ಅದೆಷ್ಟು ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ನೋ ಗೊತ್ತಿಲ್ಲ. ಮಹಾ ನಗರದಲ್ಲಿ
ಒಂಟಿ ರೂಮು ಮಾಡಿ ಒಂಟಿಯಾಗಿದ್ದ ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ದ.
ಘಳಿಗೆಗೊಮ್ಮೆ ಫೋನ್ ನೋಡಿ ಬಡಬಡಿಸ್ಥ ಇದ್ದ. ಯಾರೋ ಕೇಳ ಬೇಕಾದ್ದೊಂದು ಯಾರಿಗೂ ಕೇಳದೆ
ಅಲೆ ಅಲೆಯಾಗಿ ಹೋಗಿ ಗಾಳಿಯಲ್ಲಿ ವಿಲೀನವಾಗುತ್ತಿತ್ತು. ಅಂತರಾಳದ ಮಾತು ಆತ್ಮಹತ್ಯೆ
ಮಾಡಿಕೊಳ್ಳುತ್ತಿದ್ವು. ಸತ್ತ ಪ್ರತಿ ಮಾತು ಒಂಟಿ ರೂಮಿನಲ್ಲಿ ಪ್ರತಿಧ್ವನಿಸುತ್ತಿದ್ವು.
ಕೇಳುವವರಿಲ್ಲದೆ ಕಮರಿ ಕಣ್ಮರೆಯಾಗುತ್ತಿದ್ವು. ಬಹುಶಃ ಅದೊಂದು ಫೋನ್ ಕಾಲ್ ಬಂದಿದ್ರೆ
ಮಾತು ಹಾಗು ಮನಸ್ಸು ಎರಡಕ್ಕೂ ಉಸಿರಿರುತ್ತಿತ್ತೇನೋ. ಮಹಾನಗರದಲ್ಲಿ ಯಾರಿಗೂ
ಸಮಯವಿರಲ್ಲಿಲ್ಲ ಮಾತಿನ ಹೆಣ ಹೊತ್ತು ಹಾಕಲು. ಕೊಳೆತು ನಾರುವ ಮನಸ್ಸಿಗೊಂದು ಸಾಬೂನು
ಹಾಕಲು. ಬೆಳಗ್ಗೆ ಅದೆಷ್ಟೋ ಹೊತ್ತಿಗೆ ಮೊಬೈಲ್ ರಿಂಗಿನುಸುತ್ತಿತ್ತು. ಆತುರದಿಂದ
ನೋಡಿದ್ರೆ ಹಾಳಾದ್ದು ಅಲಾರಂ. ಬಹುಶಃ ಅದೊಂದೇ ಅವನ ಮೊಬೈಲ್ ನಲ್ಲಿ ಬರುತ್ತಿದ್ದ ಶಬ್ದ.
ಯಾರಿಗೂ ನೆನಪಾಗದೆ ಇರೋದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯ ಹಿಂದೆ ಉತ್ತರ
ಸಿದ್ಧವಿರುತ್ತಿತ್ತು, ನೀನೆ ಇದ್ದೀಯಲ್ಲೋ, ಯಾರ ನೆನಪಿಗೂ ಬಾರದೆ. ಅದು ಸರಿಯೇ..
ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ತನ್ನದಲ್ಲ, ತನ್ನನ್ನು ನೆನಪಿಟ್ಟು ಕೊಳ್ಳಲು
ತನ್ನವರ್ಯಾರೂ ಇಲ್ಲ. ಹಾಗಾದ್ರೆ ತಾನು ಕಾಯ್ತಾ ಇರೋ ಫೋನ್ ಕಾಲ್ ಯಾರಿದ್ದು..? ತಾನು
ಕಾಯ್ತಾ ಇರೋದು ಯಾರಿಗಾಗಿ..? ತನ್ನವರೆನ್ನು ವವರು ಯಾರೂ ಈಗ ಬದುಕಿಲ್ವೋ..? ಅಥವಾ..
ಮೊದಲಿಂದಲೂ ಇರ್ಲಿಲ್ವೋ..? ಗೊಂದಲಕ್ಕೆ ಬಿದ್ದು ಬಿಡ್ತಾ ಇದ್ದ. ಇಷ್ಟು ದಿನ ಇದ್ದದ್ದು
ರಾತ್ರೆ ಬಿದ್ದ ಕನಸೇ..? ಆತನಿಗಂತೂ ಗೊತ್ತಿರ್ಲಿಲ್ಲ. ಅತ್ತಲಿನ ಧ್ವನಿ
ಉತ್ತರಿಸಬೇಕಿತ್ತು. ಉತ್ತರಿಸುತ್ತಿತ್ತೇನೋ.. ಧ್ವನಿ ಇದ್ದಿದ್ರೆ. ಬೆಳಗ್ಗೆ ಹೆಣ
ಹೊತ್ಕೊಂಡು ಕೆಲಸಕ್ಕೆ ಹೋಗೋದು, ಸಂಜೆಯವರೆಗೂ ತನ್ನ ಹೆಣದ ಮೇಲೆ ಅಕ್ಕಿ, ಸಕ್ಕರೆ,
ಬೇಳೆ-ಕಾಳುಗಳ ಮೂಟೆ ಸಾಗಿಸೋದು, ಸಂಜೆ ನೇತ್ರಾವತಿ ಬಾರ್ ನಲ್ಲಿ ಕರುಳಿನಿಂದ
ಗಂಟಲಿನವರೆಗೂ ತುಂಬುವಂತೆ ಕುಡಿಯೋದು, ತನ್ನದೇ ಹೆಣ ಹೊತ್ತು ರೂಮು ಸೇರೋದು.
ಘಳಿಗೆಗೊಮ್ಮೆ ಫೋನ್ ನೋಡೋದು. ಕುಡಿದ ಮಬ್ಬು ಇಳಿದರೆ ಮತ್ತೆ ಕೆಲಸಕ್ಕೆ, ಇಲ್ಲ ಅಂದ್ರೆ
ಒಂಟಿ ರೂಮಿನಲ್ಲಿ ಒಂಟಿಯಾಗಿ ಬರಬಹುದಾದ ಫೋನ್ ಗಾಗಿ ಕಾಯೋದು. ಇದಿಷ್ಟೇ ಆತನ ದಿನಚರಿ.
ಒಂದೆ ಒಂದು ಫೋನು ಬರಬೇಕಿತ್ತು, ಎಲ್ಲವನ್ನು ಹೇಳಿ ತಾನು ಖಾಲಿಯಾಗಿ ಬಿಡಬೇಕಿತ್ತು. ಇದೆ
ಕೊನೆ ಆಸೆ ಎಂಬಂತೆ ಬದುಕ್ತಾ ಇದ್ದ. ಸ್ಸಾರಿ.. ಉಸಿರಾಡ್ತಾ ಇದ್ದ ಅಷ್ಟೇ. ಪ್ರತಿ ದಿನ
ಕುಡಿದಾಗಲೂ ಒಂದೇ ಕನಸು ಬೀಳುತ್ತಿತ್ತು ಹಾಗು ಅದು ವಾಸ್ತವಕ್ಕೆ ತುಂಬಾ
ಹತ್ತಿರವಿರುತ್ತಿತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪ್ಪನ ಹೊಟ್ಟೆಗೆ ಚೂರಿ
ಹಾಕಿದಂತೆ, ಅದನ್ನ ನೋಡಿದ ಅಮ್ಮ ಕತ್ತಲಲ್ಲಿ ಕಣ್ಮರೆ ಆದಂತೆ, ಜೀವದ ಗೆಳೆಯ ನಕ್ಕು ಮರೆ
ಆದಂತೆ ಹಾಗು ಪ್ರೀತಿಯ ಹುಡುಗಿ ಮರು ಮದುವೆಯಾದಂತೆ. ಇಷ್ಟೆಲ್ಲಾ ಕನಸ ಪರದೆಯಲ್ಲಿ
ಹರಿದಾಡಿದಂತೆ ಎಚ್ಚರಾಗಿ ಬಿಡ್ತಿದ್ದ ಹೆಬ್ಬಾವು ತುಳಿದಂತೆ. ತಾನು ಹೇಳಲೇ ಬೇಕಿತ್ತು,
ಅಪ್ಪನನ್ನು ಕೊಂಡದ್ದು ನಾನಲ್ಲ, ಅದು ಜೀವದ ಗೆಳೆಯ. ಬೇರೆ ಯಾರಿಗೂ ಅಲ್ಲದಿದ್ರೂ
ಕತ್ತಲಲ್ಲಿ ಕಣ್ಮರೆಯಾದ ಅಮ್ಮನಿಗೆ ಹಾಗೂ ಕೊಲೆಗಾರನ ಪ್ರೆಯಸಿಯಾಗಳು ಒಪ್ಪದೇ ಬೇರೆ
ಮದುವಯಾದ ತನ್ನ ಹುಡುಗಿಗೆ ಹೇಳಲೇ ಬೇಕಿತ್ತು. ಊರು ಬಿಟ್ಟು ಬಂದ ಮೇಲೆ ತನ್ನವರ
ಸುಳಿವಿಲ್ಲ. ಅವನ ಗೆಳೆಯರೊಂದಿಗೆ ಸೇತುವೆ ಬೆಸೆಯಬಲ್ಲಂತ ಫೋನು ಸ್ಥಬ್ದ ವಾಗಿತ್ತು.
ಮನಸ್ಸು ಮೂಖವಾಗಿತ್ತು. ಕುಡಿದು ಖಾಲಿಯಾದ ಬಾಟಲ್ ಆತನ ಬದುಕನ್ನ
ಪ್ರತಿಬಿಂಬಿಸುತ್ತಿತ್ತು.
ಮೊದಲ ಪತ್ರ
ಪ್ರೀತಿಯ ಜೀವನ್ಮುಖಿ...
