ಸೋಮವಾರದ ಶನಿ...

"ವಿಶ್ವಾ..." ಎಂಬ ಕೂಗು ಕೇಳಿ ಕಿಟಕಿಯ ಬಳಿ "ಶತಾಬ್ದಿ ಎಕ್ಸ್ ಪ್ರೆಸ್" ಗೆ ಕಾಯ್ತಾ ಇದ್ದ ವಿಶ್ವನಾಥ ತನ್ನ ಟೇಬಲ್ ಬಳಿ ಓಡಿ ಬಂದು ಪುಸ್ತಕ ಹಿಡಿದು ಕುಳಿತ. ಇದು ನಿತ್ಯದ ದಿನಚರಿ. "ವಿಶ್ವಾ ಕೂಗಿದರೆ ಓ ಹೇಳೋಕೆ ಆಗಲ್ವಾ...? ಕಿವಿ ಕೆಪ್ಪಾಯ್ತು ಎಂಟೇ ವರ್ಷಕ್ಕೆ...ಬಾ ತಿಂಡಿಗೆ" ಎನ್ನುತ್ತಾ ರೂಮಿಗೆ ಬಂದ ಅಮ್ಮ "ಏನೋ ಓದೋ ನಾಟಕ ಆಡ್ತಿಯಾ....?..." ನಾಟಕ ಆಡುತ್ತಿರುಹುದರಲ್ಲಿ ಅನುಮಾನವಿಲ್ಲದಿದ್ದರೂ ಅದು ಅಮ್ಮನಿಗೆ ಗೊತ್ತಾದದ್ದು ಹೇಗೆಂದು ತಿಳಿಯದ ವಿಶ್ವ ಸುಮ್ಮನೆ ಅಮ್ಮನ್ನ ನೋಡ್ತಾ ಇದ್ದ. "ಯಾರಿಗಾಗಿ ಓದ್ತಿಯ..? ಓದಿದ್ರೆ ನಿಂಗೆ ಮಾರ್ಕ್ಸ್ ಬರೋದು... ಹೀಗೆಲ್ಲ ನಾಟಕ ಯಾಕೆ ಆಡ್ತೀಯ...? ಓದೋದಾದ್ರೆ ಪುಸ್ತಕಾನ ಸರಿಯಾಗಿ ಇಟ್ಕೊಂಡ್ ಓದು.....ಸರಿ ಈಗ ತಿಂಡಿಗೆ ಬಾ...."ಟೀಚರ್ ಇರೋದೇ ತಾವು ಮಾರ್ಕ್ಸ್ ತೆಗೆಯದೆ ಇರದಂತೆ ನೋಡಿಕೊಳ್ಳ(ಲ್ಲ)ಲೆಂದು ಅಂತ ತಿಳಿದಿದ್ದ ವಿಶ್ವ ಯಾವತ್ತೂ ಮಾರ್ಕ್ಸ್ ಬಗ್ಗೆ ಯೋಚಿಸಿದವನಲ್ಲ. ಅಮ್ಮನ ಮಾತಿನಿಂದ ಹಿಡಿದ ಪುಸ್ತಕ ತಲೆಕೆಳಕಾಗಿದೆ ಎಂದು ತಿಳಿದ. ಹ್ಮ ಎಂದದ್ದು ಗಂಟಲಲ್ಲೇ ಉಳಿದರೂ ಇವನ ಉತ್ತರಕ್ಕೆ ಕಾಯದ ಅಮ್ಮ ಹೋಗಿಯಾಗಿತ್ತು.ಇನ್ನೂ ಎಷ್ಟೇ ಗಡಿಬಿಡಿಯಾದ್ರೂ ಪುಸ್ತಕಾನ ಸರಿಯಾಗಿ ಹಿಡಿಯಬೇಕು ಎಂದು ನಿರ್ದರಿಸಿ ಮತ್ತೆ ಕಿಟಕಿಯ ಬಳಿ ಹೋದ. ಕಿಟಕಿಯ ಕೊನೆಯ ಎರಡು ಉದ್ದನೆ ಸರಳುಗಳನ್ನು ತನ್ನೆರಡೂ ಕೈಗಳಿಂದ ಹಿಡಿದು, ಮಧ್ಯದೆರದು ಸರಳುಗಳ ನಡುವೆ ಮುಖ ಹುದುಗಿಸಿ ಮತ್ತೆ "ಶತಾಬ್ದಿ ಎಕ್ಸ್ ಪ್ರೆಸ್" ಗಾಗಿ ಕಾಯುತ್ತ ನಿಂತ ಅದರ ಬರುವಿಕೆಯ ದಿಕ್ಕನ್ನೇ ನೋಡುತ್ತಾ."ಶತಾಬ್ದಿ ಎಕ್ಸ್ ಪ್ರೆಸ್" ನ ಸಮಯ ಪಾಲನೆಯಲ್ಲಿ ನಂಬಿಕೆ ಇದ್ದ ವಿಶ್ವನಿಗೆ ಇವತ್ತು ತಿಂಡಿ ಬೇಗನೆ ಆಯಿತೆಂದೇ ಅನ್ನಿಸುತ್ತಿತ್ತು.ನಾಳೆಯಿಂದ ಸರಿಯಾಗಿ ಎಂಟು ಗಂಟೆಗೆ ತಿಂಡಿ ಮಾಡಲು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಕೂ...ಎಂದು ದೂರದಲ್ಲೆಲ್ಲೋ ರೈಲು ಕೂಗಿದ ಶಬ್ದ. ರೈಲು ಬರುವ ದಿಕ್ಕನ್ನು ಮತ್ತಷ್ಟು ಕುತೂಹಲದಿಂದ ನೋಡುತ್ತಾ ನಿಂತ. ಕಿಟಕಿಯ ಸರಳುಗಳ ನಡುವೆ ಮತ್ತಷ್ಟು ಜಾಗ ಇದ್ದಿದ್ರೆ ಬಹುಷಃ ಮುಖ ಹೊರಗೆ ಇರುತಿತ್ತೇನೋ. "ಶತಾಬ್ದಿ ಎಕ್ಸ್ ಪ್ರೆಸ್" ಎಂಥ ರೈಲು...! ಕೆಲವು ಸಲ ವಿಮಾನವನೂ ಹಿಂದೆ ಹಾಕುಹುದಂತೆ...! ಓ..ಬಂತು....ಹೋಯ್ತು....."ವಿಶ್ವ...ತಿಂಡಿ " ಮತ್ತೆ ಅಮ್ಮನ ಕೂಗು. ರೈಲು ಕಾಣುವವರೆಗೂ ಕಾಲು ನೀಗಿಕೊಂಡೆ ನೋಡಿದ್ದರಿಂದ ಪಾದ ನೋಯುತ್ತಿತ್ತು. ನಾಳೆ ಸ್ಟೂಲ್ ಹಾಕಿಕೊಂಡು ಕಾಲು ನೋವಾಗದಂತೆ ಅದರ ಮೇಲೇ ನಿಂತು ನೋಡಬೇಕೆಂದು ತೀರ್ಮಾನಿಸಿ ತಿಂಡಿಗಾಗಿ ಅಡಿಗೆ ಮನೆಯತ್ತ ಕಾಲೆಳೆದೆ.
            ತಿಂಡಿ  ತಿಂದು ಮತ್ತೆ ರೂಮಿಗೆ ಬಂದಾಗಲೇ ನೆನಪಾಗಿದ್ದು ಇಂಗ್ಲಿಷ್ ಹೋಂ ವರ್ಕ್ ಇನ್ನೂ ಆಗಿಲ್ಲ ಎಂದು.ಸೋಮವಾರದ ಶನಿ ವಿಶ್ವನನ್ನು ಬಿದುವಂತೆಯೇ ಇಲ್ಲಾ. ಎಲ್ಲ ದಿನಗಳಿಗಿಂತ ಹೆಚ್ಚು ದ್ವೇಷಿಸುವ ದಿನ ಅಂದ್ರೆ ಸೋಮವಾರ. ಭಾನುವಾರದ ಆಟ, ಸುತ್ತೋದು, ಟಿವಿ ಎಲ್ಲದರಿಂದ ಹೊರಬಂದು ಶಾಲೆಗೇ ಹೋಗಬೇಕಾದ ಕರ್ಮ.ಅದೂ ಹೋಂ ವರ್ಕ್ ಮುಗಿಸಿ... ಪ್ರತಿ ವಾರ ಭಾನುವಾರ ಅದ ಮೇಲೇ ಸೋಮವಾರ ಬರತ್ತೆ...ಥತ್...ಹದಿನೈದು ದಿನಗಳಿಗೊಮ್ಮೆ ಬರುವನ್ತಿದ್ದಿದ್ರೆ.....ಅರೆ...ಆಗ ಒಂದು ವಾರದಲ್ಲಿ ಆರೇ ದಿನ ಇರ್ತಿತ್ತು..ಮುಂದಿನವಾರ ಏಳು ದಿನ...ಆಂ! ಆರೇ ದಿನ ಇದ್ದ ವಾರದಲ್ಲಿ ನಾಲ್ಕು ದಿನಕ್ಕೊಮ್ಮೆ ಭಾನುವಾರ ಬರುವನ್ತಿದ್ದಿದ್ರೆ... ಸರಿಯಾಗ್ತಿತ್ತು...ಈ ವಾರ ಎರಡು ಭಾನುವಾರ ಸೇರಿ ವಾರಕ್ಕೆ ಏಳು ದಿನ...ಸೋಮವಾರ ಇಲ್ಲಾ...ಮುಂದಿನ ವಾರವೂ ಏಳು ದಿನ...ಒಂದೇ ಭಾನುವಾರ.. ಮತ್ತೊಂದು ಸೋಮವಾರ.. ಉಳಿದ ದಿನಗಳು ಎಂದಿನ ವಾರದಂತೆ..