ಪ್ರೀತಿ ನೌಕೆ...

ನಿನ್ನ ಪ್ರೀತಿ ನೌಕೆಗಾಗಿ
ತೀರ ದಡದಿ ಕಾದೆನೇ
ಯಾವ ಸುಳಿಗೆ ಸಿಲುಕಿತೇನೋ
ನೌಕೆ ದಡಕೆ ಬಾರದೆ...

ಪ್ರೀತಿ ಹೂವ ಮುಡಿಸಲೆಂದು
ನಿನ್ನ ಬರವ ಕಾದೆನೇ
ಹೂವು ಹಾಗೆ ಮುದಿಡಿತಿಲ್ಲಿ
ನಿನ್ನ ಮುಡಿಯ ಸೇರದೆ...

ಒಲವ ಕುದುರೆ ಬೆನ್ನ ಹತ್ತಿ
ವಿಷದ ಮಡಕೆ ಸಿಕ್ಕಿದೆ
ಕುಡಿದು ಮುಗಿಸಿ ಬಿಡುವ ಅದನು
ನಿನ್ನ ಇರುವು ಕಾಣದೆ...

ಒಂಟಿ.... ಒಂಟಿಯಾಗಿರುಹುದು....

ಎಲ್ಲರಿಗೂ ಇಂಥದ್ದೊಂದು 'ಬೋರು' ಕಾಡತ್ತೇನೋ... ಯಾವುದರಲ್ಲೂ ಮನಸ್ಸು ನಿಲ್ಲದು, ಹೇಳಿಕೊಳ್ಳುವಂತ ಒಂಟಿತನವಲ್ಲ, ಜೀವನವೇ ಇಷ್ಟು ಎನ್ನುವ ವೈರಾಗ್ಯವಲ್ಲ.... ಬಾಳಿನ ಬಗ್ಗೆ ಜಿಗುಪ್ಸೆಯಂತೂ ಅಲ್ಲವೇ ಅಲ್ಲ. ಹಾಗಾದರೆ ಇದೆಂಥ...? ಬರೇ 'ಬೋರು'. ಓದಲು ಬೋರು...ಆಡಲು ಬೋರು...ಮಲಗಲು ಬೋರು... ಮಾತನಾಡಲು ಬೋರು...ಮಾತನಾಡದೆ ಇರಲೂ ಬೋರು...ಬರೆಯಲಂತೂ ಬೋರೋ ಬೋರು. ಏನಿದು 'ಬೋರು'...? 'ಬೇಸರ' ಎನ್ನುವುದರ ಕನ್ನಡ ಉಚ್ಚಾರಣೆಯ...? ಬಹುಷಃ ಕನ್ನಡ ಆಗಿರಲಿಕ್ಕಿಲ್ಲ. ಇಂಗ್ಲಿಷ್ ನ 'bore ' ಕನ್ನಡದ 'ಬೋರು' ಆಯ್ತಾ....? ಅಯ್ಯೋ...ಬಿಡಿ ಪದ ಎಲ್ಲಿಂದ ಬಂದ್ರೆ ಏನು ಬೋರಂತು ಆಗಿತ್ತು...ಆಗಿದೆ...ಮುಂದೇನು ಆಗತ್ತೆ. ಇವತ್ತು ಗೆಳತಿಯ ಜೊತೆ 'ಬೋರ್' ಎಂದು ಮಾತನಾಡಿದ್ರೆ...ನಾಳೆ ಅವಳೊಟ್ಟಿಗೆ ಮಾತನಾಡಿದ್ರಿಂದಲೇ 'ಬೋರು' ಬರತ್ತೆ.  "ಏ...ಬೋರು ಆಗ್ತಾ ಇತ್ತು..ಫಿಲಂಗೆ ಹೋದೆ" ಅಂತಾರೆ... ಮತ್ತೊಮ್ಮೆ...ಇಲ್ಲಾ ಮಗದೊಬ್ಬ.... "ಏ ಫಿಲಂಗೆ  ಹೋಗಿದ್ದೆ ಬೋರ್ ಬಂತು" ಅಂತಾರೆ. ಅಂದ್ರೆ ಕೆಲವು ಸಲ 'ಬೋರ್' ಆಗತ್ತೆ ...ಮತ್ತೊಂದು ಸಲ 'ಬೋರ್' ಬರತ್ತೆ ಅಂತಾಯ್ತು. ಹಾಗಾದ್ರೆ 'ಬಂದ' ಬೋರು ಬೇಗ ಹೋಗತ್ತ..? ಅಥವಾ 'ಆದ' ಬೋರು ಬೇಗೆ ಹೋಗತ್ತ....? ಯಾಕೆ ಬೋರ್ ಬಂತಾ...? ನಂಗೂ ಅದೇ 'ಬೋರು' ಕಂಡ್ರಿ. ಯಾಕೋ ಇತ್ತೀಚಿಗೆ ಸ್ವಲ್ಪ ಜಾಸ್ತೀನೆ ಬೋರು. ಬೋರಿಗೆ 'ಬೋರು' ಬಂದು ಹೋಗತ್ತೇನೋ ಅಂತ ಕಾಯ್ತಾ ಇದೀನಿ.... ಯಾಕೋ ಹೋಗೋ ಹಾಗೆ ಕಾಣ್ತಾ ಇಲ್ಲಾ. ಬೋರಯ್ತು ಅಂತ ಬರೆಯಕ್ಕೆ ಕೂತೆ...