ಅಂಚೆಯಣ್ಣನ ಕೈ ಸೇರದೆ, ನನ್ನ ಪೋಸ್ಟಾಫೀಸಿಗೆ ಬಿದ್ದ ಮೊದಲ ಪತ್ರ. ಎಂದೂ ನಿನ್ನ ಕೈ ಸೇರದ ಪತ್ರ. ನಿನ್ನ ಹೆಸರೇನೆಮ್ಬುದೆ ಗೊತ್ತಿರದ ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಸೆಳೆತ ಸೃಷ್ಟಿಸಿ ಬಿಟ್ಯಲ್ಲಾ..? ಆ ಸೆಳೆತ ಈ ಪತ್ರದಲ್ಲಿ ಎರಕಾ ಹೊಯ್ಯುವಂತೆ ಮಾಡಿದ್ಯಲ್ಲಾ..? ಅದ್ಯಾವ ಶಕ್ತಿ ನಿನ್ನಲ್ಲಿತ್ತೋ ಕಾಣೆ. ಹೆಸರೇ ಗೊತ್ತಿರದ ಸಂದರ್ಭದಲ್ಲಿ ಮೂಡಿದ ಸೆಳೆತಕ್ಕೊಂದು ಹೆಸರಿಟ್ಟು ಬಿಟ್ಟೆ ಅಂದೇ.. ಇಟ್ಟ ಆ ಅಸಂಬದ್ದ ಹೆಸರು 'ಪ್ರೀತಿ'.
ಇದೇನು ಪ್ರಕೃತಿ ಸಹಜ ಆಕರ್ಷಣೆಯಾ..? ಸುಂದರಿ ಕಡೆಗೊಂದು ಸೆಳೆತವಾ..? ನಿನ್ನ ಮಾತಿಗಂಟಿದ ವಶೀಕರನವಾ..? ಇದು ನನ್ನ ಮೌನದಲ್ಲೇ ಅವೀರ್ಭವಿಸಿದ ಅಮ್ರುತಧಾರೆಯಾ ..? ಪ್ರೀತಿ-ಪ್ರೇಮ ಎಂಬ ಹುಚ್ಚಟವಾ..? ಅಥವಾ.. ಅದೆಲ್ಲಕ್ಕೂ ಮೀರಿದ ಆರಾಧನೆಯ..? ನಿಜ ಅಂದ್ರೆ, ನಿನ್ನ ಕಂಡ ದಿನ ನಿನ್ನ ಕೊರಳಲ್ಲೊಂದು ಕೊಳಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ ಹಾಗು ಆ ಕೊಳಲಲ್ಲೊಂದು 'ರಾಗ' ನಾನಾಗ ಬಯಸಿದ್ದು ತಿಳಿಯಲೇ ಇಲ್ಲ. ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಮೂಡಿದ ಅನಿರ್ವಚನೀಯ ಭಾವಕ್ಕೆ ಮುನ್ನುಡಿಯೇನು ? ನಿನ್ನ ಕಣ್ಣಲ್ಲಿದ್ದ ಅಮ್ಮನ ಮಮಕಾರವಾ..? ಹಟಕ್ಕೆ ಬಿದ್ದ ಆ ಮುಂಗುರುಳಾ ..? ಒಡಲಾಳದಿಂದ ಹುಟ್ಟೋ ಕಪಟವಿಲ್ಲದ ನಗುವ..? ಊಹೂ .. ಪ್ರಶ್ನಾ ಮಾಲಿಕೆಯಾಗಿಬಿಟ್ಟೆ ನೀನು.
ಈ ಪತ್ರ ಎಂದೂ ನಿನ್ನ ಕೈ ಸೇರದು ಎಂದುಕೊಂಡಿದ್ದೇನೆ. ಒಂದು ಪಕ್ಷ ಸಿಕ್ಕಿದ್ದೇ ಆದಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತು 'ಶರಾವತಿ'ಯ ಆ ಹಸಿರು ದಂಡೆಯ ಮೇಲೆ ಒಂದೇ ಉಸುರಿನಲ್ಲಿ ಓದಿಬಿಡೋಣ.
ನನ್ನೆಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಿರು. ಇಬ್ಬರೂ ಸೇರಿ ಈ ಬಂಧಕ್ಕೊಂದು ಚಂದನೆ ಹೆಸರಿಡೋಣ.
ಇಂತಿ ನಿನ್ನವನಾಗ ಬಯಸಿದ
ನಾನು
ಅಂಚೆಯಣ್ಣನ ಕೈ ಸೇರದೆ, ನನ್ನ ಪೋಸ್ಟಾಫೀಸಿಗೆ ಬಿದ್ದ ಮೊದಲ ಪತ್ರ. ಎಂದೂ ನಿನ್ನ ಕೈ ಸೇರದ ಪತ್ರ. ನಿನ್ನ ಹೆಸರೇನೆಮ್ಬುದೆ ಗೊತ್ತಿರದ ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಸೆಳೆತ ಸೃಷ್ಟಿಸಿ ಬಿಟ್ಯಲ್ಲಾ..? ಆ ಸೆಳೆತ ಈ ಪತ್ರದಲ್ಲಿ ಎರಕಾ ಹೊಯ್ಯುವಂತೆ ಮಾಡಿದ್ಯಲ್ಲಾ..? ಅದ್ಯಾವ ಶಕ್ತಿ ನಿನ್ನಲ್ಲಿತ್ತೋ ಕಾಣೆ. ಹೆಸರೇ ಗೊತ್ತಿರದ ಸಂದರ್ಭದಲ್ಲಿ ಮೂಡಿದ ಸೆಳೆತಕ್ಕೊಂದು ಹೆಸರಿಟ್ಟು ಬಿಟ್ಟೆ ಅಂದೇ.. ಇಟ್ಟ ಆ ಅಸಂಬದ್ದ ಹೆಸರು 'ಪ್ರೀತಿ'.
ಇದೇನು ಪ್ರಕೃತಿ ಸಹಜ ಆಕರ್ಷಣೆಯಾ..? ಸುಂದರಿ ಕಡೆಗೊಂದು ಸೆಳೆತವಾ..? ನಿನ್ನ ಮಾತಿಗಂಟಿದ ವಶೀಕರನವಾ..? ಇದು ನನ್ನ ಮೌನದಲ್ಲೇ ಅವೀರ್ಭವಿಸಿದ ಅಮ್ರುತಧಾರೆಯಾ ..? ಪ್ರೀತಿ-ಪ್ರೇಮ ಎಂಬ ಹುಚ್ಚಟವಾ..? ಅಥವಾ.. ಅದೆಲ್ಲಕ್ಕೂ ಮೀರಿದ ಆರಾಧನೆಯ..? ನಿಜ ಅಂದ್ರೆ, ನಿನ್ನ ಕಂಡ ದಿನ ನಿನ್ನ ಕೊರಳಲ್ಲೊಂದು ಕೊಳಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ ಹಾಗು ಆ ಕೊಳಲಲ್ಲೊಂದು 'ರಾಗ' ನಾನಾಗ ಬಯಸಿದ್ದು ತಿಳಿಯಲೇ ಇಲ್ಲ. ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಮೂಡಿದ ಅನಿರ್ವಚನೀಯ ಭಾವಕ್ಕೆ ಮುನ್ನುಡಿಯೇನು ? ನಿನ್ನ ಕಣ್ಣಲ್ಲಿದ್ದ ಅಮ್ಮನ ಮಮಕಾರವಾ..? ಹಟಕ್ಕೆ ಬಿದ್ದ ಆ ಮುಂಗುರುಳಾ ..? ಒಡಲಾಳದಿಂದ ಹುಟ್ಟೋ ಕಪಟವಿಲ್ಲದ ನಗುವ..? ಊಹೂ .. ಪ್ರಶ್ನಾ ಮಾಲಿಕೆಯಾಗಿಬಿಟ್ಟೆ ನೀನು.
ಈ ಪತ್ರ ಎಂದೂ ನಿನ್ನ ಕೈ ಸೇರದು ಎಂದುಕೊಂಡಿದ್ದೇನೆ. ಒಂದು ಪಕ್ಷ ಸಿಕ್ಕಿದ್ದೇ ಆದಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತು 'ಶರಾವತಿ'ಯ ಆ ಹಸಿರು ದಂಡೆಯ ಮೇಲೆ ಒಂದೇ ಉಸುರಿನಲ್ಲಿ ಓದಿಬಿಡೋಣ.
ನನ್ನೆಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಿರು. ಇಬ್ಬರೂ ಸೇರಿ ಈ ಬಂಧಕ್ಕೊಂದು ಚಂದನೆ ಹೆಸರಿಡೋಣ.
