭಾವ, ಜೀವನದ ಇಳೆಯಲ್ಲಿ ಕಾಣದ ಬದುಕಿನ ಸಾರ್ಥಕತೆ, ತನ್ನ ಅಸ್ಥಿತ್ವದ ಅರಿವೇ ಇಲ್ಲದಂತೆ ಸಾಗುವ ಪ್ರಪಂಚ, ತಾನಿದ್ದರೂ,
ಇರದಿದ್ದರೂ ಇಲ್ಲೆಲ್ಲವೂ ಇರುವಂತೆಯೆ ಇರುತ್ತದೆನ್ನುವ ಸತ್ಯ. ಇವೆಲ್ಲವೂ ಮೈ
ಬೆವರಿಸುವ ಸಂಗತಿಗಳು.
ಬೆಳಗ್ಗೆ
ಏಳುವಷ್ಟರಲ್ಲಿ ಎಲ್ಲವೂ ಇದ್ದಂತೆಯೇ ಇದೆ. ದಿನದಂತೆ ಹೋಗುವ ಶಾಲೆಯ ಅದೇ ಹುಡುಗರು, ಕೆಲಸಗಾರರು,
ಈಜಾಡುವ ಮೀನು, ಇಣುಕುವ ಏಡಿ. ಎಲ್ಲವೂ ಎಂದಿನಂತೆ.
ಪೂರ್ವದಲ್ಲಿ ಉದಯಿಸಿದ ಸೂರ್ಯ, ಹಕ್ಕಿಗಳ ಕಲರವ, ಸೂರ್ಯರಶ್ಮಿಗೆ ಬೆಂದು ಆವಿಯಾದ ಇಬ್ಬನಿ.
ಅರೆ.. ಈ ಇಬ್ಬನಿಯ ಆಯಸ್ಸು ಕೇವಲ ಎರಡು ಗಂಟೆಗಳು. ಆ ಅಲ್ಪಾವಧಿಯಲ್ಲೆ ಸೂರ್ಯನ ಬಿಸಿಲನ್ನು ನುಂಗಿ ಮುತ್ತಿನಂತೆ
ಹೊಳೆಯುತ್ತದೆ. ಅದೇ ವೇಗದಲ್ಲಿ ಮಾಯವಾಗುತ್ತದೆ. ಎರಡೇ ಗಂಟೆಯಲ್ಲಿ ಮಿಂಚಿ ಮತ್ತೆ ಮರೆಯಾಗಿ
ಸಾರ್ಥಕತೆ ಕಾಣುತ್ತದೆ. ನಾನಿನ್ನು ಉತ್ಸಾಹಹೀನನಾಗುವ ಅಗತ್ಯವಿಲ್ಲ. ಮರದ ಈ ಆಕಾರಕ್ಕೆ ಇಷ್ಟು
ದಿನ ನಾ ಕೊಟ್ಟ ಆಹಾರವೂ ಬೇಕಾಗಿದೆ, ಇದ್ದಷ್ಟು ದಿನ ಈ ಮರಕ್ಕೆ ಜೀವ ನೀಡಿದ್ದೇನೆ, ನನ್ನ
ಹಸಿರಿನಿಂದ ಮರದ ಅಂದ ಹೆಚ್ಚಿಸಿದ್ದೇನೆ, ಬಳಲಿ ಬಂದವರಿಗೆ
ನೆರಳಾಗಿದ್ದೇನೆ. ಇದೂ ಕೂಡ ಸಾರ್ಥಕತೆಯಲ್ಲವೆ..! ಇನ್ನು ಶರಾವತಿಯಲ್ಲಿ ಲೀನವಾದರೂ ಚಿಂತೆಯಿಲ್ಲ.
ಸಣ್ಣ ಗಾಳಿಯ ಹೊಡೆತ ಜೋರಾದಂತೆ
ನಿಲ್ಲಲೂ ನಿತ್ರಾಣವಾಗಿದ್ದ ಎಲೆ ಶರಾವತಿಯ ಮಡಿಲಲ್ಲಿ ಲೀನವಾಯಿತು.ಹಳೇ ಗಾಯ.. ಹೊಸ ಕೆರೆತ
ಯಾಕೊ ಭಯಂಕರ ಬೇಜಾರು.
ಹೊಸ ಪ್ಯಾಂಟು ಹರಿದಾಗ, ಹಳೆ ಹುಡುಗಿ ನೆನಪಾದಾಗ ಇಂಥ ಬೇಜಾರು ಆಗೋದು ಸಹಜ.
ಸದ್ಯಕ್ಕೆ ಹೊಸ ಪ್ಯಾಂಟ್ ತಗೋಂಡಿಲ್ಲ, ಹಳೇ ಹುಡುಗಿ ನೆನಪು ಕಾಡ್ತಾ ಇದೆ.