ಎಂದೆಲ್ಲ ಯೋಚಿಸುತ್ತಾ ಬೇಕಾಬಿಟ್ಟಿಯಾಗಿ ಟೇಬಲ್ ಮೇಲೆಲ್ಲಾ ಬಿದ್ದಿದ್ದ ಪುಸ್ತಕದ ರಾಶಿಯಿಂದ ಸರಿಯಾಗಿ ಇಂಗ್ಲಿಷ್ ಬುಕ್ ಮತ್ತು ನೋಟ್ಸ್ ತೆಗೆದು ಪೆನ್ಸಿಲ್ ಮೆಂಡ್ ಮಾಡಿ ಮಂಚದ ಮೇಲೇ ಕೂತ ಟೇಬಲ್ ಮೇಲೇ ಪುಸ್ತಕ ಇಟ್ಟು ಬರೆಯುವಷ್ಟು ಜಾಗವಿಲ್ಲದ್ದರಿಂದ. ಇದ್ದ ೧೨ ಪಾಠದಲ್ಲಿ ಯಾವುದು ಹೋಂ ವರ್ಕ್ ಗೆ ಕೊಟ್ಟಿದ್ದಾರೆಂದು ತಿಳಿಯದೆ.ಇದ್ದದ್ದರಲ್ಲೇ ಚಿಕ್ಕದಾದ 'jack and jill' ಬರೆಯಲು ಕುಳಿತ.ಅಜ್ಜಿಯ ಮನೆಯೂ ಹೀಗೆ...ಗುಡ್ಡದ ಮೇಲೇ...ಎಷ್ಟು ಚಂದ...ಕೆಲವೊಂದು ಸಲ ಮೋಡ ಮನೆ ಒಳಗೆ ಬರತ್ತೆ...ಆದ್ರೆ ಈ ಪದ್ಯದ ಉಲ್ಟಾ..ನೀರು ತರಲಿಕ್ಕೆ ಗುಡ್ಡ ಇಳಿದು ಕೆಳಗೆ ಬರಬೇಕು. ಮುಂದಿನ ತಿಂಗಳಿಂದ ಶಾಲೆಗೇ ರಜ..ಅಜ್ಜಿ ಊರಿಗೆ ಹೋಗಬೇಕು. ಎಷ್ಟು ಚಂದ ಮರ..ಗಿಡ...ಹಸಿರು....ಮನೆ ಮುಂದೆ ನಿಂತು ನೋಡಿದ್ರೆ ಊರೆಲ್ಲ ಚಿಕ್ಕದಾಗಿ ಕಾಣತ್ತೆ..ಆಹಾ..ಎಂದೆಲ್ಲ ಯೋಚಿಸುವಾಗ ಅಲ್ಲಿಗೆ ಶತಾಬ್ದಿ ಎಕಸ್ ಪ್ರೆಸ್  ಬರಲ್ಲ  ಎಂಬ  ಕೊರತೆ  ಕಾಣಿಸಿತು. ಎಂಥ ಹಳ್ಳಿ ಕೊಂಪೆ ಎಂಬ ಬೇಸರವೂ ಹುಟ್ಟಿತು.ಇಷ್ಟೆಲ್ಲಾ ಯೋಚಿಸುತ್ತ ಬರೆಯುವಾಗ ಮದ್ಯದ ಸಾಲು ಬಿಟ್ಟು ಕೊನೆ ಸಾಲು ಬರೆದು ಮುಗಿಸಿಯಾಗಿತ್ತು. ಥತ್...ಯಾವಾಗಲು ಈ ಲೈನ್ ಬಿಟ್ಟೆ ಬರೀತೀನಿ...  ಪ್ರತಿ ಸೋಮವಾರವೂ   ಇದೇ ಪದ್ಯ ಬರೆಯುತ್ತಿದ್ದರಿಂದ ಮೂರೇ ಲೈನಿಗೆ ಮುಗಿದಾಗ ಒಂದು ಸಾಲು ಬರೆದಿಲ್ಲವೆಂದು ಗೊತ್ತಾಗಿ , ಕೊನೆ ಸಾಲು ಅಳಿಸಿ ಮತ್ತೆ ಎರಡು ಸಾಲು ಬರೆದು ಮುಗಿಸಿದ. ಗಂಟೆ ೯ ಆಗಿದ್ದರಿಂದ ಯಾವ ಪುಸ್ತಕ ಬೇಕು, ಯಾವುದು  ಬೇಡ ಎಂದು ವರ್ಗೀಕರಿಸಲು ಸಮಯವಿಲ್ಲದೆ ಎಲ್ಲಾ ಪುಸ್ತಕಗಳನ್ನು ಚೀಲದಲ್ಲಿ ಇಳಿಸಿ , ಚೀಲವನ್ನು ಹೆಗಲಿಗೇರಿಸಿ ಹೊರಟ ಶಾಲೆಯೆಡೆಗೆ.           

No comments:

Post a Comment