ಇಂತಿ ನಿನ್ನವನಾಗ ಬಯಸಿದ
ನಾನು
ಕೆಂಪು ಛತ್ರಿ ಹಾಗೂ ಸಮಾಜಸೇವೆ
ಹುಡುಗರ ಬಿಸೀನ ಕಡಿಮೆ ಮಾಡಕ್ಕೋ ಏನೋ ಅಂತೂ ಮಳೆ ಬಂದಿದೆ. ಕಳೆದ ಮಳೆಗಾಲದಲ್ಲೇ ಕಡ್ಡಿ ಮುರಿದು ಮೂಲೆ ಸೇರಿದ್ದ ಛತ್ರಿಗಳು ಜೀರ್ಣೋದ್ದಾರಗೊಂದು ರಸ್ತೆಗಿಳಿದಿವೆ. ಅದ್ಯಾಕೋ ಮಳೆ ಜೊತೆಗೆ ಹಳೆ ನೆನಪುಗಳು ಸೇರ್ಕೊಂಡ್ ಬಿಟ್ಟಿವೆ. ಇಂಥ ಭಯಂಕರ ಮಳೆ ಬಂದಾಗೆಲ್ಲ ನೆನಪಾಗೋದು ಕೆಂಪು ಛತ್ರಿಯದ್ದು.. ಸ್ಸಾರಿ... ಕೆಂಪು ಛತ್ರಿ ಹಿಡಿದ ಆ ಹುಡುಗಿಯದ್ದು. ಈಗ್ಗೆ ಒಂದಷ್ಟು ವರ್ಷದ ಹಿಂದೆ ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದೆ. ಯಾಕೆ ಅಂತ ಕೇಳಬೇಡಿ. ಇನ್ಯಾಕೆ..? ಬಸ್ಸಿಗೆ ಹೋಗೋಣ ಅಂತ. ಎಂದೂ ಸಮಯಕ್ಕೆ ಸರಿಯಾಗಿ ಬಸ್ ಬಂದ ದಾಖಲೆ ನಮ್ಮೂರ ಬಸ್ ಸ್ಟ್ಯಾಂಡ್ ಗಂತೂ ಇಲ್ಲ. ಮನಸಾರೆ ಬಯ್ಯೋದು ಅಭ್ಯಾಸ. ಬೈದಿದ್ರಿಂದ ಬಸ್ ಬರ್ದಿದ್ರು ಮನಸ್ಸಿಗಂತು ಸಮಾಧಾನ ಇದ್ದೆ ಇದೆ. ಕಾದಿದ್ದಕ್ಕಾದ್ರು ಫಲ ಇದ್ರೆ ಅದೊಂಥರ.. ಈ ಸರ್ಕಾರಿ ಬಸ್ ಗಳು ಒಂದು ದಿನ ಬಂದ್ರೆ ಮೂರು ದಿನ ಕರು ಹಾಕಿ ಕೂರತ್ತೆ. ನಮ್ಮಜ್ಜ ಮಾಡಿದ್ದ ಪುಣ್ಯ ದಿಂದಲೋ ಅಥವಾ ನಾನೂ ಸ್ನಾನ ಮಾಡಿ ಬಂದಿದ್ರಿಂದಲೋ ಈ ದಿನ ಕಾದಿದ್ದಕ್ಕೆ ಸಾರ್ಥಕತೆ ಸಿಕ್ತು. ದೂರದಲ್ಲಿ ನಮ್ಮೊರ ಬಸ್ ಗಬ್ಬದ ಎಮ್ಮೆ ತರ ಬರ್ತಾ ಇತ್ತು. ಅದೇ ಸಮಯಕ್ಕೆ ಎಂಟ್ರಿ ಆಯಿತು ಕಣ್ರೀ ಕಥೆ ಹೀರೋಯಿನ್ ದು. ಅದೇ ಹೇಳಿದ್ನಲ.. ಕೆಂಪು ಛತ್ರಿಯ ಹುಡುಗಿಯದ್ದು. ಅಷ್ಟು ಹೊತ್ತು ಎಲ್ಲಿದ್ಲೋ ಏನೋ ಧಿಡೀರನೆ ಎದುರಿಗೆ ಬಂದ್ಲು ಅದೇ ಕೆಂಪು ಛತ್ರಿ ಹಿಡಿದು. "ಅರೆ ನೀನೇನೋ... ಎಷ್ಟು ದಿನ ಆಯ್ತು ನಿನ್ನ ನೋಡಿ.. ಗುರುತೇ ಸಿಗಲ್ಲ.. ತುಂಬಾ ತೆಳ್ಳಗೆ ಆಗಿದ್ದಿ...!" ಅಂದ್ಲು. ಒಂದರೆ ಕ್ಷಣ ನಾನೂ ಕಕ್ಕಾಬಿಕ್ಕಿ. ನನ್ಯಾವಾಗ ದಪ್ಪ ಇದ್ದೆ ಅನ್ನೋ ಪ್ರಶ್ನೆ ಬೇರೆ ಮನಸ್ಸಲ್ಲಿ. "ಅಯ್ಯೋ.. ಅದ್ಯಾಕ್ ಹಂಗೆ ನೋಡ್ತಿ...? ನನ್ನ ಗುರುತು ಹತ್ಲಿಲ್ವೆ...? ನಾನೂ ಸಂಗೀತ... ನಿನ್ನ PUC ಕ್ಲಾಸ್ ಮೇಟ್". ಗೀತ, ಸಂಗೀತ ಇಂತ ಹೆಸರಿನವರ್ಯಾರು ಇದ್ದ ನೆನಪು ಹತ್ತಲಿಲ್ಲ. ಆದ್ರು ಹುಡುಗಿ ಮಾತಿಗೆ ಇಲ್ಲ ಅಂದು ಅಭ್ಯಾಸ ಇಲ್ಲ. "ಓ ಸಂಗೀತ.. ಅಯ್ಯೋ ನಿನ್ನ ಮರಿಯಕ್ಕಾಗತ್ತ..! ತುಂಬಾ ಬದಲಾಗಿದ್ದೀಯ. ಸ್ವಲ್ಪ ದಪ್ಪ ಆದೆ ಅನ್ಸತ್ತೆ ಅಲಾ" ಅಂದು ನಕ್ಕೆ.. ನಕ್ಕಿದ್ದು ನನಗೇ ಅನುಮಾನ ಬರುವಂತೆ. ಅಷ್ಟೊತ್ತಿಗೆ ಬಸ್ ಬಂದು ನಿಂತಿತ್ತು. ಜನ ಎಲ್ಲ ಬಸ್ ಹತ್ತುತ್ತ ಇದ್ರು . ಬಸ್ ಹತ್ತಕ್ಕೆ ನನಗೇನೂ ಅವಸರ ಇರ್ಲಿಲ್ಲ. ಎಷ್ಟಂದ್ರು ೧೫ ನಿಮಿಷ ಅಲ್ಲೆ ನಿಂತಿರತ್ತೆ. ಅದೂ ಅಲ್ದೆ ಜೀವನದಲ್ಲಿ ಮೊದಲ ಬಾರಿಗೆ ಸಂಗೀತ ಕೇಳ್ತಾ ಇದೆ. ಶ್ರುತಿ ತಪ್ಪದಿದ್ರೆ ಸಾಕು. " ಏ.. ನಿಂಗೊತ್ತಾ.. ನಮ್ಮ ಇಂಗ್ಲಿಷ್ ಟೀಚರ್ ಸತ್ತೂದ್ರಂತೆ", ಅಂದ ಧ್ವನಿ ಸ್ವಲ್ಪ ನಡುಗ್ತಾ ಇದ್ದಂತೆ ಅನ್ಸ್ತು. "ಯಾರು.. KVS ಸಾ ?" ಅಂದೆ. ಹು ಅಂದಿದ್ದು ಗಂಟಲಲ್ಲೇ ಉಳೀತು. ಅಥವಾ ನಂಗೆ ಹಾಗೆ ಅನಿಸ್ತು. ಮೇಷ್ಟ್ರು ಸತ್ರು ಅನ್ನೋ ದುಃಖ ಹುಡುಗಿಯ ಕಳೆಗುಂದಿದ ಮುಖ ನೋಡಿ ಇಮ್ಮುಡಿಗೊಂಡಿತು. ಆದ್ರು ನಿಜವಾದ ದುಃಖ ಮೇಷ್ಟ್ರು ಸತ್ತಿದ್ದಕ್ಕ ಅಥವಾ ಹುಡುಗಿಯ ಬೇಸರಕ್ಕ ಕೊನೆಗೂ ತಿಳೀಲೇ ಇಲ್ಲ. ಏನಂದ್ರು ಮೇಷ್ಟ್ರು ಹಿಂಗೆ ಹೇಳದೆ ಕೇಳದೆ ಸಾಯಬಾರದಿತ್ತು ಅನ್ನಿ. ಅದರ ಸಲುವಾಗಿ ಒಂದೆರಡು ನಿಮಿಷ ಮೌನಾಚರಣೆ. ಮತ್ತೆ ಮಾತಿಗಿಳಿದಳು. "ಯಾವ ಕಡೆ ಹೋಗ್ತಾ ಇದ್ದಿ..?" ಸಂಗೀತದ ಅದ್ಯಾವುದೋ ರಾಗದಲ್ಲೇ ಹೇಳಿದಳು. ಮೂಲತಃ ಎಲ್ಲಿಗೋ ಹೊರಟಿದ್ದೆ ಅನ್ನೋದೇ ಮರೆತಿತ್ತು ಸಂಗೀತದ ಗುಂಗಿನಲ್ಲಿ. ನೆನಪು ಮಾಡಿಕೊಂಡು ಹೇಳಿದೆ " ಈ ಬಸ್ ಎಲ್ಲೀವರೆಗೆ ಹೋಗತ್ತೋ ಅಲ್ಲೆವರೆಗೆ " ಅಂತ. " ಅಂದ್ರೆ ಲಾಸ್ಟ್ ಸ್ಟಾಪ್..? ಸರಿ, ನಾನೂ ಅಲ್ಲಿಗೆ ಹೊರಟಿದ್ದೆ. ಬಾ ಹೋಗೋಣ. ನಾನಾ ticket ತೆಗ್ಸೋ" ಅಂದ್ಲು. ಅದ್ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸ್ತು. ಹುಡುಗಿ ನನ್ನ ಕ್ಲಾಸ್ ಮೇಟ್ ಹೌದೋ ಅಲ್ವೋ ಅಂತಾನೇ ನೆನಪಿಗೆ ಬರ್ತಾ ಇಲ್ಲ. ನನಗಂತೂ ನನ್ನ ನೆನಪಿನ ಶಕ್ತಿ ಮೇಲೆ ಅಪಾರ ನಂಬಿಕೆ. ಇತ್ತೀಚಿಗೆ ಮರೆತ ನೆನಪೇ ಇಲ್ಲ. ಅದರಲ್ಲೂ ಹುಡುಗಿ ಹೆಸರು ಮರೆಯೋದ.! ಮುಂದಿನ ಯೋಚನೆಗೆ ಬ್ರೇಕ್ ಬಿತ್ತು,, " ಅಯ್ಯೋ ಇನ್ನೂ ನಿನ್ನ ಕಂಜೂಸ್ ಬುದ್ದಿ ಬಿಟ್ಟಿಲ್ವ...? ೧೦ ರುಪಾಯಿಗೂ ಮುಖ ನೋಡ್ತಿಯಲ್ಲ" ಅಂದಾಗ. "ಏ ಹಂಗೇನಿಲ್ಲ..ನೀನು ಅಲ್ಲಿಗೆ ಯಾಕೆ ಬರ್ತಿದೀಯ ಅಂತ ಯೋಚನೆ ಮಾಡ್ತಿದ್ದೆ ಅಷ್ಟೇ. ಸರಿ, ಹತ್ತು ಬಸ್" ಅಂದೆ. ಅಂತೂ ಬಸ್ ಹತ್ತಿ ಕುಳಿತಿದ್ದಾಯ್ತು. ಕಂಡಕ್ಟರ್ ಮಹಾಶಯಂಗೆ ದುಡ್ಡು ಕೊಟ್ಟು ಟಿಕೆಟ್ ತಗೊಂಡಿದ್ದು ಆಯ್ತು. ಯಾಕೋ ಯಾರೋ ನಕ್ಕಂತೆ..! ಜೇಬಿನಲ್ಲಿ ಕುಳಿತ ಟಿಕೆಟ್ ಆಗಿರಬಹುದೇ ಅನ್ನೋ ಕೆಟ್ಟ ಅನುಮಾನ. ನೆನಪಿನ ಅಳಕ್ಕೆ ಹೊಕ್ಕಿ ನೋಡಿದ್ರೂ ಯಾರ್ಯಾರಿದ್ದೋ ಜುಮುಕಿ, ಬಳೆ ಎಲ್ಲ ಸಿಗತ್ತೆ, ಇವಳ ಮುಖ ಕಾಣ್ತಾಯಿಲ್ಲ. ಇಂಥ ಸಂಗೀತ ಎಂದು ಕೇಳಿದ್ದಿಲ್ಲ. ಹೊಸ ರಾಗ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸ ಹಾಗು ಅವಶ್ಯಕತೆ ಇಲ್ಲ. ಹೆಂಗು ಅವಳೇ ನನ್ನ ಕ್ಲಾಸ್ ಮೇಟ್ ಅಂದಿದಾಳಲ್ಲ, ಅದರಲ್ಲೋ ನನ್ನ ಕಂಜೂಸ್ ಬುದ್ದಿ ಬಗ್ಗೆ ಹೇಳ್ತಾ ಇದಾಳೆ ಅಂದ್ರೆ ನನ್ನ ಪರಿಚಯ ಇರತ್ತೆ ಅನ್ನಿಸಿ ಸಣ್ಣ ನಿದ್ದೆಗೆ ಶರಣು ಹೋದೆ. "ಯಾರ್ರಿ last stop ?" ಎಂಬ ಧ್ವನಿ ಕೇಳಿದ ಮೇಲೇನೆ ಎಚ್ಚರ ಆಗಿದ್ದು. ಕಣ್ಣು ಬಿಟ್ಟು ನೋಡಿದ್ರೆ ಹುಡುಗಿ ಮುಂದಿನ ಬಾಗಿಲಲ್ಲಿ ಇಳಿತಾ ಇದೆ. ಸ್ವಲ್ಪ ವೇಗದಿಂದಲೇ ಬಸ್ ಇಳಿದು ಅತ್ತ ಕಡೆ ಹೋಗ್ತಾ ಇದ್ದವಳನ್ನ "ಸಂಗೀತ" ಎಂದು ಕೂಗಿದೆ. ನಿಂತಳು. ಹತ್ರ ಹೋದ್ರೆ ಹಿಂಗನ್ನೋದೆ...! "ನಾನು ಸಂಗೀತ ಅಲ್ಲ". ಅಂತೂ ಅಪಶ್ರುತಿ ಬಂದೇ ಬಿಡ್ತು ಸಂಗೀತದಲ್ಲಿ. ಮತ್ತೆ..? ಎಂದೆ. "ನಾನು ರಮ್ಯ. ನಿಮಗೆ ಮೋಸ ಮಾಡಿದ್ದಕ್ಕೆ ನಿಜವಾಗಲು ಸ್ಸಾರಿ. ನಾನು ಮುಂಬಯಿಯವಳು. ನನ್ನ ಫ್ರೆಂಡ್ ಮನೆಗೆ ಬಂದಿದ್ದೆ. ಇವತ್ತು ಪೇಟೆ ಸುತ್ತೋಕೆ ಅಂತ ಹೋಗಿದ್ದೆ. ಅಲ್ಲಿ ನನ್ನ ಪರ್ಸ್ ಕಳೆದು ಹೋಯ್ತು. ಹೆಂಗಪ್ಪ ಬರೋದು ಅಂತ ಯೋಚನೆ ಮಾಡ್ತಾ ಇದ್ದಾಗಲೇ ನೀವು ಕಂಡ್ರಿ. ಕಾಳು ಹಾಕಿದೆ. ಆಯ್ಕಂದ್ರಿ. anyway thank you . ನಾಳೆ ಬೆಳಗ್ಗೆ ಮೊದಲ ಬಸ್ ಗೆ ವಾಪಸ್ ಹೋಗ್ತಾ ಇದೀನಿ. ಸರಿಯಾದ ಸಮಯಕ್ಕೆ ಬಸ್ ಸ್ಟ್ಯಾಂಡ್ ಗೆ ಬಂದ್ರೆ ನಿಮ್ಮ ೧೦ ರುಪಾಯಿ ಕೊಡ್ತೀನಿ. ಸರಿ.. ನಾನಿನ್ನು ಬರ್ತೀನಿ. KVS ಬದುಕಿದ್ರೂ ಇರಬಹುದು ವಿಚಾರಿಸಿ ನೋಡಿ" ಎಂದು ಹೊರಟೆ ಹೋದ್ಲು ಕೆಂಪು ಛತ್ರಿ ಹಿಡಿದು. ಹೌದು... ನಿಜವಾಗಲು ನಕ್ಕಿದ್ದು ಕೇಳ್ತು. ಜೇಬಿನಲ್ಲಿದ್ದ ಟಿಕೆಟ್ ನಗ್ತಾ ಉಂಟು. ಅದನ್ನು ತೆಗೆದು ಬಿಸಾಕಿ, ಅಯ್ಯೋ ಮೋಸ ಹೋದ್ರೆ ಏನಂತೆ..? ಸಹಾಯ ಮಾಡಿದ ಹಾಗೆ ಆಯ್ತು ಎಂದು ಸಮಾಧಾನಪಟ್ಕೊಳ್ತಾ ನಾನೂ ಹೊರಟೆ, ಸಮಾಜ ಸೇವೆಯ ಗುಂಗಿನಲ್ಲಿ.
ಯಾವನಿಗೊತ್ತು
ಅವಳದ್ದೋ ಫುಲ್ ಸ್ಟಾಪ್ ಇಲ್ದಂಗೆ ಮಾತಾಡೋ ಖಯಾಲಿ. ನಂದು ಮಾತಾಡಿದ್ರೆ ಮುತ್ತು ಉದ್ರತ್ತೇನೋ ಅನ್ನೋ ಹಾಗೆ ದಿವ್ಯ ಮೌನ. ನಾನು ಭಯಂಕರ ಭಾವ ಜೀವಿ, ಅವಳು ತೀರಾ ಪ್ರಾಕ್ಟಿಕಲ್ಲು. ಅವಳದ್ದು ಹಾಲಿನಂಥ ಬಣ್ಣ, ನಂದು ತೊಳೆದ ಕೆಂಡ. ಹೀಗೆ, ಪ್ರಪಂಚದಲ್ಲಿ ಯಾವ್ಯಾವ್ದಕ್ಕೆ ವಿರುದ್ಧ ಪದಗಳಿವೆಯೋ ಅವುಗಳಿಗೆಲ್ಲ ಜೀವಂತ ಉದಾಹರಣೆ, ನಾನು-ಅವಳು. ವಿರುದ್ಧ ದ್ರುವಗಳು ಆಕರ್ಷಿಸುತ್ತವೆ ಅನ್ನೋದು ಫ್ಯಾಕ್ಟು. ನಂಗೆ ಅವಳ ಮಾತು ಇಷ್ಟ, ಅವಳು ನನ್ನ ಮೌನಕ್ಕೆ ಶರಣು. ಇಷ್ಟು ವರ್ಷ ಅದೆಲ್ಲಿದ್ಲೋ ಕಾಣೆ. ಒಂದಷ್ಟು ದಿನದ ಹಿಂದೆ ಸಿಕ್ಕಳು, ಸುಮ್ನೆ ನಕ್ಕಳು. ಆಗಬಾರದ್ದೆಲ್ಲ ಆಯ್ತು. ಆದ ಮೇಲೆ ತಿಳೀತು ಅವಳು ಎತ್ತು, ಏರಿಗೆ ಎಳಿತಾಳೆ, ನಾನು ಕೋಣ , ನೀರಿಗೆ ಎಳೀತೀನಿ ಅಂತ. ಆದ್ರು ನಮ್ಮಿಬ್ಬರ ಮಧ್ಯೆ ಜಗಳ ಆಗಿದ್ದು ಕಡಿಮೆ. ಅವಳಿಗೆ ಸಿಟ್ಟು ಬಂದು ಕೂಗಾಡಿ, ರೇಗಾಡಿ ಮುಖ ಗಂಟಾಕಿಕೊಂಡು ಎದ್ದು ನಿಂತ್ರೆ ನಂಗೆ ಸಾಕ್ಷಾತ್ ಚಾಮುಂಡಿ ದರ್ಶನ. ಬ್ರಹ್ಮಂಗೆ ಅದೇನು ಸಿಟ್ಟಿತ್ತೋ ಕಾಣೆ, ಸೇಡು ತೀರಿಸ್ಕೊಂದು ಬಿಟ್ಟ, ನಿನ್ನಂಥ ವಾಚಾಳೀನ ಗಂಟು ಹಾಕಿ ಅಂತ ನಾನಂದ್ರೆ, ನಂದು ಸೇಮ್ ಫೀಲಿಂಗು, ಬ್ರಹ್ಮನ ಸೇಡಿಗೆ ನಾನೂ ಬಲಿ, ನಿನ್ನಂತ ಮೂಕನ್ನ ತಗುಲಿ ಹಾಕಿದ, ನೀನು ಒಂದೇ ಶಿರಾಡಿ ಘಾಟಿಯಲ್ಲಿರೋ ಕಲ್ಲುಬಂಡೆಗಳು ಒಂದೇ ಅನ್ನೋದು ಅವಳ ಉತ್ತರ. ಮಳೆಗಾಲ ಸಕತ್ತಾಗಿದೆ ಒಂದೇ ಒಂದು ಸಾರಿ ಬಾ ಮಳೆಯ ರಾಗಕ್ಕೆ ನಾವು ತಾಳ ಹಾಕುವ ಅಂದ್ರೆ ಮಳೇಲಿ ನೆಂದ್ರೆ ಜ್ವರ ಬರತ್ತೆ, ಸುಮ್ನೆ ೨೦೦ ರೂಪಾಯಿ ದಂಡ ಅಂತಾಳೆ. ನೀನೊಬ್ನೇ ನೆನಿ ಬಣ್ಣ ಬಿಟ್ರೂ ಬಿಡಬಹುದು ಅಂತ ರೇಗಿಸ್ತಾಳೆ. ಬಣ್ಣ ಬದಲಾಯಿಸೋದು ನಿಮ್ಗೆ ದೇವ್ರು ಕೊಟ್ಟ ಕಾಣಿಕೆ ಅಂದ್ರೆ ಕಣ್ಣು ಕೆಂಪು ಮಾಡ್ತಾಳೆ. ಅಲ್ನೋಡು ಹೂವು ಎಷ್ಟು ಚೆನ್ನಾಗಿದೆ, ಆ ಗಿಡಕ್ಕೆ ದೇವರು ಮಾಡಿರೋ ಅಲಂಕಾರ ಆ ಹೂವು ಅನ್ಸತ್ತೆ ಅಂದ್ರೆ, ಅರ್ಥ ಆಗದೆ ಇರೋ ಹಾಗೆಲ್ಲ ಮಾತಾಡ್ಬೇಡ.. ಚೆನ್ನಗಿರೋದೇನೋ ಹೌದು.. ಹುಡ್ಗ ಕಿತ್ಕೊಡೋ... ಪ್ಲೀಸ್... ಅಂತಾಳೆ. ಅಷ್ಟ್ರು ಮೇಲು ಅಂದ ಇರೋದು ಆನಂದಿಸೋಕೆ, ಅನುಭವಿಸಬೇಕು ಅನ್ನೋದು ತಪ್ಪು ಅಂತೇನಾದ್ರೂ ಅಂದ್ರೆ ಕಿತ್ಕೊಡ್ತೀಯೋ ಇಲ್ವೋ ಅಂತ ಕಣ್ಣಲ್ಲೇ ಧಮಕಿ ಹಾಕ್ತಾಳೆ. ಹೀಗೆ ನಮ್ಮಿಬ್ಬರದು ತದ್ವಿರುದ್ಧ. ಇಬ್ಬರ ಮದ್ಯೆ ಏನಿದ್ಯೋ ಗೊತ್ತಿಲ್ಲ. ಆದ್ರೆ ಒಂದಂತು ಸತ್ಯ, ಅವಳಿಲ್ಲದೆ ಬದುಕೋದು ಕಷ್ಟ. ಅವಳ ಕಣ್ಣಲ್ಲಿ ನೀರು ಬಂದ್ರೆ ನನ್ನ ಕಣ್ಣಲ್ಲಿ ರಕ್ತ ಬಂದ ಹಾಗೆ ಆಗತ್ತೆ. ಅವಳ ಮಾತು ಕೇಳದ ದಿನ ವ್ಯರ್ಥ ಅನ್ಸತ್ತೆ. ಅವಳು ನನ್ನ ಭಾವದ ಮಾತಿನ ರೂಪ ಅನ್ನೋದು ನನ್ನ ವಿಚಾರ. ನನ್ನ ಮೌನಕ್ಕೆ ಅರ್ಥ ಅವ್ಳು, ಅವಳ ಮಾತಿಗೆ ಕಿವಿ ನಾನು. ವಿಷಯದ ಹಂಗಿಲ್ದೆ ಮಾತಾಡೋ ಕಲೆ ಅವಳದ್ದು, ಮೌನದಿಂದಲೇ ಉತ್ತರಿಸೋ ಕಲೆ ನಂದು. ಆದ್ರು ಮನದ ಮೂಲೆಯಲ್ಲೆಲ್ಲೋ ವಿವರಣೆಗೆ ನಿಲುಕದ ಭಯ... ಅವಳು ಸಿಕ್ತಾಳ ಕೈಯಿ ಕೊಡ್ತಾಳ.. ಯಾವನಿಗೊತ್ತು.
ಏಕ್ ಬೂಂದ್ ಕೀ ಕಹಾನಿ
ಆ ಮಳೆಯ ಹನಿಗೆ ಇದು ಮೊದಲ ಪ್ರಯಾಣ. ಮೋಡದಲ್ಲಿದ್ದ ತನ್ನವರನ್ನೆಲ್ಲ ಬಿಟ್ಟು ಧರೆಗೆ ಧುಮುಕಬೇಕಾದ ಘಳಿಗೆ ಬಂದಿದೆ. ಹನಿಯ ಮನದಲ್ಲೇನೋ ಒಂಥರಾ ದುಗುಡ, ದುಮ್ಮಾನ. ಇಷ್ಟು ದಿನ ಒಟ್ಟಿಗೆ ಮೋಡ ದಲ್ಲಿದ್ದ ಸಹವರ್ತಿಗಳೂ ಸಹ ಮಳೆಯ ರೂಪ ತಾಳಿ ಇಳೆಗೆ ಬರುತ್ತಾರಾದರೂ ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಸೇರುತ್ತೇವೋ ಇಲ್ಲವೋ ತಿಳಿಯದೆ ಮನ ಮಂಕಾಗಿತ್ತು. ಈ ಹನಿಗೆ ತನ್ನ ಜೀವನದ ಹಳೆಯ ನೆನಪುಗಳೆಲ್ಲ ಮರೆತಂತಿತ್ತು. ತಾನು ಹೇಗೆ ಈ ಮೋಡದಲ್ಲಿ ಒಂದಾದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.ಆದರೆ ಈ ಮೋಡದ ಮನೆಗೆ ಬಂದ ನಂತರ ಅಲ್ಲಿದ್ದವರೆಲ್ಲರೊಂದಿಗೂ ಬೆರೆತು... ಅದೆಲ್ಲಿಂದಲೋ ಹೊರಟು... ಸಾವಿರಾರು ಮೈಲಿ ಕ್ರಮಿಸಿ ಈಗ ಮೋಡ ಬಿಟ್ಟು ಧರೆಗಿಳಿಯಬೇಕಾದ ಸಮಯ ಬಂದಿತ್ತು. ಆ ಮೋಡದಲ್ಲೊಂದಾದ ದಿನ ತನಗೆ ಸಿಕ್ಕ ಸ್ವಾಗತವನ್ನು ನೆನೆದು ಮನ ತುಂಬಿ ಬಂದು ಕಣ್ಣೀರ ಹನಿ ಹೊರಟಿತ್ತು. ಅಂದೇ ತಿಳಿದದ್ದು ತಾನು ಸ್ವಾತಿ ಮಳೆಯ ಮೋಡಕ್ಕೆ ಸೇರಿದ್ದೇನೆಂದು ಹಾಗು ಸ್ವಾತಿ ಮಳೆಗೆ ಇದ್ದ ಅದರದೇ ಆದ ಸ್ಥಾನದ ಬಗ್ಗೆ ಅಂದೇ ಹೇಳಿದ್ದರು ಸುತ್ತಮುತ್ತಲಿದ್ದ ಹನಿಗಳು. ತಾನು ಮುತ್ತಾಗುವ ಅವಕಾಶ ಹೊಂದಿದ್ದೇನೆಂದು ತಿಳಿದು ಎದೆಯುಬ್ಬಿಸಿ ನಿಂತು ಸಂತಸಪಟ್ಟಿತ್ತು. ಈಗಲೂ ಈ ಹನಿಗೆ ಅದೇ ಆಸೆ... ತನ್ನ ಮೊದಲ ಪ್ರಯಾಣದಲ್ಲೇ ಕಪ್ಪೆ ಚಿಪ್ಪಿನ ಗರ್ಭಕ್ಕೆ ಸೇರಿ ತಾನು ಮುತ್ತಿನ ಜನ್ಮ ತಾಳಿ ಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆಯಬೇಕೆಂದು. ಆದರೂ, ಇಷ್ಟು ದಿನ ಜೊತೆಗಿದ್ದವರ ಅಗಲಿ ಮುತ್ತಾಗುವ ಆಸೆ ತನ್ನ ಸ್ವಾರ್ಥಕ್ಕೆ ಹಿಡಿದ ಕನ್ನಡಿಯೇನೋ ಎಂಬ ಶಂಕೆ ಈಗ.
