ಅಮ್ಮ ಹೇಳುತ್ತಿದ್ದ ಕಥೆ

ಒಂದಲ್ಲಾ ಒಂದು ಊರಲ್ಲಿ ಒಬ್ಬ ಇದ್ನಂತೆ. ಅವನ ಮನೆಯ ಮುಂದೆ ಒಂದು ಹಲಸಿನ ಮರ ಇತ್ತಂತೆ. ಆಗಿನ ಕಾಲದಲ್ಲಿ ಹಲಸಿನ ಹಣ್ಣಿಗೆ ಮುಳ್ಳು ಇರಲಿಲ್ವಂತೆ. ಒಂದಿನ ಒದ್ದ ಭಿಕ್ಷುಕ ಬಂದು ಆ ಮನೆಯ ಯಜಮಾನನ ಹತ್ರ ಹಣ್ಣು ಕೇಳಿದನಂತೆ. ಅವ ಕೊಡ್ಲಿಲ್ವಂತೆ. ಭಿಕ್ಷುಕನಿಗೆ ಸಿಟ್ಟು ಬಂದು ಹಣ್ಣಿನ ತುಂಬಾ ಮುಳ್ಳು ಬರಲಿ ಅಂತ ಶಾಪ ಕೊಟ್ನಂತೆ. ಅವತ್ತಿಂದ ಹಲಸಿನ ಹಣ್ಣಿನ ಮೇಲೆ ಮುಳ್ಳು ಬಂತಂತೆ. ಶಿವ ಆ ಯಜಮಾನನನ್ನ ಪರೀಕ್ಷೆ ಮಾಡಬೇಕು ಅಂತ ಭಿಕ್ಷುಕನ ರೂಪದಲ್ಲಿ ಬಂದಿದ್ನಂತೆ. ಅಮ್ಮ ಹೇಳುತ್ತಿದ್ದ ಕಥೆ ಈಗಲೂ ಕಣ್ಣಿಗೆ ಕಟ್ಟೋ ಹಾಗಿದೆ. ಪ್ರತಿ ದಿನ ಅಮ್ಮ ಕಥೆ ಹೇಳಲೇ ಬೇಕು, ನಾನು ಕಥೆ ಕೇಳ್ತಾ ಮಲಗಲೇ ಬೇಕು. ಎಷ್ಟೋ ಸಲ ಅರ್ಧ ಕಥೆಗೆ ನಿದ್ದೆ ಬರ್ತಿದಿದ್ದೂ ಉಂಟು. ಮರುದಿನ ಬೆಳಗ್ಗೆ ಮತ್ತೆ ಆ ಕಥೆಯ ಮುಂದುವರಿದ ಭಾಗ ಹೇಳು ಅಂತ ಪೀಡಿಸ್ತಿದ್ದೆ. ಅಮ್ಮನ ಕಥೆಯಲ್ಲಿ ಮೊಲ ಮಾತಾಡ್ತಿತ್ತು, ಕಲ್ಲಿನ ಬಸವ ಎದ್ದು ನಿಲ್ತಾ ಇತ್ತು, ಸೂರ್ಯಂಗೇ ಕೋಪ ಬರ್ತಿತ್ತು, ಹೂವು ಹುಡುಗಿಯಾಗ್ತಿತ್ತು, ಹುಡುಗಿ ಹಾವಾಗ್ತಿದ್ಲು, ನರಿ ಮೋಸ ಮಾಡ್ತಿತ್ತು. ಎಂಥಾ ಅದ್ಬುತ ಕಲ್ಪನೆಗಳು. ಪ್ರಪಂಚದಲ್ಲಿರೋ ಎಲ್ಲಾ ನಿರ್ಜೀವ ವಸ್ತುಗಳಿಗೂ ಜೀವ ತುಂಬುವ ಶಕ್ತಿ ಅಮ್ಮನಿಗಿತ್ತು. ಹತ್ತನೇ ಕ್ಲಾಸ್ ಫೇಲಾದ ಅಮ್ಮ ಕಥೆಗಳಲ್ಲಿ ಒಂದು ಅದ್ಬುತ ಲೋಕವನ್ನೇ ತೋರಿಸ್ತಿದ್ಲು. ಅದೆಷ್ಟೋ ಪ್ರಶ್ನೆಗಳಿಗೆ ಅಮ್ಮನ ಕಥೆಗಳಲ್ಲಿ ಉತ್ತರ ಇರ್ತ ಇತ್ತು. ಅಮ್ಮ ತೀರಾ ಕಲಿತವಳಲ್ಲ, ಹಾಗೆಂದು ಅವಳೇನು ಅವಿದ್ಯಾವಂತಳಲ್ಲ. ಅವಳ ಕಥೆಗಳಲ್ಲಿ ವೈಚಾರಿಕತೆಯಿತ್ತು, ಅನುಭವವಿತ್ತು, ನೀತಿಯಿತ್ತು ಹಾಗೂ ಮುಖ್ಯವಾಗಿ , ಹೇಳೋ ಅವಳಲ್ಲಿ, ಕೇಳೋ ನನ್ನಲ್ಲಿ ಖುಷಿ ಇತ್ತು. ಅಮ್ಮನ ಕಥೆಗೆ ಎಂಥದ್ದೆಲ್ಲ ವಸ್ತುವಾಗ್ತಿತ್ತು. ಕಾಗೆಯ ಬಾಯಾರಿಕೆ, ನರಿಯ ಕುತಂತ್ರ, ಮಂತ್ರಿಯ ನಿಷ್ಠೆ, ಬಾನಂಗಳದ ಚಂದಮಾಮ, ಹೊಂಡದ  ಕಪ್ಪೆ ಎಲ್ಲವೂ ವಸ್ತುಗಳೇ. ಪಾತಾಳದಿಂದ ನಾಗಕನ್ಯೆಯರನ್ನು  ಕರೆತರ್ತಿದ್ಲು, ಗಂಧರ್ವಲೋಕದಿಂದ ಗಂಧರ್ವರು ಹಾಡು ಹೇಳ್ತಾಯಿದ್ರು, ಸ್ವರ್ಗದಿಂದ ದೇವತೆಗಳು ಬರ್ತಿದ್ರು, ಅದ್ಯಾವುದೋ ಲೋಕದಿಂದ ರಾಕ್ಷಸರುಗಳನ್ನೇ ಎಳೆದು ತಂದು ಕಣ್ಣ ಮುಂದೆ ಇಡ್ತಾ ಇದ್ಲು. ಅಮ್ಮ ಪುಸ್ತಕ ಓದಿ ಕಥೆ ಕಲಿತವಳಲ್ಲ. ಕಥೆ ಹೇಳಲು ಅಮ್ಮನಿಗೆ ಟಿವಿಯನ್ನೂ ನೋಡಬೇಕಿಲ್ಲ. ಆಕೆಗೆ ಕಥೆ ಹೇಳುವುದೆಂದರೆ ನೀರು ಕುಡಿದಷ್ಟೇ ಸಲೀಸು, ಮಾತಾಡುವಷ್ಟೇ ಸರಾಗ. ಆಕೆಯ ಉಸಿರಲ್ಲಿ ಕಥೆಯಿತ್ತು, ಆ ಕಥೆಗಳಿಗೂ ಜೀವ ಇತ್ತು. ಆಕೆಗೆ ಕಥೆ ಹೇಳುವ ಕಲೆ ತಿಳಿದಿತ್ತು. ದೆವ್ವ, ಭೂತ, ಪಿಶಾಚಿಗಳ ಕಥೆ ಹೇಳಿ ಹೆದರಿಸ್ತಿದ್ಲು , ಮಾಯಾಲೋಕದ ಕಿನ್ನರರ ಕಥೆ ಹೇಳಿ ಮೋಡಿ ಮಾಡ್ತಿದ್ಲು, ದೇವರ ಕಥೆ ಹೇಳಿ ಭಕ್ತಿ ಹುಟ್ಟಿಸ್ತಿದ್ಲು, ಅದ್ಯಾವುದೋ ಕಥೆ ಹೇಳಿ ನಗುಸ್ತಿದ್ಲು, ಅಳುಸ್ತಿದ್ಲು. ನಮ್ಮನ್ನ ಕಥೆಯ ಒಂದು ಭಾಗವನ್ನಾಗಿಸಿಬಿಡ್ತಿದ್ಲು.  ನಮ್ಮ ನಿಮ್ಮೆಲ್ಲರ ಇಮ್ಯಾಜಿನೇಶನ್ ಪವರ್ ಇದ್ಯಲಾ ಅದರ ಮೂಲ ಬಹುಶಃ ನಾವು ಹಿಂದೆಂದೋ ಕೇಳಿದ ಕಥೆ.   ಇದು ನನ್ನೊಬ್ಬ ಅಮ್ಮನ ಕಥೆಯಲ್ಲ. ನಮ್ಮ ನಿಮ್ಮೆಲ್ಲರ ತಾಯಿಯೂ ಕಥೆಗಳ ಗುಚ್ಛ. ಅವರಲ್ಲಿ ಹೇಳಿದಷ್ಟೂ ಕಥೆಯಿದೆ. ಅವರೊಂದು ಕಥೆಗಳ ಖಜಾನೆ. ಅವರಲ್ಲೊಬ್ಬ ಅದ್ಬುತ ಕಥೆಗಾರ ಕುಳಿತುಬಿಟ್ಟಿದ್ದಾನೆ. ಆದರೆ... ಈಗ ನಾವು..? ನಮಗೆ ಸಿನಿಮಾದ ಕಥೆಬಿಟ್ಟು ಬೇರೆ ಕಥೆ ಗೊತ್ತಿಲ್ಲ. ಕಥೆಗಳ ಸೃಜನಶೀಲತೆ ನಮ್ಮಲ್ಲಿಲ್ಲ. ಲವ್ ಸ್ಟೋರಿ , ಆಕ್ಷನ್ ಫಿಲಂ ಗಳ ಆಚೆಗೆ ಬೇರೆಯದೇ ಆದ, ಒಂದಷ್ಟು ನೀತಿಯಿರುವ, ನಮ್ಮಲ್ಲೊಂದು ವೈಚಾರಿಕತೆ ಮೂಡಿಸುವ ಕಥೆಗಳ ಕಲ್ಪನೆಯೂ ನಮಗೀಗ ಬರಲಿಕ್ಕಿಲ್ಲ. ಕಥೆ ಹೇಳೋ ಕಲೆ ನಮ್ಮಲ್ಲಿಲ್ಲ. ಹೇಳೋ ಕಥೆ ಕೇಳುವ ವ್ಯವಧಾನವೂ ಬಹುಶಃ ಈಗ ನಮಗೆ ಹಾಗು ಈಗಿನ ಚಿಕ್ಕ ಮಕ್ಕಳಿಗೆ ಇರಲಿಕ್ಕಿಲ್ಲ. ಟಿವಿ ಸೀರಿಯಲ್ ಗಳಲ್ಲಿ, ಮೊಬೈಲ್ ಫೋನುಗಳಲ್ಲಿ, ಕಂಪ್ಯೂಟರ್ ಗೇಮ್ ಗಳಲ್ಲಿ, ಸಿನಿಮಾ ಹಾಡುಗಳಲ್ಲಿ ಕಥೆ ಕಾಣೆಯಾಗಿದೆ. ಅಮ್ಮನ ಕಥೆಗಳಲ್ಲಿ ಅನ್ಯಾಯ ಇರ್ತಾ ಇರ್ಲಿಲ್ಲ, ರಕ್ತ ಇರ್ತಿರಲಿಲ್ಲ, ಮುಖವಾಡ  ಇರ್ತಿರಲಿಲ್ಲ ಅಥವಾ ಅವೆಲ್ಲ ಇದ್ರೂ ಕೊನೆಗೊಂದು ಹ್ಯಾಪಿ ಎಂಡಿಂಗ್ ಇತ್ತು, ನೈತಿಕತೆ ಮರೆತ ಎಲ್ಲರಿಗೂ ಶಿಕ್ಷೆ ಆಗ್ತಾ ಇತ್ತು. ನಮ್ಮ ತಲೆಯೊಳಗೆ  ಅಂತಹ ನೈತಿಕತೆ ಮೆರೆಯುವ  ಒಂದೇ ಒಂದು ಸ್ವಂತ ಕಥೆ ಬರಲೂ ಸಾಧ್ಯವಿಲ್ಲ ಹಾಗು ಹಿಂದೆಂದೋ ಕೇಳಿದ ಕಥೆಯನ್ನ ಅಮ್ಮ ಹೇಳಿದಷ್ಟೇ ರಸವತ್ತಾಗಿ ಹೇಳುವ ಕಲೆಯೂ ನಮಗೆ ಗೊತ್ತಿಲ್ಲ. ಕಥೆಯ ಕೊಂಡಿ ಕಳಚುತ್ತಾ ಇದೆ. ಸಿಕ್ಕಾಪಟ್ಟೆ ಬಿಜಿಯಾಗಿರುವ ಅಪ್ಪ ಹಾಗು ಟಿವಿ ಸೀರಿಯಲ್ಲುಗಳಲ್ಲೇ ಮುಳುಗಿ ಹೋಗಿರುವ ಅಮ್ಮ... ಇವರಿಬ್ಬರ ನಡುವೆ ಕಾಣೆಯಾಗುತ್ತಿರುವ ಕಥೆ.ಹೀಗೆಯೇ ಆದಲ್ಲಿ ಮುಂದೊಂದು ದಿನ ವಿಶ್ವವಿದ್ಯಾನಿಲಯಗಳು ಕಥೆ ಹೇಳುವುದು  ಕಲಿಸುವ ಕೋರ್ಸು ಪ್ರಾರಭಿಸಬೇಕಾದೀತು. ನಾವೇ ನಮ್ಮ ಯಾಂತ್ರಿಕ ಜೀವನ ಶೈಲಿಯಲ್ಲಿ ಕೊಂದ ಕಥೆಗಾರ ಮತ್ತೆ ಹುಟ್ಟಿ ಬರಲಿ, ಇಂದಿನ ಮಕ್ಕಳು ಹೋಂ ವರ್ಕ್ , ಟ್ಯೂಶನ್ ಗಳ ಒತ್ತಡದಿಂದ ಹೊರಬಂದು ರಾತ್ರಿಯಾದರೂ ನೆಮ್ಮದಿಯಿಂದ ನಿದ್ರಿಸಲಿ.

No comments:

Post a Comment