ಬರೆದು ಬೋರು ಅಂತ ಬುಕ್ ಮಡಚಿ ಇಟ್ಟೆ. ಗೊತ್ತೇ ಆಗ್ತಾ ಇಲ್ಲ ಕಂಡ್ರಿ  ಯಾಕೆ ಬೋರು ಅಂತ. ಬೋರಿಗೇ ಬೋರಾಗೋ ಅಂತ ಬೋರು ಬರಬೇಕು ಕಂಡ್ರಿ. ಆಗ ನಾವೆಲ್ಲಾ ಬಚಾವ್ ಆಗ್ತೀವಿ. ಇದ್ಯಂತಾ ಬೋರಿಂದೆ ಕಥೆ...ಬರಿ ಬೋರು ಅನ್ನಿಸ್ತಿದ್ಯಾ....? ಅನಿಸಲೇ ಬೇಕು ಕಂಡ್ರಿ... ಆಗಲೇ ಬೋರಿಗೂ ಒಂದು ಮರ್ಯಾದೆ, ನನ್ನ ಲೇಖನಕ್ಕೋ ಒಂದು ಬೆಲೆ ಅಂತ ಬರೋದು. ಒಂದಾನೊಂದು ಕಾಲದ ಜನ 'ಬೇಸರ' ಆಗ್ತಾ ಇದೆ ಅಂತ ಇದ್ರಲ ಅದಕ್ಕೆ ಅಧುನಿಕ ಕನ್ನಡದಲ್ಲಿ 'ಬೋರು' ಅನ್ತಾರೆನ್ರಿ...? ಬೇಸರ-ಬೋರು ಎರಡು ಒಂದೇ ಅಲ್ಲ ಅನ್ಸತ್ತೆ. exam ನಲ್ಲಿ ಕಡಿಮೆ marks ಬಂದಾಗ 'ಬೇಸರ'... ಎಗ್ಸಾಮ್  ಗೆ ಓದಬೇಕು ಅಂದಾಗ 'ಬೋರು', ಕಾಲೇಜಿಗೆ ಹೋಗಬೇಕು ಅಂದ್ರೆ ಬೇಸರ.. ಲೆಕ್ಚರ್ ಪಾಠ ಅಂದ್ರೆ 'ಬೋರು'. ಬೋರಿನ peak  ಬೇಸರ ಅನ್ಸತ್ತೆ. ಅದರೂ ಬೇಸರಕ್ಕಿಂತ ಬೋರ್ ಅಂದ್ರೆ ಬೋರು ಕಂಡ್ರಿ. ಎಷ್ಟೋ ಸಲ ಬೋರು ಆಗತ್ತೆ ಆದ್ರೆ ಹೆಚ್ಚಿನ ಸಲ ಯಾಕೆ ಬೋರು ಅಂತಾನೇ ಗೊತ್ತಾಗಲ್ಲ ಕಂಡ್ರಿ. ಕಾರಣ ಇಲ್ದೆ ಬರೋದ್ರಲ್ಲಿ ಬೋರಿಗೇ ಪ್ರಥಮ ಸ್ಥಾನ ಏನೋ ? ಅದರ strong competent 'ಸಿಟ್ಟು' ಅನ್ಸತ್ತೆ. ಕೆಲವು ಸಲ ಬೋರು ಅದಾಗ ಸಿಟ್ಟು ಬರತ್ತೆ. ಬೋರಲ್ಲೋ ಬೇರೆ ಬೇರೆ ಹಂತ ಇದೆ ಕಂಡ್ರಿ...ಬೋರು...ಸಿಕ್ಕಾಪಟ್ಟೆ ಬೋರು....ಕೆಟ್ ಬೋರು...ಸಕತ್  ಬೋರು.... ಹೀಗೆ. ಎಲ್ಲ ಬೋರು ಕೆಟ್ಟದ್ದೇ ಅದರೂ 'ಕೆಟ್ ಬೋರು' ಮತ್ತೋ ಕೆಟ್ಟದ್ದು. ಯಾಕ್ರೀ ಬೋರ್ ಆಗ್ತಾ ಇದ್ಯಾ...? ಇದನ್ನ ಓದಿ ಬೋರಾದ್ರೆ ನಾನು ಜವಾಬ್ದಾರನಲ್ಲ..ಓದಿ ಬೋರು ಹೋದ್ರೆ ಮಾತ್ರ ಅದರ ಕ್ರೆಡಿಟ್ ನಂಗೇ ಸಲ್ಲಬೇಕು. ಅಬ್ಬಾ....ನನಗಂತೂ ಈಗ ಅರಾಮಾಯ್ತು... ಬೋರಾಗ್ತಿತ್ತು ಅಂತ ಬರಿಯಕ್ಕೆ ಕೂತೆ 'ಬೋರು' ಅನ್ನೋದೇ ವಿಷಯ ಆಗಿದ್ರಿಂದ ಬೋರಿಗೇ ಬೋರು ಬಂತೇನೋ ಬೋರಲಾಗಿ ಮಲಗಿ ಬಿಟ್ಟಿದೆ ಅಥವಾ... ನನ್ನ ಬೋರನ್ನ ನಿಮಗೆ ವರ್ಗಾಯಿಸಿದ್ನ....?
 ನಿಮಗೆ, ನಿಮ್ಮ ಮನೆಯವರಿಗೆ 'ಬೋರೆಶ್ವರ' ಕಾಡದಿರಲೆಂದು ಪ್ರಾರ್ಥಿಸುತ್ತ ನಿಮಗೆ ಬೋರು ಹೊದಿಸೋದನ್ನ ನಿಲ್ಲಿಸ್ತೀನಿ. ಮತ್ತೊಮ್ಮೆ ಬೋರಾದಾಗ ಸಿಗೋಣ.
 
ವಿ.ಸೂ. ಬೋರಾಗ್ತಾ ಇದ್ರೆ ಓದಿ....ಬೋರು ಹೋಗಬಹುದು...ಓದಿಯೂ ಬೋರಾದ್ರೆ....? ಹೆಂಗಾದ್ರೂ ನನ್ನ ಲೇಖನ ಸಾರ್ಥಕ.
  

ಮುಳುಗುವವನ ಕೂಗು.....

ಸಮುದ್ರ ತೀರದಲ್ಲಿ ಕೂತಾಗೆಲ್ಲ ನೀನೆ ನೆನಪಾಗ್ತೀಯ ಕಣೇ...ಇದೆ ಕಲ್ಲು ಬಂಡೆ ಮೇಲೇ ಕೂತು ಅಲ್ವಾ ಎಷ್ಟೋ ಸಂಜೆ ಸೂರ್ಯ ಮುಳುಗೊದಕ್ಕೆ ನಾವಿಬ್ರೂ ಸಾಕ್ಷಿ ಆಗಿದ್ದು.....ಆಗ ಎಷ್ಟು ಚಂದ ಕಾಣತಿದ್ದ ಅಲ ಸೂರ್ಯ... ಕೆಂಪಗೆ... ಗುಂಡಗೆ.... ಸಮುದ್ರದ ನೀರನ್ನೆಲ ಕೆಂಪಗೆ ಮಾಡಿ ಹೋಗ್ತಿದ್ದ. ಅವ ಅತ್ತ ಹೋದ ಮೇಲೆ ನಾವು ಇತ್ತ ಬರ್ತಿದ್ವಿ. ಎಂಥ ಆನಂದ ಇತ್ತು ಸೂರ್ಯ ಮುಳುಗೊದನ್ನ ನೋಡಿ.. ಮನಸ್ಸು ತುಂಬಿ ಬರ್ತಿತ್ತು...ಮಂದಿಗೆಲ್ಲ ಹೀಗೆ... ಯಾರಾದ್ರು ಮುಳುಗೊದನ್ನ ನೋಡಿದ್ರೆ ವಿವರಿಸಾಗದ ಹರ್ಷ...ನೀನು ಹಾಗೆ ಅಲ್ವಾ....? ನನ್ನನ್ನ ಮುಳುಗಿಸಿ ನೀನು ಸಂತೋಷ ಪಡ್ತಾ ಇದೀಯ... ಮುಳುಗೋ ಸೂರ್ಯ ಕೂಡ ನಮಗೆ ಏಳೋ ಶಕ್ತಿ ಕೊಡ್ತಿದ್ದ ಅಲಾ...
             ಹಿಂದೊಂದು ದಿನ  ನಮ್ಮ ಸಂತೋಷಕ್ಕೆ ಕಾರಣವಾದ ಈ ಸಮುದ್ರ ತೀರ ಈಗ ನನ್ನ ಬಿಕ್ಕಳಿಕೆಗೆ ಸಾಂತ್ವಾನ ಹೇಳ್ತಾ ಇದೆ...ಒಂದು ಮಾತೂ ಹೇಳ್ದೆ ಹೊರಟೇ ಹೋದ್ಯಲ್ಲ....ಯಾಕೆ....? ಎಲ್ಲಿಗೆ ಹೋದೆ ಅಂತ ಹೇಳದೆ ಇದ್ರೂ ಯಾಕೆ ಹೋದೆ ಅಂತನಾದ್ರೂ ಹೇಳು...ಎದ್ರಿಗೆ ಸಿಕ್ಕಿದ್ರೆ ಕುತ್ತಿಗೆ ಹಿಡಿದು ಕೇಳೋಣ ಅನ್ಸತ್ತೆ 'ಯಾಕೆ ಹೋದೆ...?' ಅಂತ....'ನೀನೆ ಪ್ರಾಣ' ಅಂತಿದ್ದೆ...ಈಗ ಈ ಪ್ರಾಣ ಬಿಟ್ಟು ಇನ್ನೂ ಬದುಕಿದ್ದೀಯ...? ನಾನಂತೂ ಸತ್ತೋದೆ...ಕುಂತ್ರೆ ನಿಂತ್ರೆ ಬರಿ ನಿಂದೆ ನೆನಪು....ಸಮುದ್ರದ ಅಲೆಗಳಂತೂ ಕೇಕೆ ಹಾಕಿ ನಗ್ತಾ ಇದೆಯೇನೋ ಅನ್ನಿಸ್ತಾ ಇದೆ...ಇಲ್ಲಿರೋ ಮರಳಿನ ಒಂದೊಂದು ಕಣಕ್ಕೂ ಕೂಗಿ ಕೂಗಿ ಹೇಳೋಣ ಅನ್ನಿಸ್ತಾ ಇದೆ ನಿನ್ನ ಕರಿಯಕ್ಕೆ... ಮನೆಕಟ್ಟೋ ಶಕ್ತಿ ಇರೋ ಈ ಮರಳು ಮನಸ್ಸನ್ನೂ ಕಟ್ಟತ್ತೇನೋ ಅಂತ...ನಿನ್ನ ಒಂದೊಂದು ಮಾತೂ ನನಗೆ ಅಪ್ಪಣೆ ಅಗಿತ್ತಲಾ ಗೆಳತೀ....ಸಲಹೇನ ಸೂಚನೆ ಅಂತಲೂ...ಸೂಚನೆನ ಕಟ್ಟಾಜ್ಞೆ ಅಂತಲೂ ಪಾಲಿಸಿದ್ನಲ್ಲ...ಅದೇ ನಾನ್ ಮಾಡಿದ ತಪ್ಪಾ ಎಂಬ ಯೋಚನೆ ಬರ್ತಾ ಇದೆ....ನಿನ್ನ ಮುಂದೆ ಚೀಪ್ ಅದ್ನೇನೋ ಅನ್ನಿಸ್ತ ಇದೆ... ಈಗ್ಲೂ ಅದೇ ಸೂರ್ಯ ಮುಳುಗೋದನ್ನ ನೋಡ್ತಾ ಇದೀನಿ.... ಹಾಗೆ... ಕೆಂಪಗೆ...ಗುಂಡಗೆ...ಸಮುದ್ರನೆಲ್ಲಾ ಕೆಂಪು ಮಾಡ್ತಾ...ಹಿಂದೊಂದು ದಿನ ಅಭೂತ ಪೂರ್ವ ಸಂತೋಷ ಕೊಟ್ಟ ಸೂರ್ಯ...ಈಗ ಆತ್ಮಹತ್ಯೆ ಮಾಡಿಕೊಳ್ತಾ ಇದಾನೇನೂ ಅನ್ನಿಸ್ತಾ ಇದೆ...ಇಲ್ಲಿ ಬೀಸೋ ಗಾಳಿಗೆ ನಿನ್ನ ಕೂದಲು ಹಾರತ ಇತ್ತಲ...ಮುಖದ  ಮೇಲೇ ಬರ್ತಿದ್ದ ನಿನ್ನ ಕೂದಲು...ಅದನ್ನ ಬೆರಳ ತುದಿಯಿಂದ ನೀನು ಹಿಂದೆ ಹಾಕ್ತಿದ್ದ ಪರಿ...ಎಲ್ಲ ನೆನಪು...ಹಿಂದೊಮ್ಮೆ ತಂಪಾಗಿದ್ದ ಇಲ್ಲಿಯ ಗಾಳಿ ಈಗ ಬಿಸಿಯಾಗಿರೋ ಹಾಗಿದೆ...ನನ್ನ ಮನಸ್ಸಿನ ಬಿಸಿನ ತಣ್ಣಗಾಗಿಸೋ ಶಕ್ತಿನ ಕಳಕೊಂಡಿದೆ....ಈಗ ಆ ತಂಗಾಳಿಯೇ ಇಲ್ಲಾ...ಗಾಳಿ ಇನ್ದನೂ ದೂರವಾದ ಭಾವ...ಮೈಯನ್ನ ಮಾತ್ರ ತಣ್ಣಗಾಗಿಸೋ ತಂಗಾಳಿಕಿಂತ ಮನಸ್ಸನ್ನ ತಂಪಾಗಿಸೋ ನಿನ್ನ ಮಾತೆ ಬೇಕು ಅಂತ ಕೂಗಿ ಹೇಳಬೇಕು ಅನ್ನಿಸ್ತಾ ಇದೆ...ಆದರೆಲ್ಲಿ....? ನನ್ನ ಹೃದಯದ ಬಡಿತವನ್ನೂ ಕೂಡ ಕೇಳಬಲ್ಲ ಮನಸ್ಸಿದ್ದ ನೀನು ನನ್ನ ಮಾತನ್ನೂ  ಕೇಳದವಳಂತೆ ಆಗ್ಬಿಟ್ಟೆ...ನಾನೇ ಮುಳುಗ್ತಿರೂ ಈ ಸಮಯದಲ್ಲಿ ಮುಳುಗ್ತಿರೋ ಸೂರ್ಯ ಕೂಡ ಖುಷಿ ಕೊಡ್ತಾ ಇಲ್ಲಾ...ಎಷ್ಟೊಂದು ಜನ... ಹೆಂಗಸರು...ಮಕ್ಕಳು...ಮುದುಕರು...ತರುಣರು...ಎಲ್ಲರಿಗು ಖುಷಿ ಕೊಡೊ ಈ ಸಮುದ್ರ... ಸೂರ್ಯಾಸ್ತ... ಅಲೆಗಳ ಆಟ...ತಂಪಾದ ಗಾಳಿ...ಕೆಂಪನೆ ಆಕಾಶ...ನನ್ನನ್ನ ಮಾತ್ರ ನೆನಪಲ್ಲಿ ಬೇಯಿಸ್ತಾ ಇದೆ. ಎಲ್ಲರೂ ಅವರವರ ಮನೆಯತ್ತ ಮುಖ ಮಾಡಿರೋವಾಗ... ಇಲ್ಲಿ ನಾನ್ ಮಾತ್ರ ಸಮುದ್ರದ ಕಡೆ ಮುಖ ಮಾಡಿ ಮುಳುಗಿದ ಸೂರ್ಯ...ನಾಳೆ ಮತ್ತೆ ಹುಟ್ಟಬಹುದಾದ ಸೂರ್ಯನ ನಿರೀಕ್ಷೆಯಲ್ಲಿ... ಇಲ್ಲೇ... ಇಲ್ಲೇ..ಕೂತಿದೀನಿ. ನನಗೆ ಗೊತ್ತು ಗೆಳತಿ... ಇಲ್ಲೇ ಕೂತಿದ್ರೆ ಹುಟ್ಟೋ ಸೂರ್ಯ ನನಗೆ ಕಾಣಲ್ಲ ಅಂತ...ನಾಳೆ ಮತ್ತೆ ಮುಳುಗೋ ಸೂರ್ಯನ್ನೇ ನೋಡ್ತೀನಿ ಅಂತ... ಆದರೂ ನಿನ್ನ ಕನಸನ್ನ ಹೊತ್ತ ಮನಸ್ಸು ನಿನ್ನ ನೆನಪಿರೋ ಈ ಜಾಗಾನ ಬಿಟ್ಟು ಕದಲತ ಇಲ್ಲಾ ಕಣೇ...ಜೀವನದಲ್ಲಿ ಮುಳುಗ್ತಿರೋ ನಂಗೆ ಈ ಮುಳುಗ್ತಾ ಇರೋ ಸೂರ್ಯಾನೆ ಜೊತೆಗಾರ...ನಾಳೆ ಬರೋ ಸೂರ್ಯ ನಿನ್ನನ್ನೂ  ಕರೆ ತಂದು ನನ್ನ ಜೀವನವನ್ನ ಬೆಳಕಾಗಿಸ್ತಾನೇನೋ ಅಂತ ಕಾದು ಕೂತು ನಾಲ್ಕು ತಿಂಗಳಾಯ್ತಲ್ವಾ...? ಇಲ್ಲಾ ಎರಡೇ ತಿಂಗಳಾಗಿದ್ದು... ಈಗಲೂ ಮರಳ ಮೇಲೇ ಕೈ ಇಟ್ಟೊಡನೆ ಬೆರಳು ನನಗೆ ಗೊತ್ತಿಲ್ಲದಂತೆ ನಿನ್ನ ಹೆಸರನ್ನೇ ಬರಿಯತ್ತೆ ಕಣೇ....ಮರುಕ್ಷಣ....ಹೆಸರು ಇದ್ದದ್ದೇ ಭ್ರಮೆಯೇನೋ ಎಂಬಂತೆ ಅಲೆ ಅಳಿಸಿಹಾಕಿ ಬಿಡತ್ತೆ...ನನ್ನ ಉಸಿರಲ್ಲಿರೋ ನಿನ್ನ ಹೆಸರು ಅಳಿಸಲಿಕ್ಕೆ ಅಲೆಗಂತೂ ಸಾದ್ಯ        ಇಲ್ಲಾ.... ನೀನೆ ಬಂದು ಬಿಡೆ...ಪ್ಲೀಸ್.                        

