ಹಳೇ ಗಾಯ.. ಹೊಸ ಕೆರೆತ

ಯಾಕೊ ಭಯಂಕರ ಬೇಜಾರು. ಹೊಸ ಪ್ಯಾಂಟು ಹರಿದಾಗ, ಹಳೆ ಹುಡುಗಿ ನೆನಪಾದಾಗ ಇಂಥ ಬೇಜಾರು ಆಗೋದು ಸಹಜ. ಸದ್ಯಕ್ಕೆ ಹೊಸ ಪ್ಯಾಂಟ್ ತಗೋಂಡಿಲ್ಲ, ಹಳೇ ಹುಡುಗಿ ನೆನಪು ಕಾಡ್ತಾ ಇದೆ. ಗಾಯ ಹಳೇದೆ, ಕೆರೆತ ಹೊಸಾದು. ಸುತ್ತ-ಮುತ್ತ ಎಷ್ಟು ಜನ ಇದ್ರೂ ತೀರಾ ಒಂಟಿತನ ಕಾಡಿಬಿಡತ್ತೆ ಮನಸ್ಸಿನ ಪುಟವ ತಿರುವಿ ಹಾಕಿದಾಗ. ನೆನಪಿನ ಕಪಾಟಿನ ಕೀಲಿ ಕೈ ಸಿಗದಂತೆ ದೂರ ಎಸೆದರೂ ಮತ್ತೆ ಮತ್ತೆ ಸಿಗುತ್ತಿದೆ. ಏನು ಮಾಡೋಣ ಕೀಲಿಕೈನ..! ಅವಾಗಾವಾಗ ಅನ್ಸತ್ತೆ, ಮನುಷ್ಯಂಗೆ ಬುದ್ಧಿ ಕಡಿಮೆ ಅಂತ. ಈಗಿನ್ನೂ ಇಟ್ಟ ಕೀ ನ ಮರೀತಾನೆ, ಎಲ್ಲಿಟ್ಟೆ ಅಂತ. ಕೊಟ್ಟ ಕೈನ ನೆನಪಲ್ಲೇ ಇಟ್ಕೊಂಡು ಕೊರಗಿ, ಕೊಳೀತಾನೆ, ಸಾಯೋತಂಕ. ಈಗ ನಂಗೆ ಆಗಿದ್ದೂ ಅದೆ. ಮರೆಯಲೇಬೇಕಾದ ಸಂಗತಿಗಳು ಮರೆವ ಪ್ರಯತ್ನಕ್ಕೆ ಸವಾಲೆಸೆದು, ಮತ್ತೆ ಮತ್ತೆ ರಾಕ್ಷಸತ್ವ ಪಡೆದು ಬೆನ್ನಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಹಳೇ ಹುಡುಗಿಗೆ ಹೇಳಲೇಬೇಕಾದ ಹೊಸ ಮಾತುಗಳಿವೆ.
ನಾನು ನನ್ನನ್ನ ಇಷ್ಟಪಟ್ಟಷ್ಟು ನನ್ನ ಯಾರೂ ಇಷ್ಟಪಟ್ಟಿಲ್ಲ. ನಾನು ನನ್ನನ್ನ ಇಷ್ಟಪಟ್ಟಷ್ಟು ನಾನೂ ಯಾರನ್ನೂ ಇಷ್ಟಪಟ್ಟಿರಲಿಲ್ಲ. ನೀನು ಸಿಕ್ಕಿದೆ ಕಣೆ. ನೋಡಿದ ಕೂಡಲೆ ಎದೆಯಲ್ಲಿ ಯಾವುದೋ ಸ್ವಿಚ್ಚು ಅದುಮಿದಂಗಾಯ್ತು. ಕೊನೆಗೂ ಕರೆಂಟ್ ಬರ್ಲಿಲ್ಲ ಅನ್ನೋದು ಬೇರೆ ವಿಚಾರ. ಮೊದಲ ನೋಟಕ್ಕೇ ಪ್ರೀತಿ ಮೊಳಕೆ ಒಡೀತು. ಬರಿ ಮೊಳಕೆ ಒಡೆಯೋದೇನು, ಹೆಮ್ಮರವಾಗಿ ಹೂವನ್ನೇ ಬಿಡ್ತು. ಇನ್ನೂ ಅದೇ ಹೂವಿದೆ ಕಿವೀಲಿ. ನಮ್ಮ ಕ್ಲಾಸಲ್ಲೇ ’ಕ್ಲಾಸ್’ ಆಗಿದ್ದ ಹುಡುಗಿ ನೀನು, ನಿಂಗೆ ಮನಸ್ಸು ಕೊಟ್ಟೆ, ನೀನು ನಂಗೆ ಕೈ ಕೊಟ್ಟೆ. ಅದ್ಭುತ ಎಕ್ಸಚೇಂಜ್ ಆಫರ್..! ನಿನ್ನ ನೋಡಬೇಕು ಅಂತಾನೆ ಕಾಲೇಜಿಗೆ ಬರ್ತಾ ಇದ್ದೆ. ಹಂಗೆ ಬಂದಿದ್ರಿಂದ ನನ್ನ ಮನಸ್ಸು ಇನ್ನೂ ಗ್ಯಾರೇಜ್ ನಲ್ಲೇ ಇದೆ. ನೀನು ಕಾರಣ ಹೇಳಿ ಹೋಗಿದ್ರೆ ಬೇಜಾರು ಆಗ್ತಿರ್ಲಿಲ್ವೇನೊ. ಹೇಳದೆ ಹೋದ್ಯಲ್ಲ ಅದು ಬೇಜಾರು. ನಿಂಗೆ ಅಂತ ಹೇಳಿದ ಮಾತು ನೆನಪಿದ್ಯಾ..? ಸಾವಿರ ಸಲ ಹೇಳಿದ ಮಾತು..!
                   ಹೇಳಿಬಿಡು ಒಮ್ಮೆ ನೀ ನನಗಲ್ಲವೆಂದು
                   ಬದಲಿಸಿ ಬಿಡುವೆ ಆ ಬ್ರಹ್ಮನ ಹಣೆಬರಹವನ್ನು
ಅಂತ. ಬ್ರಹ್ಮ ಹಣೆಯಲ್ಲಿ ಬೇರೆ ಬರ್ದಿದ್ರೆ ಅಳಿಸಿ ನಿನ್ನ ಹೆಸರನ್ನೆ ಬರಿಬಹುದಿತ್ತೇನೋ..!
                   ನಿನ್ನೆದೆಯಲಿ ಬರೆಯದೆ ನನ್ಹೆಸರ
                   ಇಂಗಿಸಿ ಬಿಟ್ಟೆಯ ನನ್ನುಸಿರ...?
ಕ್ಲಾಸಲ್ಲಿ ನಿನ್ನ ಕದ್ದು, ಕದ್ದು ನೋಡೋದು, ಕೆಟ್ಟದಾಗಿ ಬರ್ದಿರೊ ನಿನ್ನ ನೋಟ್ಸ್, ರೆಕಾರ್ಡ್ ನ ಇಸ್ಕಳೋದು, ನಿನ್ನ ಹಾಸ್ಟೆಲ್ ಕಿಟಕೀನ ನಿನಗಾಗಿ ನೋಡೋದು, ಪುಸ್ತಕದ ಕೊನೆ ಪುಟದಲ್ಲಿ ನಿನ್ನದೇ ಹೆಸರು ಗೀಚೋದು, ಬೆಂಚಿನ ಮೇಲೆ ಕೆತ್ತೋದು ಮುಂತಾದ ಹಲವು ಪ್ರೀತಿಯ ಲಕ್ಷಣಗಳನ್ನ ತೋರಿಸಿದೆ, ಎಲ್ಲಾ ಹುಡುಗರಂತೆ. ನೀನು ಅದನ್ನೆಲ್ಲ ನಿರ್ಲಕ್ಷಿಸಿದೆ, ಎಲ್ಲ ಹುಡುಗಿಯರಂತೆ. ತೀರಾ ಪ್ರೀತಿ-ಗೀತಿ ಅಂತ ಮಾಡೋಕು ಮುಂಚೆ ನಿನ್ನ ಕೇಳಬೇಕಿತ್ತು ಕಣೆ
                   ಬಿಡಿಸಿ ಹೇಳಲಾರೆಯ ನನಗೂ-ನಿನಗೂ ನಂಟೇನು
                   ನೀನಿನ್ನು ನನಗೆ ಕನ್ನಡಿ ಒಳಗಿನ ಗಂಟೇನು

ಅವತ್ತು ಕೇಳ್ಳಿಲ್ಲ. ಇವತ್ತು ಅನುಭವಿಸ್ತ ಇದೀನಿ. ನೀ ಹೋದಾಗಿಂದ ’ದೇವದಾಸ’ ಮನೆದೇವರು ಅಗ್ಬಿಟ್ಟಿದಾನೆ. ಅಂದಿನಿಂದ ನಂಗೆ ನನ್ನನ್ನೂ ಇಷ್ಟಪಡೋಕೆ ಆಗ್ತಾ ಇಲ್ಲ. ಈಗ್ಲಾದ್ರು ಬರ್ತೀಯ, ಕಾದು ಕಾದು ಕೆಂಪಾಗಿದೀನಿ..?

No comments:

Post a Comment