ಸ್ವಾತಿ ಮಳೆಯ ಪ್ರತಿ ಹನಿಯೂ ಮುತ್ತಾಗುಹುದಿಲ್ಲ. ತಾನು ಕಪ್ಪೆ ಚಿಪ್ಪಿನೊಳಗೆ ಹೋದರೆ ಮಾತ್ರ ಮುತ್ತಾಗುವ ಭಾಗ್ಯ. ಇಲ್ಲದಿದ್ದರೆ...? ಯಾರ ಮನೆಯ ಹಂಚಿನ ಮೇಲೋ.. ಯಾವ ರಸ್ತೆಯ ಗುಂಡಿಯ ಒಳಗೋ... ಯಾವ ಕಾಡಿನ ಯಾವ ಮರದ ಎಲೆಯ ತುದಿಗೋ... ಅಥವಾ... ತನಗಿಂತ ಅದೆಷ್ಟೋ ಪಾಲು ದೊಡ್ದದಿರುವ ಬಯಲಿನಲ್ಲಿನ ಹುಲ್ಲಿನ ಬುಡವೊ... ತನ್ನ ಗತಿ ಇನ್ನೂ ನಿರ್ಧಾರವಾಗಿಲ್ಲ. ಮುತ್ತಾದರೆ ಮುಕ್ತಿ. ಇಲ್ಲದಿದ್ದರೆ ಇನ್ನೆಷ್ಟು ಬಾರಿ ತನ್ನ ಜೀವನ ಚಕ್ರ ಉರುಳಬೇಕೋ..? ಯೋಚನೆ ಸಾಗುತ್ತಿರುವಾಗಲೇ ಯಾರೋ ದೂಡಿದ ಅನುಭವ. ತನ್ನ ಪಯಣ ಪ್ರಾರಂಭ. ದೇವರೇ... ನನ್ನನ್ನ ಮುತ್ತಾಗಿಸಪ್ಪ ಎಂಬ ಮೋರೆ ಮುಗಿದಿತ್ತೋ ಇಲ್ವೋ, ಮೋಡ ಬಿಟ್ಟು ಭೂಮಿಗೆ ಅಭಿಮುಖವಾಗಿ ಹೊರಟಾಗಿತ್ತು. ಅಯ್ಯೋ... ಈ ಎತ್ತರ ನೋಡಿ ತಲೆ ತಿರುಗ್ತಾ ಇದೆ. ಈ ರಭಸದಿಂದ ಭೂಮಿಗೆ ಬಿದ್ರೆ ತಮ್ಮ ಮುಖಕ್ಕೆ ಏನೂ ಆಗಲ್ವೇ ಎಂದು ಪಕ್ಕದಲ್ಲಿ ತನ್ನಷ್ಟೇ ರಭಸದಿಂದ ಬೀಳ್ತಾ ಇದ್ದ ಹನಿಗೆ ಕೂಗಿ ಕೇಳಿತು. ಶರವೇಗದಲ್ಲಿ ಬೀಳುವಾಗ ಪಕ್ಕದ ಹನಿ ಹೇಳಿದ್ದು ಸರಿಯಾಗಿ ಕೇಳಲಿಲ್ಲ. ಕೇಳಿದ್ದಿಷ್ಟು- ತಾವು ನೀರ ಹನಿಗಳು. ಎಷ್ಟೇ ಎತ್ತರದಿಂದ, ಎಷ್ಟೇ ರಭಸವಾಗಿ, ಎಲ್ಲಿಗೆ ಬಿದ್ದರೂ ತಮಗೆ ಮತ್ತೆ ತಮ್ಮ ಆಕಾರ ತಾಳುವ ಶಕ್ತಿ ಇದೆ. ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಟಪ್... ಓ.. ಮನೆಯ ಹಂಚಿನ ಮೇಲೆ ಬಿದ್ದಿದ್ದೇನೆ. ನಾನು ಮುತ್ತಾಗಲಿಲ್ಲ. ಅರೆ... ಎಲ್ಲರು ಮುಂದೆ ಹೋಗುತ್ತಿದ್ದಾರೆ. ತಾನೇಕೆ ಬಿದ್ದಲ್ಲಿಯೇ ನಿಂತುಬಿಟ್ಟೆ. ಕೈ, ಕಾಲು ಮುಖ ಎಲ್ಲವನ್ನು ಮುಟ್ಟಿ ನೋಡಿಕೊಂಡಿತು. ಎಲ್ಲವೂ ಸರಿಯಾಗೇ ಇದೆ ಆದರೆ ತಾನೇಕೆ ಚಲಿಸುತ್ತಿಲ್ಲ? ನಾನು ಸಿಕ್ಕಿಕೊಂಡಿದ್ದೇನೆ. ಬಿದ್ದ ರಭಸಕ್ಕೆ ಬಿದ್ದಲ್ಲಿಂದ ಹಾರಿ ಪಕ್ಕದಲ್ಲಿದ್ದ ಕಸಕ್ಕೆ ಬಂದು ಸಿಕ್ಕಿಕೊಂಡಿದ್ದೇನೆಂದು ತಿಳಿಯಿತು. ತನ್ನ ಜನ್ಮ ಇಲ್ಲೇ ನಶಿಸುಹುದೆಂದು ದುಃಖಿಸುವಾಗ ಯಾರೋ ಕಾಲೆಳೆದಂತಾಯಿತು. ಓ.. ಬೀಳುವಾಗ ಪಕ್ಕದಲ್ಲಿದ್ದ ಹನಿ... ತನ್ನನ್ನು ಇಲ್ಲಿಂದ ಬಿಡಿಸಲು ಕಾಲೆಳೆಯುತ್ತಿದೆ. ಅದರ ಶ್ರಮ ಮೊದಲಿಗೆ ವ್ಯರ್ಥವಾಯಿತಾದರೂ ಅದರ ಪ್ರಯತ್ನಕ್ಕೆ ಹತ್ತಾರು ಹನಿಗಳ ಸಹಾಯ ದೊರೆತ ನಂತರ ಫಲ ನೀಡಿತು. ಈಗ ನಾನು ಬಂಧಿ ಮುಕ್ತ. ಹಂಚಿನ ಮೇಲೆ ನಾಜೂಕಾಗಿ, ಎರಡು ಹಂಚುಗಳ ನಡುವೆ ಇದ್ದ ಸಣ್ಣ ಜಾಗದಲ್ಲಿ ಬೀಳದಂತೆ ಜಾರಿ... ಟಪ್... ಮಣ್ಣಿನ ವಾಸನೆ ಮೂಗಿಗೆ ಬಡೀತಾ ಇದೆ. ಓ.. ಭೂಮಿಗೆ ಬಂದಿದ್ದೇನೆ. ಇನ್ನೂ ತಾನು ಸಾಗರ ಸೇರಬೇಕು. ಈ ಪಯಣದಲ್ಲಂತೂ ಮುತ್ತಾಗಲಿಲ್ಲ. ಸಾಗರ ಸೇರಿ ಸೂರ್ಯನ ಬಿಸಿಲಿನೊಡನೆ ಆಕಾಶಕ್ಕೆ ಹಾರಿ ಮತ್ತೆ ಮೋಡವಾಗಿ ಭೂಮಿಗಿಳಿಯಬೇಕು. ಮತ್ತದೇ ಸ್ವಾತಿ ಮಳೆಯ ಮೋಡವಾಗುತ್ತೇನೋ ಇಲ್ವೋ ಗೊತ್ತಿಲ್ಲ. ಅದೆಷ್ಟೋ ಹನಿಗಳಲ್ಲಿ ತಾನೂ ಒಂದಾಗಿ ಎತ್ತ ಹೋಗುತ್ತಿದ್ದೇನೆ ಎಂಬುದೂ ತಿಳಿಯದೆ ತನ್ನ ಭವಿಷ್ಯವನ್ನು ಯೋಚಿಸುತ್ತ ಸಾಗುತ್ತಿತ್ತು. ಒಮ್ಮೆ ಮೋಡದಿಂದ ಬೀಳುವಾಗಿನ ರಭಸ ಮತ್ತೊಮ್ಮೆ ನಿಂತ ನೀರಿನಷ್ಟೇ ಮಂದ.. ಅಂತೂ ಪಯಣ ಸಾಗುತ್ತಿತ್ತು. ಅಣ್ಣಾ... ಸಮುದ್ರ ಇನ್ನೂ ಎಷ್ಟು ದೂರವಿದೆ ಎಂದು ಮುಂದೆ ಹೋಗುತ್ತಿದ್ದ ಹನಿಯನ್ನು ಕೇಳಿತು. ಅಯ್ಯೋ.. ಮಂಕೆ..! ನಮ್ಮ ಪ್ರಯಾಣ ಈಗಿನ್ನೂ ಪ್ರಾರಂಭವಾಗಿದೆ. ಈ ಚರಂಡಿಯಿಂದ ಹೊಳೆ ಸೇರಿ, ಹೊಳೆಯಿಂದ ನದಿ, ನದಿಯಿಂದ ಸಮುದ್ರ ಇನ್ನೆರಡು ತಿಂಗಳಾದರೂ ಬೇಕು ಎಂದಿತು ಎದುರಿನ ಹನಿ. ಅಬ್ಬ.. ಏನಿದು ವಾಸನೆ..? ಗಟಾರದ ಗಬ್ಬಿಗೆ ಮೂಗು ಮುಚ್ಚಿಕೊಂಡು ಸಾಗತೊಡಗಿತು.
ಎರಡು ತಿಂಗಳ ನಿರಂತರ ಚಲನೆಯಿಂದ ಸಮುದ್ರ ಸೇರಿಯಾಗಿತ್ತು. ಒಮ್ಮೆ ಕಡಲ ತೀರ, ಮತ್ತೊಮ್ಮೆ ಕಡಲಾಳ.. ಹೀಗೆ.. ಎತ್ತಲೆತ್ತಲೋ ಬದುಕು ಸಾಗುತ್ತಿತ್ತು. ಸಧ್ಯಕ್ಕೆ ಸೂರ್ಯ ರಶ್ಮಿಗೆ ಕಾಯುತ್ತಾ ಸಮುದ್ರದ ಮೇಲೆ ತೇಲುತ್ತಿತ್ತು. ಸೂರ್ಯನ ತಾಪ ಖಾರವಾಗಲು ಮತ್ತೊಂದು ತಿಂಗಳು ಕಾಯಬೇಕು. ಹನಿ ಹಣೆಬರಹವೋ.. ವಿಧಿಯ ಕುಚೆಷ್ಟೆಯೋ.. ಅಷ್ಟರಲ್ಲಿ ಹೋದ ಹಡಗಿನಿಂದ ತೈಲ ಸುರಿಯಿತು. ತೈಲ ಬಂಧಿಯಾದ ಹನಿ ಬಿಡುಗಡೆಗೆ ಇನ್ನೂ ಕಾಯ್ತಾ ಇದೆ. ಬಂಧಮುಕ್ತವಾದರೆ ಅದರ ಕನಸು ಕೈಗೂಡಬಹುದೇನೋ. ಆಸೆ ಕಮರುವ ಮೊದಲು ಶಿಶಿರನ ತಾಪ ತಾಗಿದರೆ ಮತ್ತೊಮ್ಮೆ ಮೋಡವಾಗಬಹುದು. ಇಲ್ಲದಿದ್ದರೆ...?
ವಿ. ಸೂ. ೨೨/ ೧೧/ ೧೧/ ರ ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ. ಪ್ರಕಟ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು.
ಭೋ ಪರಾಕ್...
ಒಬ್ಬರಿಗೆ ಕಾಲಿಲ್ಲ, ಮತ್ತೊಬ್ಬರಿಗೆ ಕೈ...
ಒಬ್ಬರ ತಲೆ ಮೊತ್ತೊಬ್ಬರ ಪಾದಕೆ...
ಯುವಕ-ಮುದುಕನೆಂಬ ಭೇದವಿಲ್ಲ..
ಮಲಗಿದ ಯಾರಿಗೂ ಎಚ್ಚರವಿಲ್ಲ...
ಮುಗಿಲು ಮುಟ್ಟುವ ಆಕ್ರಂದನ
ಕೇಳುವವರು ಗತಿಯಿಲ್ಲ
ಅರೆ ಸತ್ತ ಜೀವಗಳು
ರಕ್ತ ಸಿಕ್ತ ದೇಹಗಳು
ಸತ್ತವರಿಗೆಲ್ಲ ವೀರ ಸ್ವರ್ಗವಂತೆ...!
ಹೆಣದ ಮೇಲೊಂದು ಕಾಲು..
ತಲೆಗೆ ಕಿರೀಟ..
ಕುಳಿತ ಸಿಂಹಾಸನದ ಕೆಳಗೆ
ಕೋಟಿ ಸಮಾಧಿಗಳು..
ವಿಜಯ ನಗೆ ಮೊಗದಲಿ
ಸೈನಿಕನ ರುಂಡ ಬಗಲಲಿ
ಸುತ್ತೆಲ್ಲ ಕೂಗು...
...ರಾಜಾ...ಭೋ ಪರಾಕ್..
...ಭೋ ಪರಾಕ್
...ಭೋ ಪರಾಕ್
ಒಬ್ಬರ ತಲೆ ಮೊತ್ತೊಬ್ಬರ ಪಾದಕೆ...
ಯುವಕ-ಮುದುಕನೆಂಬ ಭೇದವಿಲ್ಲ..
ಮಲಗಿದ ಯಾರಿಗೂ ಎಚ್ಚರವಿಲ್ಲ...
ಮುಗಿಲು ಮುಟ್ಟುವ ಆಕ್ರಂದನ
ಕೇಳುವವರು ಗತಿಯಿಲ್ಲ
ಅರೆ ಸತ್ತ ಜೀವಗಳು
ರಕ್ತ ಸಿಕ್ತ ದೇಹಗಳು
ಸತ್ತವರಿಗೆಲ್ಲ ವೀರ ಸ್ವರ್ಗವಂತೆ...!
ಹೆಣದ ಮೇಲೊಂದು ಕಾಲು..
ತಲೆಗೆ ಕಿರೀಟ..
ಕುಳಿತ ಸಿಂಹಾಸನದ ಕೆಳಗೆ
ಕೋಟಿ ಸಮಾಧಿಗಳು..
ವಿಜಯ ನಗೆ ಮೊಗದಲಿ
ಸೈನಿಕನ ರುಂಡ ಬಗಲಲಿ
ಸುತ್ತೆಲ್ಲ ಕೂಗು...
...ರಾಜಾ...ಭೋ ಪರಾಕ್..
...ಭೋ ಪರಾಕ್
...ಭೋ ಪರಾಕ್
ಸೋಮವಾರದ ಶನಿ...
"ವಿಶ್ವಾ..." ಎಂಬ ಕೂಗು ಕೇಳಿ ಕಿಟಕಿಯ ಬಳಿ "ಶತಾಬ್ದಿ ಎಕ್ಸ್ ಪ್ರೆಸ್" ಗೆ ಕಾಯ್ತಾ ಇದ್ದ ವಿಶ್ವನಾಥ ತನ್ನ ಟೇಬಲ್ ಬಳಿ ಓಡಿ ಬಂದು ಪುಸ್ತಕ ಹಿಡಿದು ಕುಳಿತ. ಇದು ನಿತ್ಯದ ದಿನಚರಿ. "ವಿಶ್ವಾ ಕೂಗಿದರೆ ಓ ಹೇಳೋಕೆ ಆಗಲ್ವಾ...? ಕಿವಿ ಕೆಪ್ಪಾಯ್ತು ಎಂಟೇ ವರ್ಷಕ್ಕೆ...ಬಾ ತಿಂಡಿಗೆ" ಎನ್ನುತ್ತಾ ರೂಮಿಗೆ ಬಂದ ಅಮ್ಮ "ಏನೋ ಓದೋ ನಾಟಕ ಆಡ್ತಿಯಾ....?..." ನಾಟಕ ಆಡುತ್ತಿರುಹುದರಲ್ಲಿ ಅನುಮಾನವಿಲ್ಲದಿದ್ದರೂ ಅದು ಅಮ್ಮನಿಗೆ ಗೊತ್ತಾದದ್ದು ಹೇಗೆಂದು ತಿಳಿಯದ ವಿಶ್ವ ಸುಮ್ಮನೆ ಅಮ್ಮನ್ನ ನೋಡ್ತಾ ಇದ್ದ. "ಯಾರಿಗಾಗಿ ಓದ್ತಿಯ..? ಓದಿದ್ರೆ ನಿಂಗೆ ಮಾರ್ಕ್ಸ್ ಬರೋದು... ಹೀಗೆಲ್ಲ ನಾಟಕ ಯಾಕೆ ಆಡ್ತೀಯ...? ಓದೋದಾದ್ರೆ ಪುಸ್ತಕಾನ ಸರಿಯಾಗಿ ಇಟ್ಕೊಂಡ್ ಓದು.....ಸರಿ ಈಗ ತಿಂಡಿಗೆ ಬಾ...."ಟೀಚರ್ ಇರೋದೇ ತಾವು ಮಾರ್ಕ್ಸ್ ತೆಗೆಯದೆ ಇರದಂತೆ ನೋಡಿಕೊಳ್ಳ(ಲ್ಲ)ಲೆಂದು ಅಂತ ತಿಳಿದಿದ್ದ ವಿಶ್ವ ಯಾವತ್ತೂ ಮಾರ್ಕ್ಸ್ ಬಗ್ಗೆ ಯೋಚಿಸಿದವನಲ್ಲ. ಅಮ್ಮನ ಮಾತಿನಿಂದ ಹಿಡಿದ ಪುಸ್ತಕ ತಲೆಕೆಳಕಾಗಿದೆ ಎಂದು ತಿಳಿದ. ಹ್ಮ ಎಂದದ್ದು ಗಂಟಲಲ್ಲೇ ಉಳಿದರೂ ಇವನ ಉತ್ತರಕ್ಕೆ ಕಾಯದ ಅಮ್ಮ ಹೋಗಿಯಾಗಿತ್ತು.ಇನ್ನೂ ಎಷ್ಟೇ ಗಡಿಬಿಡಿಯಾದ್ರೂ ಪುಸ್ತಕಾನ ಸರಿಯಾಗಿ ಹಿಡಿಯಬೇಕು ಎಂದು ನಿರ್ದರಿಸಿ ಮತ್ತೆ ಕಿಟಕಿಯ ಬಳಿ ಹೋದ. ಕಿಟಕಿಯ ಕೊನೆಯ ಎರಡು ಉದ್ದನೆ ಸರಳುಗಳನ್ನು ತನ್ನೆರಡೂ ಕೈಗಳಿಂದ ಹಿಡಿದು, ಮಧ್ಯದೆರದು ಸರಳುಗಳ ನಡುವೆ ಮುಖ ಹುದುಗಿಸಿ ಮತ್ತೆ "ಶತಾಬ್ದಿ ಎಕ್ಸ್ ಪ್ರೆಸ್" ಗಾಗಿ ಕಾಯುತ್ತ ನಿಂತ ಅದರ ಬರುವಿಕೆಯ ದಿಕ್ಕನ್ನೇ ನೋಡುತ್ತಾ."ಶತಾಬ್ದಿ ಎಕ್ಸ್ ಪ್ರೆಸ್" ನ ಸಮಯ ಪಾಲನೆಯಲ್ಲಿ ನಂಬಿಕೆ ಇದ್ದ ವಿಶ್ವನಿಗೆ ಇವತ್ತು ತಿಂಡಿ ಬೇಗನೆ ಆಯಿತೆಂದೇ ಅನ್ನಿಸುತ್ತಿತ್ತು.ನಾಳೆಯಿಂದ ಸರಿಯಾಗಿ ಎಂಟು ಗಂಟೆಗೆ ತಿಂಡಿ ಮಾಡಲು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಕೂ...ಎಂದು ದೂರದಲ್ಲೆಲ್ಲೋ ರೈಲು ಕೂಗಿದ ಶಬ್ದ. ರೈಲು ಬರುವ ದಿಕ್ಕನ್ನು ಮತ್ತಷ್ಟು ಕುತೂಹಲದಿಂದ ನೋಡುತ್ತಾ ನಿಂತ. ಕಿಟಕಿಯ ಸರಳುಗಳ ನಡುವೆ ಮತ್ತಷ್ಟು ಜಾಗ ಇದ್ದಿದ್ರೆ ಬಹುಷಃ ಮುಖ ಹೊರಗೆ ಇರುತಿತ್ತೇನೋ. "ಶತಾಬ್ದಿ ಎಕ್ಸ್ ಪ್ರೆಸ್" ಎಂಥ ರೈಲು...! ಕೆಲವು ಸಲ ವಿಮಾನವನೂ ಹಿಂದೆ ಹಾಕುಹುದಂತೆ...! ಓ..ಬಂತು....ಹೋಯ್ತು....."ವಿಶ್ವ...ತಿಂಡಿ " ಮತ್ತೆ ಅಮ್ಮನ ಕೂಗು. ರೈಲು ಕಾಣುವವರೆಗೂ ಕಾಲು ನೀಗಿಕೊಂಡೆ ನೋಡಿದ್ದರಿಂದ ಪಾದ ನೋಯುತ್ತಿತ್ತು. ನಾಳೆ ಸ್ಟೂಲ್ ಹಾಕಿಕೊಂಡು ಕಾಲು ನೋವಾಗದಂತೆ ಅದರ ಮೇಲೇ ನಿಂತು ನೋಡಬೇಕೆಂದು ತೀರ್ಮಾನಿಸಿ ತಿಂಡಿಗಾಗಿ ಅಡಿಗೆ ಮನೆಯತ್ತ ಕಾಲೆಳೆದೆ.