ನೆನಪಿನರಮನೆ.....

  ಯಾಕೇ ಹುಡುಗಿ ಇಷ್ಟು ಕಾಡ್ತಿಯಾ...? ತೀರಾ ಇಷ್ಟು ಕಾಡುವಂತದ್ದು ಏನಿದೆ ಗೆಳತಿ ನಿನ್ನಲ್ಲಿ...? ಊರು ಬಿಟ್ಟು ಊರಿಗೆ ಬಂದ್ರೂ ಮಾಸದ ನೆನಪು... ಕಾಡಬೇಕು ಅಂತಾನೇ ಕಂಡ್ಯೇನೋ ಅನ್ನಿಸೋ ಹಾಗೆ ಮಾಡಿಬಿಟ್ಟಿದೆ ನಿನ್ನ ನೆನಪು. ನಿಂಗೊತ್ತಾ...ಕಾಲೇಜಿನ ಮೊದಲದಿನ ಕ್ಲಾಸ್ ರೂಂನಲ್ಲಿ ನೋಡಿಡ್ನಲಾ ಗೆಳತಿ ನಿನ್ನ ಆಗ್ಲೇ 'ಬಿದ್ದೆ'... ಲವ್ವೂ- ಪವ್ವೂ ಏನೂ ಅರ್ಥ ಅಗ್ದಿದ್ರೂ ಒಂದು ರೀತಿಯ ಸೆಳೆತಕ್ಕೆ, ಸಮ್ಮೋಹನಕ್ಕೆ ಒಳಗಾಗಿದ್ದಂತೂ  ನಿಜ.ಹೇಳ್ಕಳಕ್ಕೂ ಆಗದ..ಹೇಳದೆ ಇರಲಿಕ್ಕೂ ಆಗದ ಭಾವ. ಒಂದೇ  ಒಂದು ದಿನಾನೂ  ನಿನ್ನ ನೋಡದೇ ಇರಲಾಗದಂತಹ ಸ್ಥಿತಿ.ನಿನಗೆ ಗೊತ್ತಿರಲಿಕ್ಕಿಲ್ಲ ಹುಡುಗಿ... ಎಷ್ಟೋ ದಿನ ಬಸ್ಸು ಸಿಗದಿದ್ರೂ ೮ ಕಿ.ಮೀ.ನಡೆದೇ ಕಾಲೇಜಿಗೆ ಬರ್ತಾ ಇದ್ದಿದ್ದು ನಿನ್ನ ನೋಡಲೆಂದೇ ಎಂದು...! practical record ಬರಿಯೋ ಅಷ್ಟು ಟೈಮು, ವ್ಯವಧಾನ, source ಎಲ್ಲ ಇದ್ರೂ ಬರಿಯದೆ  ಲ್ಯಾಬ್ ನಲ್ಲಿ ನನ್ನ ನೆಚ್ಚಿನ ಮಾಸ್ಟರ್ 'ಸುಬ್ರಾವ್' ಹತ್ರ ಬೈಸಿಕೊಳ್ತಾ ಇದ್ದಿದ್ದು... ಎಲ್ಲಾ ನಿನಗೆ ನೆನಪಿದೆ ಅಂದ್ಕೋತೀನಿ. ಆದ್ರೆ ಯಾಕೆ ಅಂತ ನಿಂಗೆ ಗೊತ್ತಿಲ್ಲಾ ಅಲಾ....? ಅವ್ರು ಬೈದಾಗ ನಿನ್ನ ಮುಖದ ಮೇಲೆ ನಗೂ ಬರ್ತಿತ್ತಲಾ ಆಗ ನೀನು ಎಷ್ಟು ಮುದ್ದಾಗಿ ಕಾಣ್ತಿದ್ದೆ ಗೊತ್ತಾ....ಇನ್ನೂ ಒಂದು ಕಾರಣ ಇದೆ ಗೆಳೆತಿ ಬರೀದೆ ಇರೋದಕ್ಕೆ.... ಬೈಸಿಕೊಂಡು ಆದ ಮೇಲೆ ಲ್ಯಾಬ್ ಮುಗೀತಿತ್ತಲ (ಬೈಸಿಕೊಲ್ದೆ ಲ್ಯಾಬ್ ಮುಗ್ದಿದ್ದೆ ಇಲ್ಲ) ಆಮೇಲೆ ನಿನ್ನ ರೆಕಾರ್ಡ್ ತಗೂಳೋ ಅವಕಾಶದಿಂದ ವಂಚಿತನಾಗಲು ನಾನು ಸುತಾರಾಂ ತಯಾರಿರ್ಲಿಲ್ಲ....ನಿನ್ಕಿಂತಾ ಚೆನ್ನಾಗಿ ರೆಕಾರ್ಡ್ ಬರಿಯೋರಿದ್ರೂ ನಿನ್ ರೆಕಾರ್ಡ್ ನೇ ತಗೋಬೇಕು ಅಂತ ಮನಸ್ಸು ಹಠ ಹಿಡಿದು ಬಿಡ್ತಿತ್ತು ಕಣೇ.....ಅದು ಹೇಗೆ ಮನದ ಮಾತು ಕೇಳದೆ ಇರ್ಲಿ ಹೇಳು... ನಿನ್ನ ಹಾಸ್ಟೆಲ್ ಮುಂದೆ ಹೋಗೋವಾಗ್ಲೆಲ್ಲ ಕಣ್ಣು ನಿನ್ನ ಹುಡುಕ್ತಾ ಇತ್ತು...ಆದ್ರೆ...ನೀನು ಒಂದ್ ದಿನಾನು ಕಾಣಲೇ ಇಲ್ವಲ್ಲಾ...ಯಾಕೆ ಗೆಳೆತಿ.......? ವರ್ಷಕ್ಕೆ ಒಂದು ಸಲದಂತೆ  ಮೂರು ವರ್ಷಕ್ಕೆ ಮೂರು ಸಲ ಲೈಬ್ರರಿಗೆ ಹೋದದ್ದು, ಅದೂ ನೀನು ಹೋಗಿದ್ದು ನೋಡಿ ಅಂದ್ರೆ 'ಸರ್'ಗೆ ಸಿಟ್ಟು ಬರಬಹುದು ಗೆಳೆತಿ. ಆದ್ರಿಂದ ಅದೊಂದು ಸತ್ಯ ನನ್ ಹತ್ರಾನೆ ಇರಲಿ. ನೀನು ಎದ್ರಿಗೆ ಇದ್ದಾಗ ಮಾತಾಡೋ ಆಸೇನೆಲ್ಲಾ ಅದುಮಿಟ್ಟೆ...ಆದ್ರೆ ಈಗ ಅವೇ ಆಸೆಗಳು ಒಂದ್ ಕೊರತೆ ಆಗಿ ಕಾಡ್ತಾ ಇದೆಯಲ್ಲಾ ಗೆಳತಿ.....ಮಾತಾಡಲೇ ಬೇಕು ಅನ್ನೋ ಮನಸ್ಸಿನ ಅಸೆ, ಮನೆಯಲ್ಲಿ ಮಾಡಿಕೊಂಡ ಸಂಕಲ್ಪ, ಗೆಳೆಯರು ನೀಡುತಿದ್ದ ಧೈರ್ಯ,ಎಲ್ಲಾನೂ ನಿನ್ನ ಒಂದೇ ಒಂದು ನೋಟ ಕರಗಿಸಿಬಿಡ್ತಿತ್ತಲಾ.....ಏನಿಟ್ಟಿದ್ದೀ ಅಂಥದ್ದು ನಿನ್ನ ಆ ಕಣ್ಣಲ್ಲಿ...? ನಿನಗೆ ಸಿಟ್ಟು ಜಾಸ್ತಿ ಆಲ್ವಾ.....? ಹಾಗೇನೆ ಸೊಕ್ಕು ಕೂಡ.... ಅದೆಂತಹ ಸಿಟ್ಟೇ ಗೆಳತಿ ನಿಂದು..! ಅವತ್ತು ಏನೋ ಅಂದ ಅಂತ  ಅವನಿಗೆ ಕ್ಯಾಂಟೀನ್ನಲ್ಲೆ ಎಲ್ಲರ ಎದ್ರಿಗೆ ಬೈದ್ಬಿಟ್ಯಲಾ...ಅದೂ ಒಂದು ಕಾರಣಾನೆ ನಿನ್ನ ಮಾತಾಡಿಸೋ ಅಸೆ ಜೀವಂತವಾಗಿದ್ದೋ ಧೈರ್ಯ ಕೈ ಕೊಡ್ಲಿಕ್ಕೆ. ಶುದ್ಧ ಚಾಮುಂಡಿ ಅವತಾರ...ನೆನಸ್ಕೊಂಡ್ರೆ ಈಗ್ಲೂ ಭಯ ಆಗತ್ತೆ....ಏನಂದ್ರು ಅಷ್ಟು ಸಿಟ್ಟು ಒಳ್ಳೇದಲ್ಲ ಗೆಳತಿ...ನೀನು ನಕ್ಕರೆ ಎಷ್ಟು ಚಂದ ಕಾಣ್ತೀ ಗೊತ್ತಾ.....ಹುಣ್ಣಿಮೆ ಬೆಳದಿಂಗಳ ತಂಪು ಇದೆ ಕಣೆ ನಿನ್ನ ನಗುನಲ್ಲಿ.                                                       
             ಏನೇ ಅಂದ್ರೂ ನೀನಿನ್ನು ಬರಿ ನೆನಪು ಕಣೇ.... ಮತ್ತೆ ಈಗ ಹೇಗಿದೀಯ.....? ಅಷ್ಟು ಸಿಟ್ಟು...ಸೊಕ್ಕನ್ನ ಕಾಪಾಡಿಕೊಂಡಿದೀಯಾ.....? ಎಷ್ಟು ಕಾಡತ್ತೆ ಗೆಳತಿ ನಿನ್ನ ನೆನಪು....ಈ ನೆನಪೇ ವಿಚಿತ್ರ ಆಲ್ವಾ....ಎಲ್ಲ ಜನರ ಮಧ್ಯೆ ನನ್ನ ಒಂಟಿಯಾಗಿಸತ್ತೆ...ಒಂಟಿ ಆಗೇ ಇದ್ದಾಗ ತುಂಬಾ ಜನರಿರುವ ಭಾವ ಕೊಡತ್ತೆ....anyway thank you ಕಣೇ ನಿಂಗೆ... ಮೂರು ವರ್ಷಾನು ಕಾಲೇಜಿಗೆ ಬರೋ ಹಾಗೆ ಮಾಡಿದ್ದಕ್ಕೆ.....                                                                    

ಕೀಟ ಜಗತ್ತು

         'ಕೀಟ' ಅಂದ ಕೂಡಲೇ ನೆನಪಾಗುವ ಮತ್ತೊಂದು ಪದ 'ಕ್ರಿಮಿ'. ಕ್ರಿಮಿ-ಕೀಟ ಎಂಬ ಜೋಡಿ ಪದ (ಕನ್ನಡ ವ್ಯಾಕರಣದಲ್ಲಿ ಸ್ವಲ್ಪ ವೀಕು) ಎಷ್ಟೋ  ಜನರಲ್ಲಿ ಹೇಸಿಗೆ ರೇಜಿಗೆಗಳನ್ನ ಹುಟ್ಟಿಸುಹುದುಂಟು. ಯಾಕಂದ್ರೆ.. ತುಂಬಾ ಮಂದಿಗೆ ಕ್ರಿಮಿ ಅಥವ ಕೀಟ ಎಂದೊಡನೆ ನೆನಪಾಗುಹುದು ಬಚ್ಚಲ ಮನೆಯಲ್ಲಿನ ಜಿರಳೆ, ಸ್ಯೋಯ್ ಎಂದು ಹಾರುತ್ತ ನಿದ್ದೆ ಕೆಡಿಸುವ ಸೊಳ್ಳೆ, ಹೇಸಿಗೆಗಳನ್ನೇ ಆಹಾರವಾಗಿ ತಿನ್ನುವ ನೊಣ... ಇತ್ಯಾದಿ.. ಇತ್ಯಾದಿ.. ಇತ್ಯಾದಿಗಳು. ಎಷ್ಟೋ  ಮಂದಿಗೆ ಗೊತ್ತಿರಲಿಕ್ಕಿಲ್ಲ ಪ್ರಪಂಚದಲ್ಲಿ ಸರಿಸುಮಾರು ಒಂದು ಮಿಲಿಯನ್ ಗು  ಅಧಿಕ ಕೀಟಗಳನ್ನ ಗುರುತಿಸಿ ನಾಮಕರಣ ನಡೆದಿದೆಯೆಂದೂ ಹಾಗು ಅಷ್ಟೇ ಸಂಖ್ಯೆಯ ಕೀಟಗಳ ಪರಿಚಯ ನಮಗಿನ್ನೂ ಇಲ್ಲವೆಂದೂ...! ಹಾಗೆಯೇ ಅವುಗಳಲ್ಲಿ 'ಮನುಷ್ಯ ಸ್ನೇಹಿ' ಕೀಟಗಳೂ ಇವೆಯೆಂಬುದು ಗೊತ್ತಿರಲಿಕ್ಕಿಲ್ಲ.  
         'Insecta ' ಅನ್ನೋ classಗೆ ಸೇರುವ ಈ 'insect 'ಗಳು Arthropoda ಎಂಬ phylum ಗೆ ಸೇರಿವೆ.ಅಕಷೇರುಕಗಳಲ್ಲಿ(invertibrates ) ಹಾರಾಡಬಲ್ಲ ಏಕಮಾತ್ರ ವರ್ಗ ಈ ಕೀಟಗಳದ್ದು.  
         ಕೀಟ ಎಂದೊಡನೆ ನೆನಪಾಗುವ ಜಿರಳೆ, ಸೊಳ್ಳೆ, ನೊಣ, ಗೆದ್ದಲುಗಳನ್ನು ಬಿಟ್ಟು 'ಮಾನವ ಸ್ನೇಹಿ' ಕೀಟಗಳೂ ಉಂಟು ಎಂದೊಡನೆ ಹುಬ್ಬು ಗಂಟಿಕ್ಕಿಕೊಂಡರೆ  ಕೀಟಗಳು ಜವಾಬ್ದಾರರಲ್ಲ. ಹೌದು ಸ್ವಾಮಿ....ಎಷ್ಟೋ ಕೀಟಗಳು ಇಲ್ಲ ಅಂದ್ರೆ ನಾವು ಒಂದೋ ಗೆಡ್ಡೆಗಳನ್ನೇ ತಿನ್ನಬೇಕಾಗ್ತಾ ಇತ್ತು... ಇಲ್ಲಾ ಎಲ್ಲಾ ಮನುಷ್ಯ ಮಾಂಸಾಹಾರಿ ಆಗಬೇಕಿತ್ತು. ಈಗ ನಾವು ತಿನ್ನುವ ಎಷ್ಟೋ ಆಹಾರಗಳು ಅಂದ್ರೆ ಅಕ್ಕಿ, ಬೇಳೆ, ತರಕಾರಿ, ಹಣ್ಣು ಎಲ್ಲದರ ತಯಾರಿಕೆಯಲ್ಲಿ ಕೀಟಗಳ ಪಾತ್ರ ಅತಿ ಮುಖ್ಯ. ಮಕರಂದವನ್ನು ಹೀರಲು ಬರುವ ಈ ಜೀವಿಗಳು ಕಾಲಿನಲ್ಲಿ 'ಪರಾಗ' ಹೊತ್ತೊಯ್ದು ಮತ್ತೊಂದು ಹೂವಿನ ಮೇಲೆ ಕೂತು 'ಪರಾಗಸ್ಪರ್ಶ' ಮಾಡುತ್ತವೆ. ಈ ಕ್ರಿಯೆಯಿಂದಲೇ ಹೂವಿಂದ ಹಣ್ಣು...ಹಣ್ಣಿಂದ ಬೀಜ.....
         ಜೇನು ನೊಣಗಳು ಮನುಷ್ಯನಿಗೆ ಜೇನು ತುಪ್ಪದ ಮುಲಕ  ನೇರವಾಗಿ ಆಹಾರವನ್ನ ಒದಗಿಸುತ್ತವೆ. ಅವೂ ಕೂಡ ಪರಾಗ ಹೊತ್ತೊಯ್ಯುವ ವಾಹನಗಳೇ. ಹಾಗೆಯೇ ಜೀವನಕ್ಕಾಗಿ ಸಾಕುವ 'ರೇಷ್ಮೆ ಹುಳು' ಕೂಡ ಕೀಟವೇ... ಪ್ರತಿಷ್ಠೆಯ ಸಂಕೇತವಾಗಿರುವ 'ರೇಷ್ಮೆ' ಈ ಹುಳುವಿನ ಎಂಜಲು. (Not exactly saliva. Its a secretion of silk gland.ಬಾಯಿಂದ ಬರೋದರಿಂದ 'ಎಂಜಲು' ಎಂಬ ಪದ ಪ್ರಯೋಗವಾಗಿದೆ).   ಪರಿಸರದ ಸೊಬಗು ಹೆಚ್ಚಿಸುವಲ್ಲಿ ತನ್ನದೇ ಆದ ಕೊಡುಗೆ ನೀಡುವ ಬಣ್ಣ ಬಣ್ಣದ ಚಿಟ್ಟೆಗಳದ್ದು, ಪತಂಗಗಳದ್ದು ಕೂಡ ಇದೆ ವರ್ಗ.
        ನಿಮಗೆ ಗೊತ್ತೇನ್ರೀ...ಕೀಟಗಳಲ್ಲೂ ಮಾಂಸಾಹಾರಿ, ಸಸ್ಯಾಹಾರಿ, ಮಿಶ್ರಾಹಾರಿಗಳೂ ಇವೆ. may flies ಮತ್ತು ಕೆಲವು ಪತಂಗಗಳು ಊಟಾನೇ ಮಾಡೋಲ್ವಂತೆ. ದುಂಬಿಗಳು, ಸರಿಸುಮಾರು ಎಲ್ಲ ಚಿಟ್ಟೆಗಳು ಸಸ್ಯಾಹಾರಿಗಳಂತೆ. ಹಾಗೆಯೇ ಕೆಲವು ಪತಂಗದ ಮರಿಗಳು, ಲಾಂಗ್ ಹಾರ್ನೆಡ್ ಗ್ರಾಸ್ ಹಾಪೆರ್ಗಳು, ಡ್ರಾಗನ್ ಫ್ಲೈಸ್ strictly non -vegetarianಗಳು. ಕೆಲ ದುಂಬಿಗಳಿಗೆ, ಗ್ರಾಸ್ ಹಾಪೆರ್ಗಳಿಗೆ ಅದು-ಇದು ಅಂತ ಇಲ್ಲ...veg ಅಂದ್ರೆ veg ... non veg ಅಂದ್ರೆ non veg .
       ಇಂತಿಪ್ಪ ಕೀಟಗಳು ಕಂಡ್ರೆ ಹೇಸಿಗೆ ಬೇಡ. ಯಾಕೋ ಲೈಬ್ರರಿಲಿ ತುಂಬಾ ಸೊಳ್ಳೆ ಕಂಡ್ರಿ....ಮುಗಿಸಿಬಿಡ್ತೀನಿ ಬರಿಯೋದನ್ನ....ಇನ್ನೊಮ್ಮೆ ಸೊಳ್ಳೆ ಕಡಿಮೆ ಇದ್ದಾಗ ಸಿಗೋಣ.   



ತಾಣ ಪುರಾಣ...

ಹಗಲು ಕನವರಿಸಿದ (ಇದೇನು ಆರಂಭವೇ ತಪ್ಪು ಅಂದ್ಕಂದ್ರಾ....? ಹಾಗೇನಿಲ್ಲ...ನಾವು ಸೂರ್ಯವಂಶದೋರು. ಆದ್ರಿಂದ ಹಗಲೇ ನಿದ್ದೆ ಜಾಸ್ತಿ... ನಿದ್ದೆಯಲ್ಲಿ ಕನವರಿಸೋದೂ ಜಾಸ್ತಿ ಅಷ್ಟೇ) ಮಾತು...ಕನವರಿಸಲೂ ಆಗದ ಮಾತುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ. ಮನಸಿನ ಮಾತನ್ನು ಕಕ್ಕುವ ಪ್ಲಾಸ್ಟಿಕ್ ಕವರ್. ತಲೇಲಿ ಇದ್ದದ್ದನ್ನ ಇದ್ದ ಹಾಗೆ ಯಾವುದೇ ಫಿನಿಷಿಂಗ್ ಇಲ್ದೆ ಇಳಿಸಲು ನಾನೇ ಮಾಡಿಕೊಂಡಿರುವ ವೇದಿಕೆ (ಬ್ಲಾಗ್ ಮಾಡಿಕೊಟ್ಟ ಪ್ರವೀಣನ ಕ್ಷಮೆ ಕೋರಿ). ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ಯಾವುದೇ ಮುಲಾಜಿಲ್ಲದೆ ಬರೆದ್ ಬಿಸಾಕಿ 'comment box' ನಲ್ಲಿ. ಏನಾದ್ರೂ ನಾನು ಬರೆದೂ-ಬರೆದೂ torture ಕೊಡ್ತಿದೀನಿ ಅನ್ಸಿದ್ರೆ...ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೀತಾ ಇದೆ ಅನ್ಸಿದ್ರೆ... ಓದದೆ ಇರಬಹುದಾದಂತಹ ನಿಮ್ಮ ಸ್ವಾತಂತ್ರ್ಯವನ್ನು ಬಳಸದೆ, ಕಪ್ಪು ಬಾವುಟ ಹಿಡಿಯದೆ ಕಿವಿ ಹಿಂಡಿ, ಬುಧ್ಧಿ ಹೇಳಿ 'ಸಲಹಾ ಪೆಟ್ಟಿಗೆ'ಗೆ ನಿಮ್ಮ ಕೊಡುಗೆ ನೀಡಿ. ಯಾಕಂದ್ರೆ ಕೇವಲ ಅಕ್ಷರ ಮಾಲೆ, ಕಾಗುಣಿತ ಬಿಟ್ಟು ಬರವಣಿಗೆಯ ಯಾವುದೇ ಮಜಲುಗಳನ್ನ ತಿಳಿಯದವ ನಾನು. ಬರೀಲೇ ಬೇಕು ಅನ್ನೊ ಒಂದೇ ಒಂದು 'ಸಂಕಲ್ಪ'ದಿಂದ ಜನ್ಮವೆತ್ತ ಹಸುಗೂಸು ಈ ತಾಣ. ಕಥೆಯೂ ಅಲ್ಲದ..ಕವನವೂ ಅಲ್ಲದ..ಬರವಣಿಗೆಯ ಯಾವುದೇ categoryಗೆ ಸೇರದ ಬರಹಗಳನ್ನ ಸಹಿಸಿಕೊಂಡು ಮುನ್ನಡೆಸಬೇಕಾದ ಜವಾಬ್ದಾರಿಯನ್ನ ನಿಮಗೇ ಬಿಟ್ಟಿದೀನಿ. ಅಪರೂಪಕ್ಕೊಮ್ಮೆಯಾದ್ರೂ ಇಣುಕಿ ನೋಡಿ ಸಹಿಸಿಕೊಂಡು ಸಲಹಬೇಕಾಗಿ ಕಳಕಳಿಯ ಪ್ರಾರ್ಥನೆ.