ಹಣ್ಣೆಲೆ ಉದುರುವಾಗ

ಏನೇ ಹೇಳಿ, ಇಷ್ಟು ವರ್ಷ ಬದುಕಿರಬಾರದು ಕಣ್ರಿ, ವಯಸ್ಸಾಗೋಕು ಮುಂಚೆ ಸತ್ತುಬಿಡಬೆಕು’ ಎಂಬ ಯೋಚನೆ ಆ ಹಣ್ಣೆಲೆಗೆ ಬಂದು ಆಗಲೆ ಮೂರು-ನಾಲ್ಕು ದಿನಗಳಾಗಿತ್ತು. ಶರಾವತಿಯ ತಟದಲ್ಲಿರೋ ಒಂದು ಬನ್ನಿ ಮರ, ಆ ಮರದ ರಾಶಿ,ರಾಶಿ ಎಲೆಗಳ ಮದ್ಯೆ ಚಿಗುರಿದ ಆ ಎಲೆಗೆ ಏನೋ ಸಂಭ್ರಮ. ಅದರ ಬಾಲ್ಯದ ದಿನಗಳು ಇನ್ನೂ ಕಣ್ಣಿಗೆ ಕಟ್ಟುವಂತಿದ್ದರೂ ಹನಿಗಳು ತುಂಬಿ ಮಂಜಾದ ಕಣ್ಣಿನಲ್ಲಿ ಕೆಲ ನೆನಪುಗಳು ಅಸ್ಪಷ್ಟ. ಮರದ ಮೂಲೆಯಲ್ಲೆಲ್ಲೋ ಕುಳಿತರೂ ಶರಾವತಿಯ ಬಳುಕಿನ ನಡಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ದಿನ ತೆಪ್ಪ ದಾಟಿ ಹೋಗುವ ಶಾಲೆಯ ಹುಡುಗರು, ಗುದ್ದಲಿ ಹೊತ್ತು ಬರುವ ಕೆಲಸದವರು, ನೀರು ಕುಡಿಯಲು ಬರುವ ದನ-ಕರುಗಳು, ನೀರಿನಾಳಕ್ಕೆ ಬಲೆ ಬೀಸಿ ಮೀನು ಹಿಡಿಯುವ ಬೆಸ್ತರು, ಬಲೆಗೆ ಸಿಗುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುವ ಮೀನುಗಳು, ಗೂಡಿನಿಂದ ಹೊರ ಇಣುಕಿದ ಏಡಿಗಳು. ಎಲ್ಲವೂ ನೆನಪಿದೆ... ಬೇಸಿಗೆಯ ಸೊರಗಿದ ಶರಾವತಿಯ ಕಂಡು ಮರುಗಿದ ಮನಸ್ಸು, ಹೆದರಿಕೆ ಹುಟ್ಟಿಸಿದ ಮಳೆಗಾಲದ ಅವಳ ರಭಸ. ಇನ್ನೂ ನೆನಪಿದೆ... ಯೌವನದಲ್ಲಿನ ಆ ಹುರುಪು, ಇಡೀ ಮರಕ್ಕೆ ಬೇಕಾಗುವಷ್ಟು ಆಹಾರ ನಾನೊಬ್ಬನೇ ತಯಾರಿಸಬಲ್ಲೆನೆಂಬ ಉತ್ಸಾಹ, ಮರದ ಜೀವಂತಿಕೆಗೆ ನಾನೇ ಬೇಕೆಂಬ ಅಹಂಕಾರ, ಭೂಮಿಯ ಸಾರವನ್ನೆಲ್ಲ ಹೀರಿಸಿ ಮರ ಬೆಳಸಿಬಿಡುವೆನೆಂಬ ಹುಂಬತನ. ಆದರೆ ಈಗೆಲ್ಲಿ ಹೋಯಿತು ಆ ಶಕ್ತಿ, ಆ ಉತ್ಸಾಹ, ಆ ಬಂಡತನ..? ಇನ್ನೇನು ಉದುರುವ ’ಹಣ್ಣೆಲೆ’ ಎಂದ ಮಾತ್ರಕ್ಕೆ ಉತ್ಸಾಹವೇಕೆ ಕುಗ್ಗಬೇಕು..? ಕುಗ್ಗದೆ ಇನ್ನೇನು..! ಈ ಇಳಿ ವಯಸ್ಸಿನಲ್ಲಿ ಬಂದ ದಾರಿ ತಿರುಗಿ ನೋಡಿದರೆ ಜೀವನದ ಸಾರ್ಥಕತೆ ಕಾಣುತ್ತಿಲ್ಲ. ನಾನಿದ್ದರೂ, ಇರದಿದ್ದರೂ ಈ ಮರದಲ್ಲೇನು ಬದಲಾವಣೆಯಿಲ್ಲ. ಶಕ್ತಿ ಇರುವವರೆಗೂ ಆಹಾರ ತಯಾರಿಸಿದೆ, ಈಗ ಶಕ್ತಿಹೀನನಾಗಿ ಉದುರುವ ಭಯದಲ್ಲಿದ್ದೇನೆ. ಹುಟ್ಟಿನಿಂದ ಇಲ್ಲಿಯವರೆಗೂ ಈ ಮರಕ್ಕಾಗಿ ದುಡಿದೆ. ಆದರೆ ಈಗ..? ಉದುರುವ ಕಾಲದಲ್ಲಿ ನನಗಾಗಿ ಕಂಬನಿ ಮಿಡಿಯುವವರಿಲ್ಲ. ನಾನಿನ್ನೂ ಇದ್ದೀನ, ಉದುರಿಹೋಗಿದ್ದೀನ ಎಂಬುದೇ ಈ ಮರಕ್ಕೆ ಗೊತ್ತಿರಲಿಕ್ಕಿಲ್ಲ. ಒಂದೊಮ್ಮೆ ಗೊತ್ತಿದ್ದರೂ ನನಗಾಗಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಈ ಅಸಂಖ್ಯ ಜೊತೆಗಾರರ ಮಧ್ಯೆಯೂ ಒಂಟಿತನ ಕಾಡುತ್ತಿದೆ. ಇಲ್ಲಿ ಯಾರೂ ಯಾರಿಗೂ ಅಲ್ಲ, ಇಲ್ಲಿರುವವರೆಲ್ಲ ತನ್ನವರಲ್ಲವೆಂಬ ಅನಾಥ ಪ್ರಜ್ನೆ ಕಾಡುತ್ತಿದೆ.ಮಾಗಿಯ ಚಳಿಯಲ್ಲಿ ಮಾಗಿದ ಎಲೆಯಾಗಿ ಉದುರುವೆ. ತಣ್ಣನೆಯ ಗಾಳಿ ಬೀಸಿದಾಗ ಮೈಯೊಡ್ಡುವ ಮನಸ್ಸಿಲ್ಲ. ಮನಸ್ಸಿನಲ್ಲೆಲ್ಲ ಭಯ..! ಗಾಳಿಯೊಡನೆ ಉದುರಿಯೇನೆ..? ಬಹುಶಃ ಈಗ ನೋಡುತ್ತಿರುವ ಸೂರ್ಯಾಸ್ತವೆ ಕೊನೆಯದಿರಬಹುದು ನನ್ನ ಪಾಲಿಗೆ. ಬೆಳಗ್ಗೆ ಏಳುವ ಸೂರ್ಯನನ್ನು ನೋಡಿಯೇನೆಂಬ ನಂಬಿಕೆಯಿಲ್ಲ.