ತಿಂಡಿ ತಿಂದು ಮತ್ತೆ ರೂಮಿಗೆ ಬಂದಾಗಲೇ ನೆನಪಾಗಿದ್ದು ಇಂಗ್ಲಿಷ್ ಹೋಂ ವರ್ಕ್ ಇನ್ನೂ ಆಗಿಲ್ಲ ಎಂದು.ಸೋಮವಾರದ ಶನಿ ವಿಶ್ವನನ್ನು ಬಿದುವಂತೆಯೇ ಇಲ್ಲಾ. ಎಲ್ಲ ದಿನಗಳಿಗಿಂತ ಹೆಚ್ಚು ದ್ವೇಷಿಸುವ ದಿನ ಅಂದ್ರೆ ಸೋಮವಾರ. ಭಾನುವಾರದ ಆಟ, ಸುತ್ತೋದು, ಟಿವಿ ಎಲ್ಲದರಿಂದ ಹೊರಬಂದು ಶಾಲೆಗೇ ಹೋಗಬೇಕಾದ ಕರ್ಮ.ಅದೂ ಹೋಂ ವರ್ಕ್ ಮುಗಿಸಿ... ಪ್ರತಿ ವಾರ ಭಾನುವಾರ ಅದ ಮೇಲೇ ಸೋಮವಾರ ಬರತ್ತೆ...ಥತ್...ಹದಿನೈದು ದಿನಗಳಿಗೊಮ್ಮೆ ಬರುವನ್ತಿದ್ದಿದ್ರೆ.....ಅರೆ...ಆಗ ಒಂದು ವಾರದಲ್ಲಿ ಆರೇ ದಿನ ಇರ್ತಿತ್ತು..ಮುಂದಿನವಾರ ಏಳು ದಿನ...ಆಂ! ಆರೇ ದಿನ ಇದ್ದ ವಾರದಲ್ಲಿ ನಾಲ್ಕು ದಿನಕ್ಕೊಮ್ಮೆ ಭಾನುವಾರ ಬರುವನ್ತಿದ್ದಿದ್ರೆ... ಸರಿಯಾಗ್ತಿತ್ತು...ಈ ವಾರ ಎರಡು ಭಾನುವಾರ ಸೇರಿ ವಾರಕ್ಕೆ ಏಳು ದಿನ...ಸೋಮವಾರ ಇಲ್ಲಾ...ಮುಂದಿನ ವಾರವೂ ಏಳು ದಿನ...ಒಂದೇ ಭಾನುವಾರ.. ಮತ್ತೊಂದು ಸೋಮವಾರ.. ಉಳಿದ ದಿನಗಳು ಎಂದಿನ ವಾರದಂತೆ..ಎಂದೆಲ್ಲ ಯೋಚಿಸುತ್ತಾ ಬೇಕಾಬಿಟ್ಟಿಯಾಗಿ ಟೇಬಲ್ ಮೇಲೆಲ್ಲಾ ಬಿದ್ದಿದ್ದ ಪುಸ್ತಕದ ರಾಶಿಯಿಂದ ಸರಿಯಾಗಿ ಇಂಗ್ಲಿಷ್ ಬುಕ್ ಮತ್ತು ನೋಟ್ಸ್ ತೆಗೆದು ಪೆನ್ಸಿಲ್ ಮೆಂಡ್ ಮಾಡಿ ಮಂಚದ ಮೇಲೇ ಕೂತ ಟೇಬಲ್ ಮೇಲೇ ಪುಸ್ತಕ ಇಟ್ಟು ಬರೆಯುವಷ್ಟು ಜಾಗವಿಲ್ಲದ್ದರಿಂದ. ಇದ್ದ ೧೨ ಪಾಠದಲ್ಲಿ ಯಾವುದು ಹೋಂ ವರ್ಕ್ ಗೆ ಕೊಟ್ಟಿದ್ದಾರೆಂದು ತಿಳಿಯದೆ.ಇದ್ದದ್ದರಲ್ಲೇ ಚಿಕ್ಕದಾದ 'jack and jill' ಬರೆಯಲು ಕುಳಿತ.ಅಜ್ಜಿಯ ಮನೆಯೂ ಹೀಗೆ...ಗುಡ್ಡದ ಮೇಲೇ...ಎಷ್ಟು ಚಂದ...ಕೆಲವೊಂದು ಸಲ ಮೋಡ ಮನೆ ಒಳಗೆ ಬರತ್ತೆ...ಆದ್ರೆ ಈ ಪದ್ಯದ ಉಲ್ಟಾ..ನೀರು ತರಲಿಕ್ಕೆ ಗುಡ್ಡ ಇಳಿದು ಕೆಳಗೆ ಬರಬೇಕು. ಮುಂದಿನ ತಿಂಗಳಿಂದ ಶಾಲೆಗೇ ರಜ..ಅಜ್ಜಿ ಊರಿಗೆ ಹೋಗಬೇಕು. ಎಷ್ಟು ಚಂದ ಮರ..ಗಿಡ...ಹಸಿರು....ಮನೆ ಮುಂದೆ ನಿಂತು ನೋಡಿದ್ರೆ ಊರೆಲ್ಲ ಚಿಕ್ಕದಾಗಿ ಕಾಣತ್ತೆ..ಆಹಾ..ಎಂದೆಲ್ಲ ಯೋಚಿಸುವಾಗ ಅಲ್ಲಿಗೆ ಶತಾಬ್ದಿ ಎಕಸ್ ಪ್ರೆಸ್ ಬರಲ್ಲ ಎಂಬ ಕೊರತೆ ಕಾಣಿಸಿತು. ಎಂಥ ಹಳ್ಳಿ ಕೊಂಪೆ ಎಂಬ ಬೇಸರವೂ ಹುಟ್ಟಿತು.ಇಷ್ಟೆಲ್ಲಾ ಯೋಚಿಸುತ್ತ ಬರೆಯುವಾಗ ಮದ್ಯದ ಸಾಲು ಬಿಟ್ಟು ಕೊನೆ ಸಾಲು ಬರೆದು ಮುಗಿಸಿಯಾಗಿತ್ತು. ಥತ್...ಯಾವಾಗಲು ಈ ಲೈನ್ ಬಿಟ್ಟೆ ಬರೀತೀನಿ... ಪ್ರತಿ ಸೋಮವಾರವೂ ಇದೇ ಪದ್ಯ ಬರೆಯುತ್ತಿದ್ದರಿಂದ ಮೂರೇ ಲೈನಿಗೆ ಮುಗಿದಾಗ ಒಂದು ಸಾಲು ಬರೆದಿಲ್ಲವೆಂದು ಗೊತ್ತಾಗಿ , ಕೊನೆ ಸಾಲು ಅಳಿಸಿ ಮತ್ತೆ ಎರಡು ಸಾಲು ಬರೆದು ಮುಗಿಸಿದ. ಗಂಟೆ ೯ ಆಗಿದ್ದರಿಂದ ಯಾವ ಪುಸ್ತಕ ಬೇಕು, ಯಾವುದು ಬೇಡ ಎಂದು ವರ್ಗೀಕರಿಸಲು ಸಮಯವಿಲ್ಲದೆ ಎಲ್ಲಾ ಪುಸ್ತಕಗಳನ್ನು ಚೀಲದಲ್ಲಿ ಇಳಿಸಿ , ಚೀಲವನ್ನು ಹೆಗಲಿಗೇರಿಸಿ ಹೊರಟ ಶಾಲೆಯೆಡೆಗೆ.
Subscribe to:
Posts (Atom)