ಗಾಯ ಹಳೇದೆ, ಕೆರೆತ ಹೊಸಾದು. ಸುತ್ತ-ಮುತ್ತ ಎಷ್ಟು ಜನ ಇದ್ರೂ ತೀರಾ ಒಂಟಿತನ
ಕಾಡಿಬಿಡತ್ತೆ ಮನಸ್ಸಿನ ಪುಟವ ತಿರುವಿ ಹಾಕಿದಾಗ. ನೆನಪಿನ ಕಪಾಟಿನ ಕೀಲಿ ಕೈ ಸಿಗದಂತೆ ದೂರ ಎಸೆದರೂ
ಮತ್ತೆ ಮತ್ತೆ ಸಿಗುತ್ತಿದೆ. ಏನು ಮಾಡೋಣ ಕೀಲಿಕೈನ..! ಅವಾಗಾವಾಗ ಅನ್ಸತ್ತೆ, ಮನುಷ್ಯಂಗೆ ಬುದ್ಧಿ ಕಡಿಮೆ ಅಂತ. ಈಗಿನ್ನೂ ಇಟ್ಟ ಕೀ ನ ಮರೀತಾನೆ, ಎಲ್ಲಿಟ್ಟೆ ಅಂತ. ಕೊಟ್ಟ ಕೈನ ನೆನಪಲ್ಲೇ ಇಟ್ಕೊಂಡು ಕೊರಗಿ, ಕೊಳೀತಾನೆ,
ಸಾಯೋತಂಕ. ಈಗ ನಂಗೆ ಆಗಿದ್ದೂ ಅದೆ. ಮರೆಯಲೇಬೇಕಾದ ಸಂಗತಿಗಳು ಮರೆವ ಪ್ರಯತ್ನಕ್ಕೆ
ಸವಾಲೆಸೆದು, ಮತ್ತೆ ಮತ್ತೆ ರಾಕ್ಷಸತ್ವ ಪಡೆದು ಬೆನ್ನಿಗೆ ಬಿದ್ದಿವೆ. ಇಂತಹ
ಸಂದರ್ಭದಲ್ಲಿ ಹಳೇ ಹುಡುಗಿಗೆ ಹೇಳಲೇಬೇಕಾದ ಹೊಸ ಮಾತುಗಳಿವೆ.
ನಾನು ನನ್ನನ್ನ ಇಷ್ಟಪಟ್ಟಷ್ಟು
ನನ್ನ ಯಾರೂ ಇಷ್ಟಪಟ್ಟಿಲ್ಲ. ನಾನು ನನ್ನನ್ನ ಇಷ್ಟಪಟ್ಟಷ್ಟು ನಾನೂ ಯಾರನ್ನೂ ಇಷ್ಟಪಟ್ಟಿರಲಿಲ್ಲ.
ನೀನು ಸಿಕ್ಕಿದೆ ಕಣೆ. ನೋಡಿದ ಕೂಡಲೆ ಎದೆಯಲ್ಲಿ ಯಾವುದೋ ಸ್ವಿಚ್ಚು ಅದುಮಿದಂಗಾಯ್ತು. ಕೊನೆಗೂ ಕರೆಂಟ್
ಬರ್ಲಿಲ್ಲ ಅನ್ನೋದು ಬೇರೆ ವಿಚಾರ. ಮೊದಲ ನೋಟಕ್ಕೇ ಪ್ರೀತಿ ಮೊಳಕೆ ಒಡೀತು. ಬರಿ ಮೊಳಕೆ ಒಡೆಯೋದೇನು, ಹೆಮ್ಮರವಾಗಿ ಹೂವನ್ನೇ ಬಿಡ್ತು. ಇನ್ನೂ ಅದೇ ಹೂವಿದೆ ಕಿವೀಲಿ. ನಮ್ಮ ಕ್ಲಾಸಲ್ಲೇ
’ಕ್ಲಾಸ್’ ಆಗಿದ್ದ ಹುಡುಗಿ ನೀನು, ನಿಂಗೆ ಮನಸ್ಸು ಕೊಟ್ಟೆ, ನೀನು ನಂಗೆ ಕೈ ಕೊಟ್ಟೆ. ಅದ್ಭುತ ಎಕ್ಸಚೇಂಜ್ ಆಫರ್..! ನಿನ್ನ ನೋಡಬೇಕು ಅಂತಾನೆ ಕಾಲೇಜಿಗೆ
ಬರ್ತಾ ಇದ್ದೆ. ಹಂಗೆ ಬಂದಿದ್ರಿಂದ ನನ್ನ ಮನಸ್ಸು ಇನ್ನೂ ಗ್ಯಾರೇಜ್ ನಲ್ಲೇ ಇದೆ. ನೀನು ಕಾರಣ ಹೇಳಿ
ಹೋಗಿದ್ರೆ ಬೇಜಾರು ಆಗ್ತಿರ್ಲಿಲ್ವೇನೊ. ಹೇಳದೆ ಹೋದ್ಯಲ್ಲ ಅದು ಬೇಜಾರು. ನಿಂಗೆ ಅಂತ ಹೇಳಿದ ಮಾತು
ನೆನಪಿದ್ಯಾ..? ಸಾವಿರ ಸಲ ಹೇಳಿದ ಮಾತು..!
ಹೇಳಿಬಿಡು ಒಮ್ಮೆ ನೀ ನನಗಲ್ಲವೆಂದು
ಬದಲಿಸಿ ಬಿಡುವೆ ಆ ಬ್ರಹ್ಮನ ಹಣೆಬರಹವನ್ನು
ಅಂತ. ಬ್ರಹ್ಮ ಹಣೆಯಲ್ಲಿ
ಬೇರೆ ಬರ್ದಿದ್ರೆ ಅಳಿಸಿ ನಿನ್ನ ಹೆಸರನ್ನೆ ಬರಿಬಹುದಿತ್ತೇನೋ..!