ರಾತ್ರಿಯಿಡೀ ಆ ಎಲೆಗೆ ನಿದ್ರೆಯಿಲ್ಲ. ಚಳಿಗೆ ಮುದುಡಿ ಕುಳಿತರೂ ಮೈ ಬೆವರುತ್ತಿದೆ. ಸಾವಿನ ಭಯ. ಬಹುಶಃ ಬರಿ ಸಾವಿನ ಭಯವಲ್ಲ. ಜೀವನದಲ್ಲಿ ಬೇರೆಯವರಿಗೋಸ್ಕರವೇ ನಿಸ್ಸ್ವಾರ್ಥವಾಗಿ ದುಡಿದರೂ ಗುರುತಿಸಲ್ಪಡಲಿಲ್ಲ ಎಂಬ ವ್ಯಥೆ, ತನ್ನವರೆಂದು ತೋರುವವರ್ಯಾರೂ ತನ್ನವರಲ್ಲವೆಂಬ ಅನಾಥ ಭಾವ, ಜೀವನದ ಇಳೆಯಲ್ಲಿ ಕಾಣದ ಬದುಕಿನ ಸಾರ್ಥಕತೆ, ತನ್ನ ಅಸ್ಥಿತ್ವದ ಅರಿವೇ ಇಲ್ಲದಂತೆ ಸಾಗುವ ಪ್ರಪಂಚ, ತಾನಿದ್ದರೂ, ಇರದಿದ್ದರೂ ಇಲ್ಲೆಲ್ಲವೂ ಇರುವಂತೆಯೆ ಇರುತ್ತದೆನ್ನುವ ಸತ್ಯ. ಇವೆಲ್ಲವೂ ಮೈ ಬೆವರಿಸುವ ಸಂಗತಿಗಳು.
ಬೆಳಗ್ಗೆ ಏಳುವಷ್ಟರಲ್ಲಿ ಎಲ್ಲವೂ ಇದ್ದಂತೆಯೇ ಇದೆ. ದಿನದಂತೆ ಹೋಗುವ ಶಾಲೆಯ ಅದೇ ಹುಡುಗರು, ಕೆಲಸಗಾರರು, ಈಜಾಡುವ ಮೀನು, ಇಣುಕುವ ಏಡಿ. ಎಲ್ಲವೂ ಎಂದಿನಂತೆ. ಪೂರ್ವದಲ್ಲಿ ಉದಯಿಸಿದ ಸೂರ್ಯ, ಹಕ್ಕಿಗಳ ಕಲರವ, ಸೂರ್ಯರಶ್ಮಿಗೆ ಬೆಂದು ಆವಿಯಾದ ಇಬ್ಬನಿ.  ಅರೆ.. ಈ ಇಬ್ಬನಿಯ ಆಯಸ್ಸು ಕೇವಲ ಎರಡು  ಗಂಟೆಗಳು. ಆ ಅಲ್ಪಾವಧಿಯಲ್ಲೆ ಸೂರ್ಯನ ಬಿಸಿಲನ್ನು ನುಂಗಿ ಮುತ್ತಿನಂತೆ ಹೊಳೆಯುತ್ತದೆ. ಅದೇ ವೇಗದಲ್ಲಿ ಮಾಯವಾಗುತ್ತದೆ. ಎರಡೇ ಗಂಟೆಯಲ್ಲಿ ಮಿಂಚಿ ಮತ್ತೆ ಮರೆಯಾಗಿ ಸಾರ್ಥಕತೆ ಕಾಣುತ್ತದೆ. ನಾನಿನ್ನು ಉತ್ಸಾಹಹೀನನಾಗುವ ಅಗತ್ಯವಿಲ್ಲ. ಮರದ ಈ ಆಕಾರಕ್ಕೆ ಇಷ್ಟು ದಿನ ನಾ ಕೊಟ್ಟ ಆಹಾರವೂ ಬೇಕಾಗಿದೆ, ಇದ್ದಷ್ಟು ದಿನ ಈ ಮರಕ್ಕೆ ಜೀವ ನೀಡಿದ್ದೇನೆ, ನನ್ನ ಹಸಿರಿನಿಂದ ಮರದ ಅಂದ ಹೆಚ್ಚಿಸಿದ್ದೇನೆ, ಬಳಲಿ ಬಂದವರಿಗೆ ನೆರಳಾಗಿದ್ದೇನೆ. ಇದೂ ಕೂಡ ಸಾರ್ಥಕತೆಯಲ್ಲವೆ..! ಇನ್ನು ಶರಾವತಿಯಲ್ಲಿ ಲೀನವಾದರೂ ಚಿಂತೆಯಿಲ್ಲ.
ಸಣ್ಣ ಗಾಳಿಯ ಹೊಡೆತ ಜೋರಾದಂತೆ ನಿಲ್ಲಲೂ ನಿತ್ರಾಣವಾಗಿದ್ದ ಎಲೆ ಶರಾವತಿಯ ಮಡಿಲಲ್ಲಿ ಲೀನವಾಯಿತು.

No comments:

Post a Comment