ಕೆಂಪು ಛತ್ರಿ ಹಾಗೂ ಸಮಾಜಸೇವೆ

ಹುಡುಗರ ಬಿಸೀನ ಕಡಿಮೆ ಮಾಡಕ್ಕೋ ಏನೋ ಅಂತೂ ಮಳೆ ಬಂದಿದೆ. ಕಳೆದ ಮಳೆಗಾಲದಲ್ಲೇ ಕಡ್ಡಿ ಮುರಿದು ಮೂಲೆ ಸೇರಿದ್ದ ಛತ್ರಿಗಳು ಜೀರ್ಣೋದ್ದಾರಗೊಂದು ರಸ್ತೆಗಿಳಿದಿವೆ. ಅದ್ಯಾಕೋ ಮಳೆ ಜೊತೆಗೆ ಹಳೆ ನೆನಪುಗಳು ಸೇರ್ಕೊಂಡ್ ಬಿಟ್ಟಿವೆ. ಇಂಥ ಭಯಂಕರ ಮಳೆ ಬಂದಾಗೆಲ್ಲ ನೆನಪಾಗೋದು ಕೆಂಪು ಛತ್ರಿಯದ್ದು.. ಸ್ಸಾರಿ... ಕೆಂಪು ಛತ್ರಿ ಹಿಡಿದ ಆ ಹುಡುಗಿಯದ್ದು. ಈಗ್ಗೆ ಒಂದಷ್ಟು ವರ್ಷದ ಹಿಂದೆ ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದೆ. ಯಾಕೆ ಅಂತ ಕೇಳಬೇಡಿ. ಇನ್ಯಾಕೆ..? ಬಸ್ಸಿಗೆ ಹೋಗೋಣ ಅಂತ. ಎಂದೂ ಸಮಯಕ್ಕೆ ಸರಿಯಾಗಿ ಬಸ್ ಬಂದ ದಾಖಲೆ ನಮ್ಮೂರ ಬಸ್ ಸ್ಟ್ಯಾಂಡ್ ಗಂತೂ ಇಲ್ಲ. ಮನಸಾರೆ ಬಯ್ಯೋದು ಅಭ್ಯಾಸ. ಬೈದಿದ್ರಿಂದ ಬಸ್ ಬರ್ದಿದ್ರು ಮನಸ್ಸಿಗಂತು ಸಮಾಧಾನ ಇದ್ದೆ ಇದೆ. ಕಾದಿದ್ದಕ್ಕಾದ್ರು ಫಲ  ಇದ್ರೆ ಅದೊಂಥರ.. ಈ ಸರ್ಕಾರಿ ಬಸ್ ಗಳು ಒಂದು ದಿನ ಬಂದ್ರೆ ಮೂರು ದಿನ ಕರು ಹಾಕಿ ಕೂರತ್ತೆ. ನಮ್ಮಜ್ಜ ಮಾಡಿದ್ದ ಪುಣ್ಯ ದಿಂದಲೋ ಅಥವಾ ನಾನೂ ಸ್ನಾನ ಮಾಡಿ ಬಂದಿದ್ರಿಂದಲೋ  ಈ  ದಿನ ಕಾದಿದ್ದಕ್ಕೆ ಸಾರ್ಥಕತೆ ಸಿಕ್ತು. ದೂರದಲ್ಲಿ ನಮ್ಮೊರ ಬಸ್ ಗಬ್ಬದ ಎಮ್ಮೆ ತರ ಬರ್ತಾ ಇತ್ತು. ಅದೇ ಸಮಯಕ್ಕೆ ಎಂಟ್ರಿ ಆಯಿತು ಕಣ್ರೀ ಕಥೆ ಹೀರೋಯಿನ್ ದು. ಅದೇ ಹೇಳಿದ್ನಲ.. ಕೆಂಪು  ಛತ್ರಿಯ ಹುಡುಗಿಯದ್ದು. ಅಷ್ಟು ಹೊತ್ತು ಎಲ್ಲಿದ್ಲೋ ಏನೋ ಧಿಡೀರನೆ ಎದುರಿಗೆ ಬಂದ್ಲು ಅದೇ ಕೆಂಪು ಛತ್ರಿ ಹಿಡಿದು. "ಅರೆ ನೀನೇನೋ... ಎಷ್ಟು ದಿನ ಆಯ್ತು ನಿನ್ನ ನೋಡಿ.. ಗುರುತೇ ಸಿಗಲ್ಲ.. ತುಂಬಾ ತೆಳ್ಳಗೆ ಆಗಿದ್ದಿ...!" ಅಂದ್ಲು. ಒಂದರೆ ಕ್ಷಣ ನಾನೂ ಕಕ್ಕಾಬಿಕ್ಕಿ. ನನ್ಯಾವಾಗ ದಪ್ಪ ಇದ್ದೆ ಅನ್ನೋ ಪ್ರಶ್ನೆ ಬೇರೆ ಮನಸ್ಸಲ್ಲಿ. "ಅಯ್ಯೋ.. ಅದ್ಯಾಕ್ ಹಂಗೆ ನೋಡ್ತಿ...? ನನ್ನ ಗುರುತು ಹತ್ಲಿಲ್ವೆ...? ನಾನೂ ಸಂಗೀತ... ನಿನ್ನ PUC ಕ್ಲಾಸ್ ಮೇಟ್". ಗೀತ, ಸಂಗೀತ ಇಂತ ಹೆಸರಿನವರ್ಯಾರು ಇದ್ದ ನೆನಪು ಹತ್ತಲಿಲ್ಲ. ಆದ್ರು ಹುಡುಗಿ ಮಾತಿಗೆ ಇಲ್ಲ ಅಂದು ಅಭ್ಯಾಸ ಇಲ್ಲ. "ಓ ಸಂಗೀತ.. ಅಯ್ಯೋ ನಿನ್ನ ಮರಿಯಕ್ಕಾಗತ್ತ..! ತುಂಬಾ ಬದಲಾಗಿದ್ದೀಯ. ಸ್ವಲ್ಪ ದಪ್ಪ ಆದೆ ಅನ್ಸತ್ತೆ ಅಲಾ" ಅಂದು ನಕ್ಕೆ.. ನಕ್ಕಿದ್ದು ನನಗೇ ಅನುಮಾನ ಬರುವಂತೆ. ಅಷ್ಟೊತ್ತಿಗೆ ಬಸ್ ಬಂದು ನಿಂತಿತ್ತು. ಜನ ಎಲ್ಲ ಬಸ್ ಹತ್ತುತ್ತ ಇದ್ರು . ಬಸ್ ಹತ್ತಕ್ಕೆ ನನಗೇನೂ ಅವಸರ ಇರ್ಲಿಲ್ಲ. ಎಷ್ಟಂದ್ರು ೧೫ ನಿಮಿಷ ಅಲ್ಲೆ ನಿಂತಿರತ್ತೆ. ಅದೂ ಅಲ್ದೆ ಜೀವನದಲ್ಲಿ ಮೊದಲ ಬಾರಿಗೆ ಸಂಗೀತ ಕೇಳ್ತಾ ಇದೆ. ಶ್ರುತಿ ತಪ್ಪದಿದ್ರೆ ಸಾಕು. " ಏ.. ನಿಂಗೊತ್ತಾ.. ನಮ್ಮ ಇಂಗ್ಲಿಷ್ ಟೀಚರ್ ಸತ್ತೂದ್ರಂತೆ", ಅಂದ ಧ್ವನಿ ಸ್ವಲ್ಪ ನಡುಗ್ತಾ ಇದ್ದಂತೆ ಅನ್ಸ್ತು. "ಯಾರು.. KVS ಸಾ ?" ಅಂದೆ. ಹು ಅಂದಿದ್ದು ಗಂಟಲಲ್ಲೇ ಉಳೀತು. ಅಥವಾ ನಂಗೆ ಹಾಗೆ ಅನಿಸ್ತು. ಮೇಷ್ಟ್ರು ಸತ್ರು ಅನ್ನೋ ದುಃಖ ಹುಡುಗಿಯ ಕಳೆಗುಂದಿದ ಮುಖ ನೋಡಿ ಇಮ್ಮುಡಿಗೊಂಡಿತು. ಆದ್ರು ನಿಜವಾದ ದುಃಖ ಮೇಷ್ಟ್ರು ಸತ್ತಿದ್ದಕ್ಕ ಅಥವಾ ಹುಡುಗಿಯ ಬೇಸರಕ್ಕ ಕೊನೆಗೂ ತಿಳೀಲೇ ಇಲ್ಲ. ಏನಂದ್ರು ಮೇಷ್ಟ್ರು ಹಿಂಗೆ ಹೇಳದೆ ಕೇಳದೆ ಸಾಯಬಾರದಿತ್ತು ಅನ್ನಿ. ಅದರ ಸಲುವಾಗಿ ಒಂದೆರಡು ನಿಮಿಷ ಮೌನಾಚರಣೆ. ಮತ್ತೆ ಮಾತಿಗಿಳಿದಳು. "ಯಾವ ಕಡೆ ಹೋಗ್ತಾ ಇದ್ದಿ..?" ಸಂಗೀತದ ಅದ್ಯಾವುದೋ ರಾಗದಲ್ಲೇ ಹೇಳಿದಳು. ಮೂಲತಃ ಎಲ್ಲಿಗೋ ಹೊರಟಿದ್ದೆ ಅನ್ನೋದೇ ಮರೆತಿತ್ತು ಸಂಗೀತದ ಗುಂಗಿನಲ್ಲಿ. ನೆನಪು ಮಾಡಿಕೊಂಡು ಹೇಳಿದೆ " ಈ ಬಸ್ ಎಲ್ಲೀವರೆಗೆ ಹೋಗತ್ತೋ ಅಲ್ಲೆವರೆಗೆ " ಅಂತ. " ಅಂದ್ರೆ ಲಾಸ್ಟ್ ಸ್ಟಾಪ್..? ಸರಿ, ನಾನೂ ಅಲ್ಲಿಗೆ ಹೊರಟಿದ್ದೆ. ಬಾ ಹೋಗೋಣ. ನಾನಾ ticket ತೆಗ್ಸೋ" ಅಂದ್ಲು. ಅದ್ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸ್ತು. ಹುಡುಗಿ  ನನ್ನ ಕ್ಲಾಸ್ ಮೇಟ್ ಹೌದೋ ಅಲ್ವೋ ಅಂತಾನೇ ನೆನಪಿಗೆ ಬರ್ತಾ ಇಲ್ಲ. ನನಗಂತೂ ನನ್ನ ನೆನಪಿನ ಶಕ್ತಿ ಮೇಲೆ ಅಪಾರ ನಂಬಿಕೆ. ಇತ್ತೀಚಿಗೆ ಮರೆತ ನೆನಪೇ ಇಲ್ಲ. ಅದರಲ್ಲೂ ಹುಡುಗಿ ಹೆಸರು ಮರೆಯೋದ.! ಮುಂದಿನ ಯೋಚನೆಗೆ ಬ್ರೇಕ್ ಬಿತ್ತು,, " ಅಯ್ಯೋ ಇನ್ನೂ ನಿನ್ನ ಕಂಜೂಸ್  ಬುದ್ದಿ ಬಿಟ್ಟಿಲ್ವ...? ೧೦ ರುಪಾಯಿಗೂ ಮುಖ ನೋಡ್ತಿಯಲ್ಲ" ಅಂದಾಗ.  "ಏ ಹಂಗೇನಿಲ್ಲ..ನೀನು ಅಲ್ಲಿಗೆ ಯಾಕೆ ಬರ್ತಿದೀಯ  ಅಂತ ಯೋಚನೆ ಮಾಡ್ತಿದ್ದೆ ಅಷ್ಟೇ. ಸರಿ, ಹತ್ತು ಬಸ್" ಅಂದೆ. ಅಂತೂ ಬಸ್ ಹತ್ತಿ ಕುಳಿತಿದ್ದಾಯ್ತು. ಕಂಡಕ್ಟರ್ ಮಹಾಶಯಂಗೆ ದುಡ್ಡು ಕೊಟ್ಟು ಟಿಕೆಟ್ ತಗೊಂಡಿದ್ದು ಆಯ್ತು. ಯಾಕೋ ಯಾರೋ ನಕ್ಕಂತೆ..! ಜೇಬಿನಲ್ಲಿ ಕುಳಿತ ಟಿಕೆಟ್ ಆಗಿರಬಹುದೇ ಅನ್ನೋ ಕೆಟ್ಟ ಅನುಮಾನ. ನೆನಪಿನ ಅಳಕ್ಕೆ ಹೊಕ್ಕಿ ನೋಡಿದ್ರೂ ಯಾರ್ಯಾರಿದ್ದೋ ಜುಮುಕಿ, ಬಳೆ ಎಲ್ಲ ಸಿಗತ್ತೆ, ಇವಳ ಮುಖ ಕಾಣ್ತಾಯಿಲ್ಲ. ಇಂಥ ಸಂಗೀತ ಎಂದು ಕೇಳಿದ್ದಿಲ್ಲ. ಹೊಸ ರಾಗ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸ ಹಾಗು ಅವಶ್ಯಕತೆ ಇಲ್ಲ. ಹೆಂಗು ಅವಳೇ ನನ್ನ ಕ್ಲಾಸ್ ಮೇಟ್ ಅಂದಿದಾಳಲ್ಲ, ಅದರಲ್ಲೋ ನನ್ನ ಕಂಜೂಸ್ ಬುದ್ದಿ ಬಗ್ಗೆ ಹೇಳ್ತಾ ಇದಾಳೆ ಅಂದ್ರೆ ನನ್ನ ಪರಿಚಯ ಇರತ್ತೆ ಅನ್ನಿಸಿ ಸಣ್ಣ ನಿದ್ದೆಗೆ ಶರಣು ಹೋದೆ. "ಯಾರ್ರಿ last stop ?" ಎಂಬ ಧ್ವನಿ ಕೇಳಿದ ಮೇಲೇನೆ ಎಚ್ಚರ ಆಗಿದ್ದು. ಕಣ್ಣು ಬಿಟ್ಟು ನೋಡಿದ್ರೆ ಹುಡುಗಿ ಮುಂದಿನ ಬಾಗಿಲಲ್ಲಿ ಇಳಿತಾ ಇದೆ. ಸ್ವಲ್ಪ ವೇಗದಿಂದಲೇ ಬಸ್ ಇಳಿದು ಅತ್ತ ಕಡೆ ಹೋಗ್ತಾ ಇದ್ದವಳನ್ನ "ಸಂಗೀತ" ಎಂದು ಕೂಗಿದೆ. ನಿಂತಳು. ಹತ್ರ ಹೋದ್ರೆ ಹಿಂಗನ್ನೋದೆ...! "ನಾನು ಸಂಗೀತ ಅಲ್ಲ". ಅಂತೂ ಅಪಶ್ರುತಿ ಬಂದೇ  ಬಿಡ್ತು ಸಂಗೀತದಲ್ಲಿ. ಮತ್ತೆ..? ಎಂದೆ. "ನಾನು ರಮ್ಯ. ನಿಮಗೆ ಮೋಸ ಮಾಡಿದ್ದಕ್ಕೆ ನಿಜವಾಗಲು ಸ್ಸಾರಿ. ನಾನು ಮುಂಬಯಿಯವಳು. ನನ್ನ ಫ್ರೆಂಡ್ ಮನೆಗೆ ಬಂದಿದ್ದೆ. ಇವತ್ತು ಪೇಟೆ ಸುತ್ತೋಕೆ ಅಂತ ಹೋಗಿದ್ದೆ. ಅಲ್ಲಿ ನನ್ನ ಪರ್ಸ್ ಕಳೆದು ಹೋಯ್ತು. ಹೆಂಗಪ್ಪ ಬರೋದು ಅಂತ ಯೋಚನೆ ಮಾಡ್ತಾ ಇದ್ದಾಗಲೇ ನೀವು ಕಂಡ್ರಿ. ಕಾಳು ಹಾಕಿದೆ. ಆಯ್ಕಂದ್ರಿ. anyway thank you . ನಾಳೆ ಬೆಳಗ್ಗೆ ಮೊದಲ ಬಸ್ ಗೆ ವಾಪಸ್ ಹೋಗ್ತಾ ಇದೀನಿ. ಸರಿಯಾದ ಸಮಯಕ್ಕೆ ಬಸ್ ಸ್ಟ್ಯಾಂಡ್ ಗೆ ಬಂದ್ರೆ ನಿಮ್ಮ ೧೦ ರುಪಾಯಿ ಕೊಡ್ತೀನಿ. ಸರಿ.. ನಾನಿನ್ನು ಬರ್ತೀನಿ. KVS ಬದುಕಿದ್ರೂ ಇರಬಹುದು ವಿಚಾರಿಸಿ ನೋಡಿ" ಎಂದು ಹೊರಟೆ ಹೋದ್ಲು ಕೆಂಪು ಛತ್ರಿ ಹಿಡಿದು. ಹೌದು... ನಿಜವಾಗಲು ನಕ್ಕಿದ್ದು ಕೇಳ್ತು. ಜೇಬಿನಲ್ಲಿದ್ದ ಟಿಕೆಟ್ ನಗ್ತಾ ಉಂಟು. ಅದನ್ನು ತೆಗೆದು ಬಿಸಾಕಿ, ಅಯ್ಯೋ ಮೋಸ ಹೋದ್ರೆ ಏನಂತೆ..? ಸಹಾಯ ಮಾಡಿದ ಹಾಗೆ ಆಯ್ತು ಎಂದು ಸಮಾಧಾನಪಟ್ಕೊಳ್ತಾ ನಾನೂ ಹೊರಟೆ, ಸಮಾಜ ಸೇವೆಯ ಗುಂಗಿನಲ್ಲಿ. 

1 comment: