ಕೈಯಿಗೂ ಬರಲಿಲ್ಲ.. ಬಾಯಿಗೂ ಬರಲಿಲ್ಲ..

ಪ್ಲಾಟ್ ಫಾರ್ಮ್ ನಲ್ಲಿ ವಿದ್ಯುತ್ ಸಂಚಾರ... ಕೂ ಎಂದು ಕೂಗ್ತಾ ಬರ್ತಾ ಇರೋ ರೈಲಿನೆಡೆಗೆ ಎಲ್ಲರ ಗಮನ... ಟ್ರೈನ್ ಖಾಲಿ ಇದೆ ಅಂತ ಅನ್ಸಿದ್ರು ಅದನ್ನ ಹತ್ತಿ ಸೀಟು ಹಿಡಿದು ಕೂರೋ ವರೆಗೂ ಯಾರಲ್ಲೂ ಸಮಾಧಾನ ಇಲ್ಲ. ಕಿಟಕಿ ಪಕ್ಕದ ಸೀಟು ಹಿಡಿಬೇಕು ಅನ್ನೋದು ಎಲ್ಲರ ಗುರಿ. ಹೆಂಗಸು- ಗಂಡಸು ಎಂಬ ಭೇದ ಇಲ್ದೆ ಎಲ್ಲರು ಸಮಾನ ಸ್ಪರ್ಧೆಯಿಂದ ಮುನ್ನುಗ್ಗಿ ಪಡೆಯಬಹುದಾದಂತ ಏಕೈಕ ಗುರಿ- ಕಿಟಕಿ ಪಕ್ಕದ ಸೀಟು. ಅಂತೆಯೇ ನಾನೂ ಮುನ್ನುಗ್ಗಿ, ಜಗ್ಗಾಡಿ, ಗುದ್ದಾಡಿ, ನುಗ್ಗಿ- ನುಸುಳಿ ಅಂತು ಇಂತೂ ವಿಂಡೋ ಸೀಟ್ ಹಿಡಿದೆ. ಅದೊಂಥರ ಯುದ್ದವನ್ನೇ ಗೆದ್ದ ಭಾವ. ಇಂಟರ್ ಸಿಟಿ ಎಕ್ಷ್ಪ್ರೆಸ್ನಲ್ಲಿ ಸೀಟು ಹಿಡಿಯೋದು ಅಂದ್ರೆ ಸುಮ್ನೆನಾ... ನನ್ನ ಸಣಕಲು ದೇಹದ ಬಗ್ಗೆ ನನಗೆ ಅಭಿಮಾನ ಮೂಡೋ ಏಕೈಕ ಘಳಿಗೆ ಅದು. ನನಗಂತೂ ಸೀಟು ಸಿಕ್ತು. ಪಕ್ಕದ ಸೀಟಿಗೆ ಬ್ಯಾಗ್ ಹಾಕಿ ಕೂತೆ, ನಮಗೆ ಇಷ್ಟವಾದವರು ಬಂದ್ರೆ ಕೂರಿಸಿಕೊಳ್ಳುವ ಅಂತ. ಮಧ್ಯ ವಯಸ್ಸಿನ ಹೆಂಡಸರು ಬಂದು ಕೂತ್ರೆ ಕೊತ್ತಂಬರಿಯಿಂದ ಹಿಡಿದು ಕಾದಂಬರಿ ವರೆಗೂ ಮಾತು, ಗಂಡಸರು ಬಂದ್ರೆ ಜಮೀನಿನಲ್ಲಿ ತೆಗಿಯೋ ಬಾವಿಯಿಂದ ಹಿಡಿದು ಬರಾಕ್ ಒಬಾಮ ವರೆಗೂ ಮಾತು. ಅವರ ಮಾತು ಕೇಳಿ ಕೇಳಿ ೪ ಕ್ರೋಸಿನ್ ಸಾಕಾಗಲ್ಲ ತಲೆನೋವು ಹೋಗ್ಲಿಕ್ಕೆ. ಮಧ್ಯೆ ಮಧ್ಯೆ ಹ್ಮ್ ಅನ್ನೋ ಕರ್ಮ ಬೇರೆ. ಹಾಗಾಗಿ ಕಾಲೇಜಿಗೆ ಹೋಗೋ ವಯಸ್ಸಿನವರಿಗೆ ಸೀಟು ಬಿಡಬೇಕು ಅನ್ನೋದು ನನ್ನ ಇಚ್ಛೆ, ಅದರಲ್ಲೂ ಹುಡುಗಿಯರಿಗೆ ಮೊದಲ ಆಧ್ಯತೆ. ಅದೆಷ್ಟು ಬಾರಿ ದೇವರ ಹತ್ರ ಬೇಡಿಕೊಂದಿದ್ನೋ ಪಕ್ಕದಲ್ಲಿ ಹುಡುಗಿನ ಕೂರ್ಸು ಅಂತ. ಆದರು ಇಷ್ಟು ದಿನ ೪ ಕ್ರೋಸಿನ್ ನುಂಗೋ ಭಾಗ್ಯವೇ ನನ್ನದಾಗಿತ್ತು. ಈ ಹೆಂಗಸರು ಅಂದ್ರೆ ನಂಗೆ ಎಲ್ಲಿಲ್ಲದ ಕುತೂಹಲ, ಅದೊಂದು ಅಚ್ಚರಿಯ ಪೆಟ್ಟಿಗೆ. ಅವರಿಗೆ ಮಾತಾಡುವ ವಿಷಯವೇ ಮುಗಿಯಲ್ವೋ ಅಥವಾ ವಿಷಯವೇ ಇಲ್ದೆ ಮಾತಾಡುವ ಕಲೆ ಕರಗತವೋ ಗೊತ್ತಿಲ್ಲ. ಅವರ ಮಾತನ್ನೆಲ್ಲ ಕೇಳಿ ಕೇಳಿ ಅದೆಷ್ಟು ಸಲ ಕಿಟಕಿ ಪಕ್ಕದ ಸೀಟಿನಂತ ಸೀಟನ್ನೇ ಬಿಟ್ಟು ಬಾಗಿಲ ಬಳಿ ಜೋತು ಬಿದ್ದಿದ್ನೋ ಆ ದೇವರಿಗೆ ಗೊತ್ತು. ಹಾಗಾಗಿ ನನ್ನ ಪಕ್ಕದ ಸೀಟು ಕಾಲೇಜು ಕನ್ಯೆಗೆ ಮೀಸಲು. ಆದರು ಪ್ರತಿ ಬಾರಿ ಬೇರೆಯವರ ದಬ್ಬಾಳಿಕೆಯ ಫಲವಾಗಿ ಅತಿಕ್ರಮ ಪ್ರವೇಶಕ್ಕೆ ಒಳಗಾಗ್ತಾ  ಇತ್ತು ಪಕ್ಕದ ಸೀಟು. ಆದ್ರೆ ಇವತ್ತು ಅದ್ಯಾವ ಹೆಣ್ಣು ದೇವತೆಗೆ ನನ್ನ ಮೊರೆ ಮುಟ್ಟಿತ್ತೋ ಕಾಣೆ, ಒಬ್ಬಳು  ಲಲನಾಮಣಿಯ ಪ್ರವೇಶ ನಾನಿದ್ದ ಬೋಗಿಗೆ ಆಯ್ತು. ಅವಳನ್ನ ನೋಡಿದ್ದೇ ತಡ ನನ್ನ ಬ್ಯಾಗ್ ತನ್ನ ಜಾಗದಿಂದ ಸರಿದು ನನ್ನ ತೊಡೆಯ ಮೇಲೇ ಬೆಚ್ಚಗೆ ಕುಳಿತುಕೊಳ್ತು. ಆ ಸುಂದರಿಗೆ ಸೀಟು ಕೊಟ್ಟ ಕೂಡ್ಲೇ ಅಲ್ಲಿ ಇಲ್ಲಿ ನೇತಾಡ್ತಾ ಇದ್ದ ಹತ್ತಾರು ಗಂಡಸರ ಕೆಂಗಣ್ಣಿನ ನೋಟವನ್ನ ಎದುರಿಸಬೇಕಾಗಿ ಬಂದದ್ದು, ಹಾಗೆ ಎದುರಿಸಿಯೂ 'ಆಕೆ'ಗೆ ಸೀಟು ಕೊಟ್ಟದ್ದು ನನಗೆ ಆಕೆಯ ಮೇಲಿದ್ದ ಕಾಳಜಿಯನ್ನ ತೋರ್ಸತ್ತೆ. ಅವಳಾದರು ಅದೆಷ್ಟು ಚನಾಗಿ ಇದ್ಲು ಅಂತೀರಾ... ಕೈ ತೊಳೆದು