ನಿನ್ನೆದೆಯಲಿ ಬರೆಯದೆ ನನ್ಹೆಸರ
ಇಂಗಿಸಿ ಬಿಟ್ಟೆಯ ನನ್ನುಸಿರ...?
ಕ್ಲಾಸಲ್ಲಿ ನಿನ್ನ ಕದ್ದು, ಕದ್ದು ನೋಡೋದು, ಕೆಟ್ಟದಾಗಿ ಬರ್ದಿರೊ ನಿನ್ನ ನೋಟ್ಸ್,
ರೆಕಾರ್ಡ್ ನ ಇಸ್ಕಳೋದು, ನಿನ್ನ ಹಾಸ್ಟೆಲ್ ಕಿಟಕೀನ ನಿನಗಾಗಿ
ನೋಡೋದು, ಪುಸ್ತಕದ ಕೊನೆ ಪುಟದಲ್ಲಿ ನಿನ್ನದೇ ಹೆಸರು ಗೀಚೋದು,
ಬೆಂಚಿನ ಮೇಲೆ ಕೆತ್ತೋದು ಮುಂತಾದ ಹಲವು ಪ್ರೀತಿಯ ಲಕ್ಷಣಗಳನ್ನ ತೋರಿಸಿದೆ,
ಎಲ್ಲಾ ಹುಡುಗರಂತೆ. ನೀನು ಅದನ್ನೆಲ್ಲ ನಿರ್ಲಕ್ಷಿಸಿದೆ, ಎಲ್ಲ ಹುಡುಗಿಯರಂತೆ. ತೀರಾ ಪ್ರೀತಿ-ಗೀತಿ ಅಂತ ಮಾಡೋಕು ಮುಂಚೆ ನಿನ್ನ ಕೇಳಬೇಕಿತ್ತು ಕಣೆ
ಬಿಡಿಸಿ ಹೇಳಲಾರೆಯ ನನಗೂ-ನಿನಗೂ ನಂಟೇನು
ನೀನಿನ್ನು ನನಗೆ ಕನ್ನಡಿ ಒಳಗಿನ ಗಂಟೇನು
ಅವತ್ತು ಕೇಳ್ಳಿಲ್ಲ.
ಇವತ್ತು ಅನುಭವಿಸ್ತ ಇದೀನಿ. ನೀ ಹೋದಾಗಿಂದ ’ದೇವದಾಸ’ ಮನೆದೇವರು ಅಗ್ಬಿಟ್ಟಿದಾನೆ. ಅಂದಿನಿಂದ ನಂಗೆ
ನನ್ನನ್ನೂ ಇಷ್ಟಪಡೋಕೆ ಆಗ್ತಾ ಇಲ್ಲ. ಈಗ್ಲಾದ್ರು ಬರ್ತೀಯ, ಕಾದು
ಕಾದು ಕೆಂಪಾಗಿದೀನಿ..?
ಅಮ್ಮ ಹೇಳುತ್ತಿದ್ದ ಕಥೆ
ಒಂದಲ್ಲಾ ಒಂದು ಊರಲ್ಲಿ ಒಬ್ಬ ಇದ್ನಂತೆ. ಅವನ ಮನೆಯ ಮುಂದೆ ಒಂದು ಹಲಸಿನ ಮರ ಇತ್ತಂತೆ. ಆಗಿನ ಕಾಲದಲ್ಲಿ ಹಲಸಿನ ಹಣ್ಣಿಗೆ ಮುಳ್ಳು ಇರಲಿಲ್ವಂತೆ. ಒಂದಿನ ಒದ್ದ ಭಿಕ್ಷುಕ ಬಂದು ಆ ಮನೆಯ ಯಜಮಾನನ ಹತ್ರ ಹಣ್ಣು ಕೇಳಿದನಂತೆ. ಅವ ಕೊಡ್ಲಿಲ್ವಂತೆ. ಭಿಕ್ಷುಕನಿಗೆ ಸಿಟ್ಟು ಬಂದು ಹಣ್ಣಿನ ತುಂಬಾ ಮುಳ್ಳು ಬರಲಿ ಅಂತ ಶಾಪ ಕೊಟ್ನಂತೆ. ಅವತ್ತಿಂದ ಹಲಸಿನ ಹಣ್ಣಿನ ಮೇಲೆ ಮುಳ್ಳು ಬಂತಂತೆ. ಶಿವ ಆ ಯಜಮಾನನನ್ನ ಪರೀಕ್ಷೆ ಮಾಡಬೇಕು ಅಂತ ಭಿಕ್ಷುಕನ ರೂಪದಲ್ಲಿ ಬಂದಿದ್ನಂತೆ. ಅಮ್ಮ ಹೇಳುತ್ತಿದ್ದ ಕಥೆ ಈಗಲೂ ಕಣ್ಣಿಗೆ ಕಟ್ಟೋ ಹಾಗಿದೆ. ಪ್ರತಿ ದಿನ ಅಮ್ಮ ಕಥೆ ಹೇಳಲೇ ಬೇಕು, ನಾನು ಕಥೆ ಕೇಳ್ತಾ ಮಲಗಲೇ ಬೇಕು. ಎಷ್ಟೋ ಸಲ ಅರ್ಧ ಕಥೆಗೆ ನಿದ್ದೆ ಬರ್ತಿದಿದ್ದೂ ಉಂಟು. ಮರುದಿನ ಬೆಳಗ್ಗೆ ಮತ್ತೆ ಆ ಕಥೆಯ ಮುಂದುವರಿದ ಭಾಗ ಹೇಳು ಅಂತ ಪೀಡಿಸ್ತಿದ್ದೆ. ಅಮ್ಮನ ಕಥೆಯಲ್ಲಿ ಮೊಲ ಮಾತಾಡ್ತಿತ್ತು, ಕಲ್ಲಿನ ಬಸವ ಎದ್ದು ನಿಲ್ತಾ ಇತ್ತು, ಸೂರ್ಯಂಗೇ ಕೋಪ ಬರ್ತಿತ್ತು, ಹೂವು ಹುಡುಗಿಯಾಗ್ತಿತ್ತು, ಹುಡುಗಿ ಹಾವಾಗ್ತಿದ್ಲು, ನರಿ ಮೋಸ ಮಾಡ್ತಿತ್ತು. ಎಂಥಾ ಅದ್ಬುತ ಕಲ್ಪನೆಗಳು. ಪ್ರಪಂಚದಲ್ಲಿರೋ ಎಲ್ಲಾ ನಿರ್ಜೀವ ವಸ್ತುಗಳಿಗೂ ಜೀವ ತುಂಬುವ ಶಕ್ತಿ ಅಮ್ಮನಿಗಿತ್ತು. ಹತ್ತನೇ ಕ್ಲಾಸ್ ಫೇಲಾದ ಅಮ್ಮ ಕಥೆಗಳಲ್ಲಿ ಒಂದು ಅದ್ಬುತ ಲೋಕವನ್ನೇ ತೋರಿಸ್ತಿದ್ಲು. ಅದೆಷ್ಟೋ ಪ್ರಶ್ನೆಗಳಿಗೆ ಅಮ್ಮನ ಕಥೆಗಳಲ್ಲಿ ಉತ್ತರ ಇರ್ತ ಇತ್ತು. ಅಮ್ಮ ತೀರಾ ಕಲಿತವಳಲ್ಲ, ಹಾಗೆಂದು ಅವಳೇನು ಅವಿದ್ಯಾವಂತಳಲ್ಲ. ಅವಳ ಕಥೆಗಳಲ್ಲಿ ವೈಚಾರಿಕತೆಯಿತ್ತು, ಅನುಭವವಿತ್ತು, ನೀತಿಯಿತ್ತು ಹಾಗೂ ಮುಖ್ಯವಾಗಿ , ಹೇಳೋ ಅವಳಲ್ಲಿ, ಕೇಳೋ ನನ್ನಲ್ಲಿ ಖುಷಿ ಇತ್ತು. ಅಮ್ಮನ ಕಥೆಗೆ ಎಂಥದ್ದೆಲ್ಲ ವಸ್ತುವಾಗ್ತಿತ್ತು. ಕಾಗೆಯ ಬಾಯಾರಿಕೆ, ನರಿಯ ಕುತಂತ್ರ, ಮಂತ್ರಿಯ ನಿಷ್ಠೆ, ಬಾನಂಗಳದ ಚಂದಮಾಮ, ಹೊಂಡದ ಕಪ್ಪೆ ಎಲ್ಲವೂ ವಸ್ತುಗಳೇ. ಪಾತಾಳದಿಂದ ನಾಗಕನ್ಯೆಯರನ್ನು ಕರೆತರ್ತಿದ್ಲು, ಗಂಧರ್ವಲೋಕದಿಂದ ಗಂಧರ್ವರು ಹಾಡು ಹೇಳ್ತಾಯಿದ್ರು, ಸ್ವರ್ಗದಿಂದ ದೇವತೆಗಳು ಬರ್ತಿದ್ರು, ಅದ್ಯಾವುದೋ ಲೋಕದಿಂದ ರಾಕ್ಷಸರುಗಳನ್ನೇ ಎಳೆದು ತಂದು ಕಣ್ಣ ಮುಂದೆ ಇಡ್ತಾ ಇದ್ಲು. ಅಮ್ಮ ಪುಸ್ತಕ ಓದಿ ಕಥೆ ಕಲಿತವಳಲ್ಲ. ಕಥೆ ಹೇಳಲು ಅಮ್ಮನಿಗೆ ಟಿವಿಯನ್ನೂ ನೋಡಬೇಕಿಲ್ಲ. ಆಕೆಗೆ ಕಥೆ ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು, ಮಾತಾಡುವಷ್ಟೇ ಸರಾಗ. ಆಕೆಯ ಉಸಿರಲ್ಲಿ ಕಥೆಯಿತ್ತು, ಆ ಕಥೆಗಳಿಗೂ ಜೀವ ಇತ್ತು. ಆಕೆಗೆ ಕಥೆ ಹೇಳುವ ಕಲೆ ತಿಳಿದಿತ್ತು. ದೆವ್ವ, ಭೂತ, ಪಿಶಾಚಿಗಳ ಕಥೆ ಹೇಳಿ ಹೆದರಿಸ್ತಿದ್ಲು , ಮಾಯಾಲೋಕದ ಕಿನ್ನರರ ಕಥೆ ಹೇಳಿ ಮೋಡಿ ಮಾಡ್ತಿದ್ಲು, ದೇವರ ಕಥೆ ಹೇಳಿ ಭಕ್ತಿ ಹುಟ್ಟಿಸ್ತಿದ್ಲು, ಅದ್ಯಾವುದೋ ಕಥೆ ಹೇಳಿ ನಗುಸ್ತಿದ್ಲು, ಅಳುಸ್ತಿದ್ಲು. ನಮ್ಮನ್ನ ಕಥೆಯ ಒಂದು ಭಾಗವನ್ನಾಗಿಸಿಬಿಡ್ತಿದ್ಲು. ನಮ್ಮ ನಿಮ್ಮೆಲ್ಲರ ಇಮ್ಯಾಜಿನೇಶನ್ ಪವರ್ ಇದ್ಯಲಾ ಅದರ ಮೂಲ ಬಹುಶಃ ನಾವು ಹಿಂದೆಂದೋ ಕೇಳಿದ ಕಥೆ. ಇದು ನನ್ನೊಬ್ಬ ಅಮ್ಮನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ತಾಯಿಯೂ ಕಥೆಗಳ ಗುಚ್ಛ. ಅವರಲ್ಲಿ ಹೇಳಿದಷ್ಟೂ ಕಥೆಯಿದೆ. ಅವರೊಂದು ಕಥೆಗಳ ಖಜಾನೆ. ಅವರಲ್ಲೊಬ್ಬ ಅದ್ಬುತ ಕಥೆಗಾರ ಕುಳಿತುಬಿಟ್ಟಿದ್ದಾನೆ. ಆದರೆ... ಈಗ ನಾವು..? ನಮಗೆ ಸಿನಿಮಾದ ಕಥೆಬಿಟ್ಟು ಬೇರೆ ಕಥೆ ಗೊತ್ತಿಲ್ಲ. ಕಥೆಗಳ ಸೃಜನಶೀಲತೆ ನಮ್ಮಲ್ಲಿಲ್ಲ. ಲವ್ ಸ್ಟೋರಿ , ಆಕ್ಷನ್ ಫಿಲಂ ಗಳ ಆಚೆಗೆ ಬೇರೆಯದೇ ಆದ, ಒಂದಷ್ಟು ನೀತಿಯಿರುವ, ನಮ್ಮಲ್ಲೊಂದು ವೈಚಾರಿಕತೆ ಮೂಡಿಸುವ ಕಥೆಗಳ ಕಲ್ಪನೆಯೂ ನಮಗೀಗ ಬರಲಿಕ್ಕಿಲ್ಲ. ಕಥೆ ಹೇಳೋ ಕಲೆ ನಮ್ಮಲ್ಲಿಲ್ಲ. ಹೇಳೋ ಕಥೆ ಕೇಳುವ ವ್ಯವಧಾನವೂ ಬಹುಶಃ ಈಗ ನಮಗೆ ಹಾಗು ಈಗಿನ ಚಿಕ್ಕ ಮಕ್ಕಳಿಗೆ ಇರಲಿಕ್ಕಿಲ್ಲ. ಟಿವಿ ಸೀರಿಯಲ್ ಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಗೇಮ್ ಗಳಲ್ಲಿ, ಸಿನಿಮಾ ಹಾಡುಗಳಲ್ಲಿ ಕಥೆ ಕಾಣೆಯಾಗಿದೆ. ಅಮ್ಮನ ಕಥೆಗಳಲ್ಲಿ ಅನ್ಯಾಯ ಇರ್ತಾ ಇರ್ಲಿಲ್ಲ, ರಕ್ತ ಇರ್ತಿರಲಿಲ್ಲ, ಮುಖವಾಡ ಇರ್ತಿರಲಿಲ್ಲ ಅಥವಾ ಅವೆಲ್ಲ ಇದ್ರೂ ಕೊನೆಗೊಂದು ಹ್ಯಾಪಿ ಎಂಡಿಂಗ್ ಇತ್ತು, ನೈತಿಕತೆ ಮರೆತ ಎಲ್ಲರಿಗೂ ಶಿಕ್ಷೆ ಆಗ್ತಾ ಇತ್ತು. ನಮ್ಮ ತಲೆಯೊಳಗೆ ಅಂತಹ ನೈತಿಕತೆ ಮೆರೆಯುವ ಒಂದೇ ಒಂದು ಸ್ವಂತ ಕಥೆ ಬರಲೂ ಸಾಧ್ಯವಿಲ್ಲ ಹಾಗು ಹಿಂದೆಂದೋ ಕೇಳಿದ ಕಥೆಯನ್ನ ಅಮ್ಮ ಹೇಳಿದಷ್ಟೇ ರಸವತ್ತಾಗಿ ಹೇಳುವ ಕಲೆಯೂ ನಮಗೆ ಗೊತ್ತಿಲ್ಲ. ಕಥೆಯ ಕೊಂಡಿ ಕಳಚುತ್ತಾ ಇದೆ. ಸಿಕ್ಕಾಪಟ್ಟೆ ಬಿಜಿಯಾಗಿರುವ ಅಪ್ಪ ಹಾಗು ಟಿವಿ ಸೀರಿಯಲ್ಲುಗಳಲ್ಲೇ ಮುಳುಗಿ ಹೋಗಿರುವ ಅಮ್ಮ... ಇವರಿಬ್ಬರ ನಡುವೆ ಕಾಣೆಯಾಗುತ್ತಿರುವ ಕಥೆ.ಹೀಗೆಯೇ ಆದಲ್ಲಿ ಮುಂದೊಂದು ದಿನ ವಿಶ್ವವಿದ್ಯಾನಿಲಯಗಳು ಕಥೆ ಹೇಳುವುದು ಕಲಿಸುವ ಕೋರ್ಸು ಪ್ರಾರಭಿಸಬೇಕಾದೀತು. ನಾವೇ ನಮ್ಮ ಯಾಂತ್ರಿಕ ಜೀವನ ಶೈಲಿಯಲ್ಲಿ ಕೊಂದ ಕಥೆಗಾರ ಮತ್ತೆ ಹುಟ್ಟಿ ಬರಲಿ, ಇಂದಿನ ಮಕ್ಕಳು ಹೋಂ ವರ್ಕ್ , ಟ್ಯೂಶನ್ ಗಳ ಒತ್ತಡದಿಂದ ಹೊರಬಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ರಿಸಲಿ.
ನಾನ್ಯಾರೆಂದರೆ ನಾನ್ಯಾರು..?
ನಿದ್ದೆ ಮಂಪರಿನಲ್ಲಿದ್ದ ನನಗೆ "ನಾನ್ಯಾರು... ನಾನ್ಯಾಕೆ ಇಲ್ಲಿ ಇದೀನಿ.... ಭೂಮಿಯ ಮೇಲೇ ನನ್ನ ಅಸ್ತಿತ್ವ ಏನು...? ಎಂಬಂಥ ಪ್ರಶ್ನೆಗಳು ಕಾಡುತ್ತಿತ್ತು. ತೀರಾ ಆಧ್ಯಾತ್ಮದವರೆಗೂ ಕರೆದೊಯ್ಯಬಲ್ಲಂಥ ಇಂಥ ಪ್ರಶ್ನೆಗಳು ಸಧ್ಯಕ್ಕೆ ನನ್ನನ್ನು ನಿದ್ದೆಯಿಂದ ಎಬ್ಬಿಸಿತ್ತು. ಮಧ್ಯಾಹ್ನ ಉಟ ಮಾಡಿ ಸಂಜೆಯವರೆಗೂ ಮಲಗಿಕೊಳ್ಳುವಂಥ ಖಯಾಲಿ ಇಂದು ನಿನ್ನೆಯದಲ್ಲ. ಆದರೆ, ಹೀಗೆ ನನ್ನ ಜೀವನದ ಉದ್ದೇಶಗಳ ಬಗೆಗಿನ ಪ್ರಶ್ನೆ ತೀರಾ ಇತ್ತೀಚಿನದು. ನಾನೆಂಬ ನಾನು ಕೇವಲ ಅಪ್ಪ-ಅಮ್ಮನ ಮಗ.. ಅಜ್ಜ-ಅಜ್ಜಿಯ ಮೊಮ್ಮಗ.. ಅಣ್ಣನ ತಮ್ಮ... ತಂಗಿಯ ಅಣ್ಣ... ಹೀಗೆ, ಇವಷ್ಟೇ ಉತ್ತರಗಳು ನನ್ನ ಬಳಿ, ನಾನ್ಯಾರೆಂದರೆ. ಯಾರಾದ್ರು ನನ್ನನ್ನು 'ನೀನ್ಯಾರು..?' ಎಂದು ಕೇಳಿದ್ರೆ, ಇಂಥ ಊರಿನವನಾದ ನಾನು ಇಂಥವರ ಮೊಮ್ಮಗನಾಗಿದ್ದೇನೆ, ಇಂಥವರ ಮಗನಾದ ನನ್ನ ಹೆಸರು ಇಂಥದ್ದು... ಇಷ್ಟು ಮಾತ್ರ ನನ್ನ ಬಗ್ಗೆ ನನಗೆ ತಿಳಿದಿದ್ದ ವಿವರಗಳು. ನಿಜ ಅಂದ್ರೆ, 'ನಾನ್ಯಾರು' ಎಂಬ ಯಾರದೋ ಪ್ರಶ್ನೆಗೆ ಇಷ್ಟು ವಿವರಗಳು ಸಾಕು. ಆದ್ರೆ ನನ್ನಲ್ಲೇ ಈ ಪ್ರಶ್ನೆಗಳು ಹುಟ್ಟಿದ್ರೆ...? ಹುಟ್ಟಿತ್ತು...! ನಾನು ಇಂಥ ಊರಿನವನು... ಇಂಥವರ ಮಗ ಎಂಬಷ್ಟೇ ಉತ್ತರಗಳು ತೃಪ್ತಿ ನೀಡಲಿಲ್ಲ. ಊರು, ಅಜ್ಜ, ಅಜ್ಜಿ, ಅಪ್ಪ, ಅಮ್ಮ ಹೀಗೆ ಯಾರಾದರೊಬ್ಬರ/ ಯಾಹುದಾದರೊಂದರ ರೆಫೆರೆನ್ಸೆ ಬೇಕು, ನಾನ್ಯಾರು ಎಂಬ ಪ್ರಶ್ನೆಯ ಉತ್ತರಕ್ಕೆ. ಯಾರೊಬ್ಬರ ರೆಫೆರೆನ್ಸೆ ಕೂಡ ಇಲ್ಲದೆ 'ನಾನ್ಯಾರು' ಅಂತ ಹೇಳಲಿಕ್ಕೆ ಸಾಧ್ಯವ... ಜೀವನಕ್ಕೊಂದು ಉದ್ದೇಶ ಇದ್ಯಾ...? ಇದು ಇವತ್ತು ನಿದ್ದೆ ಮಂಪರಿನಲ್ಲಿದ್ದಾಗಿನ ಪ್ರಶ್ನೆಯಾಗಿತ್ತು. ಎದ್ದು ಸೀದಾ ಬಚ್ಚಲ ಮನೆಗೆ ಹೋಗಿ ಮುಖ ತೊಳೆಯತೊಡಗಿಗೆ. ನನ್ನದೇ ಪ್ರಶ್ನೆಯ ಉತ್ತರಕ್ಕಾಗಿ ಯಾರನ್ನು ಕೇಳೋದು.. ಬಚ್ಚಲ ಮನೆಯ ಹಂಡೆ, ನೀರು, ಚೊಂಬು, ಬಕೆಟ್ ಗಳಿಗೆ ಗೊತ್ತಿರಲಿಕ್ಕಿಲ್ಲ. ಬಚ್ಚಲ ಮನೆಗೆ ಅಪ್ಪ, ಅಮ್ಮ, ಅಣ್ಣ, ಅಕ್ಕ, ತಂಗಿ, ಚಿಕ್ಕಪ್ಪ, ಚಿಕ್ಕಮ್ಮ ಎಲ್ಲರು ಬರ್ತಾರೆ. ಬಂದದ್ದು ಯಾರು ಎಂದು ಗುರುತಿಸುವ ಶಕ್ತಿ ಅವುಗಳಿಗಿಲ್ಲ. ಮುಖ ತೊಳೆದು ಸೀದಾ ಜಗಲಿಯತ್ತ ನಡೆದೆ, ಅಮ್ಮನನ್ನರಸಿ. ಮೋಡ ಮುಸುಕಿದ ಭಾನು ಮಳೆಯ ಸೂಚನೆ ಕೊಡುತ್ತಿತ್ತು. ಮಧ್ಯಾಹ್ನ ಊಟ ಮುಗಿಸಿ, ಒಂದೊಳ್ಳೆ ನಿದ್ದೆ ಮಾಡಿ ಎದ್ದು ಕಾಫಿ ಕುಡಿಯುಹುದು ಮಲೆನಾಡಿನ ವಾಡಿಕೆ. ಅಂತೆಯೇ ನಾನು ಎದ್ದಿದೀನಿ, ಕಾಫಿ ಕುಡಿಯಲು ತಯಾರು ಎಂಬ ಸಂದೇಶ ಹೊತ್ತು ಜಗಲಿಗೆ ಬಂದಿದ್ದೆ. ಟಿವಿ ತನ್ನ ಪಾಡಿಗೆ ತಾನು ಉರಿಯುತ್ತಿತ್ತು... ಉರಿಯೋದೆ ತನ್ನ ಕೆಲಸವೆಂಬಂತೆ. ಮೆಘಾ ಸೀರಿಯಲ್ ಗಳ ಒಂದೊಂದು ಪಾತ್ರವಾಗಿಬಿಟ್ಟಿದ್ದ ಮನೆಯವರೆಲ್ಲ ಈ ದಿನ ತಮ್ಮ ಪಾತ್ರದಲ್ಲಿ ಮಗ್ನರಾಗಿರಲಿಲ್ಲ. ಪ್ರಪಂಚದ ಎಂಟನೆ ಅದ್ಭುತ ನೋಡಿದ ಭಾಗ್ಯ ನನ್ನದಾಗಿತ್ತು.... ಟಿವಿ ಅನಾಥವಾಗಿತ್ತು. ನನ್ನ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ನಾನೇ ನನಗೆ ಪ್ರಶ್ನೆಯಾಗಿದ್ದೆ. ಉತ್ತರ ಸಿಗಲಾರದ ಪ್ರಶ್ನೆಗಳೇ ಹೀಗೆ.. ಒಂದಷ್ಟು ದಿನ ಕೊರೆಯತ್ತೆ... ಕಾಡತ್ತೆ.. ಮರೆಯತ್ತೆ. ಮರೆಯೋಕೆ ಸ್ವಲ್ಪ ಸಮಯ ಬೇಕಾಗಿದ್ರಿಂದ ಈ ಪ್ರಶ್ನೆಗಳು