ಮುಟ್ಟಬೇಕು ಅಂತಾರಲ್ಲ ಹಾಗಿದ್ಲು ಕಂಡ್ರಿ. ಕೈಯನ್ನೇನೋ ತೊಳೆದಿದ್ದೆ, ಆದ್ರೆ ಮುಟ್ಟೋ ಧೈರ್ಯ ಇರ್ಲಿಲ್ಲ  ಅಷ್ಟೇ. ನಕ್ಕರೆ  ಗುಳಿ ಬೀಳೋ ಕೆನ್ನೆ... ಅಗಲಗಳ ಕಣ್ಣುಗಳು.... ಆಗಾಗ ಮುಖದ ಮೇಲೇ ಬೀಳೋ ಕೂದಲು... ಹಾಲಿನಂತ ಬಣ್ಣ... ಒಟ್ಟಿನಲ್ಲಿ ಒಂದೇ ನೋಟಕ್ಕೆ ಹೃದಯದ ಕದ ತಟ್ಟಿಬಿಟ್ಟಿದ್ಲು ಕಂಡ್ರಿ. ರೈಲು ಹತ್ತಿದ ಕೂಡ್ಲೆ ನಿದ್ದೆ ಮಾಡೋದು ನನ್ನ ವೀಕ್ ನೆಸ್ಸು. ಕಣ್ಣು ಎಳೀತಿತ್ತು. ಆದ್ರು ಪಕ್ಕದ ಸುಂದರಿ ಮಾತಾಡ್ತಾಳೆನೋ ಅಂತ ನಿದ್ದೇನ ಅದುಮಿಟ್ಟಿದ್ದೆ. ಎಷ್ಟು ಬಾರಿ ಅವಳನ್ನ ಕದ್ದು ಕದ್ದು ನೋಡಿದ್ರೂ ಆಕೆಯದು ದಿವ್ಯ ನಿರ್ಲಕ್ಷ್ಯ. ಅದ್ಯಾವ ಘಳಿಗೆಯಲ್ಲೋ ನಿದ್ದೆಗೆ ಜಾರಿದ್ದೆ. ರೈಲು ಹೊಳೆ ನರಸೀಪುರದಲ್ಲಿ ನಿಂತಾಗ ಎಚ್ಚರವಾಯ್ತು. ಪಕ್ಕದ ಸುಂದರಿ ಹಾಗೆ ಕೂತಿದ್ಲು. ತೀರಾ ಸಭ್ಯಸ್ತನಾದ ನನಗೆ ಅವಳನ್ನ ಮಾತಾಡಿಸೋಕೆ ನಾಚಿಕೆ, ಅಥವಾ ಧೈರ್ಯ ಸಾಕಗ್ಲಿಲ್ವೋ ಗೊತ್ತಿಲ್ಲ. ಇಂಟರ್ ಸಿಟಿ ಎಕ್ಷ್ಪ್ರೆಸ್ ಯಕಶ್ಚಿತ್ ಪ್ಯಾಸೆಂಜೆರ್ ಟ್ರೈನ್ ಗೆ ಕಾಯ್ತಾ ಇತ್ತು. ಎದುರಿನ ಸೀಟಿನಲ್ಲಿದ್ದ ಎಲ್ಲರ ದೃಷ್ಟಿ ಪಕ್ಕದ ಸುಂದರಿ ಮೇಲೇ ನೆಟ್ಟಿದ್ದರಿಂದ ಅವಳು ನಾನಂದುಕೊಂಡಿದ್ದಕ್ಕಿಂತ ಚೆನ್ನಾಗೆ ಇದ್ದಾಳೆ ಅಂತ ಗೊತ್ತಾಯ್ತು. ತಿರುಗಿ ಅವಳನ್ನ ನೋಡೋ ಧೈರ್ಯ ಇಲ್ಲ... ಎಷ್ಟಂದ್ರು ಸಭ್ಯಸ್ತ. ನೋಡೋ ತವಕ, ಮಾತಾಡೋ ತುಡಿತ ಎರಡನ್ನು ಇಟ್ಕೊಂಡು ಅರಸೀಕೆರೆವರೆಗೂ ಕುಳಿತಿದ್ದೆ. ಶಿವಮೊಗ್ಗದಲ್ಲಿ ಅವಳು ಇಳಿತಾಳೆ ಅಂತ ತಿಳಿದಿತ್ತು. ಇನ್ನೂ ಮೂರು ಗಂಟೆಗಳ ಕಾಲಾವಕಾಶ ಮಾತಾಡಿಸೋಕೆ. ಬೇರೆಯವರೆಲ್ಲ ಮಾತಾಡಿ ಮಾತಾಡಿ ಹಿಂಸಿಸ್ತಾ ಇದ್ರೆ ಇವಳು ಮಾತ್ರ ಮೌನವಾಗೇ ಕೊಲ್ತಿದ್ಲು. ಅವಳ ಕೂದಲು ಮುಖದ ಮೇಲೆ ಬರಲು ಹಠ ಮಾಡ್ತಿದ್ರು ಅವಳು ಬಲವಂತವಾಗಿ ಅದನ್ನ ಹಿಂದೆ ಹಾಕ್ತಿದ್ಲು. ಅವಳು ಹಾಗೆ ಕೂದಲನ್ನ ಹಿಂದೆ ಹಾಕುವ ಪರಿ ನೋಡೋದೇ ಕಣ್ಣಿಗೆ ಹಬ್ಬ. ಈಗ ನಿದ್ದೆಗೆ ಜಾರುವ ಸರದಿ ಅವಳದ್ದು. ಅವಳು ನಿದ್ದೆ ಮಾಡುವಾಗ ಸರಿಯಾಗಿ ನೋಡಿದೆ ಅವಳನ್ನ. ನಾನಂದುಕೊಂಡಿದ್ದಕ್ಕಿಂತ ಸುಂದರವಾಗೆ ಇದ್ಲು.. ಇನ್ನೂ ನೋಡ್ತಾನೆ ಇರಬೇಕು ಅನ್ನೋ ಅಷ್ಟು.
ಅದೆಂಥ ನಿದ್ರೆನೋ ಅವಳದ್ದು...! ಶಿವಮೊಗ್ಗದ ಹತ್ರ ಬರೋವರೆಗೂ ಮಲಗೆ ಇದ್ಲು. ನಂತರ ಎದ್ದು ತನ್ನ ಲಗೇಜ್ ತಗೊಂಡು ಹೋಗಿ ಬಾಗಿಲ ಬಳಿ ನಿಂತಳು . ಮಾತಾಡ್ಸೋ ಆಸೆಗೆ ತಿಲಾಂಜಲಿ ಬಿಟ್ಟು ಸುಮ್ನೆ ಕೂತೆ. ಅವಳು ಇಳಿದು ಹೋದ ಮೇಲೆ ಅನಾಥನಂಥಾಗಿದ್ದ ನಾನು ಅವಳ ನೆನೆಪಲ್ಲೆ ಸಾಗರ ಸೇರಿದೆ. ತೀರ ಬಂದವರೆಲ್ಲ ನಮ್ಮವರಲ್ಲ, ನಮ್ಮವರೆಲ್ಲ ಕೊನೆ ತನಕ ನಮ್ಮ ಜೊತೆ ಇರ್ತಾರೆ ಅನ್ನೋಕಾಗಲ್ಲ. ಬದುಕ ಪಯಣದಲಿ ಬಂದವರೆಷ್ಟೋ , ತಪ್ಪಿಹೋದವರೆಷ್ಟೋ, ಎಲ್ಲರು ಅವರವರ ನಿಲ್ದಾಣ ಬಂದಾಗ ಪಯಣ ಕೊನೆಗಳಿಸಲೇಬೇಕು. ನಮ್ಮದು ಮುಗಿಯುವವರೆಗೆ ಮುಂದುವರಿಯಲೇಬೇಕು . 
ಈಗ ದೇವರಲ್ಲಿ ನನ್ನ ಬೇಡಿಕೆ ಬೇರೆಯಾಗಿದೆ. ನನ್ನ ಪಕ್ಕದ ಸೀಟಿನಲ್ಲಿ ಯಾರಿನ್ನಾದ್ರು ಕೂರ್ಸಪ್ಪ ದೇವ್ರೇ.. ಆದ್ರೆ ನನ್ನ ಎದುರಿನ ಸೀಟ್ ನಲ್ಲಿ ಮಾತ್ರ ಇವಳಂಥ ಸುಂದರಿನೆ ಕೂರ್ಸು. 

No comments:

Post a Comment