ಕಾಡುತ್ತಿತ್ತು. ಕಾಫಿ ಬೀಳದ ಬಾಯಿ ಒಣಗುತ್ತಿತ್ತು. ಚಿಕ್ಕಮ್ಮನ ಧ್ವನಿ ಜಗಲಿಯ ಪಕ್ಕದಲ್ಲಿದ್ದ ರೂಮಿನಿಂದ ಬಂದಂತಾಯಿತು. ಹೆಂಗಸರ ಬೆಟಾಲಿಯನ್ ನ ಕಮಾನ್ಡೆರ್ ಚಿಕ್ಕಮ್ಮ. ಅವರ ಧ್ವನಿ ಬಂದತ್ತಲೇ ಹೊರಟೆ.. ಅಮ್ಮನೂ ಇರಬಹುದೆಂದು. ಕಪ್ಪಂಚಿನ ಬಿಳಿ ಸೀರೆಯನ್ನು ತಿರುಗಿಸಿ, ಮುರುಗಿಸಿ, ಮುತ್ತಿ ನೋಡಿ ಪರಿಶೀಲಿಸುತ್ತಿತ್ತು ಬೆಟಾಲಿಯನ್. ಮುಂದಿನ ತಿಂಗಳು ಇದ್ದ ಅಕ್ಕನ ಮದುವೆಗೆ ತಂದ ಸೀರೆ ಬೆಟಾಲಿಯನ್ ನ ಪರೀಕ್ಷೆಗೆ ಒಳಪಟ್ಟಿತ್ತು. ನನ್ನ ಬದುಕಿನ ಉದ್ದೇಶ ಏನು ಎಂಬುದು ಇನ್ನೂ ನನಗೆ ತಿಳಿಯದಾಗಿತ್ತು. ನನ್ನ ಅಸ್ತಿತ್ವ ಸೀರೆ ಇಂದ ಮುಚ್ಚಿತ್ತು. ನಾನು ಅಲ್ಲಿ ಇದ್ ದದ್ದನ್ನ ಇನ್ನೂ ಯಾರೂ ಗಮನಿಸಿರಲಿಲ್ಲ. ಬಹುಷಃ ಆ ಸೀರೆ ಚಿಕ್ಕಮ್ಮನಿಗೆ ಇಷ್ಟ ವಾಗಲಿಲ್ಲ ಅನ್ಸತ್ತೆ. ನಾಳೆ ಸೀರೆ ಬದಲಿಸುವ ಕುರಿತು ಚರ್ಚೆ ನಡೆಯುತ್ತಿತ್ತು. ಅಂತ ಒಂದು ಸೀರಿಯಸ್ ವಿಚಾರ ಚರ್ಚೆಯಿಂ ದ ಅಮ್ಮನನ್ನು ಹೊರತಂದು ಕಾಫಿ ಮಾಡಿಸೋ ದು ಅಸಾಧ್ಯ ಅಂತ ನನಗೆ ಅನುಭವದಿಂದ ಗೊತ್ತಿದೆ. ಸರಿ.. ನನ್ನ ಪ್ರಶ್ನೆಗಳಿಗೆ ಉತ್ತರ ಬೆಂಬತ್ತಿ ಹಿ ತ್ತಲ ಕದೆಯತ್ತ ನಡೆದೇ. ಮೋಡ, ಮಿಂಚು , ಗುಡುಗು... ಮಳೆ ಬರುವ ಮುನ್ಸೂಚನೆ. ಒಂದೆರಡು ಹನಿ ಬಿದ್ದ ಮೇಲೇ ಅಕ್ಕ ಓದಿ ಬಂದ್ಲು, ಒಣ ಹಾಕಿದ್ದ ಬಟ್ಟೆ ತೆಗಿಯಲು. ಅಲ್ಲಿದ್ದ ಎಲ್ಲ ಬಟ್ಟೆಯನ್ನು ತೆಗೆದು, ಬಾ ಇಲ್ಲಿ ಎಂದು ನನ್ನನ್ನ ಕರೆದ್ಲು. ಎರಡೂ ಹೆಗಲಿಗೆ ಹಿಡಿಯೋ ಅಷ್ಟು ಬಟ್ಟೆಯನ್ನ ನನ್ನ ಹೆಗಲಿಗೆ ಹಾಕಿ, ಉಳಿದ ಒಂದು ಕರ್ಚೀಪ್ ಹಿಡಿದು. ಹೊರಟೆ ಬಿಟ್ಲು. ನನ್ನ ಪ್ರಶ್ನೆಗೆ ಉತ್ತರ ಅರ್ಧ ಸಿಕ್ಕಂತಾಗಿ ನಾನೂ ಅವಳ ಹಿಂದೆ ಹೊರಟೆ. ಬಹುಷಃ ಮಳೆ ಬಂದಾಗ ಒಣ ಹಾಕಿದ ಬಟ್ಟೆ ತೆಗೆಯೋದು ನನ್ನ ಜೀವನದ ಉದ್ದೇಶ ಗಳಲ್ಲೊಂದಾಗಿರ ಬಹುದ... ಅಥವಾ... ಅದೊಂದೇ ಉದ್ದೇಶವ ನನ್ನ ಬದುಕಿಗೆ...!
Subscribe to:
Posts (Atom)